ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಸಲು ನುಂಗಲು ಸಜ್ಜಾಗಿರುವ ನಾರಾಯಣ ಪುರ ನಾಲೆ

By Staff
|
Google Oneindia Kannada News
ಇನ್ಫೋ ಪ್ರತಿನಿಧಿಯಿಂದ

ರಾಯಚೂರು : ನಿರ್ಲಕ್ಷ್ಯದ ಕಿಡಿ ಊರೆಲ್ಲಾ ಸುಟ್ಟು ಬೂಧಿ ಮಾಡಿದಂತೆ ಅಧಿಕಾರಿಶಾಹಿಗೆ ಅಂಟುಜಾಡ್ಯವಾಗಿರುವ ನಿರ್ಲಕ್ಷ್ಯ ಹಸಿರುಸಿರಿಯ ಹೊಂಗನಸು ಕಾಣುತ್ತಿದ್ದ ರೈತರನ್ನು ದಿಗಿಲುಗೊಳ್ಳುವಂತೆ ಮಾಡಿದೆ. ಕೃಷ್ಣಾ ಭಾಗ್ಯ ಜಲ ನಿಗಮದ ಯೋಜನೆಗಳ ಪೈಕಿ ನಾರಾಯಣಪುರದ ನೀರಾವರಿ ಯೋಜನೆ ಮಹತ್ವದ್ದು, ಈ ಜಲಾಶಯದ ಎಡ ಮತ್ತು ಬಲ ಬದಿಯ ಬಹುದೊಡ್ಡ ಕಾಲುವೆಗಳು ರಾಯಚೂರು ಮತ್ತು ಗುಲ್ಬರ್ಗಾ ಜಿಲ್ಲೆಗಳ ಲಕ್ಷಾಂತರ ಎಕರೆ ಜಮೀನಿಗೆ ನೀರಾವರಿ ಸೌಕರ್ಯ ಕಲ್ಪಿಸುವ ಸಾಮರ್ಥ್ಯ ಹೊಂದಿವೆ.

ನಾರಾಯಣಪುರ ಬಲದಂಡೆ ಕಾಲುವೆ ಎಂದು ಜನಜನಿತವಾಗಿರುವ ಈ ಜಲಾಶಯದ ಬಲಭಾಗದಲ್ಲಿ ನಿರ್ಮಿತ ನಾಲೆ 3000 ಕ್ಯುಸೆಕ್ಸ್‌ ಗಳಿಗೂ ಮೇಲ್ಪಟ್ಟು ನೀರು ಹರಿಯುವ ಸಾಮರ್ಥ್ಯ ಹೊಂದಿದೆ. ಈ ಮುಖ್ಯ ಕಾಲುವೆಯಿಂದ ಬರಪೀಡಿತ ರಾಯಚೂರು ಜಿಲ್ಲೆಯ ಲಿಂಗಸೂಗೂರು, ದೇವದುರ್ಗ ಮತ್ತು ಭಾಗಶಃ ರಾಯಚೂರು ತಾಲ್ಲೂಕುಗಳ ನಾಲ್ಕು ಲಕ್ಷ ಎಕರೆಗೆ ನೀರುಣಿಸುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ. 95 ಕಿ.ಮೀ. ಉದ್ದದ ಮೊದಲ ಹಂತದಲ್ಲಿ 70 ಕಿ.ಮೀಟರ್‌ವರೆಗೆ ತೋಡುವ ಕೆಲಸ ಮುಗಿದಿದ್ದು, 18 ಕಿ.ಮೀಟರ್‌ ವ್ಯಾಪ್ತಿವರೆಗೆ ಬರುವ ನಾಲ್ಕು ಉಪ ಕಾಲುವೆಗಳ ಕೆಲಸ ಮುಗಿದಿದೆ.

ಮುಖ್ಯಮಂತ್ರಿ ಕೃಷ್ಣ ಅವರು ಮಾರ್ಚ್‌ 2000ದಂದು ಈ ನಾಲೆಯನ್ನು ನಾಡಿಗೆ ಸಮರ್ಪಿಸಿದಾಗ ಘೋಷಿಸಿದಂತೆ ಕೆಲಸ ನಡೆದಿದ್ದರೆ ಮುಖ್ಯ ಕಾಲುವೆ 60 ಕಿ.ಮೀ ವ್ಯಾಪ್ತಿವರೆಗೆ ಬರುವ ಉಪಕಾಲುವೆಗಳ ಕೆಲಸ ಮುಗಿದು ಈಗಾಗಲೇ 60 ಸಾವಿರ ಎಕರೆ ನೀರಾವರಿ ಸೌಲಭ್ಯ ಕಾಣಬಹುದಿತ್ತು. ಭರವಸೆಗೆ ತಕ್ಕಂತೆ ಕೆಲಸಗಳು ನಡೆದಿದ್ದರೆ ಈ ಕಾಲುವೆ ಕೆಲಸ ಎಂದೋ ಮುಗಿದು ಹೋಗಬೇಕಿತ್ತು. ಹೇಳುವುದೊಂದು ಮಾಡುವುದು ಇನ್ನೊಂದು ಎಂಬಂತಾಗಿದೆ. ಈ ತಾಲ್ಲೂಕುಗಳ ಬರಪೀಡಿತ ರೈತರ ಹಸಿರಿನ ಸಿರಿಯ ಹೊಂಗನಸಿಗೆ ಆಘಾತವೊಂದು ಅಪ್ಪಳಿಸಿದೆ. ಮುಖ್ಯ ಕಾಲುವೆಯ ಮಹಾದ್ವಾರ ಮುಚ್ಚಿದ್ದರೂ ನೀರು ಹೊರಚಿಮ್ಮುತ್ತಿರುವುದು ಅಧಿಕಾರಿಗಳನ್ನು ಪೇಚಿಗೆ ಸಿಕ್ಕಿಸಿದೆ.

1982ರಲ್ಲಿ ಮುಖ್ಯಮಂತ್ರಿ ಆರ್‌. ಗುಂಡೂರಾವ್‌ ಸಚಿವ ಸಂಪುಟದಲ್ಲಿ ಭಾರೀ ನೀರಾವರಿ ಸಚಿವರಾಗಿದ್ದ ಬಿ.ಪಿ. ಚಿಮ್ಮನಕಟ್ಟಿ ಅವರು ನಾರಾಯಣಪುರ ಜಲಾಶಯವನ್ನು ನಾಡಿಗೆ ಸಮರ್ಪಿಸಿ 18 ವರ್ಷಗಳು ಕಳದಿವೆ. ಸವೆಸಿದ ವರ್ಷಗಳಲ್ಲಿ ಕನಿಷ್ಠ ಎರಡು ಸಲವಾದರೂ ಬಲಭಾಗದ ಮಹಾದ್ವಾರವನ್ನು ತಂತ್ರಜ್ಞರು ಹಾಗೂ ಅಧಿಕಾರಿ ವರ್ಗ ಪರಿಶೀಲಿಸಿದ್ದರೆ ಇಂತಹ ಸಮಸ್ಯೆ ಉದ್ಬವವಾಗುತ್ತಿರಲಿಲ್ಲ. ತಜ್ಞರ ಅಭಿಪ್ರಾಯದ ಪ್ರಕಾರ ಜಲಾಶಯದ ಕಾಲುವೆ ಮುಖ್ಯದ್ವಾರಗಳನ್ನು ಕನಿಷ್ಠ 3 ವರ್ಷಕ್ಕೊಮ್ಮೆ ತಪಾಸಣೆ ಮಾಡಿ, ಅವುಗಳ ದೃಢತೆ ಖಚಿತಪಡಿಸಿಕೊಳ್ಳಬಹುದು. ಬಲದಂಡೆ ಕಾಲುವೆ ವಿಷಯದಲ್ಲಿ ಈ ಕೆಲಸ ಸಂಪೂರ್ಣವಾಗಿ ನಿರ್ಲಕ್ಷಿತವಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಯಥೇಚ್ಚವಾಗಿ ಸುರಿದು ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಮುಚ್ಚಿದ ಬಾಗಿಲಿನಿಂದ ಒತ್ತಡ ಹೆಚ್ಚಾಗುತ್ತಿದೆ. ಈ ದೋಷದಿಂದಾಗಿ ಮುಖ್ಯ ಕಾಲುವೆಯಲ್ಲಿ ನೀರಿನ ಪ್ರಮಾಣ ಅಧಿಕಗೊಂಡು ಹೊಸದಾಗಿ ನಿರ್ಮಿಸಿರುವ ಉಪಕಾಲುವೆಗಳು ಕಿತ್ತುಹೋಗುವ ಪರಿಸ್ಥಿತಿ ಉಂಟಾಗಿದೆ.

ಮುಖ್ಯ ಕಾಲುವೆಗೆ 17ನೇ ಕಿಲೋಮೀಟರ್‌ಗೆ ಸಮೀಪದ ಜಾಲಿಬೆಜಿ ಗ್ರಾಮ ಪ್ರವಾಹದ ಭೀತಿಗೊಳಗಾಗಿದೆ. ಈ ಪ್ರದೇಶದಲ್ಲಿ ಈಗಾಗಲೇ ಬಿತ್ತಿದ ಬೆಳೆಗಳು ಹಾಳಾಗುವ ಅಪಾಯಕ್ಕೆ ಸಿಲುಕಿದ್ದು, ತತ್ತರಿಸಿರುವ ರೈತರು ನಾರಾಯಣಪುರ ಬಲದಂಡೆ ಕಾಲುವೆ ನಮ್ಮ ಬದುಕು ಹಸನುಗೊಳಿಸುವ ಬದಲು ಹಾಳು ಮಾಡಲು ಬಂದಿದೆ ಎಂದು ಹಲುಬುವಂತಾಗಿದೆ. ಇಷ್ಟು ಸಾಲದೆಂಬಂತೆ ಕಿ.ಮೀಟರ್‌ 0. ಯಿಂದ 20ನೇ ಕಿ.ಮೀಟರ್‌ವರೆಗೆ ಈಗಾಗಲೇ ಟೆಂಡರ್‌ ಮೂಲಕ ಗುತ್ತಿಗೆ ನೀಡಲಾದ ಕಾಲುವೆ ಲೈನಿಂಗ್‌ ಕಾಮಗಾರಿ ಸ್ಥಗಿತಗೊಂಡಿದೆ. ಹಠಾತ್ತನೆ ಪ್ರವಾಹವನ್ನು ಎದುರಿಸುತ್ತಿರುವ ಈ ಕಾಲುವೆ ಕಾಮಗಾರಿ ಗುಣಮಟ್ಟದ ನಿಜಬಣ್ಣವನ್ನು ಇದು ಬಯಲುಗೊಳಿಸಿದೆ. ಮಳೆಗಾಲ ಮುಗಿದು ಜಲಾಶಯದ ನೀರು ಇಳಿಮುಖವಾಗುವ ತನಕ ಮುಚ್ಚಿದ ಗೇಟಿನಿಂದ ಸೋರುತ್ತಿರುವ ನೀರಿನ ಸಮಸ್ಯೆಗೆ ಪರಿಹಾರ ಇಲ್ಲವೆಂದು ನೀರಾವರಿ ಇಲಾಖೆ ಅಧಿಕಾರಿಗಳು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X