ಚೆನ್ನೈಗೆ ಕನ್ನಡ ಚಲನಚಿತ್ರ ಕರ್ಮಿಗಳ ದೌಡು
ಬೆಂಗಳೂರು : ಡಾ. ರಾಜ್‌ಕುಮಾರ್ ಬಿಡುಗಡೆಗೆ ಒತ್ತಾಯಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯೋಗ ಗುರುವಾರ ಚೆನ್ನೈಗೆ ತೆರಳಲಿದೆ. ಹತ್ತು ದಿನಗಳಿಂದಲೂ ಸ್ತಬ್ಧವಾಗಿರುವ ಕನ್ನಡ ಚಿತ್ರೋದ್ಯಮದಲ್ಲಿ ಆತಂಕದ ಕಾರ್ಮೋಡ ಕವಿದಿದೆ.
ಒಂದು ಅಂದಾಜಿನ ರೀತ್ಯ ದಿನನಿತ್ಯ ಸುಮಾರು ಮೂರೂವರೆ ಕೋಟಿ ರುಪಾಯಿಗಳ ನಷ್ಟ ಉದ್ಯಮಕ್ಕೆ ಸಂಭವಿಸುತ್ತಿದೆ. ಚಿತ್ರನಗರಿಯ ಕಾರ್ಮಿಕರು ತುತ್ತು ಕೂಳಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ರಾಜ್‌ಕುಮಾರ್ ಅವರ ಬಿಡುಗಡೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿ ಅವರ ಮೇಲೆ ಒತ್ತಡ ಹೇರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯೋಗ ಚೆನ್ನೈಗೆ ತೆರಳಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ರಾಜ್‌ಕುಮಾರ್ ಕ್ಷೇಮ ಸಮಾಚಾರದ ಕ್ಯಾಸೆಟ್ ಬರಲಿದೆ: ರಾಜ್‌ಕುಮಾರ್ ಹಾಗೂ ಇತರ ಮೂವರು ಕ್ಷೇಮದಿಂದಿರುವ ಸುದ್ದಿಯನ್ನು ಒಳಗೊಂಡ ಇನ್ನೊಂದು ಕ್ಯಾಸೆಟ್ ಹಾಗೂ ಫೋಟೋಗಳು ಬುಧವಾರ ರಾತ್ರಿ ಅಥವಾ ಗುರುವಾರ ಬೆಳಗ್ಗೆ ಚೆನ್ನೈ ತಲುಪಲಿದೆ ಎಂಬ ಸುದ್ದಿ ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ ಎಂದು ತಮಿಳುನಾಡಿನ ಪೊಲೀಸ್ ಮಹಾ ನಿರ್ದೇಶಕ ಎಫ್.ಸಿ. ಶರ್ಮಾ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಈ ಮಧ್ಯೆ ರಾಜ್‌ಕುಮಾರ್ ಕ್ಷೇಮವಾಗಿ ಹಾಗೂ ಆರೋಗ್ಯವಾಗಿದ್ದಾರೆ ಎಂದೂ ತಿಳಿದುಬಂದಿದೆ. ನಿರೀಕ್ಷಿತ ಕ್ಯಾಸೆಟ್ ರಾಜ್‌ಕುಮಾರ್ ಹಾಗೂ ಸಂಧಾನಕಾರ ಗೋಪಾಲ್ ಅವರ ಸಂದೇಶಗಳನ್ನು ಒಳಗೊಂಡಿರುತ್ತದೆ ಎಂದೂ ಹೇಳಲಾಗುತ್ತಿದೆ. ಮತ್ತೊಂದು ಮೂಲದ ವರದಿಗಳ ರೀತ್ಯ ವೀರಪ್ಪನ್, ಸಂಧಾನಕಾರ ಗೋಪಾಲ್ ಸೇರಿದಂತೆ ರಾಜ್‌ಕುಮಾರ್ ಹಾಗೂ ಇತರ ಮೂವರು ಒತ್ತೆಯಾಳುಗಳನ್ನು ಗಾಜನೂರು ಬಳಿಯ ಗೌಪ್ಯ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸಿದ್ದಾನೆ ಎಂದೂ ತಿಳಿದುಬಂದಿದೆ.
ಮತ್ತೊಂದು ಕಂತಿನ ಬೇಡಿಕೆಗಳುಳ್ಳ ಹೊಸ ಕ್ಯಾಸೆಟ್‌ನೊಂದಿಗೆ ಶಿವಸುಬ್ರಮಣಿಯಂ ಅಲಿಯಾಸ್ ಸುಬ್ಬು ಕಾಡಿನಿಂದ ಹೊರಟಿದ್ದು, ಬುಧವಾರ ಮಧ್ಯರಾತ್ರಿಯ ವೇಳೆಗೆ ಚೆನ್ನೈ ತಲುಪಲಿದ್ದಾರೆ ಎಂದೂ ನಕ್ಕೀರನ್ ಪತ್ರಿಕೆಯ ಮೂಲಗಳು ತಿಳಿಸಿವೆ.












Click it and Unblock the Notifications