ಕಾರವಾರ ಕಡಲಲ್ಲಿ ಕಳ್ಳಸಾಗಾಣಿಕೆ :ಆರು ಜನರ ಬಂಧನ, ದೋಣಿ ವಶ
ಕಾರವಾರ : ಕಾರವಾರದ ಕಡಲು ಕಳ್ಳಸಾಗಣೆದಾರರಿಗೆ ಸ್ವರ್ಗ ಎಂಬ ಮಾತಿಗೆ ಪುಷ್ಟಿ ಕೊಡುವಂತಹ ಘಟನೆಯಾಂದು ಈಗ ಮತ್ತೆ ನಡೆದಿದೆ. ಪೊಲೀಸರೇ ಹೇಳುವಂತೆ ಕರಾವಳಿಯ ಕೆಲ ಮೀನುಗಾರರ ಪಾರ್ಟ್ ಟೈಂ ದಂಧೆ ಎಂದರೆ, ಗೋವೆಯಲ್ಲಿ ಅಗ್ಗವಾಗಿ ಸಿಗುವ ಮದ್ಯದ ಸರಕನ್ನು ಸಮುದ್ರದ ಮೂಲಕ ಸಾಗಿಸುವುದು. ಇದರಿಂದ ಈ ಭಾಗದಲ್ಲಿ ಮದ್ಯದ ಗುತ್ತಿಗೆ ಹಿಡಿದವರಿಗೆ ಭಾರಿ ನಷ್ಟವುಂಟಾಗುತ್ತದೆ. ಇಂತಹ ಅಕ್ರಮ ಮದ್ಯ ತಮ್ಮ ಗುತ್ತಿಗೆ ಪ್ರದೇಶದಲ್ಲಿ ನುಸುಳದಂತೆ ಗುತ್ತಿಗೆದಾರರೇ ಕಟ್ಟೆಚ್ಚರ ವಹಿಸಿದ್ದಾರೆ. ಹೀಗಾಗಿ ಕಳ್ಳ ಸಾಗಾಣೆದಾರರು ಹಾಗೂ ಗುತ್ತಿಗೆದಾರರ ನಡುವೆ ಸತತವಾಗಿ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ.
ಆದರೆ, ಸೋಮವಾರ ಸಿನಿಮೀಯ ಮಾದರಿಯ ಕಡಲ ಕಳ್ಳಸಾಗಾಣಿಕೆಯ ಘಟನೆಯಾಂದು ಸಂಭವಿಸಿದೆ. ಈ ಘಟನೆಯಲ್ಲಿ ಭಾಗಿಯಾಗಿದ್ದ 16ಕ್ಕೂ ಹೆಚ್ಚು ಜನರ ಪೈಕಿ 6 ಜನರನ್ನು ಪೊಲೀಸರು ಬಂಧಿಸಿದ್ದು , ಅವರು ಗುತ್ತಿಗೆದಾರರಿಂದ ಅಪಹರಿಸಿದ್ದ ಒಂದು ಕೊಳವೆ ಕೋವಿ, ರಿವಾಲ್ವರ್ ಹಾಗೂ ಪರ್ಸಿಯನ್ ಬೋಟನ್ನು ವಶಪಡಿಸಿಕೊಂಡಿದ್ದಾರೆ.
ರವಿವಾರ ರಾತ್ರಿ ಕಳ್ಳ ಸಾಗಾಣಿಕೆದಾರರು ಗೋವೆಯಿಂದ ದೊಡ್ಡ ದೋಣಿಯಲ್ಲಿ (ಪರ್ಸಿಯನ್ ಬೋಟ್ 42 ಮೀಟರ್‌ಗೂ ಹೆಚ್ಚು ಉದ್ದದ ಯಾಂತ್ರಿಕ ದೋಣಿ ) ಕಳ್ಳ ಸರಕು ತುಂಬಿಕೊಂಡು ಬರುತ್ತಿದ್ದರು. ಇದನ್ನು ಕಂಡ ಗುತ್ತಿಗೆದಾರರು ಮತ್ತೊಂದು ಬೋಟಿನಲ್ಲಿ ಬೆನ್ನಟ್ಟಿಸಿಕೊಂಡು ಹೋಗಿ ಹಡಗು ಹಿಡಿದರು. ಕೂಡಲೇ ಕಳ್ಳ ಸಾಗಾಣಿಕೆದಾರರು ಈಜಿ ಪಾರಾದರು. ವಶಪಡಿಸಿಕೊಂಡಿದ್ದ ಬೋಟನ್ನು ಏನು ಮಮಾಡಬೇಕೆಂದು ತೋ
ರದೆ , ತಮ್ಮ ದೋಣಿಗೇ ಕಟ್ಟಿಕೊಂಡು ಗುತ್ತಿಗೆದಾರರು ಅಂಕೋಲಾದತ್ತ ಸಾಗಿದರು. ಕೆಲ ಸಮಯದ ಬಳಿಕ ಓಡಿ ಹೋಗಿದ್ದ ಕಳ್ಳ ಸಾಗಾಣಿಕೆದಾದರು 20 ಮಂದಿ ಸಹಚರರೊಂದಿಗೆ ದೊಡ್ಡ ಬೋಟೊಂದರಲ್ಲಿ ಗುತ್ತಿಗೆದಾದರರನ್ನು ಬೆನ್ನಟ್ಟಿದ್ದರು. ಕೊನೆಗೆ ಗುತ್ತಿಗೆದಾರರ ಹಡಗನ್ನು ನಿಲ್ಲಿಸಿ, ಅವರಲ್ಲಿದ್ದ ಸರಕನ್ನೂ ತಮ್ಮ ಬೋಟಿಗೆ ತುಂಬಿಕೊಂಡು ಹೊರಟು ಬಂದರು. ಕೋವಿಯನ್ನು ಇಟ್ಟುಕೊಳ್ಳುವುದು ಕಷ್ಟವಾದೀತೆಂದು, ಅದನ್ನು ಸಮುದ್ರದಲ್ಲಿಯೇ ಬಿಸಾಡಿ, ರಿವಾಲ್ವರನ್ನು ಮಾತ್ರ ಕಳ್ಳ ಸಾಗಾಣಿಕೆದಾರರ ಮುಖ್ಯಸ್ಥ ಮನೆಗೊಯ್ದ ಎಂದು ಹೇಳಲಾಗಿದೆ.
ಈ ಘಟನೆ ಸುಳಿವು ತಿಳಿದು ರವಿವಾರ ರಾತ್ರಿಯಿಡೀ ಕಣ್ಣಿನಲ್ಲಿ ಎಣ್ಣೆ ಹಾಕಿಕೊಂಡು ಕಾಯುತ್ತಿದ್ದ, ಪೊಲೀಸರು ರಂಗ ಪ್ರವೇಶಿಸಿದರು. ಡಿವೈಎಸ್ಪಿ ಲೋಕೇಶ್ ಕುಮಾರ್ ಅವರ ನೇತೃತ್ವದ ಪೊಲೀಸ್ ಪಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ, 6 ಜನ ಕಳ್ಳ ಸಾಗಾಣಿಕೆದಾರರನ್ನು ಬಂಧಿಸಿದರು. ಅಲ್ಲದೇ, ಅವರನ್ನೇ ಸಮುದ್ರಕ್ಕಿಳಿಸಿ, ತಳ ಸೇರಿದ್ದ ಬಂದೂಕನ್ನೂ ವಶಕ್ಕೆ ಪಡೆದುಕೊಂಡರು. ಮನೆಯಲ್ಲಿದ್ದ ರಿವಾಲ್ವರ್ ಹೊರಬಂತು. ಅಪಹರಣಕ್ಕೆ ಬಳಸಿಕೊಂಡಿದ್ದ , ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ದೊಡ್ಡ ದೋಣಿಯನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರ ಪೈಕಿ ಒಬ್ಬ ಬಂದರು ಇಲಾಖೆಯ ಸಿಬ್ಬಂದಿ ಎಂದೂ ಹೇಳಲಾಗಿದೆ. ಬಂಧಿತರಾದ ಬೋಜರಾಜ ಬಿಣಗಿ, ನಾರಾಯಣ ಚಂಡಿಯಾ ಹರಿಕಂತ್ರ, ಕುಶಾಲಿ ದಾಜಿ ಹರಿಕಂತ್ರ, ಬುದ್ಧಾ ಈರಾ ಹರಿಕಂತ್ರ, ವಿನೋದ ಪಾಂಡು ದುರ್ಗೇಕರ ಮತ್ತು ಗೋಪಾಲ ಚೊಪ್ಡೇಕರ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಅ. 14 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಈ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಲೋಕೇಶ್ ಕುಮಾರ್ ಅವರು ನೇತೃತ್ವ ವಹಿಸಿದ್ದರೆ, ಸರ್ಕಲ್ ಇನ್ಸಪೆಕ್ಟರ್ ಎಸ್.ಬಿ. ಮಾಸ್ತಮರ್ಡಿ, ಸಬ್ ಇನ್ಸ್‌ಪೆಕ್ಟರ್‌ಗಳಾದ ಜಾನ್ ಅಂತೋನಿ, ವಾಸುದೇವ ನಾಯಕ ಅವರು ಭಾಗವಹಿಸಿದ್ದರು. ಒಟ್ಟಿನಲ್ಲಿ ಸಾರ್ವಜನಿಕರಿಂದ ಪೊಲೀಸರ ಪ್ರಶಂಸೆ ಎಲ್ಲೆಲ್ಲೂ .(ಇನ್ಫೋ ಪ್ರತಿನಿಧಿಯಿಂದ)