• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಂಸ್ಕೃತಿಕ ಸ್ಮಾರಕವಾಗಿ ಮೈದಳೆದ ಮೇಲಕೋಟೆಯ ಪುತಿನ ಮನೆ

By Staff
|

Pu.ti.Narasimhacharಮೇಲುಕೋಟೆ: ನವೋದಯ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ ಪುತಿನ ಅವರ ಬಗ್ಗೆ ಕೇಳದವರಾರು? ಪುತಿನ ಕನ್ನಡ ಸಾರಸ್ವತ ಲೋಕಕ್ಕೆ ಸಲ್ಲಿಸಿದ ಸೇವೆ ಅಪಾರ. ಗೇಯ ರೂಪಕಗಳ, ಸಂಗೀತ ನಾಟಕ, ಗೀತ ರೂಪಕ ಕ್ಷೇತ್ರದಲ್ಲಿ ಪು.ತಿ. ನರಸಿಂಹಾಚಾರ್‌ ಅವರ ಸೇವೆ ಅವಿಸ್ಮರಣೀಯ. ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ 1905ರ ಮಾರ್ಚ್‌ನಲ್ಲಿ ಜನಿಸಿದ ಈ ಸಾರಸ್ವತ ಲೋಕದ ದಿಗ್ಗಜರು ಹುಟ್ಟಿ, ಆಡಿ ಬೆಳೆದ ಮನೆ ಸಾಂಸ್ಕೃತಿಕ ಸ್ಮರಣೆಯಾಗಿ ಉಳಿಯುವ ಕನಸು ನನಸಾಗಿದೆ. ರಾಜ್ಯ ಸರಕಾರ ಈ ಕಾರ್ಯವನ್ನು ಪೂರ್ಣಗೊಳಿಸಿದೆ.

ಪುತಿನ ಅವರ ಮೇಲುಕೋಟೆಯ (ನವೀಕರಣಗೊಂಡಿರುವ) ಮನೆ ರಾಷ್ಟ್ರೀಯ ಸ್ಮಾರಕವಾಗಿದೆ. 14 ಜೂನ್‌ 2000ರಂದು . ಡಾ. ಪುತಿನ ಟ್ರಸ್ಟ್‌ ಏರ್ಪಡಿಸಿದ್ದ ಸರಳ ಹಾಗೂ ಸುಂದರ ಕಾರ್ಯಕ್ರಮದಲ್ಲಿ ರಾಜ್ಯದ ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವರಾದ ಪ್ರೊ. ಬಿ.ಕೆ. ಚಂದ್ರಶೇಖರ್‌ ಅಧಿಕೃತವಾಗಿ ಸಾಂಸ್ಕೃತಿಕ ಸ್ಮಾರಕದ ಘೋಷಣೆ ಮಾಡಿದರು.

ಮೇಲುಕೋಟೆಯ ಚೆಲುವ ನಾರಾಯಣನನ್ನು ಆರಾಧ್ಯ ದೈವವೆಂದು ಆರಾಧಿಸಿದ ಪುರೋಹಿತ ತಿರುನಾರಾಯಣ ಅಯ್ಯಂಗಾರ್‌ ನರಸಿಂಹಾಚಾರ್‌ ಆಧುನಿಕ ಸಂಸ್ಕಾರದಿಂದ ತಮ್ಮ ವಿಮರ್ಶಕತ್ವವನ್ನು ಹರಿತಗೊಳಿಸಿದ ಮಹಾ ಕವಿ. ಮೇಲುಕೋಟೆಯ ದೇವಾಲಯದ ಎಡಬದಿಯಲ್ಲಿ ಸಾಧಾರಣ ಕಾಡು ಹೆಂಚಿನ ಮನೆ ಇವರದು. ಈ ಮನೆಯನ್ನೀಗ ಮೈಸೂರಿನ ಪ್ರಾಚ್ಯ ವಸ್ತು ಇಲಾಖೆ ವಹಿಸಿಕೊಂಡು ಅದು ಹಿಂದೆ ಹೇಗಿತ್ತೋ ಹಾಗೆ ಜೀರ್ಣೋದ್ಧಾರ ಮಾಡಿದೆ. ಪುತಿನ ಅವರು ಬಳಸುತ್ತಿದ್ದ ಮೇಜು, ಕುರ್ಚಿ, ದೇವರ ಮನೆ ಎಲ್ಲವನ್ನೂ ಯಥಾಸ್ಥಿತಿಯಲ್ಲಿಯೇ ಉಳಿಸಿಕೊಳ್ಳಲಾಗಿದೆ. ಪುತಿನ ಅವರ ಗ್ರಂಥಗಳನ್ನು ಇಲ್ಲಿ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದ ಖ್ಯಾತ ಗಾಯಕರು ಹಾಡಿರುವ ಪುತಿನ ಅವರ ಧ್ವನಿಸುರುಳಿಗಳನ್ನೂ ಇಲ್ಲಿ ಪ್ರದರ್ಶಿಸಲಾಗಿದೆ. ಪು.ತಿ.ನ. ಅವರಿಗೆ ಸಂದ ಗೌರವ, ಪ್ರಶಸ್ತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಪುತಿನ ಅವರ ಎಲ್ಲ ಕೃತಿಗಳನ್ನೂ ಪ್ರಕಟಿಸುವ ಯೋಜನೆ ಇದೆ. ಈಗಾಗಲೇ ಅವರ ಗೇಯ ರೂಪಕಗಳನ್ನು ಪ್ರಕಟಿಸಲಾಗಿದೆ. ಪುತಿನ ಟ್ರಸ್ಟ್‌ ವತಿಯಿಂದ ಪುತಿನ ಅವರ ಹೆಸರಿನಲ್ಲಿ ಪ್ರತಿವರ್ಷ ಉತ್ತಮ ಕಾವ್ಯ ಹಾಗೂ ನಾಟಕಕ್ಕೆ 10 ಸಾವಿರ ರುಪಾಯಿ ಪುರಸ್ಕಾರವನ್ನೂ ನೀಡಲಾಗುತ್ತಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಪರೀಕ್ಷೆಯ ಕಾವ್ಯ ಮೀಮಾಂಸೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವವರಿಗೆ ಚಿನ್ನದ ಪದಕವನ್ನೂ ನೀಡಲಾಗುತ್ತಿದೆ.
ಒಂದಾನೊಂದು ಕಾಲದಲ್ಲಿ ಬೌದ್ಧಿಕ ಚಟುವಟಿಕೆಗಳ ಕೇಂದ್ರವಾಗಿದ್ದ ಮೇಲುಕೋಟೆಯನ್ನು ಮತ್ತೆ ಸಾಂಸ್ಕೃತಿಕವಾಗಿ ಪುನರುಜ್ಜೀವನ ಗೊಳಿಸುವಲ್ಲಿ ಸರಕಾರದ ಈ ನಿರ್ಧಾರ ಸಹಾಯ ಮಾಡುವುದರಲ್ಲಿ ಸಂಶಯವಿಲ್ಲ. ಕವಿಯಾಬ್ಬರ ಮನೆಯನ್ನು ಸಾಂಸ್ಕೃತಿಕ ಸ್ಮಾರಕವಾಗಿ ಉಳಿಸಿಕೊಳ್ಳುವ ಕಾರ್ಯ ನಿಜಕ್ಕೂ ಸ್ತುತ್ಯಾರ್ಹ. ಮೇಲುಕೋಟೆಯಲ್ಲಿ ಇಂದು ಗತ ವೈಭವ ಇಲ್ಲ. ಎಲ್ಲವೂ ಪಾಳು ಬಿದ್ದಿವೆ. ಇಲ್ಲಿನ ಪುಷ್ಕರಣಿ, ದೇವಾಲಯ ಬೆಟ್ಟಗುಡ್ಡಗಳ ಸಾಲಿನಲ್ಲಿ ಮನುಷ್ಯ ಸಂಬಂಧವನ್ನು ಅರಸಿ, ತಮ್ಮ ಅನುಭವಾಮೃತಗಳನ್ನು ಸಾಹಿತ್ಯದಲ್ಲಿ ಬೆಳಕಿಗೆ ತಂದ ಈ ಸರಸ್ವತಿ ಪುತ್ರರ ಮನೆ ಸ್ಮಾರಕವಾಗಿ ಕಂಗೊಳಿಸುವುದನ್ನು ನೋಡಲು ನೀವೆಲ್ಲ ಒಮ್ಮೆ, ಮತ್ತೊಮ್ಮೆ ಮೇಲುಕೋಟೆಗೆ ಬಿಜಯಂಗೈಯಬೇಕು.
ಪುತಿನ ಅವರ ಬಗ್ಗೆ: ಪುತಿನ ಅವರ ಪೂರ್ಣ ಹೆಸರು: ಪುರೋಹಿತ ತಿರುನಾರಾಯಣ ಅಯ್ಯಂಗಾರ್‌ ನರಸಿಂಹಾಚಾರ್‌ ಆದರೂ ಸಾಹಿತ್ಯ ಪ್ರಿಯರಿಗೆಲ್ಲ ಅವರು ಪು.ತಿ.ನ ನಿಲ್ಲಿಸದಿರು ವನ ಮಾಲಿ ಕೊಳಲ ಗಾನವ ಎಂಬ ಹಾಡು ಕಿವಿಗೆ ಬಿದ್ದೊಡನೆ ಅವರ ನೆನಪು ಸಾಹಿತ್ಯ ಪ್ರಿಯರಿಗೆ ಬಾರದಿರದು. ಪುತಿನ ಬಹುಮುಖ ಪ್ರತಿಭೆಯ ಸಮಕಾಲೀನ ಸಾಹಿತಿಗಳಲ್ಲಿ ಅತ್ಯಂತ ಪ್ರಮುಖರು. ಇವರು ಕೇವಲ ಕವಿ ಮಾತ್ರ ಅಲ್ಲ. ವಿಮರ್ಶಕರು, ನಾಟಕಕಾರರು, ಸಂಶೋಧಕರು ಹಾಗೂ ಪ್ರಬಂಧ ಲೇಖಕರು. ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಕಲ್ಪನಾ ಸೌಂದರ್ಯ, ನಿರೂಪಣೆಯ ಕೌಶಲವನ್ನು ಮೆರೆದ ಹಿರಿಯ ಕವಿ.
ಸತ್ವಪೂರ್ಣ ಸಾಹಿತ್ಯದ ರಸದೌತಣವನ್ನು ಕನ್ನಡಿಗರಿಗೆ ನೀಡಿದ ಧೀಮಂತ. ಮಾಸ್ತಿಯವರ ಮಾತಿನಲ್ಲಿ ಹೇಳುವುದಾದರೆ ‘ ಪುತಿನ ಅವರ ಕಾವ್ಯ ಮೊನಚಾದುದು, ಹಾಗೆಯೇ ನೆಲೆಯರಿತುದು, ಜೀವನಾನುಕೂಲವಾದುದು, ಹಾಗೆಯೇ ತೀವ್ರವಾದದ್ದು, ಮಾತು ಮುದ್ದಾದುದು, ಅದರೂ ಅತ್ಯಂತ ಬಲವುಳ್ಳದ್ದು. ಪುತಿನ ಅವರ ಕಾವ್ಯದಲ್ಲಿ ನಮ್ಮ ನಾಡು ನುಡಿಯುತ್ತದೆ, ನಮ್ಮ ಸಂಸ್ಕೃತಿ ಅರಳುತ್ತದೆ’ ಪುತಿನ ಅವರ ಕಾವ್ಯಗಳನ್ನು ಭಕ್ತಿಯಿಂದ ಓದಿದವರಿಗೆ ಈ ಅನುಭವ ಆಗದೇ ಇರದು. ಆದರೆ ನಾವು ಮಾಸ್ತಿಯವರಷ್ಟು ಹೃದಯ ಹಾಗೂ ಕಾವ್ಯ ಶ್ರೀಮಂತಿಕೆಯಿಂದ ಬಣ್ಣಿಸಲು ಸಾಧ್ಯವಾಗದೇ ಇರಬಹುದು ಅಷ್ಟೇ.
ಪುತಿನ ಅವರು ಮೈಸೂರು ಸಂಸ್ಥಾನದ ಸೈನ್ಯದಲ್ಲಿ ಕೆಲಸ ಮಾಡಿದವರು. ಸೈನ್ಯದಲ್ಲಿದ್ದರೂ ಅವರ ಕವಿ ಹೃದಯ ಮಿಡಿಯುತ್ತಿತ್ತು. ಆನಂತರ ಅವರು ಮೈಸೂರು ಸಂಸ್ಥಾನದ ಲೆಜಿಸ್ಲೇಚರ್‌ ಇಲಾಖೆಯಲ್ಲಿದ್ದು ನಿವೃತ್ತರಾದರು. ತದನಂತರ ಮೈಸೂರು ವಿಶ್ವವಿದ್ಯಾಲಯದ ಇಂಗ್ಲಿಷ್‌ - ಕನ್ನಡ ನಿಘಂಟಿನ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿದರು. 1981ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರಿಗೆ ದೊರೆತ ಕೇಂದ್ರ ಹಾಗೂ ರಾಜ್ಯ ಸರಕಾರಗಳ, ಸಾಹಿತ್ಯ ಅಕಾಡಮಿಗಳ ಪ್ರಶಸ್ತಿಗಳು ತಮ್ಮ ಗೌರವವನ್ನೇ ಹೆಚ್ಚಿಸಿಕೊಂಡವು. ಪ್ರಶಸ್ತಿಗಳಿಗಿಂತಲೂ ಎತ್ತರಕ್ಕೆ ಬೆಳೆದ ವ್ಯಕ್ತಿ ಪು.ತಿ.ನ. ಪುತಿನ ಅವರ ತಂದೆ ತಿರುನಾರಾಯಣೈಯ್ಯಂಗಾರ್‌, ತಾಯಿ ಶ್ರೀರಂಗಮ್ಮ.
ಪುತಿನರ ಕೆಲವು ಪ್ರಮುಖ ಕೃತಿಗಳು:
ಕವನ ಸಂಗ್ರಹ: ಹಣತೆ, ಮಾಂದಳಿರು, ಶಾರದಯಾಮಿನಿ, ಹೃದಯ ವಿಹಾರಿ, ಗಣೇಶ ದರ್ಶನ, ರಸ ಸರಸ್ವತಿ, ಮಲೆ ದೇಗುಲ, ಸಂಗೀತ ನಾಟಕಗಳು: ವಸಂತ ಚಂದನ, ಸೀತಾ ಕಲ್ಯಾಣ, ಗೀತ ನಾಟಕಗಳು: ಅಹಲ್ಯೆ, ಗೋಕುಲ ನಿರ್ಗಮನ, ಶಬರಿ, ದೋಣಿಯ ಬಿನದ, ವಿಕಟ ಕವಿ, ಪ್ರಬಂಧ: ಈಚಲ ಮರದ ಕೆಳಗೆ, ಧೇನುಕಾ ಪುರಾಣ, ಸಂಕಲನಗಳು : ರಾಮಾಚಾರಿಯ ನೆನಪು, ರಥಸಪ್ತಮಿ ಮತ್ತು ಇತರ ಕತೆಗಳು, ಶ್ರೀರಾಮ ಪಟ್ಟಾಭಿಷೇಕಂ ಇತ್ಯಾದಿ ಹಂಸ ದಮಯಂತಿ ಪುತಿನ ಅವರಿಗೆ ಭಾರತ ಸಾಹಿತ್ಯ ಅಕಾಡೆಮಿ ಪಾರಿತೋಷಕ ತಂದಿತ್ತ ಕೃತಿ. ಸರಕಾರ ಪುತಿನ ಅವರ ಜೀವಿತ ಕಾಲದಲ್ಲೇ ಪುತಿನ ಟ್ರಸ್ಟ್‌ ಸ್ಥಾಪಿಸಿತು. ಡಾ. ವೀಣೆ ದೊರೆಸ್ವಾಮಿ ಅಯ್ಯಂಗಾರ್‌ ಈ ಟ್ರಸ್ಟ್‌ ಅಧ್ಯಕ್ಷರಾಗಿದ್ದರು. ಅವರ ನಿಧನಾನಂತರ ಈಗ ಖ್ಯಾತ ಸಾಹಿತಿ, ಕವಿ ಜಿ.ಎಸ್‌. ಶಿವರುದ್ರಪ್ಪ ಟ್ರಸ್ಟ್‌ ಅಧ್ಯಕ್ಷರಾಗಿದ್ದಾರೆ. ಸರಕಾರ ಈಗ ಮೇಲುಕೋಟೆಯ ಪುತಿನ ಅವರ ಮನೆಯನ್ನು ಸ್ಮಾರಕವಾಗಿ ಮಾಡಿರುವ ಹಿನ್ನೆಲೆಯಲ್ಲಿ ಮೇಲುಕೋಟೆಯನ್ನು ಸಾಂಸ್ಕೃತಿಕವಾಗಿ ಪುನರುಜ್ಜೀವನಗೊಳಿಸುವ ಯೋಜನೆಯನ್ನು ಟ್ರಸ್ಟ್‌ ಹಾಕಿಕೊಂಡಿದೆ.

ಮುಖಪುಟ / ನೋಡು ಬಾ ನಮ್ಮೂರ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more