• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಾವಲಂಬನೆ ಎಂಬ ದಿವ್ಯ ಮಂತ್ರ

By Super
|

ಅಭಿವೃದ್ಧಿ ಎನ್ನುವಂತಹದ್ದು ಪ್ರಾಥಮಿಕ ನೆಲೆಗಳಲ್ಲಿ ಅರಳಬೇಕು. ಎಲ್ಲಿಯೋ ಹುಟ್ಟುವ ಬೃಹತ್‌ ಯೋಜನೆ ಹಳ್ಳಿಗ ಳಿಗೆಲ್ಲಾ ಹೊಳೆಯಾಗುತ್ತದೆನ್ನುವ ಭ್ರಮೆಗಳು ಸ್ವಾತಂತ್ರ್ಯಾ ನಂತರದ 50 ವರ್ಷಗಳ ಅನುಭವದಲ್ಲಿ ಸುಳ್ಳೆಂದು ಸಾಬೀತಾಗಿವೆ. ಬದಲಿಗೆ ಗಾಂಧೀಜಿ ಬದುಕಿನುದ್ದಕೂ ಹೇಳುತ್ತಾ ಬಂದ ಸ್ವಾವಲಂಬನೆ ಮಂತ್ರವೇ ನಮಗೆ ಗತಿಯಾಗಿದೆ.ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಿ- ಗಾಂಧಿ ಹೇಳಿದ್ದು ಹೊಸತೇನಲ್ಲ . 12 ನೆಯ ಶತಮಾನದಲ್ಲಿಯೇ ಬಸವಣ್ಣ ಕಾಯಕವೇ ಕೈಲಾಸ ಎಂದಿದ್ದರು. ಅನಷ್ಠಾನಕ್ಕೆ ಏನು ಅವಸರ ಎಂದು ನಾವು, ನಮ್ಮ ನಾಯಕರು ನಿಧಾನ ನೀತಿ ಅನುಸರಿಸಿದ್ದರಿಂದ ನಾಡು ನಿಂತಲ್ಲೇ ನಿಂತಿದೆ.

ಪ್ರತಿಯಾಂದು ಕೆಲಸಕ್ಕೂ ಸರ್ಕಾರವನ್ನೇ ಕಾದು ಕೂರುವುದು ನಮಗೆಲ್ಲಾ ರೂಢಿಯಾಗಿದೆ. ಜವಾಬ್ದಾರಿಗಳನ್ನು ಪರಸ್ಪರ ಹಸ್ತಾಂತರಿಸುತ್ತಾ ಸಮಸ್ಯೆಗಳನ್ನು ಇದ್ದಂತೆಯೇ ಇರಿಸುವುದರಲ್ಲಿ ನಾವೆಲ್ಲಾ ಜಾಣರು. ಆದರೆ ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಹಳ್ಳಿಗರು ನಾವು ನೀವೆಲ್ಲ ನಾಚುವಂತೆ ಗಾಂಧಿ ತತ್ವವ ನಡೆಯಲ್ಲಿ ಅನುಸರಿಸಿದ್ದಾರೆ. ಗಾಂಧಿಯ ರಾಜಕೀಯ ಪರಿಕಲ್ಪನೆಯಾದ ಅಲ್ಲಿನ ಪಂಚಾಯಿತಿಗಳು ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆಯುವಂತೆ ಕೆಲಸ ಮಾಡಿವೆ. ನಮ್ಮಲ್ಲೂ ಈಗ ಪಂಚಾಯಿತಿ ಚುನಾವಣೆಗಳ ಬಿಸಿ. ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಬಂದ ಮೆಂಬರ್‌ ಆದವರೆಲ್ಲಾ ಅನುಸರಿಸಬಹುದಾದ ಸೊಗಸಾದ ಪ್ರಣಾಳಿಕೆ ಇಲ್ಲಿದೆ.

ಮಹಾಭಗೀರಥ ಪ್ರಯತ್ನ : ಮಧ್ಯಪ್ರದೇಶದ ಧಾರ್‌ ಜಿಲ್ಲೆಗೂ ಬರಕ್ಕೂ ಗಳಸ್ಯ ಕಂಠಸ್ಯ. ಇದರ ಜೊತೆಗೆ ಬೇಸಗೆ ಕೂಡಿ ಕೊಂಡರೆ ಕೇಳಬೇಕೆ. ಮೊನ್ನೆ ಮುಗಿದ ಮಾರ್ಚ್‌ ಮಾಹೆಯಲ್ಲಂತೂ ಹಳ್ಳಿಗಳಲ್ಲಿನ ಬಾವಿಗಳು, ಕೊಳವೆಬಾವಿಗಳೆಲ್ಲ ತಂಪು ಕಳಕೊಂಡಾಗ ಅಲ್ಲಿನ ಜನ ಸಹಜವಾಗಿಯೇ ಕಂಗಾಲಾದರು. ಹಾಗೆಂದು ಕೈ ಕಟ್ಟಿ ಕೂಡುವಂತಿರಲಿಲ್ಲ , ಸರ್ಕಾರವನ್ನೂ ನೆಚ್ಚುವಂತಿಲ್ಲ . ಇಲ್ಲಿನ ಜನ ನೆಚ್ಚಿದ್ದು ಗಾಂಧಿ ಹೇಳಿಕೊಟ್ಟಿದ್ದ ಸ್ವಾವಲಂಬನೆಯನ್ನ . ಕೆಲಸಕ್ಕೆ ಮುಂದಾದಾಗ ಸರ್ಕಾರದ ಚಿಕ್ಕಾಸಿನ ನೆರವು ಇವರಿಗೆ ಸಿಕ್ಕಿತಾದರೂ ಅದು ರಾವಣನ ಹೊಟ್ಟೆಗೆ ಸಿಕ್ಕಿದ ಅರೆ ಕಾಸಿನ ಮಜ್ಜಿಗೆಯಾಗಿತ್ತು. ಈ ಹೊತ್ತಿನಲ್ಲಿ ಜನಗಳನ್ನು ಸಂಘಟಿಸಿ ತಮ್ಮ ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳಲು ಅಲ್ಲಿನ ಪಂಚಾಯ್ತಿಗಳು ಮುಂದಾದವು.

ಸಹಾಯ ಮಾಡಿಕೊಳ್ಳುವೆವು ನಮಗೆ ನಾವೇ- ಎನ್ನುವ ಘೋಷಣೆಯಾಂದಿಗೆ ಜನ ಕೈಗೆ ಕೈ ಬೆರೆಸಿದರು, ಜೊತೆಗಿತ್ತು ಮೂರೇ ತಿಂಗಳಲ್ಲಿ ಹಳ್ಳಿಗಳಿಗಂಟಿದ ಶಾಪವನ್ನು ಕಳೆಯುವ ಸಂಕಲ್ಪ . ಪಂಚಾಯಿತಿಗಳ ನಿಧಿ ಸಾಲದಾದಾಗ ಸಾರ್ವಜನಿಕರೂ ಮುಕ್ತವಾಗಿ ಹಣ ನೀಡಿದರು. ಕಾಯಾ ವಾಚಾ ಮನಸಾ ಕುಡಿಯುವ ನೀರಿಗೆ ಬರಕ್ಕೆ ಉತ್ತರ ಕಂಡುಕೊಳ್ಳಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳಿಗೆ ಮುಂದಾದರು.

ಮೆಹಂದಿಖೇರ ಒಂದು ಸಣ್ಣ ಹಳ್ಳಿ . ಹಳ್ಳಿ ಸಣ್ಣದಾದರೇನು, ಸಮಸ್ಯೆ ಸಣ್ಣದಿರುತ್ತದೆಯೇ? ಅರ್ಧ ಸಂಬಳಕ್ಕೆ ಇಲ್ಲಿನ ಜನ ಬೆವರು ಸುರಿಸಿದರು. 25 ಮನೆಗಳಿಗೆ ಹಾಗೂ ಸ್ಥಳೀಯ ಶಾಲೆಗೆ ನೀರು ಪೂರೈಸುವ ರಾಜಾಭೋಜನ ಕಾಲದ ಬಾವಿಯನ್ನು ಇನ್ನಷ್ಟು ಆಳ ಮಾಡಿ ಮತ್ತೆ ನೀರು ಕಾಣಿಸುವವರೆಗೂ ಜನ ನೆಮ್ಮದಿಯಿಂದಿರಲಿಲ್ಲ . ತಲಾಬ್‌ ಫಲಿಯಾ ಹಳ್ಳಿಯಲ್ಲಂತೂ ಕೊಳವೆ ಬಾವಿಗಳೇ ಇರಲಿಲ್ಲ . ಕೊರೆಯುವ ಯಂತ್ರ ಊರಿಗೆ ಬರಲು ದಾರಿಯಿದ್ದರೇ ತಾನೇ, ಕೊಳವೆಬಾವಿಯ ಮಾತು. ಇಲ್ಲಿ ಕೂಡ ರಸ್ತೆ ನಿರ್ಮಿಸಲು ಹಳ್ಳಿಗರೇ ಬೆವರು ಸುರಿಸಿದರು, ಅದೂ ಸಂಬಳವಿಲ್ಲದೆ.

ಬೆರಿಯಾ ಗ್ರಾಮ ಪಂಚಾಯಿತಿಯ ಸರಪಂಚೆ ಗುಡ್ಡಗಾಡು ಕೋಮಿಗೆ ಸೇರಿದವಳು. ಆಕೆ ಊರಿನ ಕೊಳವನ್ನು ಮತ್ತಷ್ಟು ಆಳಗೊಳಿಸಲು ಹಾಗೂ ಸ್ವಚ್ಛಗೊಳಿಸಲು ಉಚಿತವಾಗಿ ದುಡಿಯುವಂತೆ ತನ್ನ ಊರಿನ ಶ್ರಮಿಕರನ್ನು ಒಲಿಸಿದಳು. ಅದರ ಫಲವಾಗಿಯೇ ಊರವರಿಗೆ, ಹಾದಿಹೋಕರಿಗೆ ಬೆರಿಯಾದಲ್ಲೀಗ ತಿಳಿ ನೀರು ಲಭ್ಯವಾಗುತ್ತಿದೆ.

ಡೆಡ್ಲಾ ಗ್ರಾಮದ್ದು ಮತ್ತೊಂದು ಕತೆ. ಮಾರ್ಚ್‌ 20 ರಂದು ಅಲ್ಲಿನ ಪಂಚಾಯಿತಿ ಸಭೆ ಸೇರಿದಾಗ ಲಭ್ಯವಿದ್ದ 15 ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿದ್ದುದು 4 ರಲ್ಲಿ ಮಾತ್ರ. ಕೆಲವೇ ದಿನಗಳಲ್ಲಿ ಸಮಸ್ಯೆ ಪರಿಹರಿಸಿಕೊಳ್ಳಲು ಸಭೆ ನಿರ್ಧರಿಸಿತು. ಶಾಲಾ ಶಿಕ್ಷಕರೊಬ್ಬರು ತಮ್ಮ ಬೋರ್‌ವೆಲ್‌ಗೆ ಒತ್ತುವ ಪಂಪ್‌ ಅಳವಡಿಸಲು ಮುಂದಾದರು. ಮತ್ತೊಬ್ಬ ರೈತ ತಾನು ನೀರಾವರಿಗೆ ಬಳಸುತ್ತಿದ್ದ ಬೋರ್‌ವೆಲ್ಲನ್ನು ಗ್ರಾಮಕ್ಕೆ ನೀರು ಪೂರೈಸಲು ನೀಡಲು ಮುಂದಾದ. ಫಲಿತಾಂಶ ನೋಡಿ, ಏಪ್ರಿಲ್‌ 4 ರ ಹೊತ್ತಿಗೆ ಊರವರಿಗೆ ನೀರಿನ ಬರ ಎನ್ನುವ ಮಾತೇ ಮರೆತು ಹೋಯ್ತು .

ಹಳ್ಳಿಗರ ಪ್ರಯತ್ನಗಳನ್ನು ಜಿಲ್ಲಾಧಿಕಾರಿ ಡಾ. ರಾಜೇಶ್‌ ರಜೋರಾ ಮಹಾಭಗೀರಥ ಪ್ರಯತ್ನ ಎಂದೇ ಬಣ್ಣಿಸುತ್ತಾರೆ. ಆರ್ಥಿಕವಾಗಿ ದುರ್ಬಲ ಹಾಗೂ ಗುಡ್ಡಗಾಡು ಜನಾಂಗದವರೇ ಹೆಚ್ಚಿರುವ ಈ ಹಳ್ಳಿಗಳ ನಾಗರಿಕರ ಪ್ರಯತ್ನಗಳು ಗಂಗೆಯನ್ನು ಭೂಮಿಗೆ ತಂದ ಭಗೀರಥ ಪ್ರಯತ್ನಕ್ಕಿಂಥಾ ಮಿಗಿಲಾದವು ಎಂದು ರಾಜೇಶ್‌ ಸ್ಪಷ್ಟವಾಗಿ ಹೇಳುತ್ತಾರೆ. 1487 ಹಳ್ಳಿಗಳಲ್ಲಿ ಇಂಥ ಸ್ವಾವಲಂಬನೆಯ ಪ್ರಯತ್ನಗಳು ಯಶಸ್ವಿಯಾಗಿವೆ ಎಂದು ತುಂಬು ಹೆಮ್ಮೆಯಿಂದವರು ಹೇಳುತ್ತಾರೆ.

ದೇಶದ ಮಟ್ಟಿಗೆ ಹೇಳುವುದಾದರೆ ಧರ್‌ ಜಿಲ್ಲೆಯ ಹಳ್ಳಿಗಳದು ದಾಖಲೆಯ ಸಾಹಸ. ಪಂಚಾಯಿತಿಗಳ ಮುಖಾಂತರವೇ ಕುಡಿಯುವ ನೀರಿನ ಸಂಪೂರ್ಣ ನಿರ್ವಹಣೆಯಾದ ಜಾದೂ ಇಲ್ಲಿನದು. ಸರ್ಕಾರ ಮಾಡ ಬಹುದಾದಕ್ಕಿಂತ ಹೆಚ್ಚಿನದನ್ನು ಹಳ್ಳಿಗರು ಸಾಧಿಸಿದ್ದಾರೆ ಎನ್ನುತ್ತಾರೆ ಧರ್‌ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ಅಮಿತ್‌ ಅಗರ್‌ವಾಲ್‌.

ನೀರಾವರಿ ಕಾಮಗಾರಿಗಳಿಗಾಗಿ 1.52 ಕೋಟಿ ರುಪಾಯಿ ನೇರವಾಗಿ ಸಾರ್ವಜನಿಕರಿಂದಲೇ ಸಂಗ್ರಹವಾಗಿದೆ. 7.22 ಕೋಟಿ ರುಪಾಯಿ ವೆಚ್ಚದ ನಾಗರಿಕ ಕಾಮಗಾರಿಗಳ ನಿರ್ಮಾಣಕ್ಕಾಗಿ ಜವಾಹರ್‌ ಗ್ರಾಮ ಸಮೃದ್ಧಿ ಯೋಜನೆ ಮತ್ತು ರಾಜ್ಯ ಹಣಕಾಸು ಆಯೋಗದ ವತಿಯಿಂದ ದೊರೆತಿರುವುದು 6.06 ಕೋಟಿ ರುಪಾಯಿ ಮಾ ತ್ರ. ಹಳ್ಳಿಗರು ಕಾಮಗಾರಿಗಳಲ್ಲಿ ಶ್ರಮದಾನದ ಜೊತೆಗೆ ಹಣ ತೊಡಗಿಸಿರುವುದನ್ನು ಅಮಿತ್‌ ಒತ್ತಿ ಹೇಳುತ್ತಾರೆ.

ಮಧ್ಯಪ್ರದೇಶದ ಧರ್‌ ಜಿಲ್ಲೆಯಲ್ಲಿ ಸಾಧ್ಯವಾದದ್ದು ನಮ್ಮ ಗುಲ್ಬರ್ಗಾ, ತುಮಕೂರುಗಳಲ್ಲಿ ಸಾಧ್ಯವಾಗುವುದು ಯಾವಾಗ? ಹೇಗೂ ಹೊಸ ಪಂಚಾಯಿತಿಗಳು ರಚನೆಯಾಗುತ್ತಿವೆ. ಅವುಗಳೊಂದಿಗೆ ಹೊಸ ರಚನಾತ್ಮಕ ಕನಸುಗಳು ನನಸಾಗುತ್ತವೇನೋ... ಕಾಯಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
They didnt wait for govt to provide water
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more