• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಲ್ಯಾಣ ರಾಮನಿಗಿಲ್ಲಿ ಕನ್ನಡ-ದಲ್ಲೇ ಕೈಂಕರ್ಯ

By Super
|
ಕನ್ನಡ ಭಾಷೆ ಕನ್ನಡಿಗರ ಅಭಿಮಾನದಿಂದ ಮಾತ್ರ ಬೆಳೆಯಬಲ್ಲುದೇ ವಿನಾ ಸರಕಾರದ ಕಾನೂನು ಅಥವಾ ಕಡ್ಡಾಯ ನೀತಿಯಿಂದಲ್ಲ. ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎಂದು ರಾಷ್ಟ್ರಕವಿ ಕುವೆಂಪು ಸಾರಿದರೆ, ಕನ್ನಡಕ್ಕೆ ಕಿರುಬೆರಳೆತ್ತಿದರೂ ಸಾಕು ಅದು ಕಲ್ಪವೃಕ್ಷವಾಗುತ್ತದೆ ಎಂದು ಬಿಎಂಶ್ರೀ ನುಡಿದಿದ್ದಾರೆ. ನಾವು ಎಲ್ಲೇ ಇದ್ದರೂ ಸ್ವಪ್ರೇರಣೆಯಿಂದ ಕನ್ನಡ ಅಭಿಮಾನ ರೂಢಿಸಿಕೊಂಡರೆ ಕನ್ನಡ ಉಳಿವಲ್ಲಿ ಬೆಳೆಯುವಲ್ಲಿ ಸಂಶಯವಿಲ್ಲ. ಮನಸ್ಸಿದ್ದರೆ ತಾನೆ ಮಾರ್ಗ?

ಕನ್ನಡದ ಕ್ರೆೃಸ್ತರು ಕನ್ನಡ ಬಲ್ಲವರನ್ನೇ ಪಾದ್ರಿಗಳನ್ನಾಗಿ ನೇಮಿಸುವಂತೆ, ಚರ್ಚ್‌ಗಳಲ್ಲಿ ಕನ್ನಡದಲ್ಲೇ ಪೂಜೆ ನಡೆಯಬೇಕು ಎಂದು ಆಗ್ರಹಿಸಿ ಮೆರವಣಿಗೆ ನಡೆಸಿದ್ದಾರೆ. ಹೋರಾಟ ನಡೆಸಿದ್ದಾರೆ. ಹೋರಾಟ ಮಾಡುತ್ತಲೇ ಇದ್ದಾರೆ. ಆದರೆ ಕರ್ನಾಟಕದ ಯಾರೂ ಹಿಂದೂ ದೇವರುಗಳಿಗೆ ಕನ್ನಡದಲ್ಲಿ ಅರ್ಚನೆ ಮಾಡಬೇಕೆಂದು ಕೇಳಿದ್ದಿಲ್ಲ. ಕೂಗಾಡಿದ್ದೂ ಇಲ್ಲ. ಆದರೂ ಯಾವುದೇ ಸದ್ದುಗದ್ದಲವಿಲ್ಲದೆ ಮಲೆನಾಡಿನ ತವರಿನಲ್ಲಿರುವ ಹಿರೇಮಗಳೂರಿನ ಕಲ್ಯಾಣ ರಾಮನಿಗೆ ಕನ್ನಡದಲ್ಲೇ ಪೂಜೆ, ಕೈಂಕರ್ಯಗಳ ನಡೆಯುತ್ತಿವೆ. ಈ ಸಾಧನೆಯ ಹಿರಿಮೆ ಹಿರೆಮಗಳೂರು ಕಣ್ಣನ್‌ ಅವರಿಗೆ ಸಲ್ಲಬೇಕು.

ಹಿರೆಮಗಳೂರು ಕರ್ನಾಟಕದ ಕಾಫಿಯ ಕಣದಲ್ಲಿರುವ ಒಂದು ಪುಟ್ಟ ಊರು. ಆದರೂ ಇಲ್ಲಿ ಕನ್ನಡತನವಿರುವ ಜನರು ಸಾವಿರಾರು. ಈ ಊರು ಚಿಕ್ಕದಾದರೂ ಇಲ್ಲಿನ ಜನರ ಕನ್ನಡಾಭಿಮಾನ ದೊಡ್ಡದು. ಅದರ ಫಲವೇ ಈ ಕನ್ನಡ ಕೈಂಕರ್ಯ. ಹಿರೆ ಮಗಳೂರು ಇಂದು ನಿನ್ನೆಯದಲ್ಲ. ಇದಕ್ಕೆ ಪುರಾಣ ಕಾಲದ ಐತಿಹ್ಯವೂ ಇದೆ. ಇತಿಹಾಸವೂ ಇದೆ. ಕತೆಯಾಂದರ ರೀತ್ಯ ರುಕ್ಮಾಂಗದ ಎಂಬ ಪುರಾಣಕಾಲದ ದೊರೆ ತನ್ನ ಹಿರಿ ಮಗಳು ಹಾಗೂ ಕಿರಿ (ಚಿಕ್ಕ) ಮಗಳಿಗೆ ನೀಡಿದ ಎರಡು ಪ್ರದೇಶಗಳೇ ಇಂದು ಚಿಕ್ಕಮಗಳೂರು ಹಾಗೂ ಹಿರೆಮಗಳೂರು ಆಗಿವೆಯಂತೆ. ಗಂಗರ ಕಾಲದ ಶಾಸನಗಳಲ್ಲೂ ಸಹ ಚಿಕ್ಕ ಮುಗುಳಿ, ಹಿರಿಯ ಮುಗುಳಿ ಎಂಬ ಉಲ್ಲೇಖಗಳಿದ್ದು ಕಾಲಾಂತರದಲ್ಲಿ ಚಿಕ್ಕಮಗಳೂರು ಹಾಗೂ ಹಿರೇ ಮಗಳೂರು ಎಂಬ ಹೆಸರು ಪಡೆದವೆನ್ನಲಾಗಿದೆ. ಮೌರ್ಯರು ಹಾಗೂ ಶಾತವಾಹನರ ಆಡಳಿತ ಎಲ್ಲೆಯಲ್ಲಿ ಈ ಊರು ಸೇರಿತ್ತು ಎಂಬ ಇತಿಹಾಸವೂ ಇದೆ.

ಹಿರೆಮಗಳೂರಿನಲ್ಲಿರುವ ಕೋದಂಡ ಕಲ್ಯಾಣರಾಮನ ದೇವಾಲಯ ದಕ್ಷಿಣ ಭಾರತದಲ್ಲೇ ಪ್ರತಿಷ್ಠಾಪಿತವಾದ ಪ್ರಪ್ರಥಮ ರಾಮದೇಗುಲ ಎಂಬ ಖ್ಯಾತಿಗೂ ಪಾತ್ರವಾಗಿದೆ. ಸಾಮಾನ್ಯವಾಗಿ ಕನ್ನಡಿಗರು ಏಳುವುದೇ ನವೆಂಬರ್‌ 1ರಂದು, ಎದ್ದವರು ಒಂದು ತಿಂಗಳುಗಳ ಕಾಲ ಮೈಕಾಸುರನ ನೆರವಿನೊಂದಿಗೆ ಕೂಗಾಡಿ, ಡಿಸೆಂಬರ್‌ ಕಳೆಯುತ್ತಿದ್ದಂತೆ ನಿದ್ದೆ ಹೋದರೆ ಮತ್ತೆ ಎದ್ದೇಳುವುದು ಮುಂದಿನ ವರ್ಷ ನವೆಂಬರ್‌ನಲ್ಲಿಯೇ. ಇದಕ್ಕಾಗಿಯೇ ಕನ್ನಡಿಗ ಎಂಬ ಪದದ ಅರ್ಥ ನಿರಭಿಮಾನಿ ಎಂದು ಕುವೆಂಪು ಛೇಡಿಸುತ್ತಿದ್ದುದು. ಆದರೆ, ಹಿರೆಮಗಳೂರಿನಲ್ಲಿ ಹಾಗಲ್ಲ. ಇಲ್ಲಿ ನವೆಂಬರ್‌ನಲ್ಲಿ ಅಷ್ಟೇ ಅಲ್ಲ ಎಲ್ಲ 365ದಿನಗಳಲ್ಲೂ ಕನ್ನಡದ ಸೇವೆ ನಡೆದೇ ಇರುತ್ತದೆ.

ಇಲ್ಲಿನ ಕಲ್ಯಾಣ ರಾಮ ನಿತ್ಯವೂ ಕನ್ನಡ ಕವಿಗಳ ಕವನ, ಕನ್ನಡಕ್ಕೆ ಭಾಷಾಂತರಿಸಲಾದ ಮಂತ್ರಗಳಿಂದ ಅರ್ಚಿಸಲ್ಪಡುತ್ತಾನೆ. ಕನ್ನಡ ಮಂತ್ರಗಳ ಅರ್ಚನೆಯಿಂದಾಗಿ ಅಯೋಧ್ಯೆಯ ಈ ರಾಮ ಕನ್ನಡಿಗನಾಗೇ ಹೋಗಿದ್ದಾನೆ. ಪುರಾಣದಲ್ಲಿ ಶ್ರೀರಾಮ ಹಾಗೂ ಪರಶುರಾಮರು ಇಲ್ಲಿ ಸಂಧಿಸಿದ್ದರೆಂದೂ, ಪರಶುರಾಮರು ಶ್ರೀರಾಮನಿಗೆ ಕಲ್ಯಾಣ ಸೇವೆ ಸಲ್ಲಿಸಿದರೆಂದೂ ಅಂದಿನಿಂದ ಕಲ್ಯಾಣರಾಮನಾದನೆಂದೂ ಕತೆಯಿದೆ. ಜನಮೇಜಯ ತಕ್ಷಕ ಸಂಹಾರಕ್ಕಾಗಿ ಸರ್ಪಯಾಗವನ್ನು ಮಾಡಿದ್ದೂ ಇದೇ ಸ್ಥಳದಲ್ಲಂತೆ. ಇದಕ್ಕೆ ಸಾಕ್ಷಿಯಾಗಿ ಬೃಹತ್‌ ಧೂಪಸ್ತಂಭವೊಂದು ಇಲ್ಲಿದೆ.

ದೇವಾಲಯದ ಗರ್ಭಗುಡಿ ಸುಖನಾಸಿ ಹೊಯ್ಸಳ ಶೈಲಿಯಲ್ಲಿದ್ದರೆ, ದೇಗುಲದ ಉಳಿದ ಭಾಗ ದ್ರಾವಿಡ ಶೈಲಿಯಲ್ಲಿರುವುದೊಂದು ವಿಶೇಷ. ಈ ದೇಗುಲದಲ್ಲಿ ಕನ್ನಡದಲ್ಲಿಯೇ ಅರ್ಚನೆ ಮಾಡುವ ಸವ್ಯಸಾಚಿ ಹಾಗೂ ಕಣ್ಣನ್‌ ಅವರು ಕನ್ನಡಿಗರೇ ಆದರೂ ಇವರನ್ನು ತೆಮಿಳ್ಗನ್ನಡಿಗರೆನ್ನಲು ಅಡ್ಡಿಯಿಲ್ಲ. ಇಲ್ಲಿ ರಾಮನ ಪೂಜೆಗಾಗಿ ಸವ್ಯಸಾಚಿಯವರು ಟ್ರಸ್ಟ್‌ ಒಂದನ್ನು ಹುಟ್ಟುಹಾಕಿದರು. ಇವರೊಂದಿಗೆ ಕನ್ನಡ ಕಾವ್ಯಾಸಕ್ತರಾದ ಕಣ್ಣನ್‌ ಕೈಜೋಡಿಸಿದರು. ಇದರ ಫಲವಾಗಿ ನಿತ್ಯ ಹನುಮ ಸಮೇತನಾದ ಶ್ರೀರಾಮ, ಲಕ್ಷಣ, ಸೀತಾಮಾತೆಯರಿಗಿಲ್ಲಿ ಕನ್ನಡದ ಕೈಂಕರ್ಯ.

ಕನ್ನಡ ಕಾವ್ಯಗಳ ಸುಪ್ರಭಾತ

ಕಲ್ಯಾಣ ಕೋದಂಡರಾಮನಿಗೆ ನಿತ್ಯ ಬೆಳಗ್ಗೆ ಸುಪ್ರಭಾತ ನಡೆಯುವುದೂ ಕನ್ನಡದಲ್ಲೇ. ಕುವೆಂಪು, ಬಿ.ಎಂ.ಶ್ರೀ, ಮಾಸ್ತಿ, ಬೇಂದ್ರೆ, ನಿಸಾರ್‌ ಅಹಮದ್‌, ಪು.ತಿ.ನ, ರತ್ನಾಕರ ವರ್ಣಿಯವರೇ ಮೊದಲಾದ ಕವಿಗಳು ರಚಿಸಿರುವ ಪ್ರಾತಃಪ್ರಾರ್ಥನೆಯಾಂದಿಗೆ ಏಳುವ ಶ್ರೀರಾಮನಿಗೆ ಎಲ್ಲ ಸೇವೆಗಳೂ ಕನ್ನಡದಲ್ಲೇ ನಡೆಯುತ್ತವೆ. ಅಭಿಷೇಕ, ಅಲಂಕಾರ, ಅಚೆ, ಮಂಗಳಾರತಿ ಎಲ್ಲಕ್ಕೂ ಕನ್ನಡದ ಮಂತ್ರಗಳೇ. ಇಲ್ಲಿರುವ ಪಂಪ ಭವನ ಊರಿನ ಮತ್ತೊಂದು ಆಕರ್ಷಣೆ. ಇಲ್ಲಿ ಮದುವೆ ಮುಂಜಿ ಮುಂತಾದ ಶುಭಕಾರ್ಯಗಳಷ್ಟೇ ಅಲ್ಲದೆ ಸಾಹಿತ್ಯ ಗೋಷ್ಠಿಗಳೂ ನಡೆಯುತ್ತವೆ.

ಊರಿನ ಜನರೆಲ್ಲ ಕನ್ನಡಪ್ರಿಯರೆ ಹೀಗಾಗಿ ಎಲ್ಲರ ಮನೆಯ ಮುಂದೂ ಕನ್ನಡ ಕವಿಗಳ ಹೆಸರುಗಳು ರಾರಾಜಿಸುತ್ತವೆ. ಈ ಊರಿನ ರಸ್ತೆಗಳಿಗೆ, ಚೌಕಗಳಿಗೆ, ವೃತ್ತಗಳಿಗೆ ಪಂಪ, ರನ್ನ, ಜನ್ನ, ಪೊನ್ನ, ಕಾರಂತ, ಕುವೆಂಪು, ಗೋವಿಂದಪೈ, ಬಾಣಭಟ್ಟ ಮೊದಲಾದವರ ಹೆಸರುಗಳನ್ನೇ ಇಡಲಾಗಿದೆ. ಕರುಣಾಳು ಬಾಬೆಳಕೆ ಮಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು ಎಂಬ ಬಿ.ಎಂ.ಶ್ರೀ ಅವರ ಕವನವನ್ನು ರಾಮ ದೇಗುಲದಲ್ಲಿ ದೀಪ ಹಚ್ಚುವ ವೇಳೆಯಲ್ಲಿ ಹಾಡಲಾಗುತ್ತದೆ. ತುಳಸಿ ಹೂ ಅರ್ಪಿಸುವಾಗ ಜಿಎಸ್‌ಎಸ್‌ ಅವರ ಹೂವ ತೊಟ್ಟಿವೆ, ಹೂವ ಬಿಟ್ಟಿವೆ ಕವನವೂ, ಶಂಖಾರಾಧನೆಯ ಸಂದರ್ಭದಲ್ಲಿ ಊದಿ ಬಿಡುನೀ ಪಾಂಚಜನ್ಯವ .. ಎಂಬ ಗೀತ ಗಾಯನವೂ ನಡೆಯುತ್ತದೆ. ದಾಸರ ಪದಗಳು, ಮಂಕು ತಿಮ್ಮನ ಕಗ್ಗದ ಸಾಲುಗಳು ಸಮಯೋಚಿತವಾಗಿ ಬಳಕೆಗೆ ಬರುತ್ತವೆ.

ಒಟ್ಟಿನಲ್ಲಿ ಹಿರೆಮಗಳೂರಿನಲ್ಲಿ ಕನ್ನಡ ಕುಣಿದಾಡುತ್ತಿದೆ. ನಿತ್ಯ ಕನ್ನಡದಲ್ಲೇ ಪೂಜೆಗೊಳ್ಳುವ ಶ್ರೀರಾಮನ ದಯದಿಂದಲಾದರೂ ಕರ್ನಾಟಕದೆಲ್ಲೆಡೆ ಕನ್ನಡ ಮೆರೆಯಲಿ, ಬೆಳೆಯಲಿ, ಬೆಳಗಲಿ. ನಮ್ಮೊಳಗೆ ಸುಪ್ತವಾಗಿರುವ ಕನ್ನಡ ತನ ಹೊರಹೊಮ್ಮಲಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hiremagalur Kalyana Rama being worshipped in Kannada

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more