ನರ್ಸರಿ ಶಾಲೆ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡುವೆ ಶೀತಲ ಸಮರ

ಬೆಂಗಳೂರು, ಸೆ. 12: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 'ರಾಷ್ಟ್ರೀಯ ಶಿಕ್ಷಣ ನೀತಿ'ಯನ್ನು ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಜಾರಿಗೆ ತರಲು ಸರ್ಕಾರ ಹೊರಟಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ಗೊಂದಲದಿಂದ ರಾಜ್ಯದ ಅಂಗನವಾಡಿ ಹಾಗೂ ಅಂಗನವಾಡಿ ಸಿಬ್ಬಂದಿ ಭವಿಷ್ಯದ ಮೇಲೆ ತೂಗು ಕತ್ತಿ ಆಡುತ್ತಿದೆ. ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಅಂಗನವಾಡಿಗಳು ಕೊಡಬೇಕಾ? ಇಲ್ಲವೇ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಿದಂತೆ ಪ್ರಾಥಮಿಕ ಶಾಲೆಗಳಲ್ಲಿಯೇ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಬೇಕೆ ಎಂಬ ವಿಚಾರ ದೊಡ್ಡ ಸಂಘರ್ಷಕ್ಕೆ ನಾಂದಿಯಾಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪ್ರಾಥಮಿಕ ಶಿಕ್ಷಣ ಇಲಾಖೆ ನಡುವೆ ದೊಡ್ಡ ಸಮರಕ್ಕೆ ನಾಂದಿ ಹಾಡಿದೆ.

ರಾಷ್ಟ್ರದಲ್ಲಿ ಏಕ ರೂಪದ ಶಿಕ್ಷಣ ಜಾರಿಗೆ ತರುವ ಹಾಗೂ ವಿದ್ಯಾರ್ಥಿಗಳು ಪದವಿ ಹಂತದಲ್ಲೂ ಸ್ವತಂತ್ರವಾಗಿ ವಿಷಯ ಆಯ್ಕೆಗೆ ಅವಕಾಶ ಕೊಟ್ಟಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ದೇಶದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಉನ್ನತ ಶಿಕ್ಷಣ ಹಂತದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಸ್. ಅಶ್ವತ್ಥ್ ನಾರಾಯಣ ಅವರು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಉನ್ನತ ಶಿಕ್ಷಣ ಹಂತದಲ್ಲಿ ಅದಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುತ್ತಿರುವ ಬೆನ್ನಲ್ಲೇ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಾಗೂ ಮಾಧ್ಯಮಿಕ ಹಂತದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಮುಂದಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಂಬಂಧ ತಜ್ಞರ ಸಮಿತಿಯನ್ನು ರಚನೆ ಮಾಡಲಾಗಿದೆ.

65 ಸಾವಿರ ಅಂಗನವಾಡಿಗಳ ಸಿಬ್ಬಂದಿಗೆ ಆತಂಕ

65 ಸಾವಿರ ಅಂಗನವಾಡಿಗಳ ಸಿಬ್ಬಂದಿಗೆ ಆತಂಕ

ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಮೂರು ವರ್ಷ ತುಂಬಿದ ಮಕ್ಕಳಿಗೆ ಪೂರ್ವ ಪ್ರಾಥಮಿಕ ( ನರ್ಸರಿ) ಶಿಕ್ಷಣ ಆರಂಭಿಸುವ ಬಗ್ಗೆ ಉಲ್ಲೇಖಿಸಲಾಗಿದೆ. ಅದರ ಪ್ರಕಾರ ಮುಂದಿನ ಶೈಕ್ಷಣ ವರ್ಷದಿಂದ ರಾಜ್ಯದಲ್ಲಿ ಪ್ರಾಥಮಿಕ ಹಂತದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದೇ ಆದಲ್ಲಿ, ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಬೇಕಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಕೂಡ ನರ್ಸರಿ, ಎಲ್‌ಕೆಜಿ, ಯುಕೆಜಿ ಆರಂಭಿಸಬೇಕಾಗುತ್ತದೆ. ಆದರೆ, ಹೀಗೆ ಆರಂಭಿಸಿದ್ದೇ ಆದರಲ್ಲಿ ರಾಜ್ಯದಲ್ಲಿರುವ 65 ಸಾವಿರ ಅಂಗನವಾಡಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. 1.25 ಲಕ್ಷ ಮಂದಿ ಅಂಗನವಾಡಿ ಶಿಕ್ಷಕರು ಮತ್ತು ಸಹಾಯಕರಿಯ ನೌಕರಿಗೂ ಕತ್ತರಿ ಬೀಳುವ ಲಕ್ಷಣ ಗೋಚರಿಸುತ್ತಿದೆ.

ಅನ್ನ ಅಕ್ಷರ ಕಲಿಸುವ ಅಂಗನವಾಡಿಗಳು

ಅನ್ನ ಅಕ್ಷರ ಕಲಿಸುವ ಅಂಗನವಾಡಿಗಳು

ದೇಶದಲ್ಲಿ ಬಡ ಮಕ್ಕಳ ಅಪೌಷ್ಠಕತೆ ಹೋಗಲಾಡಿಸುವ ಜತೆಗೆ ಅಕ್ಷರ ಕಲಕೆಗೆ ಬುನಾದಿ ಹಾಕಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಅಂಗನವಾಡಿ ಹಾಗೂ ಬಾಲವಾಡಿಗಳನ್ನು ತೆರೆಯಲಾಗಿದೆ. ಕೇಂದ್ರ ಸಕಾರದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಜನಿಸಿದ ಮಗುವಿಗೆ ಆರಂಭದಿಂದ ಮೂರು ವರ್ಷದ ವರೆಗೆ ಮಗುವಿನ ತಾಯಿ ಮತ್ತು ಮಗುವಿಗೆ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಮೂರು ವರ್ಷ ತುಂಬಿದ ಕೂಡಲೇ ಅಂಗನವಾಡಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಅಲ್ಲಿ ಆಟ, ಓಟ ಪಾಠವನ್ನು ಕಲಿಸಲಾಗುತ್ತಿದೆ.

ದೇಶದಲ್ಲಿ ಗ್ರಾಮೀಣ ಮಕ್ಕಳ ಅಪೌಷ್ಠಿಕತೆ ಹೋಗಲಾಡಿಸುವ ಜತೆಗೆ ಅಕ್ಷರ ಕಲಿಕೆ ಬುನಾದಿ ಹಾಕುವ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವಿಶ್ವಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಗ್ರಾಮೀಣ ಭಾಗದ ಬಹುತೇಕ ಬಡ ಮಕ್ಕಳು ಅಂಗನವಾಡಿ ಶಿಕ್ಷಣ ಕಲಿತ ಕೂಡಲೇ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಗೆ ದಾಖಲಾಗಿ ಶಿಕ್ಷಣ ಕಲಿಯುವ ಪದ್ಧತಿ ಮುಂದುವರೆದಿದೆ. ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಈ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ದೊಡ್ಡ ಪೆಟ್ಟು ನೀಡುವ ಮನ್ಸೂಚನೆ ನೀಡಿದೆ.

ಪೂರ್ವ ಪ್ರಾಥಮಿಕ ಶಿಕ್ಷಣದ ಬಗ್ಗೆ ಗೊಂದಲ

ಪೂರ್ವ ಪ್ರಾಥಮಿಕ ಶಿಕ್ಷಣದ ಬಗ್ಗೆ ಗೊಂದಲ

ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವಾಕಾಂಕ್ಷಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭದ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ಇದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿಗಳಲ್ಲಿ ಆರಂಭಿಸುವ ಬಗ್ಗೆ ಪ್ರಸ್ತಾಪಿಸಿಲ್ಲ. ಕೇವಲ ಖಾಸಗಿ ಶಾಲೆಗಳಿಗೆ ಸೀಮಿತವಾಗಿದ್ದ ಪೂರ್ವ ಪ್ರಾಥಮಿಕ ಶಾಲೆಗಳನ್ನು ಸರ್ಕಾರ ಆರಂಭಿಸುವ ಉದ್ದೇಶ ಸರಿಯಿದೆ. ಆದರೆ ಅದನ್ನು ಅಂಗನವಾಡಿಗಳಲ್ಲಿ ಪ್ರಾರಂಭಿಬೇಕಾ? ಇಲ್ಲವೇ ಪ್ರಾಥಮಿಕ ಶಾಲೆಗಳಲ್ಲಿ ಪ್ರಾರಂಭಿಸಬೇಕಾ ಎಂಬುದರ ಬಗ್ಗೆ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಿಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲು ಚಿಂತನೆ ನಡಸಿದೆ. ಒಂದು ವೇಳೆ ರಾಜ್ಯದಲ್ಲಿ ಶಿಕ್ಷಣ ಇಲಾಖೆ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಿದರೆ, ರಾಜ್ಯದಲ್ಲಿ 65 ಸಾವಿರ ಅಂಗನವಾಡಿಗಳು ಬಾಗಿಲು ಮುಚ್ಚುವ ಪರಿಸ್ಥತಿ ಎದುರಾಗಬಹುದು.

ಯಾಕೆ ಅಂಗನವಾಡಿಗಳಿಗೆ ಬೀಗ

ಯಾಕೆ ಅಂಗನವಾಡಿಗಳಿಗೆ ಬೀಗ

ಜನರಲ್ಲಿ ಶಿಕ್ಷಣದ ಬಗ್ಗೆ ಈಗಿನ ಮನೋಭಾವ ಬದಲಾಗಿದೆ. ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡಲು ಶಿಕ್ಷಣ ಮುಖ್ಯ ಎಂಬುದನ್ನು ಗ್ರಾಮೀಣ ಭಾಗದ ಜನರು ಅರಿತಿದ್ದಾರೆ. ಹೀಗಾಗಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭವಾದರೆ ಬಹುತೇಕ ಮಕ್ಕಳನ್ನು ಪೋಷಕರು ಅಲ್ಲಿಯೇ ದಾಖಲಾತಿ ಮಾಡಿಸುತ್ತಾರೆ. ಹೀಗಾಗಿ ಅಂಗನವಾಡಿಗಳು ದಾಖಲಾತಿ ಇಲ್ಲದೇ ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಬಹುದು. ಮಕ್ಕಳು ಇಲ್ಲದೇ ನಾವು ಯಾಕೆ ವೇತನ ಕೊಡಬೇಕು ಎಂಬ ತೀರ್ಮನಕ್ಕೆ ಬಂದು ಅಂಗನವಾಡಿ ಶಿಕ್ಷಕಿಯರನ್ನು ಮತ್ತು ಸಹಾಯಕಿಯರನ್ನು ಕೆಲಸದಿಂದ ಹೊರಗೆ ಹಾಕಲೂ ಬಹುದು. ಇಲಾಖೆಯೇ ಬದಲಾವಣೆಯಾಗುವುದರಿಂದ ಅಂಗನವಾಡಿ ಶಿಕ್ಷಕರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ತರಿಸಿಕೊಳ್ಳುವುದು ಕೂಡ ತಾಂತ್ರಿಕವಾಗಿ ಕಷ್ಟಸಾಧ್ಯ. ಹಣಕಾಸು ಇಲ್ಲದೇ ಕೊರತೆ ಇರುವ ಶಿಕ್ಷಕರನ್ನು ನೇಮಿಸಿಕೊಳ್ಳಲಾಗದೇ ಪರದಾಡುತ್ತಿರುವ ಶಿಕ್ಷಣ ಇಲಾಖೆ ಕನಿಷ್ಠ 25 ಸಾವಿರಕ್ಕೂ ಅಧಿಕ ಪೂರ್ವ ಪ್ರಾಥಮಿಕ ಕೇಂದ್ರಗಳನ್ನು ತೆರೆಯುವ ಹೊರೆ ಬೀಳಲಿದೆ. ಹೊಸದಾಗಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಬಹುದೊಡ್ಡ ಹೊರೆ ಬದ್ದರೂ ಅಚ್ಚರಿ ಪಡಬೇಕಿಲ್ಲ. ಅಂಗನವಾಡಿ ಕೇಂದ್ರಗಳು ಮುಚ್ಚುವ ಪರಿಸ್ಥಿತಿ ಎದುರಾದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕೇಂದ್ರದ ಅನುದಾನ ವಾಪಸು ಹೋಗಲಿದೆ. ಹೀಗಾಗಿ ಪೂರ್ವ ಪ್ರಾಥಮಿಕ ಶಿಕ್ಷಣದ ಬಗ್ಗೆ ದೊಡ್ಡ ಗೊಂದಲ ಏರ್ಪಟ್ಟಿದೆ.

ಅಂಗನವಾಡಿಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಉಳಿವಿಗೆ ಹೋರಾಟ

ಅಂಗನವಾಡಿಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಉಳಿವಿಗೆ ಹೋರಾಟ

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಿದಂತೆ ಶಿಕ್ಷಣ ಇಲಾಖೆ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಉತ್ಸುಕವಾಗಿರುವ ಬೆನ್ನಲ್ಲೇ ರಾಜ್ಯದ 65 ಸಾವಿರ ಅಂಗನವಾಡಿ ನೌಕರರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅದರ ಸಾಧಕ ಬಾದಕಗಳ ಬಗ್ಗೆ ಚರ್ಚೆ ನಡೆದಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿ ಈಗಾಗಲೇ "ಆಟ, ಪಾಠ, ಓಟ ಜತೆಗೆ ಊಟ" ನೀಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿಗಳಲ್ಪ್ಲಿ ಉಳಿಸಿಕೊಳ್ಳಲು ಮಕ್ಕಳಿಗೆ ಗುಣಮಟ್ಟದ ಪಾಠ ಹೇಳಿಕೊಡುವ ಬಗ್ಗೆ ಅಂಗನವಾಡಿ ಶಿಕ್ಷಕರಿಗೆ ತರಬೇತಿ ಕೊಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಈಗಾಗಲೇ ಇಸಿಸಿ( Early childhood Educaton) ಅಸ್ತಿತ್ವದಲ್ಲಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ಅಂಗನವಾಡಿ ನೌಕರರನ್ನು ಸಜ್ಜುಗೊಳಿಸಲಾಗುತ್ತಿದೆ. ಆದರೆ ಸಾರ್ವಜನಿಕ ಶಿಕ್ಷಣ ಇಲಾಖೆಯೇ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲು ತೆರೆಮರೆಯಲ್ಲಿ ಕಸರತ್ತು ನಡೆಸಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಉನ್ನತ ಐಎಎಸ್ ಅಧಿಕಾರಿ "ನಿಮ್ಮದು ಊಟ ಕೊಡುವುದು, ಆಟ ಆಡಿಸಿವುದು ಅಷ್ಟು ನೋಡಿಕೊಳ್ಳಿ, ಪಾಠ ಮಾಡುವ ಕರ್ತವ್ಯ ನಮ್ಮದು ಅದಕ್ಕೆ ತಲೆ ಹಾಕಬೇಡಿ" ಎಂದು ಹೇಳಿ ಕಳಿಸಿದ್ದಾರೆ. ಇದರಿಂದ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿಗಳಲ್ಲಿಯೇ ಉಳಿಸಿಕೊಳ್ಳಲು ಸಕಲ ತಯಾರಿ ನಡೆಸಿರುವ ಅಂಗನವಾಡಿ ನೌಕರರು ಅಗತ್ಯ ಬಿದ್ದರೆ ದೊಡ್ಡ ಮೊಟ್ಟದಲ್ಲಿ ಬೀದಿಗೆ ಇಳಿಯಲು ತೀರ್ಮಾನಿಸಿದ್ದಾರೆ. ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ದೊಡ್ಡ ಹೋರಾಟಕ್ಕೆ ನಾಂದಿ ಹಾಡುವ ಮನ್ಸೂಚನೆ ನೀಡಿದೆ.

ಪೂರ್ವ ಪ್ರಾಥಮಿಕ ಶಿಕ್ಷಣ ಬಿಡಲ್ಲ

ಪೂರ್ವ ಪ್ರಾಥಮಿಕ ಶಿಕ್ಷಣ ಬಿಡಲ್ಲ

ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವಿಶ್ವ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿರುವ ಯೋಜನೆ. ಗ್ರಾಮೀಣ ಭಾಗದಲ್ಲಿ ಅನೇಕ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಪೌಷ್ಠಿಕ ಆಹಾರದ ಜತೆಗೆ, ಆಟ ಪಾಠವನ್ನು ಕಲಿಸುವ ಇಸಿಸಿ ಕಾರ್ಯಕ್ರಮ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಅವಕಾಶವಿದೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಬೇಕು. ಯಾವ ಕಾರಣಕ್ಕೂ ಶಿಕ್ಷಣ ಇಲಾಖೆಗೆ ಬಿಟ್ಟು ಕೊಡುವುದಿಲ್ಲ. ತಜ್ಞರ ಸಮಿತಿ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ನಂತರ ನಮ್ಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಅಂದು ಅಂಗನವಾಡಿ ನೌಕರರ ಹೋರಾಟದ ನಾಯಕಿ ವರಲಕ್ಷ್ಮೀ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+