keyboard_backspace

ಡಿಸಿಎಂ ಹುದ್ದೆಗಳಿಗಾಗಿ ಬೊಮ್ಮಾಯಿ ಆಡಳಿತದಲ್ಲಿ ಲೀಡರ್ ಗಳ ಮಸಲತ್ತು!

Google Oneindia Kannada News

ಬೆಂಗಳೂರು, ಜು.30: ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ನೇಮಕ ಬೆನ್ನಲ್ಲೇ ಇದೀಗ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ತಮ್ಮ ಸಮುದಾಯಗಳನ್ನು ಮುಂದಿಟ್ಟುಕೊಂಡು ಡಿಸಿಎಂ ಹುದ್ದೆ ಗಿಟ್ಟಿಸಲು ದೊಡ್ಡ ಮಟ್ಟದ ಲಾಬಿ ಶುರುವಾಗಿದೆ. ಸಿಎಂ ಆದ ಎರಡೇ ದಿನಕ್ಕೆ ಡಿಸಿಎಂ ಹುದ್ದೆಗಳಿಗಾಗಿ ನಾಯಕರು ನಡೆಸುತ್ತಿರುವ ಲಾಬಿ ಎದುರಿಸಲು ಆಗದೇ ಬಸವರಾಜ ಬೊಮ್ಮಾಯಿ ಬಿಜೆಪಿ ನಾಯಕರ ಮುಂದಿಟ್ಟಿದ್ದಾರೆ. ಸಮುದಾಯ ಪ್ರಾತಿನಿಧ್ಯ, ಮುಂದಿನ ಚುನಾವಣೆಗೆ ಪಕ್ಷಕ್ಕೆ ಒಳಿತಾಗಲಿ ಎಂಬ ಆಶಯದಿಂದ ಸೃಷ್ಟಿಯಾದ ಈ ಅಸಂವಿಧಾನಿಕ ಹುದ್ದೆಗಳೇ ಇದೀಗ ಭಿನ್ನಮತ, ಲಾಬಿಗೆ ನಾಂದಿ ಹಾಡುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹಾಗೂ ಆರ್ಎಸ್ಎಸ್ ಮುಖಂಡರು ಭವಿಷ್ಯದಲ್ಲಿ ಡಿಸಿಎಂ ಹುದ್ದೆ ಸೃಷ್ಟಿಯನ್ನು ಪಕ್ಷದ ಅಜೆಂಡಾದಿಂದಲೇ ತೆಗೆದು ಹಾಕುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ. ಡಿಸಿಎಂ ಹುದ್ದೆ ರಚನೆ ಭವಿಷ್ಯದಲ್ಲಿ ಬಿಜೆಪಿ ಅಜೆಂಡಾದಿಂದ ಕಿತ್ತು ಬಿಸಾಕುವ ಚರ್ಚೆ ನಡೆಯುತ್ತಿದೆ.

ಮರ್ಯಾದೆಗಾಗಿ ಡಿಸಿಎಂ ಪೋಸ್ಟ್!

ಮರ್ಯಾದೆಗಾಗಿ ಡಿಸಿಎಂ ಪೋಸ್ಟ್!

ಶಾಸಕಾಂಗ ಪಕ್ಷದ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಲಾಗುತ್ತದೆ. ಮುಖ್ಯಮಂತ್ರಿ ಸಮರ್ಥರನ್ನು ತನ್ನ ಸಚಿವ ಸಂಪುಟದ ಸದಸ್ಯರನ್ನು ಆಯ್ಕೆ ಮಾಡಿ ರಾಜ್ಯಪಾಲರಿಗೆ ಕಳುಹಿಸುತ್ತಾರೆ. ರಾಜ್ಯಪಾಲರು ಪ್ರಮಾಣ ವಚನ ಬೋಧಿಸುತ್ತಾರೆ. ಇನ್ನು ಮುಖ್ಯಮಂತ್ರಿ ಹಾಗೂ ಸಚಿವರು ಮಾಡಬೇಕಾದ ಕರ್ತವ್ಯಗಳು, ಅಧಿಕಾರ ವ್ಯಾಪ್ತಿ, ಸಂವಿಧಾನಬದ್ಧ ಸೌಲಭ್ಯಗಳ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಸಮುದಾಯಗಳ ಪ್ರಾತಿನಿಧ್ಯ, ಅತೃಪ್ತರನ್ನು ಓಲೈಸುವ ಹೆಸರಿನಲ್ಲಿ ಇದೀಗ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಸಾಮಾನ್ಯವಾಗಿಬಿಟ್ಟಿದೆ. ಎರಡು ಪಕ್ಷಗಳು ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದರೆ ಡಿಸಿಎಂ ಹುದ್ದೆ ಸೃಷ್ಟಿ ಅನಿವಾರ್ಯ.

ಹೀಗಾಗಿ ಇಡೀ ದೇಶದ ರಾಜಕಾರಣದಲ್ಲಿ ಉಪ ಮುಖ್ಯಮಂತ್ರಿಗಳ ಶೆಕೆ ಶುರುವಾಗಿದೆ. ಉಪ ಮುಖ್ಯಮಂತ್ರಿ ಹುದ್ದೆಗಳು ಇದೀಗ ಸಮುದಾಯ ಪ್ರಾತಿನಿಧಿಕ ಹುದ್ದೆ ಎಂಬಂತೆ ಬಿಂಬಿಸಿ ನೇಮಕ ಮಾಡಲಾಗುತ್ತಿದೆ. ಆಂಧ್ರ ಪ್ರದೇಶದಲ್ಲಿ ಹಾಲಿ ಸಿಎಂ ಜಗನ್ ಐವರು ಉಪ ಮುಖ್ಯಮಂತ್ರಿಗಳನ್ನು ನೇಮಿಸಿ ಇಡೀ ದೇಶದಲ್ಲಿ ಸುದ್ದಿಯಾದರು. ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಮೂವರಿಗೆ ಡಿಸಿಎಂ ಭಾಗ್ಯ ಸಿಕ್ಕಿತ್ತು. ಹೇಳಿಕೊಳ್ಳಲು ಒಂದು ಪದವಿ ಅನ್ನುವುದು ಬಿಟ್ಟರೆ ಸಂವಿಧಾನದಲ್ಲಿ ಅದರ ಉಲ್ಲೇಖ ಇಲ್ಲ. ಈ ವಾಸ್ತವ ಗೊತ್ತಿದ್ದರೂ ಡಿಸಿಎಂ ಹುದ್ದೆಗಳಿಗೆ ಕಾದಾಟ ಸಾಮಾನ್ಯವಾಗಿಬಿಟ್ಟಿದೆ. ನಾನು ಸಿಎಂ ಸಮಾನ ಹುದ್ದೆಯಲ್ಲಿ ಆಳ್ವಿಕೆ ನಡೆಸಿದೆ ಎಂದು ಹೇಳಿಕೊಳ್ಳಲಿಕ್ಕೆ ಅಷ್ಟೇ ಸಹಾಯವಾಗಬಹುದು.

ಡಿಸಿಎಂ ಹಾಗೂ ಡಿಪಿಎಂ ಸೃಷ್ಟಿಯ ಇತಿಹಾಸ

ಡಿಸಿಎಂ ಹಾಗೂ ಡಿಪಿಎಂ ಸೃಷ್ಟಿಯ ಇತಿಹಾಸ

ದೇಶದಲ್ಲಿ ಸಂವಿಧಾನ ಅಳವಡಿಸಿಕೊಳ್ಳುವ ಮೊದಲೇ ಡೆಪ್ಯುಟಿ ಪ್ರೈಮ್ ಮಿನಿಸ್ಟರ್ ಹುದ್ದೆಗೆ ಅಡಿಗಲ್ಲು ಹಾಕಿದ್ದು ಅಂದಿನ ಪ್ರಧಾನಿ ಜವಹರಲಾಲ್ ನೆಹರು ಎಂಬುದು ಇತಿಹಾಸ ಹೇಳುತ್ತದೆ. ಸಂವಿಧಾನದಲ್ಲಿ ಉಪ ಪ್ರಧಾನಿಯ ಬಗ್ಗೆಯೂ ಎಲ್ಲೂ ಉಲ್ಲೇಖಿಸಿರಲಿಲ್ಲ. ಸ್ವತಂತ್ರ ಭಾರತದಲ್ಲಿ ಸಂವಿಧಾನ ಅಳವಡಿಸಿಕೊಳ್ಳುವ ಮುನ್ನ ( 1950 ಜನವರಿ 26 ಮೊದಲೇ ಸರ್ದಾರ್ ವಲ್ಲಭಾಯಿ ಪಟೇಲರನ್ನು ಉಪ ಪ್ರಧಾನಿಯನ್ನಾಗಿ ನೆಹರು ನೇಮಿಸಿಕೊಂಡಿದ್ದರು. ಹೀಗೆ ಆರಂಭವಾದ ಉಪ ಪ್ರಧಾನಿ ಹುದ್ದೆ ರಾಜ್ಯಗಳಲ್ಲಿ ಉಪ ಮುಖ್ಯಮಂತ್ರಿಗಳ ನೇಮಕ ಪರ್ವ ಶುರುವಾಯಿತು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಮೊರಾರ್ಜಿ ದೇಸಾಯಿ ಉಪ ಪ್ರಧಾನಿಯಾಗಿದ್ದರು. ವಾಜಪೇಯಿ ಪ್ರಧಾನಿಯಾಗಿದ್ದ ವೇಳೆ 2002 ರಿಂದ 2004 ರ ವರೆಗೆ ಲಾಲ್ ಕೃಷ್ಣ ಅಡ್ವಾಣಿ ಉಪ ಪ್ರಧಾನಿಯಾಗಿದ್ದರು. ಅಂದಿನಿಂದ ಈವರೆಗೂ ಯಾರೂ ಸಹ ಕೇಂದ್ರದಲ್ಲಿ ಉಪ ಪ್ರಧಾನಿ ಹುದ್ದೆ ಅಲಂಕರಿಸಲಿಲ್ಲ.

ಉಪ ಮುಖ್ಯಮಂತ್ರಿಗಳ ಮೇನಿಯಾ ಆರಂಭ

ಉಪ ಮುಖ್ಯಮಂತ್ರಿಗಳ ಮೇನಿಯಾ ಆರಂಭ

ವಿಪರ್ಯಾಸವೆಂದರೆ ದೇಶದಲ್ಲಿ ಅತಿ ಹೆಚ್ಚು ಉಪ ಮುಖ್ಯಮಂತ್ರಿಗಳನ್ನು ಹೊಂದಿರುವ ರಾಜ್ಯ ಆಂಧ್ರ ಪ್ರದೇಶ. ಹಾಗೆ ನೋಡುವುದಾದರೆ ಭಾರತದಲ್ಲಿ ಮೊದಲ ಬಾರಿಗೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗಿದ್ದು ಕೂಡ ಆಂಧ್ರ ಪ್ರದೇಶದಲ್ಲಿ. ಟಿ. ಪ್ರಕಾಶ್ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೇಳೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲಾಗಿತ್ತು. ನೀಲಂ ಸಂಜೀವರೆಡ್ಡಿ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿತ್ತು. ನೀಲಂ ಸಂಜೀವರೆಡ್ಡಿ ಅವರೇ ಸ್ವತಃ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವೇಳೆ "ಇದೊಂದು ಅನುಪಯುಕ್ತ ಹುದ್ದೆ" ಎಂದು ತೆಗೆದು ಹಾಕಿದ್ದರು. ಹಾಲಿ ಆಂಧ್ರ ಪ್ರದೇಶ ಸಿಎಂ ಜಗನ್ ಪ್ರಭಾವಿ ಸಮುದಾಯಕ್ಕೆ ಒಬ್ಬ ಉಪ ಮುಖ್ಯಮಂತ್ರಿ ಹುದ್ದೆ ನೀಡಿದ್ದಾರೆ.

ಕರ್ನಾಟಕದ ಡಿಸಿಎಂ ನೇಮಕ ಇತಿಹಾಸ

ಕರ್ನಾಟಕದ ಡಿಸಿಎಂ ನೇಮಕ ಇತಿಹಾಸ

ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಡಿಸಿಎಂ ಸಂಸ್ಕೃತಿಯನ್ನು ಪರಿಚಯಿಸಿದ್ದು ಕೂಡ ಕಾಂಗ್ರೆಸ್ ಪಕ್ಷವೇ. ವೀರಪ್ಪಮೊಯಿಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಉಪ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. ಆನಂತರ ಮಾಜಿ ಪ್ರಧಾನಿ ದೇವೇಗೌಡರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ( 1994 - 99 ) ಮೊದಲ ಅವಧಿಗೆ ಜೆ.ಎಚ್. ಪಟೇಲ್ ಡಿಸಿಎಂ ಆಗಿದ್ದರು. ಜೆ. ಎಚ್. ಪಟೇಲ್ ಸಿಎಂ ಆಗದ್ದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು. ಆನಂತರ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂದಾಗ ಕಡ್ಡಾಯವಾಗಿ ಡಿಸಿಎಂ ಹುದ್ದೆ ಸೃಷ್ಟಿಯಾದವು. ಧರ್ಮಸಿಂಗ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದರು. ಅಲ್ಲಿಂದ ಆರಂಭವಾದ ಡಿಸಿಎಂ ಮೇನಿಯಾ ರಾಜ್ಯದಲ್ಲಿ ಮುಂದುವರೆದಿದೆ. ಯಡಿಯೂರಪ್ಪ ಸರ್ಕಾರದಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ, ಅಶ್ವತ್ಥ್ ನಾರಾಯಣ, ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿಗಳಾಗಿದ್ದರು.

ಆರು ಮಂದಿ ಡಿಸಿಎಂ ಆಕಾಂಕ್ಷಿಗಳು

ಆರು ಮಂದಿ ಡಿಸಿಎಂ ಆಕಾಂಕ್ಷಿಗಳು

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಬಸವರಾಜ ಬೊಮ್ಮಾಯಿ ನೂತನ ಸಿಎಂ ಆಗಿ ನೇಮಕವಾಗಿದ್ದಾರೆ. ಸಿಎಂ ರೇಸ್ ನಲ್ಲಿದ್ದ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ ಬೆಲ್ಲದ್ ಪ್ರಭಾವಿ ಸಚಿವ ಸ್ಥಾನ ಪಡೆಯುವ ಪಟ್ಟಿಯಲ್ಲಿದ್ದಾರೆ. ಸಮುದಾಯ, ಜಿಲ್ಲೆ ಪ್ರಾತಿನಿಧ್ಯ , ಹಿರಿತನ ಹೆಸರಿನಲ್ಲಿ ಶಾಸಕರು ಸಚಿವ ಸ್ಥಾನಕ್ಕೆ ದೊಡ್ಡ ಲಾಬಿ ಶುರು ಮಾಡಿದ್ದಾರೆ. ಇದಕ್ಕಿಂತೂ ಮೊದಲೇ ಉಪ ಮುಖ್ಯಮಂತ್ರಿ ಹುದ್ದೆಗಳಿಗಾಗಿ ಬಾರೀ ಲಾಬಿ ಶುರುವಾಗಿದೆ. ಯಡಿಯೂರಪ್ಪ ಸಂಪುಟದಲ್ಲಿ ಮೂರು ಮಂದಿ ಡಿಸಿಎಂ ಹುದ್ದೆ ಸೃಷ್ಟಿಸಲಾಗಿತ್ತು.


ಒಕ್ಕಲಿಗ ಸಮುದಾಯದ ಅಶ್ವಥ ನಾರಾಯಣ್, ದಲಿತ ಸಮುದಾಯದ ಗೋವಿಂದ ಕಾರಜೋಳ ಹಾಗೂ ಲಕ್ಷ್ಮಣ ಸವದಿಯನ್ನು ಡಿಸಿಎಂ ಆಗಿ ನೇಮಿಸಿದ್ದರು. ಇದೀಗ ಮೂವರು ಸಹ ಡಿಸಿಎಂ ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ಒಕ್ಕಲಿಗ ಸಮುದಾಯ, ಸೇವಾ ಹಿರಿತನ ಆಧಾರದ ಮೇಲೆ ಆರ್. ಅಶೋಕ್ ಅವರನ್ನು ಉಪ ಮುಖ್ಯಮಂತ್ರಿಯ್ನಾಗಿ ಮಾಡಲು ಪಕ್ಷದ ಮುಖಂಡರು ಸಮ್ಮತಿಸಿದ್ದಾರೆ. ಅದೇ ರೀತಿ ಹಿಂದುಳಿದ ವರ್ಗಕ್ಕೆ ಆದ್ಯತೆ ನೀಡುವ ವಿಚಾರದಲ್ಲಿ ಬಿ. ಶ್ರೀರಾಮುಲು ಅವರಿಗೆ ಡಿಸಿಎಂ ಹುದ್ದೆ ನೀಡಲು ಪಕ್ಷದ ವರಿಷ್ಠರು ನಿರ್ಧರಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಡಿಸಿಎಂ ಹುದ್ದೆಗಾಗಿ ಒಂದೆಡೆ ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಅನೇಕರು ಪ್ರಯತ್ನ ಮಾಡುತ್ತಿದ್ದಾರೆ. ನೂತನ ಸಿಎಂಗೆ ಡಿಸಿಎಂಗಳ ಆಯ್ಕೆಯೇ ದೊಡ್ಡ ತಲೆ ನೋವಾಗಿ ಪರಿಗಣಿಸಿದ್ದು, ನೀವು ಆಯ್ಕೆ ಮಾಡಿದವರನ್ನು ಡಿಸಿಎಂ ಗಳನ್ನಾಗಿ ಘೋಷಣೆ ಮಾಡುವುದಾಗಿ ಕೈತೊಳೆದು ಕೊಂಡಿದ್ದಾರೆ.

ಡಿಸಿಎಂ ಫಜೀತಿಯೇ ಬೇಡ ಎಂದ ಆರ್ಎಸ್ಎಸ್

ಡಿಸಿಎಂ ಫಜೀತಿಯೇ ಬೇಡ ಎಂದ ಆರ್ಎಸ್ಎಸ್

ಸಮುದಾಯ, ಹಿರಿತನ ಮುಂದಿಟ್ಟುಕೊಂಡು ಡಿಸಿಎಂ ಹುದ್ದೆಗಳಿಗೆ ಶುರುವಾಗಿರುವ ಪೈಟೋಟಿಯನ್ನು ಭಿನ್ನಮತವಿಲ್ಲದೇ ಪರಿಹರಿಸಲು ಬಿಜೆಪಿ ಪಕ್ಷದ ವರಿಷ್ಠರಿಗೆ ಸಾಧ್ಯವಾಗುತ್ತಿಲ್ಲ. ನಾನು ಈ ಸಚಿವ ಸಂಪುಟದಲ್ಲಿ ಇರುವುದಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೊರ ನಡೆದಿದ್ದಾರೆ. ನನಗೆ ಒಳ್ಳೆಯ ಸಚಿವಗಿರಿ ಜತೆಗೆ ಡಿಸಿಎಂ ಹುದ್ದೆ ನೀಡಬೇಕು ಎಂದು ಕೆ.ಎಸ್. ಈಶ್ವರಪ್ಪ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಇನ್ನು ಡಿಸಿಎಂ ಹುದ್ದೆ ಉಳಿಸಿಕೊಳ್ಳಲು ಲಕ್ಷ್ನಣ ಸವದಿ ಹಾಗೂ ಗೊವಿಂದ ಕಾರಜೋಳ ಮುಂದಾಗಿದ್ದಾರೆ. ಒಂದು ಕೈ ನಾನ್ಯಾಕೆ ಪ್ರಯತ್ನಿಸಬಾರದು ಎಂದು ಡಾ.ಕೆ. ಸುಧಾಕರ್ ಅಖಾಡಕ್ಕೆ ಇಳಿದಿದ್ದಾರೆ. ಹೀಗಾಗಿ ಡಿಸಿಎಂಗಳ ಪಟ್ಟಿ ಆರಕ್ಕೇರಿದೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ.

ಡಿಸಿಎಂ ಹುದ್ದೆಗಾಗಿ ಬಿಜೆಪಿ ನಾಯಕರ ನಡುವೆ ಮಸುಕಿನ ಗುದ್ದಾಟ ಶುರುವಾಗಿದೆ. ಈ ಭಿನ್ನ ಮತವನ್ನು ಶಮನ ಮಾಡಲಾಗದೇ ನೂತನ ಸಿಎಂ ಡಿಸಿಎಂ ಆಕಾಂಕ್ಷಿಗಳ ಪಟ್ಟಿಯನ್ನು ಪಕ್ಷದ ವರಿಷ್ಠರಿಗೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರ ಹೊರತು ಪಡಿಸಿ ಯಾವ ಕಾರಣಕ್ಕೂ ಡಿಸಿಎಂ ಹುದ್ದೆ ರಚನೆ ಗೊಡವೇ ಬೇಡ. ಡಿಸಿಎಂ ಹುದ್ದೆ ಸಂಸ್ಕೃತಿಯಿಂದ ದೂರ ಉಳಿಯಲು ಆರ್ಎಸ್ಎಸ್ ನಾಯಕರು ಸಲಹೆ ನೀಡಿದ್ದಾರೆ. ಹೀಗಾಗಿ ಡಿಸಿಎಂ ಹುದ್ದೆ ರದ್ದಾದರೂ ಅಚ್ಚರಿ ಪಡಬೇಕಿಲ್ಲ. ಬೊಮ್ಮಾಯಿ ಸರ್ಕಾರ ಉಳಿವಿನ ಉದ್ದೇಶದಿಂದ ತಾತ್ಕಾಲಿಕವಾಗಿ ಡಿಸಿಎಂ ಹುದ್ದೆ ಸೃಷ್ಟಿಯಾದರೂ ಭವಿಷ್ಯದಲ್ಲಿ ಡಿಸಿಎಂ ಹುದ್ದೆಗೆ ತಿಲಾಂಜಲಿ ಇಡಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

ಸಿಎಂ ಕಡತ ನೋಡುವುದನ್ನು ಡಿಸಿಎಂ ನೋಡಬಹುದು

ಸಿಎಂ ಕಡತ ನೋಡುವುದನ್ನು ಡಿಸಿಎಂ ನೋಡಬಹುದು

ಮುಖ್ಯಮಂತ್ರಿಯಾಗಿ ಕಡತಗಳಿಗೆ ಸಹಿ ಮಾಡಬಹುದು. ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲೂ ಡಿಸಿಎಂಗಳು ಸಹಿ ಮಾಡುವಂತಿಲ್ಲ. ಯಾವುದೇ ವರ್ಗಾವಣೆ ಮಾಡುವ ಅಧಕಾರ ಕೂಡ ಡಿಸಿಎಂಗಳಿಗೆ ಇಲ್ಲ. ಐಎಎಸ್ , ಐಪಿಎಸ್ ವರ್ಗಾವಣೆ ವಿಚಾರದಲ್ಲೂ ಡಿಸಿಎಂಗಳು ಸಹಿ ಮಾಡುವಂತಿಲ್ಲ. ಡಿಸಿಎಂಗಳಿಗೆ ನೀಡಿರುವ ಸಚಿವ ಸ್ಥಾನದ ಅಧಿಕಾರವಷ್ಟೇ ಗಟ್ಟಿ. ಆಗಿಯೂ ಬೊಮ್ಮಾಯಿ ಸರ್ಕಾರದಲ್ಲಿ ಡಿಸಿಎಂ ಗಾಗಿ ದೊಡ್ಡ ಪೈಪೋಟಿ ಶುರುವಾಗಿದೆ.

ಸಂವಿಧಾನಿಕವಾಗಿ ಹೇಳುವುದಾದರೆ ಊಟಕ್ಕೆ ಇಲ್ಲದ ಉಪ್ಪಿನ ಕಾಯಿ ಹುದ್ದೆ ಎಂದರೆ ಡಿಸಿಎಂ ಪೋಸ್ಟ್. ಆದರೆ ಸಿಎಂ ಸಮಾನ ಹುದ್ದೆ ಎಂಬ ಗುಂಗಲ್ಲೇ ತೇಲಾಡುತ್ತಿರುವ ನಾಯಕರೇ ಈ ಡೆಪ್ಯುಟಿ ಸಿಎಂ ಕುರ್ಚಿಗಾಗಿ ಕಾದಾಟ ಶುರು ಮಾಡಿದ್ದಾರೆ. ಬೊಮ್ಮಾಯಿ ಸರ್ಕಾರಕ್ಕೆ ಡಿಸಿಎಂ ಹುದ್ದೆಗಳೇ ಉಪದ್ರ ತಂದರೂ ವಿಶೇಷವೇನಿಲ್ಲ.

English summary
Lobbying started for dcm posts in Basavaraj bommai cabinet: h rss leaders contemplated abolishing dcm posts?
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X