ಝೆನ್ ಕಥೆ: ಜೀವನ ಸುಧಾರಿಸುವ ಬಗೆ!
ಪುರಾತನ ಚೀನಾದಲ್ಲಿ ಕುರಿಕಾಯುವ ಇಬ್ಬರು ಗೆಳೆಯರಿದ್ದರು. ಒಬ್ಬನ ಹೆಸರು ಝಾಂಗ್ ಇನ್ನೊಬ್ಬನ ಹೆಸರು ಗೂ.
ಝಾಂಗ್ ಗೆ ಜೂಜಿನ ಹುಚ್ಚು. ಕುರಿಗಳನ್ನು ಮೇಯಲು ಬಿಟ್ಟು ಗೆಳೆಯರೊಡನೆ ಜೂಜಾಟಕ್ಕೆ ಕುಳಿತುಬಿಡುತ್ತಿದ್ದ.
ಗೂ, ಅವನಿಗೆ ತದ್ವಿರುದ್ಧದವನು. ತುಂಬಾ ಗಂಭೀರ ಮನುಷ್ಯ. ಅವನಿಗೆ ಹೊಸ ಹೊಸ ವಿಷಯಗಳನ್ನು ಓದಿ ತಿಳಿದುಕೊಳ್ಳುವ ಹುಚ್ಚು. ಅವನು ಕುರಿಗಳನ್ನು ಮೇಯಲು ಬಿಟ್ಟು ಪುಸ್ತಕ ಓದುತ್ತ ಕಾಲ ಕಳೆಯುತ್ತಿದ್ದ.
ಒಂದು ದಿನ ಝಾಂಗ್ ಗೆಳೆಯರೊಡನೆ ಜೂಜಾಟದಲ್ಲಿ ಮೈಮರೆತುಬಿಟ್ಟಿದ್ದ. ಅಂದು ಸಂಜೆ ಅವನ ಒಂದು ಕುರಿ ವಾಪಸ್ ಬರಲೇ ಇಲ್ಲ. ಎಲ್ಲೋ ದಾರಿ ತಪ್ಪಿಸಿಕೊಂಡುಬಿಟ್ಟಿತ್ತು.
ಅದೇ ದಿನ, ಗೂ ತನ್ನ ಬದುಕನ್ನು ಸುಧಾರಿಸುವ ಒಂದು ಒಳ್ಳೆಯ ಪುಸ್ತಕದ ಓದಿನಲ್ಲಿ ಮಗ್ನನಾಗಿಬಿಟ್ಟಿದ್ದ
ಅವನ ಒಂದು ಕುರಿಯೂ ವಾಪಸ್ ಬರಲೇ ಇಲ್ಲ.

***
ಮೊದಲು ಚಹಾ ಕುಡಿ
ಝೆನ್ ಮಾಸ್ಟರ್ ಜೋಶು, ತನ್ನ ಆಶ್ರಮದಲ್ಲಿ ಓಡಾಡುತ್ತಿದ್ದ ಸನ್ಯಾಸಿಯೊಬ್ಬನನ್ನು ಕಂಡು ಮಾತಾಡಿಸಿದ.
"ನಾನು ಮೊದಲು ನಿನ್ನನ್ನು ನೋಡಿದ್ದೀನಾ?"
"ಇಲ್ಲ ಮಾಸ್ಟರ್, ನಾನು ಇವತ್ತೇ ಆಶ್ರಮಕ್ಕೆ ಬಂದಿರೋದು" ಎಂದ ಆತ.
"ಓಹ್ ! ಹೌದಾ.. ಹಾಗಾದರೆ ಮೊದಲು ಚಹಾ ಕುಡಿ"
ಆಮೇಲೆ ಜೋಶುವಾನಿಗೆ ಇನ್ನೊಬ್ಬ ಎದುರಾದ;
"ನೀನು? ನೀನೂ ಆಶ್ರಮಕ್ಕೆ ಹೊಸಬನಾ?"
"ಇಲ್ಲ ಮಾಸ್ಟರ್ ನಾನು ಹಳಬ, ಎರಡು ವರ್ಷ ಆಯಿತು ನಾನು ಆಶ್ರಮಕ್ಕೆ ಬಂದು"
"ಓಹ್ ! ಹೌದಾ... ಹಾಗಾದರೆ ಮೊದಲು ಚಹಾ ಕುಡಿ"
ಈ ಮಾತುಕತೆಯನ್ನು ಕುತೂಹಲದಿಂದ ಗಮನಿಸುತ್ತಿದ್ದ ಮತ್ತೊಬ್ಬ ಸನ್ಯಾಸಿ ಜೋಶುವಾನನ್ನು ಪ್ರಶ್ನೆ ಮಾಡಿದ;
"ಮಾಸ್ಟರ್, ಏನಿದು ವಿಶೇಷ? ಆ ಇಬ್ಬರಿಗೂ ಚಹಾ ಕುಡಿಯಲು ಹೇಳಿದಿರಲ್ಲಾ?"
"ಓಹ್ ನೀನಿನ್ನೂ ಇಲ್ಲೇ ಇದ್ದಿಯಾ ? ಹಾಗಾದರೆ ಮೊದಲು ಚಹಾ ಕುಡಿ"
(ಸಂಗ್ರಹ)












Click it and Unblock the Notifications