ಸಮಸ್ಯೆಗೆ ಆತುರದ ಪರಿಹಾರ ಹುಡುಕಿದರೆ ಏನಾಗುತ್ತದೆ? ಈ ಕಥೆ ಓದಿ
ಧ್ಯಾನ ಮಾಡಲು ಕಲಿಯುತ್ತಿದ್ದ ವಿದ್ಯಾರ್ಥಿಯೊಬ್ಬ ಸಮಸ್ಯೆಯೊಂದನ್ನು ಎದುರಿಸುತ್ತಿದ್ದ. ತನ್ನ ಕೊಠಡಿಯಲ್ಲಿ ಧ್ಯಾನ ಮಾಡುತ್ತಿರುವಾಗ ತನ್ನ ಮುಂದೆ ಜೇಡವೊಂದು ಮೇಲಿನಿಂದ ಇಳಿಯುತ್ತಿರುವುದು ತನಗೆ ಕಾಣಿಸುತ್ತದೆ ಎಂದು ಆತ ನಂಬಿದ್ದ. ಪ್ರತೀ ದಿನವೂ ಈ ಅನುಭವ ಆತನಿಗೆ ಉಂಟಾಗುತ್ತಿದ್ದರಿಂದ ಆತನಲ್ಲಿ ದಿಗಿಲು ಮೂಡುತ್ತಿತ್ತು. ಅಷ್ಟೇ ಅಲ್ಲ, ಪ್ರತೀ ಸಲವೂ ಜೇಡದ ಗಾತ್ರವು ಹಿಂದಿನ ದಿನಕ್ಕಿಂತ ದೊಡ್ಡದಾಗಿರುತ್ತಿತ್ತು.
ಇದು ಮತ್ತೆ ಮತ್ತೆ ಬರತೊಡಗಿದಾಗ ಆತನಲ್ಲಿ ಹೆದರಿಕೆ ಉಂಟಾಯಿತು. ಕೊನೆಗೆ ಅವನು ಗುರುವಿನ ಹತ್ತಿರ ಹೋಗಿ ತನ್ನ ಸಂಕಟ ಹೇಳಿಕೊಂಡ. ಧ್ಯಾನ ಮಾಡುವಾಗ ಚಾಕು ಇಟ್ಟುಕೊಂಡಿದ್ದು, ಮತ್ತೊಮ್ಮೆ ಜೇಡ ಬಂದಾಗ ಅದನ್ನು ಕೊಲ್ಲುವ ಯೋಜನೆ ಹಾಕಿಕೊಂಡಿರುವುದಾಗಿಯೂ ಗುರುವಿಗೆ ತಿಳಿಸಿದ. ಆದರೆ ಈ ಯೋಜನೆಯನ್ನು ಕಾರ್ಯಗತಗೊಳಿಸದೇ ಇರುವಂತೆ ಗುರುಗಳು ಸಲಹೆ ನೀಡಿದರು. ಅದಕ್ಕೆ ಬದಲಾಗಿ ಒಂದು ಸೀಮೆಸುಣ್ಣದ ತುಂಡೊಂದನ್ನು ಇಟ್ಟುಕೊಂಡು ಧ್ಯಾನ ಮಾಡುವ ವೇಳೆ ಜೇಡ ಬಂದಾಗ ಅದರ ಹೊಟ್ಟೆಯ ಭಾಗದ ಮೇಲೆ "X'' ಗುರುತು ಮಾಡುವಂತೆ, ಮತ್ತು ಬಳಿಕ ತಮಗೆ ವರದಿ ಒಪ್ಪಿಸುವಂತೆ ಸೂಚಿಸಿದರು.

ವಿದ್ಯಾರ್ಥಿ ತನ್ನ ಕೊಠಡಿಗೆ ಹೋಗಿ ಧ್ಯಾನ ಮಾಡಲು ಆರಂಭಿಸಿದ. ಎಂದಿನಂತೆ ಜೇಡ ಆತನ ಕಣ್ಣೆದುರು ಬಂತು. ಮೊದಲು ಅದನ್ನು ಕೊಲ್ಲುವ ಬಯಕೆ ಮೂಡಿದರೂ, ಗುರುಗಳ ಸಲಹೆ ನೆನಪಿಗೆ ಬಂದು ಅವರು ಹೇಳಿದಂತೆ ಮಾಡಿದ. ಧ್ಯಾನ ಮುಗಿದಸಿ ಗುರುಗಳಿಗೆ ವರದಿ ನೀಡಿದ. ಅವನಿಗೆ ಅಂಗಿಯನ್ನು ಮೇಲೆತ್ತಿ ತನ್ನ ಹೊಟ್ಟೆಯ ಭಾಗವನ್ನು ನೋಡುವಂತೆ ಗುರುಗಳು ಸೂಚಿಸಿದರು. ಅಲ್ಲಿ ಕಂಡಿದ್ದು "X'' ಗುರುತು.
(ಸಂಗ್ರಹ)












Click it and Unblock the Notifications