ಝೆನ್ ಕಥೆ: 'ಸದ್ಯ! ಎಲ್ಲರೂ ಮಾತನಾಡಿದರೂ, ನಾನು ಮಾತನಾಡಲಿಲ್ಲ'
ಜಪಾನ್‌ನ ಆಧ್ಯಾತ್ಮಿಕ ಆಶ್ರಮವೊಂದರಲ್ಲಿ ಅನೇಕ ಶಿಷ್ಯರು ಧ್ಯಾನ ಕಲಿಯುತ್ತಿದ್ದರು. ಆ ಶಿಷ್ಯರಲ್ಲಿ ನಾಲ್ವರು ಬಹಳ ಆತ್ಮೀಯ ಗೆಳೆಯತಾಗಿದ್ದರು.
ಒಮ್ಮೆ ಆ ನಾಲ್ವರು ಗೆಳೆಯರು ಏಳು ದಿನ ಸುದೀರ್ಘ ಮೌನ ಧ್ಯಾನ ಮಾಡಬೇಕೆಂದು ನಿರ್ಧರಿಸಿದರು. ಸಹಮತದೊಂದಿಗೆ ಧ್ಯಾನಕ್ಕೆ ಕುಳಿತರು.
ಮೊದಲ ದಿನ ಧ್ಯಾನದ ಉತ್ಸಾಹ ಹೆಚ್ಚಿತ್ತು. ಯಾವುದೇ ತೊಂದರೆಯಿಲ್ಲ ಸುಸೂತ್ರವಾಗಿ ಮೌನ ಧ್ಯಾನ ನೆರವೇರಿತು. ಎರಡನೇಯ ದಿನವೂ ಧ್ಯಾನ ಮುಂದುವರಿದಿತ್ತು. ಆದರೆ ಸಂಜೆ ಕತ್ತಲಾಗುತ್ತಿದ್ದಂತೆ ಒಬ್ಬ ಶಿಷ್ಯ ಅಲ್ಲಿ ಹಚ್ಚಿಟ್ಟಿದ್ದ ದೀಪವನ್ನು ಗಮನಿಸಿದ. ದೀಪ ಮಂದವಾಗುತ್ತಾ ಆರಿಹೋಗುವ ಸ್ಥಿತಿಗೆ ತಲುಪಿತ್ತು. ಅವನಿಗೆ ಗಾಬರಿಯಾಗಿ, 'ಕೂಡಲೇ ಯಾರಾದರೂ ದೀಪ ಸರಿ ಮಾಡಿ' ಎಂದು ಕೂಗಿ ಬಿಟ್ಟ.
ಆತನ ಒಬ್ಬ ಗೆಳೆಯನಿಗೆ ಮೊದಲನೆಯವನು ಮಾತಾಡಿ ಧ್ಯಾನದ ಕರಾರು ಮುರಿದಿದ್ದು ನೋಡಿ ಬೇಸರಗೊಂಡ.
"ನಾವು ಒಂದು ಮಾತೂ ಆಡಬಾರದು, ಮರೆತೆಯಾ?" ಎಂದು ಆಕ್ಷೇಪ ಮುಂದಿಟ್ಟ.

"ನೀವಿಬ್ಬರೂ ಮೂರ್ಖರು, ಯಾಕೆ ಮಾತಾಡುತ್ತಿದ್ದೀರಿ" ಎಂದು ಸಿಟ್ಟಿನಿಂದ ಹೇಳಿದ ಮೂರನೇಯವ.
"ಸದ್ಯ! ನಾನೊಬ್ಬನೇ ಮಾತಾಡಲಿಲ್ಲ'' ನಾಲ್ಕನೆಯ ಗೆಳೆಯ ಖುಷಿಯಿಂದ ಘೋಷಿಸಿದ.
***
ಧರ್ಮದ ಸಾರ ಯಾವುದರಲ್ಲಿದೆ ಗೊತ್ತೇ?
ಒಂದು ದಿನ ರಾಜ ತನ್ನ ಯಾತ್ರೆಯ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಾಗ, ಲಾವೋ ತ್ಸು ಗುರುವಿನ ಆಶ್ರಮದ ಸಮೀಪ ಬಂದ. ಲಾವೋ ತ್ಸುನನ್ನು ಭೇಟಿ ಮಾಡಿ ಅವನಿಗೆ ವಂದನೆ ಸಲ್ಲಿಸಿ ಅವನಿಂದ ಜ್ಞಾನಮಾರ್ಗದ ಬಗ್ಗೆ ತಿಳಿದುಕೊಳ್ಳುವ ಆಸೆಯಿಂದ ಆಶ್ರಮಕ್ಕೆ ತೆರಳಿದ.
"ರಾಜ್ಯದ ಆಡಳಿತ ನೋಡಿಕೊಳ್ಳುವಲ್ಲಿ ನನ್ನ ಪೂರ್ತಿ ಸಮಯ ಕಳೆದುಹೋಗಿಬಿಡುತ್ತದೆ. ಸತ್ಸಂಗ, ಧ್ಯಾನದಂತಹ ಚಟುವಟಿಕೆಗಳಿಗೆ ಸಮಯವೇ ಸಿಕ್ಕುವುದಿಲ್ಲ. ನನ್ನಂತಹ ಬಿಡುವಿಲ್ಲದ ಮನುಷ್ಯನಿಗೆ ಧರ್ಮದ ಸಾರವನ್ನು ಒಂದು ಅಥವಾ ಎರಡು ಶಬ್ದಗಳಲ್ಲಿ ಹೇಳಿ ಕೊಡುವುದು ಸಾಧ್ಯವೇ?" ಎಂದು ಲಾವೋ ತ್ಸು ಬಳಿ ರಾಜ ತನ್ನ ಸಮಸ್ಯೆ ಹೇಳಿಕೊಂಡ.
"ಆಗಬಹುದು ದೊರೆ. ಒಂದೇ ಶಬ್ದ ಸಾಕು'' ಎಂದ ಲಾವೋ ತ್ಸು.
"ಹೌದಾ? ಯಾವುದು ಆ ಶಬ್ದ?"
"ಮೌನ"
"ಮೌನ ನಮ್ಮನ್ನು ಎತ್ತ ಕರೆದೊಯ್ಯುತ್ತದೆ?"
"ಧ್ಯಾನ"
"ಮತ್ತೆ ಧ್ಯಾನ ನಮ್ಮನ್ನು ಎಲ್ಲಿಗೆ ತಲುಪಿಸುತ್ತದೆ?"
"ಮೌನ".
(ಝೆನ್ ಕಥೆಗಳು- ಸಂಗ್ರಹ)












Click it and Unblock the Notifications