ಪತ್ತೇದಾರಿ ಕಾದಂಬರಿ : ತಬ್ಬಲಿಯು ನೀನಾದೆ ಮಗಳೇ

By: ಬಸವರಾಜ್ ಕಂಠಿ
Subscribe to Oneindia Kannada

ಕಂತು 1:
ಬೆಂಗಳೂರಿನ ಹೊರಭಾಗದ, ಮೈಸೂರು ರಸ್ತೆಯ ಒಂದು ಹೋಟೆಲ್.
ಜೋರು ಮಳೆಗಾಲ.
ಮಳೆಯ ನಡುವೆಯೇ ಗೆಳೆಯ-ಗೆಳತಿಯಂತಿದ್ದ ಇಬ್ಬರು ಇನ್ನೇನು ಕತ್ತಲಾಗುವ ಹೊತ್ತಿಗೆ ಕೋಣೆಯೊಂದನ್ನು ಬಾಡಿಗೆ ಪಡೆದು ಒಳಹೊಕ್ಕರು. ಕಣ್ಣುಗಳು ಮಾತ್ರ ಕಾಣುವಂತೆ, ಅವಳ ಮುಖದ ತುಂಬಾ ಮುಚ್ಚಿದ್ದ ವೇಲ್ ನೋಡಿ ಹೊಟೇಲಿನ ಆಳು, ಕದ್ದು ಮುಚ್ಚಿ ಬಂದಿದ್ದಾರೆಂದು ಗೊತ್ತಾಗಿ ಒಳಗೊಳಗೇ ನಕ್ಕ. "ಏನಾದ್ರು ಬೇಕಿದ್ರೆ ಜೀರೋ ನಂಬರ್ ಒತ್ತಿ ಕಾಲ್ ಮಾಡಿ ಸರ್" ಎಂದು ವಾಡಿಕೆಯ ನಗು ಬೀರಿ ಕೋಣೆಯಿಂದ ಹೊರ ನಡೆದ.

ಗೆಳೆಯ ಒಳಗಿನಿಂದ ಬಾಗಿಲು ಮುಚ್ಚಿ, ಕೊಂಡಿ ಏರಿಸಿ "ಮುಂದೇನು?" ಎನ್ನುವಂತೆ ಅವಳೆಡೆಗೆ ತುಂಟ ನೋಟ ಬೀರಿದ. ವೇಲ್ ಬಿಚ್ಚುತ್ತ ಅವಳು ನಾಚಿಕೆ ತೋರಿಸುವವಳಂತೆ ತಲೆ ತಗ್ಗಿಸಿದಳು.

ಇಬ್ಬರಿಗೂ ಮಿಂದಾಣ ಒಂದರಲ್ಲಿ ಪರಿಚಯವಾಗಿ, ಸ್ವಲ್ಪ ಸಮಯದಲ್ಲೇ ಹತ್ತಿರವಾಗಿಬಿಟ್ಟಿದ್ದರು. ಅವನು ಅನುಕೂಲಸ್ಥರ ಮಗ. ಜೀವನದಲ್ಲಿ ಕಿತ್ತು ಗುಡ್ಡೆಹಾಕಲು ಏನೂ ಸಿಗದಿದ್ದಾಗ ಸುಮ್ಮನೆ ಪೋಲಾಗುತ್ತಿರುವ ಹರೆಯವನ್ನು ಆದಷ್ಟು ಉಪಯೋಗಿಸಲು ಹುಡುಗಿಯರ ಗೀಳು ಹಚ್ಚಿಕೊಂಡಿದ್ದ. ಆಶ್ಚರ್ಯವೆನ್ನುವಂತೆ ಅವಳೇ ಅವನಿಗಿಂತ ಹೆಚ್ಚು ಒಲವು ತೋರಿ, ಇಬ್ಬರ ಪರಿಚಯವನ್ನು ಫೋನಿನ ನಂಬರ್ ಹಂಚಿಕೊಳ್ಳುವಲ್ಲಿಗೆ ಬೆಳೆಸಿ, ಹರೆಯದ ತುಂಟ ಮಾತುಗಳನ್ನೆಲ್ಲ ಆಡಿ, ಅದರ ರುಚಿ ಕಮ್ಮಿ ಎನಿಸತೊಡಗಿದಾಗ ಇಲ್ಲಿಗೆ ಬರುವ ಹಮ್ಮುಗೆ ಹಾಕಿದ್ದರು.

Murder

ಮಂಚದ ಮೇಲೆ ಕೂತಿದ್ದ ಅವಳ ಪಕ್ಕದಲ್ಲಿ ಕುಂತು, "ನಾವ್ ಇಷ್ಟ್ ಬೇಗ ಈ ಲೆವೆಲ್ ಗೆ ಬರ್ತೀವಿ ಅಂತ ಅಂದ್ಕೊಂಡೇ ಇರಲಿಲ್ಲ. ನಮ್ಮಿಬ್ಬರ ಪರಿಚಯ ಆಗಿ ಒಂದ್ ತಿಂಗ್ಳೂ ಆಗಿಲ್ಲ ಅಲ್ವಾ?" ಎಂದ.
"ಹೌದು"
"ಇವತ್ತು ನನ್ ಬರ್ತಡೇ, ಗೊತ್ತಾ?" ಅವನು ಪೀಠಿಕೆ ಹಾಕಿದ.
"ಅದಕ್ಕೆ?"
"ಏನ್ ಗಿಫ್ಟ್ ಕೊಡ್ತೀಯಾ?"
"ನಿನಗ್ ಏನ್ ಬೇಕು?" ಅವಳು ಕೇಳಿದಳು.
ತನಗೇನು ಬೇಕು ಎನ್ನುವುದನ್ನು ತಿಳಿಸುವವನಂತೆ, ಅವಳ ಮುಖ, ಎದೆ, ಸೊಂಟ, ಎಲ್ಲವನ್ನೂ ಕಣ್ಣಲ್ಲೇ ಅಳೆಯುವಂತೆ ದಿಟ್ಟಿಸಿದ.
"ಏನ್ ನೋಡ್ತಾ ಇದೀಯಾ?" ಅವಳು ನಗುತ್ತ ತಿವಿದಳು.
"ಪರ್ಫೆಕ್ಟ್ ಫಿಗರ್" ಎಂದ, ನಾನು ನಾಚಿಕೆ ಬಿಟ್ಟವನು ಎಂದು ತಿಳಿಸುತ್ತಾ.
"ಬಟ್ಟೆ ಬಿಚ್ಚಿದಾಗ ನನ್ ಫಿಗರ್ ನೋಡಿದ್ರೆ ಗಾಬರಿಯಾಗ್ತೀಯಾ", ಛೇಡಿಸುವ ದನಿಯಲ್ಲಿ ಉತ್ತರಿಸಿದಳು.
"ಹೌದಾ? ಸರಿ ಮತ್ತೆ... ನಂಗ್ ಗಾಬರಿ ಮಾಡು ಬಾ" ಎನ್ನುತ್ತ ಅವಳ ಕೈ ಹಿಡಿದ.
"ಇಷ್ಟ್ ಬೇಗಾನಾ? ನಂಗ್ ಹೊಟ್ಟೆ ಹಸಿತಾ ಇದೆ. ಊಟ ಆದ್ಮೇಲೆ" ಎನ್ನುತ್ತಾ ಅವನ ಉಕ್ಕಿ ಹರಿಯುತ್ತಿದ್ದ ಆಸೆಗೆ ಅಡ್ಡ ಹಾಕಿದಳು.
"ಸರಿ ಊಟ ಮಾಡ್ಕೊಂಡ ಬರೋಣ?"
"ಬೇಡ, ಇಲ್ಲೇ ತರಿಸು".
ಅವನು ಫೋನ್ ಎತ್ತಿದ. ಅವಳು ಮುಖ ತೊಳೆಯಲು ಬಚ್ಚಲುಮನೆಗೆ ಹೋದಳು.

ಇಬ್ಬರ ಊಟ ಮುಗಿದಿತ್ತು. ಅವನಿಗೋ ಗಾಬರಿಯಾಗುವ ಕಾತರ. ಗಂಟೆ ಹತ್ತಾದರೂ ಅವಳು ಮನಸ್ಸು ಮಾಡಿರಲಿಲ್ಲ. ಇಬ್ಬರೂ ಟಿ.ವಿ. ನೋಡುತ್ತ, ತುಂಟ ಮಾತಾಡುತ್ತ ಕುಳಿತಿದ್ದರು. ಹೊತ್ತು ಹನ್ನೊಂದಾಯಿತು. ಅವನು ಬಚ್ಚಲುಮನೆಗೆ ಹೋದಾಗ, ಇವಳು ರಾತ್ರಿಯ ತನ್ನ ಆಟಕ್ಕೆ ಅಣಿಯಾದಳು.

ಅವನು ಹೊರಬರುತ್ತಲೇ ಒಬ್ಬರನ್ನೊಬ್ಬರು ಅಪ್ಪಿ ಮಂಚದ ಮೇಲೆ ಉರುಳಾಡಲು ಶುರುವಿಟ್ಟುಕೊಂಡರು. ಮುತ್ತುಗಳ ಸುರಿಮಳೆ. ನಿಧಾನವಾಗಿ ಇಬ್ಬರೂ ಅರೆ ನಗ್ನರಾದರು. "ಕಣ್ ಮುಚ್ಚು" ಎಂದು ಬಲವಂತವಾಗಿ ಒಂದು ಕಪ್ಪು ಬಟ್ಟೆಯಿಂದ ಅವನ ಕಣ್ಣುಗಳನ್ನು ಮುಚ್ಚಿದಳು. ಕಾಮದ ನಶೆಯಲ್ಲಿ ಗೊಂಬೆಯಾಗಿ, ಅವಳು ಹೇಳಿದಂತೆ ಮಾಡಿದ.

ಅವಳ "ಕಣ್ಣು ಬಿಡು" ಎನ್ನುವ ದನಿ ಕೇಳಿ, ಕಣ್ಣು ಬಿಚ್ಚಿದಾಗ ಅವಳು ಅವನ ಎದೆಯ ಮೇಲೆ ಕುಳಿತಿದ್ದಳು. ಅವಳ ಬೆತ್ತಲೆ ಮೈಯನ್ನು ನೋಡುತ್ತ, ಅವಳ ಬಲಗ್ಗೈಯಲ್ಲಿದ್ದ ಚಾಕುವಿನ ಕಡೆಗೆ ಅವನ ನೋಟ ಹೊರಳಿತು. ಅವನ ಮುಖದಲ್ಲಿದ್ದ ಗೊಂದಲದ ಭಾವ ಗಾಬರಿಗೆ ಹೊರಳಿ, ಅವನ ಮೆದುಳಿಗೆ ಏನು ನಡೆಯುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ, ಮುಖದ ಕೆಳಗಿನ ಕತ್ತಿನ ಭಾಗಕ್ಕೆ ಚಾಕು ಹೊಕ್ಕಿಯಾಗಿತ್ತು! ಸಹಾಯಕ್ಕಾಗಿ ಚೀರಲೂ ಉಸಿರು ಸಾಲದೆ ನಿಧಾನವಾಗಿ ಎದೆಯ ಏರಿಳಿತ ಕಮ್ಮಿಯಾಯಿತು.
ಅವಳು ವಿಕಾರವಾದ, ಪಿಸುದನಿಯಲ್ಲಿ, "ಹ್ಯಾಪಿ ಬರ್ಥಡೇ ಟು ಯು... ಹ್ಯಾಪಿ ಬರ್ಥಡೇ ಟು ಯು..." ಎಂದು ಗುಣುಗಿ, ಏನನ್ನೋ ಗೆದ್ದ ಖುಷಿಯಲ್ಲಿ ನಗುತ್ತಾ, "ಆಯ್ ಲಾಯ್ಕ್ ಇಟ್" ಎಂದಳು.
ಬೆಳಗು ಹರಿಯುವಷ್ಟರಲ್ಲಿ ಕಣ್ಮರೆಯಾಗಿದ್ದಳು.

(ಮುಂದುವರಿಯುವುದು)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
'Tabbaliyu neenade magale'-A murder mystery story by Basavaraj Kanthi.
Please Wait while comments are loading...