ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ತೇದಾರಿ ಕಾದಂಬರಿ: ರೂಪಾ ಮಾತಿನಿಂದ ಕೊಲೆ ರಹಸ್ಯ ಬಿಚ್ಚಿಕೊಂಡಿತಾ?

"ಇದರ ಮೇಲೆ ಫಿಂಗರ್ ಪ್ರಿಂಟ್ಸ್ ಇದೆ. ನಿಮ್ಮ ಫಿಂಗರ್ ಪ್ರಿಂಟ್ಸ್ ಜೊತೆ ಮ್ಯಾಚ್ ಮಾಡಿದ್ರೆ ಸತ್ಯ ಗೊತ್ತಾಗುತ್ತೆ", ಅಂದ. ಅವಳು ಇನ್ನೂ ಗಾಬರಿಯಾಗೇ ಇದ್ದಳು. ಸಿಗರೇಟು ಡಬ್ಬಿಯೊಂದನ್ನು ಹೊರತೆಗೆದು, "ಕ್ಯಾನ್ ಆ...ಯ್ ಸ್ಮೋಕ್? ಅಂದಳು.

By ಬಸವರಾಜ್ ಕಂಠಿ
|
Google Oneindia Kannada News

ಕೊಲೆಗಳಲ್ಲಿ ಬಳಸಲಾಗಿದ್ದ ಕದ್ದಿರುವ ಮೊಬೈಲ್ ಗಳ ಜಾಡನ್ನೂ ಪತ್ತೆ ಮಾಡಬೇಕಿತ್ತು. ಅವುಗಳಲ್ಲಿ ಹೆಚ್ಚಾಗಿ ಗಂಡಸರ ಮೊಬೈಲ್ ಗಳೇ ಇದ್ದುದ್ದರಿಂದ, ಕೊಲೆಗಾತಿಯೇ ಖುದ್ದಾಗಿ ಕದ್ದಿರುವ ಸಾದ್ಯತೆ ತೀರ ಕಮ್ಮಿಯಿತ್ತು. ಯಾರೋ ನಿಯಮಿತವಾಗಿ ಕದ್ದು ಅವುಗಳನ್ನು ಇವಳಿಗೆ ಮಾರಿರಬೇಕು. ಮಾರತ್ ಹಳ್ಳಿಯಿಂದ ರಿಚ್ಮಂಡ್ ಸರ್ಕಲ್ ವರೆಗೂ ಬರುವ ಎಲ್ಲ ಪೊಲೀಸ್ ಸ್ಟೇಷನ್ನುಗಳಿಂದ ಮೊಬೈಲ್ ಕದ್ದು ಸಿಕ್ಕಿಬಿದ್ದವರನ್ನು ಹುಡುಕಿ, ಅವರನ್ನು ವಿಚಾರಿಸಿ, ಯಾರು ಹೀಗೆ ಮೊಬೈಲ್ ಗಳನ್ನು ಮಾರಿರಬಹುದು ಎಂದು ಪತ್ತೆಹಚ್ಚಲು ಭೈರೇಗೌಡನಿಗೆ ಹೇಳಿದೆ. ಇದೊಂದು ವಿಷಯದಲ್ಲಿ ನನ್ನ ಮಿದುಳು ಯಾವ ಸಹಾಯವೂ ಮಾಡುವಂತಿರಲಿಲ್ಲ.

ಎರಡನೇ ಕೊಲೆಯಲ್ಲಿ ಸತ್ತ ವ್ಯಕ್ತಿ ಹರೀಶ್ ಗೂ ಕೂಡ ರೂಪಾ ಹತ್ತಿರದ ಗೆಳತಿಯಾಗಿದ್ದಳು ಎಂದು ಭೈರೇಗೌಡ ಪತ್ತೆ ಹಚ್ಚಿದ್ದ. ಇದು ತುಂಬಾ ಮುಖ್ಯವಾದ ಸುಳಿವಾಗಿತ್ತು. ಅವಳನ್ನು ತಕ್ಷಣವೇ ಸ್ಟೇಷನ್ನಿಗೆ ಕರೆಸಿದೆವು. ಹೇಳಿದ ಸಮಯಕ್ಕೆ ಸರಿಯಾಗಿ ಬಂದಳು. ಐದೂವರೆ ಅಡಿ, ತೋಳುಗಳಿಲ್ಲದ ಟೀಶರ್ಟ್, ಜೀನ್ಸ್ ತೊಟ್ಟಿದ್ದಳು. ಹುಡುಗರ ರೀತಿ ಚಿಕ್ಕದಾಗಿದ್ದ ಕೂದಲು, ಈಗ ತಾನೇ ಬ್ಯೂಟಿ ಪಾರ್ಲರ್ ನಿಂದ ಹೊರಬಂತಹ ಮೇಕಪ್, ತೆಳುವಾದ ದೇಹ. ಪೇಜ್ ತ್ರೀ ಗೆ ಹೇಳಿ ಮಾಡಿಸಿದಂತಿದ್ದಾಳೆ ಎಂದುಕೊಂಡೆ.

makeup

ಪರಿಚಯದ ಕೇಳ್ವಿಗಳು ಮುಗಿದ ಮೇಲೆ ಅವಳ ಹಿನ್ನೆಲೆಯ ಕೇಳ್ವಿಗಳನ್ನು ಭೈರೇಗೌಡ ಕೇಳಿದ. ಅದರಲ್ಲಿ ಅಂತಹ ವಿಶೇಷವೇನೂ ಇರಲಿಲ್ಲ. ಮಂಗಳೂರಿನಲ್ಲಿ ಓದಿ, ಈಗ ಐದು ವರ್ಷದಿಂದ ಬೆಂಗಳೂರಿನಲ್ಲಿದ್ದಳು. ನಮ್ಮ ಪ್ರಶ್ನೆಗಳಿಗೆಲ್ಲ ನೇರವಾಗಿ, ತುಂಬಾ ಆತ್ಮವಿಶ್ವಾಸದಿಂದ ಉತ್ತರಿಸಿದಳು.

ಎರಡನೇ ಕೊಲೆಯಿಂದ ನನ್ನ ವಿಚಾರಣೆ ಶುರು ಮಾಡಿದೆ, "ನಿಮಗೆ ಹರೀಶ್ ಗೊತ್ತಾ?", ಅವನ ಚಿತ್ರ ತೋರಿಸಿದೆ.

ಅವಳು ನೋಡಿ, "ಗೊತ್ತು", ಎಂದಳು.

"ಹೇಗ್ ಪರಿಚಯ?"

"ನನ್ನ ಫ್ರೆಂಡಿನ ಫ್ರೆಂಡ್, ಅಷ್ಟೇ".

ಕೊಲೆಯಾದ ದಿನದ ಬಗ್ಗೆ ಕೇಳುತ್ತಾ, "ಅವತ್ತು ರಾತ್ರಿ ಒಂಬತ್ತರ ಸುಮಾರಿಗೆ ನೀವು ಎಲ್ಲಿದ್ರಿ?"

"ಅವತ್ತು ರಾಕೇಶ್ ಅಡಿಗ ಅವರ ಆಡಿಯೋ ಲಾಂಚ್ ಪಾರ್ಟಿಯಿತ್ತು. ನಾನು ಅಲ್ಲೇ ಇದ್ದೆ".

"ಎಷ್ಟು ಗಂಟೆವರೆಗೂ ಅಲ್ಲೇ ಇದ್ರಿ?"

"ರಾತ್ರಿ ಹನ್ನೆರಡಾಗಿರಬಹುದು".

"ಆಮೇಲೆ?"

"ನನ್ನ ಮನೆಗೆ ಹೋದೆ".

ಪ್ಲಾಸ್ಟಿಕ್ ಚೀಲದಲ್ಲಿ ಇರಿಸಲಾಗಿದ್ದ, ಕೊಲೆಯಾದ ಕೋಣೆಯಲ್ಲಿ ಸಿಕ್ಕ ಫೌಂಡೇಷನ್ ಡಬ್ಬಿಯನ್ನು ತೋರಿಸುತ್ತಾ ಭೈರೇಗೌಡ ಕೇಳಿದ, "ಇದು ನಿಮ್ಮದೇ, ಅಲ್ವಾ?"

ಅವಳು ಅದನ್ನು ನೋಡಿದ ತಕ್ಷಣ ಹೇಳಿದಳು, "ಇರಬಹುದು. ನಾನು ಇಂಥದ್ದೇ ಬಳಸೋದು."

"ಸಾಮಾನ್ಯವಾಗಿ ಇದನ್ನಾ ನೀವು ಎಲ್ಲಿಟ್ಕೊಂಡಿರತೀರಿ?"

"ನನ್ನ ಪರ್ಸ್ ನಲ್ಲಿ".

"ಹಾಗಾದ್ರೆ, ಈಗ ನಿಮ್ ಪರ್ಸ್ ನಲ್ಲಿ ಇಂಥ ಡಬ್ಬಿ ಇದ್ಯಾ?" ಭೈರೇಗೌಡ ಬಿಡಲಿಲ್ಲ.

"ಹೂಂ... ಇದೆ", ಎಂದು ಅದೇ ತರಹದ ಇನ್ನೊಂದು ಡಬ್ಬಿಯನ್ನು ತೋರಿಸಿದಳು. ಅದು ಹೊಸತರಂತೆ ಕಾಣುತ್ತಿತ್ತು.

"ಇದು ಹೊಸದು, ಅಲ್ವಾ? ಹಳೆಯದೇನಾಯ್ತು?"

ಅವಳು ತುಸು ಯೋಚಿಸಿ, "ಎಲ್ಲೋ ಇಟ್ಟು ಮರ್ತಿದೀನಿ... ಅದಕ್ಕೇ ಇನ್ನೊಂದು ತಕ್ಕೊಂಡೆ".

"ಇದು ಕೊಲೆಯಾದ ಜಾಗದಲ್ಲಿ ಸಿಕ್ಕಿದ್ದು", ಹೇಳಿದ ಭೈರೇಗೌಡ.

ಅವಳು ಗಾಬರಿಯಾದಳು. ತಡವರಿಸುತ್ತಾ, "ಅಂ...ದ್ರೆ? ಇದು ನಂದೇ ಅಂತಾ ನಿಮ್ ಅನುಮಾನನಾ?"

"ಯಾಕಿರಬಾರ್ದು?"

"ಇದು ನಂದೇ ಅಂತಾ ಹೇಗ್ ಹೇಳ್ತೀರಾ? ಎಷ್ಟೋ ಜನ ಹುಡುಗಿಯರು ಇದನ್ನೇ ಬಳಸ್ತಾರೆ".

"ಇದರ ಮೇಲೆ ಫಿಂಗರ್ ಪ್ರಿಂಟ್ಸ್ ಇದೆ. ನಿಮ್ಮ ಫಿಂಗರ್ ಪ್ರಿಂಟ್ಸ್ ಜೊತೆ ಮ್ಯಾಚ್ ಮಾಡಿದ್ರೆ ಸತ್ಯ ಗೊತ್ತಾಗುತ್ತೆ", ಅಂದ. ಅವಳು ಇನ್ನೂ ಗಾಬರಿಯಾಗೇ ಇದ್ದಳು. ತನ್ನ ಪರ್ಸಿನಿಂದ ಸಿಗರೇಟು ಡಬ್ಬಿಯೊಂದನ್ನು ಹೊರತೆಗೆದು, "ಕ್ಯಾನ್ ಆ...ಯ್ ಸ್ಮೋಕ್?", ಅಂದಳು.

ನಾನು, "ಇಲ್ಲಾ", ಎಂದು ಗದರಿದೆ. ಅವಳು ಬೇಸರದಿಂದ ಅದನ್ನು ಪರ್ಸಿನಲ್ಲಿ ಎಸೆದಳು. ಇದೇ ಸರಿಯಾದ ಸಮಯವೆಂದು ನಾನು ಮೊದಲನೇ ಕೊಲೆಯೆಡೆಗೆ ಮಾತು ಹೊರಳಿಸಿದೆ. ಅವಳು ತನ್ನ ಮಾತಿನ ಮೇಲೆ ಹಿಡಿತ ತಪ್ಪುವ ಸೂಚನೆ ಸಿಕ್ಕಿತು.

"ಶ್ರೇಯಸ್ ನಿಮಗೆ ಹೇಗ್ ಪರಿಚಯ?"

"ಯಾವ್ದೋ ಒಂದು ಪಾರ್ಟಿಯಲ್ಲಿ ಪರಿಚಯ ಆಗಿದ್ದ".

"ಯಾವ ಪಾರ್ಟಿ?"

"ಯಾವ್ದೋ ಒಂದು ಪಾರ್ಟಿ. ನಂಗೆ ನೆನಪಿಲ್ಲ".

"ಆಮೇಲೆ?"

"ಆಮೇಲೆ ಎನು?"

"ಅವ್ನು ನಿನಗೆ ತುಂಬಾ ಕ್ಲೋಸ್ ಅಂತಾ ನಮಗೆ ಗೊತ್ತಾಗಿದೆ".

"ಹೌದು... ಒಂದೆರಡ್ ಸಾರಿ ಅವನ ಜೊತೆ ಮಲಗಿದ್ದೆ". ಅಷ್ಟು ಸಾಕಾ? ಎನ್ನುವಂತೆ ಚೀರಿದಳು.

"ನಿನಗೆ ಹುಡುಗರನ್ನಾ ಕಂಡ್ರೆ ಆಗೊಲ್ಲ... ಅವರ ಹಾಗೇ ಇರಬೇಕು ಅಂತ ಬಯಸ್ತೀಯಾ. ಅದೇ ಹೊಟ್ಟೆಕಿಚ್ಚಲ್ಲೇ ಶ್ರೇಯಸ್ ಮರ್ಡರ್ ಮಾಡಿದ್ದೀಯಾ".

"ನೀವ್ ಏನ್ ಬೇಕಾದ್ರೂ ಹೇಳಿ. ನಾನ್ ಮರ್ಡರ್ ಮಾಡಿಲ್ಲ".

"ಇನ್ಯಾರು ಮಾಡಿದ್ದು?"

"ನನಗೇನ್ ಗೊತ್ತು?"

ಅವಳ ಮನಸ್ಸಿನಲ್ಲಿ ಗುಟ್ಟೇನಾದರೂ ಇದ್ರೆ ಬಿಟ್ಟುಕೊಡುತ್ತಾಳೆ ಅಂದುಕೊಂಡಿದ್ದೆ. ಆದರೆ ಅದಾಗಲಿಲ್ಲ. ನಾನು ಸುಮ್ಮನಾದೆ. ಅವಳು ದೀರ್ಘವಾಗಿ ಉಸಿರೆಳೆದುಕೊಂಡು ಸುಧಾರಿಸಿಕೊಂಡಳು.

"ಡಿ.ಎನ್.ಎ. ಟೆಸ್ಟ್ ಮಾಡಿದ್ರೆ ಎಲ್ಲಾ ಗೊತ್ತಾಗುತ್ತೆ", ಎಂದ ಭೈರೇಗೌಡ.

"ಡಿ.ಎನ್.ಎ ಟೆಸ್ಟಾ?" ಅವಳು ಗೊಂದಲದ ದನಿಯಲ್ಲಿ ಕೇಳಿದಳು.

"ಹೌದು. ಸತ್ತಿರೋ ಹರೀಶ್ ಮುಖದ ಮೇಲಿನ ಎಂಜಲಿನ ಸ್ಯಾಂಪಲ್ ತೊಗೊಂಡಿದೀವಿ. ಅದನ್ನಾ ನಿಮ್ಮ ರಕ್ತದ ಜೊತೆ ಮ್ಯಾಚ್ ಮಾಡಿದ್ರೆ ಎಲ್ಲಾ ಕ್ಲಿಯರ್ ಆಗುತ್ತೆ". ಅಂದ.

ಅವಳು ಏನೂ ಮಾತಾಡಲಿಲ್ಲ. ಅವಳನ್ನಾ ವಿಕ್ಟ್ರೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ರಕ್ತದ ಮಾದರಿ, ಮತ್ತು ಬೆರಳಚ್ಚು ಪಡೆದುಕೊಳ್ಳುವ ವ್ಯವಸ್ಥೆಯನ್ನು ಭೈರೇಗೌಡ ಮಾಡಿದ.
ಮುಂದುವರಿಯುವುದು

English summary
'Tabbaliyu neenade magale'-A murder mystery story by Basavaraj Kanthi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X