ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಗ 2 : ರಮೇಶನ ಕಂಪನಿ ಕಟ್ಟುವ ಯೋಜನೆ ಏನಾಯ್ತು?

By ರಘುನಂದನ ಶರ್ಮ
|
Google Oneindia Kannada News

ಕಂಪನಿ ಕಟ್ಟುವ ಯೋಜನೆಗಳ ಮಧ್ಯ ಕೂಡಾ ಇತ್ತೀಚೆಗೆ ರಮೇಶ ಮತ್ತೊಂದು ಬ್ಯಾಂಕಿನ ಪರೀಕ್ಷೆಯನ್ನು ಬರೆದು ಬಂದಿದ್ದ. ಪಾಸಾಗಬಲ್ಲೆನೆಂಬ ಭರವಸೆ ಕೂಡ ಇತ್ತು.

ಹೀಗಾಗಿ ಕಂಪನಿ ಕಟ್ಟುವ ಕನಸಿನೊಂದಿಗೆ ಇನ್ನೊಂದು ಪ್ಯಾರಲಲ್ ಕನಸು ಕಾಣತೊಡಗಿದ. ತಾನು ಪರೀಕ್ಷೆ ಪಾಸಾಗಿ ಬ್ಯಾಂಕಿನ ಮ್ಯಾನೇಜರನಾಗಿ, ಸುಜಾತೆಯ ಕೈಹಿಡಿಯುವುದು. ಆಕೆಯ ಹೆಸರಿನಲ್ಲಿ ಬ್ಯಾಂಕಿನ ಸಾಲತೆಗೆದುಕೊಂಡು ಫೀನಿಕ್ಸ್ ಗ್ಲೋಬಲ್ ಇಂಕ್ ಎನ್ನುವ ಕಂಪನಿಯನ್ನು ಶುರುಮಾಡುವುದು. ಇಬ್ಬರೂ ಒಂದು ವಿಲ್ಲಾ ಖರೀದಿಸಿ ಆರಾಮವಾಗಿ ಇರುವುದು.

"ಅಮಾ! ನೋಡಿಲ್ಲೆ. ಇನ್ಮ್ಯಾಲೆ ಪದ್ದವ್ವತ್ತಿ ಮಗ ಸುಧಿ ಹಂಗs ರೊಕ್ಕಾ ಘಳಿಸ್ಯಾನs, ಹಿಂತಾ ಮನಿ ಕಟ್ಸ್ಯಾನs ಅದು ಇದು ಸುಡುಗಾಡು ಸುಂಟಿಕೊಂಬು ಅನಕೋತ, ಕೊರಗಬ್ಯಾಡ. ನೀನು ಸೈತ ಆರಾಮಾಗಿ ಈ ಈಜೀ ಚೇರ ಮ್ಯಾಲೆ ಕುತಗೊಂಡು ಹರಿಕಥಾಮೃತಸಾರ ಓದಕೋತ ಇರು, ಆತಿಲ್ಲೋ!" ಎಂದು ತನ್ನ ಅತೃಪ್ತ ಮಾತೃದೇವಿಗೆ ಒಂದು ಕಂಫರ್ಟ್ ಕೊಡುವ ಪ್ರಯತ್ನ. ಹೀಗೆ ನಡೆದಿತ್ತು ಮುಂಗೇರಿಲಾಲನ ಹಸೀನ್ ಸಪನಾ!

ರಮೇಶನ ಈ ಕನಸಿಗೆ ಕಾರಣವಿಲ್ಲದಿದ್ದಿಲ್ಲ. ಬ್ಯಾಂಕೊಂದರ ರಿಸೋರ್ಸ್ಫುಲ್ ಹುದ್ದೆಯಲ್ಲಿದ್ದ ಆತನ ಡೊಡ್ಡಪ್ಪ ಹೇಳಿದ್ದರು. "ನೀನು ಬರೇ ಎಕ್ಸಾಮು ಪಾಸು ಮಾಡಿಕೋ ಸಾಕು, ಇಂಟರ್ವ್ಯೂ ಅದೂ ಇದೂ ಎಲ್ಲಾ ನಾನು ಬಾಯಪಾಸ್ ಮಾಡಿಸಿ, ನಿನ್ನ ಒಂದು ಕುರ್ಚಿ ಮ್ಯಾಲೆ ಕೂಡಿಸಿದ ಮ್ಯಾಲೇನ ರಿಟಾಯರ್ ಆಗ್ತೇನಂತ" ಎಂದು. ಆ ಒಂದು ಭರವಸೆಯ ಎಳೆಯನ್ನು ಹಿಡಿದುಕೊಂಡೇ ರಮೇಶ ತನ್ನ ರತ್ನಗಂಬಳಿಯನ್ನು ನೇಯ್ದಿದ್ದ. ಆ ರತ್ನಗಂಗಳಿಯು ಮಾಯಾಗಂಬಳಿಯಾಗಿ ಬದಲಾಗಿ ರಮೇಶ ಮತ್ತು ಸುಜಾತೆಯನ್ನು ಜಗತ್ತಿನ ಎಲ್ಲೆಡೆ ಸುತ್ತಾಡಿಸತೊಡಗಿತ್ತು.

Reservation kills a Love

ಅಂದ ಹಾಗೆ ಈ ಇಂಕು ಏನು ಕೆಲಸಮಾಡುವುದು ಎನ್ನುವದರ ಬಗ್ಗೆ ಆತನಿಗೆ ಚಿಂತೆ ಇದ್ದಿಲ್ಲ. ಅದನ್ನು ಸುಜಾತೆ ನಿಭಾಯಿಸಬಲ್ಲಳು. ಆದರೆ ಯಾವ ಸ್ಕೀಮಿನಡಿ ಸಾಲ ತೆಗೆದುಕೊಳ್ಳುವುದು? ಪ್ರೋಸೀಜರು ಏನಿರಬಹುದು ಎನ್ನುವ ಚಿಂತೆ ಆತನಿಗೆ ಶುರುವಾಗಿತ್ತು. ಸಾಲದ ಪ್ರೊಸೀಜರಿನ ಆ ಚಿಂತೆಯಿಂದಾಗಿಯೇ ಆತ ಮಾಯಾ ಜಮಖಾನೆಯ ಹಾರಾಟದ ಆನಂದವನ್ನು ಸಂಪೂರ್ಣವಾಗಿ ಅನುಭವಿಸಲಾರದೆ ಹೋಗಿದ್ದ. ಯಥಾ ಪ್ರಕಾರ ನಾಲ್ಕಾರು ದಿನದಿಂದ ಮಬ್ಬಾಗಿ ಕುಳಿತಿದ್ದ.

ಒಂದು ಮಧ್ಯಾಹ್ನ ಸುಜಾತೆ ಕಾಲ್ ಮಾಡಿ "ಬ್ಯಾಂಕಿಗೆ ಹೋಗಿ ಬರೋಣು, ಬಾ" ಎಂದು ಹೇಳಿದಳು. ಹೊರಡುವಾಗ ಅಪ್ಪ "ಅಂವಾ ಮಹಾಬಲ ದೀಕ್ಷಿತ ಅಂತಂದು ಮ್ಯಾನೇಜರ್, ಭಾಳ ಛೊಲೋ ಮನಶ್ಯಾ ಇದ್ದಾನ. ಲೋನು ಯದಕ್ಕ ತೊಗೊಳೀಕತೀರಿ, ಏನು ಕಥಿ ಅನ್ನೋದು ಸ್ವಲ್ಪ ಕ್ಲಿಯರ್ ಆಗಿ ಮಾತಾಡು, ಗುಮ್ಮನಗುಸುಕನಗತೆ ಕೂಡಬ್ಯಾಡ. ಸ್ವಲ್ಪನ ಸ್ವಲ್ಪು ಓಪನ್ ಆಗು. ಸುಜ್ಜಿಗೆ ಯಲ್ಲಾ ನಾನು ಹೇಳೇನಿ ಅಕೀನs ಯಲ್ಲಾ ಮಾತಾಡ್ತಾಳ ಖರೆ. ಆದ್ರs ನೀನು ಇಷ್ಟು ಸ್ವಾಭಿಮಾನಿ ಆದ್ರ ಕಷ್ಟ ಆಗ್ತದಪಾ. ಮ್ಮ್, ಆಗವಲ್ತ್ಯಾಕ, ಹೋಗಿ ಬಾ, ಒಳ್ಳೇದಾಗ್ಲಿ" ಎಂದು ಶುಭಹಾರೈಸಿ ಕಳಿಸಿದ್ದರು.

ಮಹಾಬಲ ದೀಕ್ಷಿತನು ನಿಜವಾಗಿಯೂ ಒಳ್ಳೆಯವನೇ ಇದ್ದ. ಸಾಲದ ಹಣ ತಕ್ಷಣವೇ ಸಿಗಲಿಲ್ಲವಾದರೂ ಅದನ್ನು ಪಡೆಯುವ ಸುಲಭರೀತಿಯನ್ನು ಹೇಳಿ, ಫಾರ್ಮುಗಳನ್ನು ತುಂಬಲು ಹೇಳಿ ಅಸಿಸ್ಟಂಟ್ ಮ್ಯಾನೇಜರನ ಕಡೆ ಏನೋ ಕೆಲಸವಿದೆ ಎಂದು ಹೊರಹೋದ.

ಇವರಿಬ್ಬರೂ ಫಾರ್ಮನ್ನು ಭರ್ತಿ ಮಾಡಿದರು. ಸೈನು ಮಾಡುವಾಗ ಸುಜಾತಾ ರಾಘವೇಂದ್ರ ದೇಶಪಾಂಡೆ ಎಂದು ಆಕೆಯೂ ರಮೇಶ ಕುಲಕರ್ಣಿ ಎಂದು ಈತನೂ ಗೀಚಿದರು. ಕೆಳಗೆ ಪಾರ್ಟ್ನರ್ / ಓನರ್ / ಸ್ಟೇಕ್ ಹೋಲ್ಡರ್ ಎನ್ನುವ ಜಾಗದಲ್ಲಿ ಯಾವುದನ್ನು ಟಿಕ್ ಮಾಡಬೇಕೆಂಬುದು ತಿಳಿಯದೆ ರಮೇಶ ಗೊಂದಲಪಟ್ಟಾಗ ಆಕೆ ಪಾರ್ಟ್ನರ್ ಮೇಲೆ ಕಣ್ಣುತೋರಿಸಿ, ನಸುನಕ್ಕಳು.

ಆಕೆಯ ಅಭಿಪ್ರಾಯದ ಪ್ರಕಾರ ಅಲ್ಲಿ ಗಂಡ ಹೆಂಡತಿ ಎಂದು ಇರಬೇಕಿತ್ತು ಎಂದು ಅವನಿಗೆ ಹೇಳಿದಳು. ಆದರೆ ರಮೇಶನ ಮನಸ್ಸು ಇನ್ನೇನೋ ಗೊಂದಲದಲ್ಲಿ ಮುಳುಗಿದ್ದರಿಂದ ಆತನ ಮುಖದಲ್ಲಿ ಏನೂ ಭಾವನೆಗಳು ಮೂಡಲಿಲ್ಲ. "ಏ ಏನೋಪ್ಪಾ ನೀ, ಒಂದು ಚೂರರs ಅರ್ಥ ಆಗಂಗಿಲ್ಲಲ್ಲ ನಿಂಗS, ಆಗ್ಲಿ ಈಗ ಸಧ್ಯಕ್ಕಂತೂ ಪಾರ್ಟನರ್ ಅಂತಂದು ಸೈನು ಮಾಡು" ಎಂದಳು. ದೀಕ್ಷಿತನು ಬಂದು ಫಾರ್ಮನ್ನು ಪಡೆದು ಆದಷ್ಟು ಬೇಗ ನಿಮ್ಮ ಕನಸು ನೆರವೇರುತ್ತದೆ ಎಂದು ಹಾರೈಸಿ ಕಳಿಸಿದ.

English summary
Short Story: Reservation in jobs, education system has claimed a aspiring youth belonging to General Category. Though suicide is not the solution to the crisis but it has sent a message to his lover and fellow friend about the failure in the system of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X