ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಗಾದಿ ಹಬ್ಬ ಮತ್ತು ಇಸ್ಪೀಟ್ ರಾಜನ ನಸೀಬ

By ಗವಿಸ್ವಾಮಿ, ಬೆಂಗಳೂರು
|
Google Oneindia Kannada News

ದಿನ ಬೆಳಗಾದರೆ -ಕೊಟ್ಟಿಗೆ ಕಸವನ್ನೂ ಬಳಿಯದೇ- ಸೀದಾ ಇಸ್ಪೀಟಿನ ಗುಳ್ಳಿಗೆ ನುಗ್ಗುತ್ತಿದ್ದ ರಾಜ, ಆವತ್ತು ಹೊತ್ತು ಮೂಡುವುದಕ್ಕೂ ಮೊದಲೇ ಎದ್ದು ಎತ್ತುಗಳ ಮೈ ತೊಳೆದುಕೊಂಡು ಬಂದ. ಕೊಂಬೊರೆಯುವಾಗ ಕೈಗಳು ಯಾಂತ್ರಿಕವಾಗಿ ಚಲಿಸುತ್ತಿದ್ದರೆ, ಮನಸ್ಸು ಇಸ್ಪೀಟಿಗೆ ಕಾಸು ಹೊಂದಿಸುವ ಚಿಂತೆಯಲ್ಲಿ ಮುಳುಗಿತ್ತು. ಅರೆಮನಸ್ಸಿನಿಂದ ಒರೆದರೂ ಒಂಚೂರೂ ಸಿಬಿರೇಳದಂತೆ ನ್ಯಾಕಾಗಿ ಹೊರೆದು ಮುಗಿಸಿದ! ಕೊಂಬುಗಳು ಬೆಣ್ಣೆ ಉಂಡೆಯಂತೆ ನೈಸಾಗಿ ಕಾಣುತ್ತಿದ್ದವು.

ಮುಂದಿನ ಕೆಲಸವನ್ನು ಮಗನ ಸುಪರ್ದಿಗೆ ವಹಿಸಿ ಜಗಲಿ ಏರಿ ಬೀಡಿ ಹಚ್ಚಿದ. ಹದಿನಾಲ್ಕು ವರ್ಷದ ಪ್ರಸಾದಿ ಹುಲಿಪಟ್ಟೆ ಡಿಸೈನಿನಲ್ಲಿ ಕೊಂಬುಗಳಿಗೆ ಬಣ್ಣ ಹಚ್ಚಿ ಮುಗಿಸಿದಾಗ, ಹುಲಿಮರಿಗಳು ಕೊಂಬಿಗೆ ಆತುಕೊಂಡಿವೆಯೇನೋ ಎಂಬಷ್ಟು ಸೊಗಸಾಗಿ ಕಾಣುತ್ತಿತ್ತು. ದೂರದಲ್ಲಿ ನಿಂತು ಒಮ್ಮೆ ಓರೆನೋಟ ಬೀರಿ ತೃಪ್ತಿಯ ನಗೆ ಚೆಲ್ಲಿದ. ಬಣ್ಣ ಆರುತ್ತಿದ್ದಂತೆ ಕೊಂಬುಗಳಿಗೆ ಹೊಂಬಾಳೆ ಗರಿಗಳನ್ನು ಕಟ್ಟಿದ.

ಪ್ರಸಾದಿಯ ತಂಗಿ ಚಿನ್ನಿ ಅಷ್ಟೊತ್ತಿಗೆ ಕಣಗಿಲೆ ಹೂಗಳನ್ನು ಪೋಣಿಸಿ ಒಂದು ಸುಂದರ ಹಾರವನ್ನು ರೆಡಿ ಮಾಡಿಕೊಂಡಿದ್ದಳು. ಎತ್ತುಗಳ ಕೊರಳಿಗೆ ಹಾರ ಹಾಕಿದ ನಂತರವೂ ಏನೋ ಕೊರೆಯಾಗಿದೆಲ್ಲಾ ಅನ್ನಿಸಿದಾಗ ಮನೆಯೊಳಗೆ ನೇತುಹಾಕಿದ್ದ ಹಿತ್ತಾಳೆ ಗಂಟೆಸರಗಳು ನೆನಪಾದವು. ಅವನ್ನು ತೊಡಿಸಿದಾಗ ಎತ್ತುಗಳು ರಾಜಕುದುರೆಗಳಂತೆ ಜಬರ್ದಸ್ತಾಗಿ ಕಾಣತೊಡಗಿದವು. ರಾಜ ಹೊಸ ಬಟ್ಟೆ ತೊಟ್ಟು ಎತ್ತುಗಳಿಗೆ ಅವಸರದ ಪೂಜೆ ನೆರವೇರಿಸಿದ.


***
ಹಣ್ಣುಮುದುಕಿ ಬಸಮ್ಮ ಆಗ ತಾನೇ ಅಂಗಡಿ ಬಾಗಿಲು ತೆರೆದು ಕುಳಿತಿದ್ದಳು. ಮೊಮ್ಮಗ ಹೆಂಡತಿಯ ಮನೆಗೆ ಹೋಗಿದ್ದ. ಮುದುಕಿಯ ಬದುಕಿನಲ್ಲಿ ವಿಧಿಯೆಂಬುದು ಹೆಜ್ಜೆಹೆಜ್ಜೆಗೂ ಅಟ್ಟಹಾಸಗೈದಿತ್ತು. ನೂರೆಂಟು ದೇವರುಗಳಿಗೆ ಹರಕೆ ಹೊತ್ತರೂ ಮೂರು ಕೂಸುಗಳೂ ಉಳಿಯಲಿಲ್ಲ. ಮೂರನೆಯದು ಕಣ್ಣುಮುಚ್ಚಿ ವರ್ಷವೂ ತುಂಬಿರಲಿಲ್ಲ. ಆವತ್ತೊಂದು ರಾತ್ರಿ ಜೋಳದ ಫಸಲನ್ನು ಕಾಯಲು ಹೋಗಿದ್ದ ಗಂಡನನ್ನು ಆನೆಗಳು ಕೊಂದುಬಿಟ್ಟವು.

ಗಂಡನ ಸಾವಿನಿಂದ ಎದೆಗುಂದದೇ ಅಕ್ಕನ ಮಗನನ್ನು ದತ್ತು ಪಡೆದು ಸಾಕಿದಳು. ನಾಲ್ಕು ಮಂದಿ ಮೆಚ್ಚುವ ಹಾಗೆ ಅವನಿಗೆ ಮದುವೆ ಮಾಡಿದಳು. ಮದುವೆಯಾಗಿ ಎರಡು ವರ್ಷಗಳೂ ತುಂಬಿರಲಿಲ್ಲ. ಆವತ್ತೊಂದು ದಿನ ದತ್ತು ಮಗ ಮತ್ತು ಸೊಸೆ ಹೊಲದಲ್ಲಿ ಭರಣಿ ಮಳೆಯ ಬರಸಿಡಿಲಿಗೆ ಸಿಲುಕಿ ಬಿರಿದು ಹೋದರು. ವರ್ಷದ ಕೂಸನ್ನು ತಬ್ಬಲಿ ಮಾಡಿ ಹೋಗಿಬಿಟ್ಟರು. ಗಟ್ಟಿಮುದುಕಿ ಬಸಮ್ಮ ಆ ಕಂದನನ್ನೂ ಸಾಕಿ ಅವನಿಗೂ ಕೈ ಹಿಡಿಸಿದಳು.. ಒಂದು ಚಿಕ್ಕ ಅಂಗಡಿ ತೆರೆದು, ಸೈಡಿನಲ್ಲಿ ಬಡ್ಡಿ ವ್ಯವಾರ ನಡೆಸುತ್ತಾ ನಾಲ್ಕು ಜನರ ಸಮಕ್ಕೆ ಜೀವನ ಸಾಗಿಸುತ್ತಿದ್ದಳು.

***
ರಾಜ ಬಸಮ್ಮನ ಅಂಗಡಿಗೆ ಬಂದು ಏನನ್ನೋ ಹೇಳಲು ಬಾಯಿ ತೆಗೆದ. ಪಕ್ಕದಲ್ಲಿ ಇನ್ನೊಬ್ಬ ಗಿರಾಕಿ ನಿಂತಿದ್ದರಿಂದ ಸುಮ್ಮನಾದ.

''ಮಾದೇವಿ ಯುಗಾದಿ ಹಬ್ಬಕ್ಕೋಗಿಲ್ವ ಕೂಸು?'' ಸೈಲೆಂಟಾಗಿ ನಿಂತು ದಮ್ಮು ಎಳೆಯುತ್ತಿದ್ದ ರಾಜನನ್ನು ಬಸಮ್ಮ ಮಾತಿಗೆಳೆದಳು.

''ಎಂಟ್ ಜಿನ್ದಲ್ಲಿ ಅವಳ್ ತಾತ ತೀರೋದ್ರಲ್ಲಮ್ಮ'' ಅಂದ ರಾಜ.

''ನನಗ್ ಗೊತ್ತಿರ್ನಿಲ್ಲಕಕಂದ.. ಯಾನಾಗಿತ್ತಪ್ಪ'' ಎಂದಳು ಕನಿಕರದಿಂದ.

''ಸ್ಯಾನೆ ವಯ್ಸಾಗಿತ್ತುಕಮೈ.. ನಿದ್ದೆಲೇ ಸೂಲೊಂಟೋಗಿತ್ತಂತ''

''ಒಳ್ಳಿ ಸಾವು.. ಒಳ್ಳಿ ಸಾವ್ ಪಡೆಯಕೂ ಪುಣ್ಯ ಮಾಡಿರ್ಬೇಕಂತ'' ಕಣ್ಣು ಮುಚ್ಚಿ ಮೇಲೆ ನೋಡಿದಳು.

''ಒಳ್ಳಿ ಸಾವೋ ಕೆಟ್ ಸಾವೋ ..ಈಗ್ನವ್ರು ಅವ್ರ್ ಅರ್ದ್ಯ ಆಯ್ಸ್ ಬದ್ಕುದ್ರೇ ಹೆಚ್ಚು ತಕಮೈ'' ಎನ್ನುತ್ತಾ ಚೆಡ್ಡಿ ಜೇಬಿಗೆ ಕೈಹಾಕಿ ಏನನ್ನೋ ತೆಗೆಯಲು ನೋಡಿದ. ಆ ಕಡೆಯಿಂದ ಚೆನ್ನಣ್ಣ ಬರುತ್ತಿದ್ದುದನ್ನು ನೋಡಿ ಕೈ ಈಚೆಗೆಳೆದುಕೊಂಡ. ಚೆನ್ನಣ್ಣನ ಹಿಂದೆ ಮೊಮ್ಮಕ್ಕಳ ಹಿಂಡು ಓಡಿಬರುತ್ತಿತ್ತು. ಸರ್ವೀಸ್ ಕಾಣದೆಯೂ ಒಳ್ಳೇ ಕಂಡೀಸನ್ನಿನಲ್ಲಿರುವ ಪುರಾತನ ಇಂಜಿನ್ನು ಚೆನ್ನಣ್ಣ.

ಕೆಲವರು ಚೆನ್ನಣ್ಣನ ಸೆಂಚುರಿಗೆ ಇನ್ನು ಎರಡೇ ಎರಡು ರನ್ ಬಾಕಿ ಇವೆ ಎನ್ನುತ್ತಿದ್ದರು. ಮುದುಕನ ಫುಟ್ವರ್ಕು, ಬ್ಯಾಲೆನ್ಸನ್ನು ನೋಡಿದರೆ ಲೀಲಾಜಾಲವಾಗಿ ಸೆಂಚುರಿ ಬಾರಿಸುತ್ತಾನೆಂದು ಕಣ್ಣುಮುಚ್ಚಿ ಬೆಟ್ ಕಟ್ಟಬಹುದಿತ್ತು. ಚೆನ್ನಣ್ಣ ಬನೀನಿನ ಜೇಬಿನಿಂದ ನೀಲಿ ನೋಟನ್ನು ತೆಗೆದು ಬೆಳಕಿಗೆ ಹಿಡಿದು ನೋಡಿದ. ಯಾಕೋ ತೃಪ್ತಿಯಾಗಲಿಲ್ಲ.

''ಎಷ್ಟ್ ರುಪಾಯ್ನದ ಕೂಸು?'' ಎಂದು ರಾಜನ ಎದುರಿಗೆ ಹಿಡಿದ.

''ತಾತೈ ಇದು ನೋಟಲ್ಲ ಯಾವ್ದೋ ಚೀಟಿ!'' ಎಸೆಯುವವನಂತೆ ನಟಿಸಿದ.

''ಯಾರ್ಗ್ಯ ದೊರೆ ನೀನು ಹೂಮುಡಿಸದು.. ತತ್ತ ಇಲ್ಲಿ ಅದು ನೂರ್ ರೂಪಾಯ್ನದು ಕಣಾ'' ಎನ್ನುತ್ತಾ ನೋಟನ್ನು ಕಸಿದುಕೊಂಡ. ನೀಲಿ ನೋಟನ್ನು ಬಸಮ್ಮನಿಗೆ ಕೊಟ್ಟು ಹತ್ತರ ನೋಟುಗಳನ್ನು ಪಡೆದುಕೊಂಡ. ತಾತನ ಕೈಗೆ ನೋಟುಗಳು ಬರುತ್ತಿದ್ದಂತೆ ಮೊಮ್ಮಕ್ಕಳೆಲ್ಲಾ ಪೈಪೋಟಿ ಮೇಲೆ ಕಾಲಿಗೆ ಮುತ್ತಿಕೊಂಡರು.

'ಹಟ್ಟಿಲಿ ಕಾಲ್ ಕಟ್ಟುವಿರಂತೆ ಬನ್ನಿ ಮುದೇವ್ಗಳೇ' ಎಂದರೂ ಯಾರೂ ಕಿವಿಗೆ ಹಾಕಲಿಲ್ಲ. ಎಲ್ಲರೂ ಒಂದೊಂದು ನೋಟನ್ನು ಕಸಿದುಕೊಂಡರು. ಒಂದೇ ಒಂದು ನೋಟು ಉಳಿಯಿತು. ಕಿಲಾಡಿ ರಾಜ ಒಂದು ಡೈ ಹೊಡೆದು ಅದನ್ನು ತನ್ನದಾಗಿಸಿಕೊಂಡ. ಚೆನ್ನಣ್ಣ ಮರೆಯಾಗುವುದನ್ನೇ ಕಾಯುತ್ತಿದ್ದ ರಾಜ ಚೆಡ್ಡಿ ಜೇಬಿನಿಂದ ವಾಲೆಗಳನ್ನು ಹೊರತೆಗೆದ.

''ಇವ್ ಮಡಿಕಂಡು ಮೂರ್ಸಾವ್ರ ಕೊಡಮೈ'' ಅಂದ. ಬಸಮ್ಮನಿಗೆ ಗಾಬರಿಯಾಯಿತು.

''ನಿನ್ ಹೆಡ್ತಿ ಮೊದ್ಲೇ ಬಜಾರಿ, ವಿಸ್ಯ ಗೊತ್ತಾದ್ರ ನನ್ ಸುಮ್ನೆ ಬುಟ್ಟಳ ಕಂದ ಅವ? ನನ್ ಸ್ಯಾಲ ಅಳಿಯಕು ಹೇಸಲ್ಲ ಅಂತಾ ಹೆಂಗ್ಸು ನಿನ್ ಹೆಡ್ತಿ, ದಮ್ಮಯ್ಯ ಅಂತಿನಿ ಆಗಲ್ಲಕಪ್ಪ'' ಎಂದು ಕೈ ಅಲ್ಲಾಡಿಸಿದಳು.

''ಇನ್ನೊಂದ್ ಗಂಟವಳ್ಗ್ ಬಡುಸ್ಕತಿನಿ ಕೊಡಮೈ, ಹಬ್ಬದ್ ಜಿನ ಇಲ್ಲ ಅನ್ಬ್ಯಾಡ.. ಆಸಿರ್ವಾದ ಮಾಡ್ಬುಟ್ ಕೊಡು, ಮೂರ್ಸಾವ್ರದಲ್ಲಿ ಮೋವತ್ಸಾವ್ರ ಹೊಡ್ಕಬತ್ತಿನಿ'' ಎಂದು ಬಸಮ್ಮನನ್ನು ಪುಸಲಾಯಿಸಿ ಇಕ್ಕಟ್ಟಿಗೆ ಸಿಲುಕಿಸಿದ.

''ಏಡ್ ಸಾವ್ರ ಕೊಡ್ತಿನಿ ಕ ಕಂದ, ಅದರ ಮ್ಯಾಲ ನನ್ ತಂವು ಒಂದ್ ಪೈಸೂ ಇಲ್ಲ'' ಒಲ್ಲದ ಮನಸ್ಸಿನಿಂದ ನಾಲ್ಕು ಹಸಿರು ನೋಟುಗಳನ್ನು ಎಣಿಸಿಕೊಟ್ಟಳು.

***
ಅದಾಗಲೇ ಚಾವಡಿಯೊಳಗೆ ಇಸ್ಪೀಟು ಶುರುವಾಗಿತ್ತು. ಒಲಿಂಪಿಕ್ಸ್ ರಿಂಗುಗಳಂತೆ ಬೆಸೆದುಕೊಂಡಿದ್ದ ಐದು ವೃತ್ತಗಳ ಪೈಕಿ ಎರಡರಲ್ಲಿ ರಾಣಿಸಾಲು(ಅಂದರ್ ಬಾಹರ್) ಭರ್ಜರಿಯಾಗಿ ಸಾಗಿತ್ತು. ಬಿಳಿ ತಲೆಗಳೇ ತುಂಬಿದ್ದ ಇನ್ನೆರಡು ರಿಂಗುಗಳಲ್ಲಿ ರಮ್ಮಿ ಆಟ ಟೆಸ್ಟ್ ಟೆಸ್ಟ್ ಮ್ಯಾಚಿನಂತೆ ಸಾವಕಾಶವಾಗಿ ನಡೆಯುತ್ತಿತ್ತು. ಅಪ್ಪ-ಮಕ್ಕಳು ಮುಖಾಮುಖಿಯಾಗುವುದನ್ನು ತಪ್ಪಿಸಿಕೊಳ್ಳಲು ಅಲ್ಲಿಂದಿಲ್ಲಿಗೆ ಕುಪ್ಪುತ್ತಾ ಸರ್ಕಸ್ ಮಾಡುತ್ತಿದ್ದುದುದು ತಮಾಷೆಯಾಗಿ ಕಾಣುತ್ತಿತ್ತು .

ಐದನೇ ರೌಂಡಿನಲ್ಲಿ ಹೈಕಳು ನಾಲ್ಕು ಬೇಳೆ ಪಚ್ಚಿ ಆಟದಲ್ಲಿ ತೊಡಗಿದ್ದವು. ಅಷ್ಟೊತ್ತಿಗೇ ಟೈಟಾಗಿ ಬಂದಿದ್ದ ಪಾರ್ಟಿಗಳಿಬ್ಬರು, ಕಾಸು ಕೊಡದಿದ್ದರೆ ನೀರು ಹುಯ್ಯುತ್ತೇವೆಂದು ತಪ್ಪಲೆ ತೋರಿಸಿ ರಾಣಿಸಾಲಿನ ಗುಂಪನ್ನು ಬೆದರಿಸುತ್ತಿದ್ದರು. ಆಟ ಹೊಡೆದವನು ಇಬ್ಬರಿಗೂ ಒಂದೊಂದು ನೀಲಿ ನೋಟನ್ನು ಎತ್ತಿ ಕೊಟ್ಟಾಗ ಇನ್ನೊಂದು ರವುಂಡು ಏರಿಸಲು ಹೊರಟರು. ರಾಜ ಹೇಗೋ ಜಾಗ ಮಾಡಿಕೊಂಡು ರಾಣಿಸಾಲಿನ ಗುಂಪಿನೊಳಗೆ ನುಸುಳಿದ.

***
ರಾಜ ಸುತ್ತಮುತ್ತಲ ಊರುಗಳ ಇಸ್ಪೀಟ್ ಅಡ್ಡೆಗಳಿಗೆ ಖಾಯಂ ಸದಸ್ಯನಾಗಿದ್ದ. ಜಾತ್ರೆ ಉತ್ಸವಗಳು ಎಲ್ಲೇ ನಡೆಯಲಿ ತಪ್ಪದೇ ಹಾಜರಿ ಹಾಕುತ್ತಿದ್ದ. ಜೂಜುಕೋರಿಗೆ ಅಲ್ಲೊಂದು ಭವ್ಯ ಅಖಾಡ ಸಿದ್ಧವಾಗಿರುತ್ತಿತ್ತು! ತೊಟ್ಟ ಬಟ್ಟೆಗಳನ್ನು ಬಿಟ್ಟು... ಉಂಗುರ, ಚೇನು, ಸೈಕಲ್ಲು ಹಳೆಯ ಎಜಡಿ ಬೈಕು... ಹೀಗೆ ಉಳಿದೆಲ್ಲ ಐಟಮ್ಮುಗಳನ್ನು ಪಣಕ್ಕಿಟ್ಟು ಆಡುತ್ತಿದ್ದ!

ಹೀಗೇ ಒಂದು ದಿನ ಪಕ್ಕದೂರಿನ ತೋಟದ ಗುಳ್ಳಿನಲ್ಲಿ ಹತ್ತನ್ನೆರಡು ಮಂದಿ ಒಬ್ಬಟ್ಟು ತಟ್ಟುತ್ತಾ ಕುಳಿತಿದ್ದರು. ಆ ಗುಂಪಿನಲ್ಲಿ ರಾಜನೂ ಇದ್ದ. ಕೂಲಿಯವರಂತೆ ಕಾಣುತ್ತಿದ್ದ ನಾಲ್ಕು ಮಂದಿ ಆ ಸ್ಪಾಟಿಗೆ ಬಂದರು. ಆ ನಾಲ್ವರು ವ್ಯವ್ಸಾಯ, ರಾಜ್ಕೀಯ ಹಾಳೂಮೂಳೂ ಹರಟುತ್ತಾ ಹತ್ತು ನಿಮಿಷಗಳಲ್ಲೇ ಎಲ್ಲರೊಂದಿಗೆ ಬೆರೆತುಬಿಟ್ಟರು. ಇದಾಗಿ ಅರ್ಧ ಘಂಟೆಯೂ ತುಂಬಿರಲಿಲ್ಲ. ನಾಲ್ವರೂ ತಲಾ ಒಬ್ಬೊಬ್ಬರನ್ನು ಮಿಸುಕಾಡದಂತೆ ತಬ್ಬಿ ಹಿಡಿದುಬಿಟ್ಟರು!

ಒಬ್ಬ ಚೆಡ್ಡಿ ಜೇಬಿನಿಂದ ರಿವಾಲ್ವರ್ ಎಳೆದು, ''ನಡೀರಿ ನನ್ಮಕ್ಳಾ ನಾವು ಪೊಲೀಸ್ನೋರು ಕಣಾ'' ಎಂದು ಅಬ್ಬರಿಸಿದ!

ನಾಲ್ಕು ಮಂದಿಯೂ ಹೆಗ್ಗಣ ನುಂಗಿದ ಹಾವುಗಳಂತೆ ಪೊಲೀಸರ ತೆಕ್ಕೆಯೊಳಗೆ ಬಂಧಿಯಾಗಿದ್ದರು. ಮಿಕ್ಕವರು ಪಂಚೆ ಉದುರಿಸಿಕೊಂಡು ಕಬ್ಬಿನ ತೋಟದೊಳಗೆ ಮರೆಯಾದರು. ಪೊಲೀಸರು ಚಾಪೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ನೋಟುಗಳನ್ನು ಗೋರಿ ಒಂದು ಕರ್ಚೀಫಿಗೆ ಕಟ್ಟಿಕೊಂಡು, ನಾಲ್ವರನ್ನೂ ರೋಡಿಗೆ ಒಯ್ದು ಜೀಪಿಗೆ ತುಂಬಿಕೊಂಡು ರೊಯ್ಯನೆ ಹೊರಟುಬಿಟ್ಟರು.

ಎಸ್ಸೈ ಸಾಹೇಬರು ಮೇಣದ ಬತ್ತಿ ಬೆಳಕಿನಲ್ಲಿ ಕರ್ಚೀಫನ್ನು ಬಿಚ್ಚಿ ನೋಟುಗಳನ್ನು ಚಕಚಕನೆ ಎಣಿಸಿದರು. ಬರೋಬ್ಬರಿ ಆರು ಸಾವಿರದ ಐನೂರು ಚಿಲ್ಲರೆಯಷ್ಟಿತ್ತು. ಮೂರನ್ನು ಜೇಬಿಗಿಳಿಸಿರು. ಉಳಿದದ್ದನ್ನು ಕಾರ್ಯಾಚರಣೆಗೆ ಬಂದಿದ್ದ ಮೂವರು ಪೇದೆಗಳಿಗೆ ಹಂಚಿದರು. ರಾತ್ರಿ ಹತ್ತು ಘಂಟೆಯಾಗಿತ್ತು.

ಉಟ್ಟ ಪಂಚೆಗಳನ್ನು ಹೊದ್ದು ಲಾಕಪ್ಪಿನೊಳಗೆ ಅಬ್ಬೇಪಾರಿಗಳಂತೆ ಬಿದ್ದಿದ್ದ ರಾಜ ಮತ್ತವನ ಸಂಗಡಿಗರು, ಸದ್ಯ ಪೋಲೀಸರು ದೊಣ್ಣೆ ರುಚಿ ತೋರಿಸಲಿಲ್ವಲ್ಲ ಎಂದು ಒಳಗೊಳಗೇ ಪುಳಕಗೊಳ್ಳುತ್ತಿದ್ದರು. ಸೊಳ್ಳೆಗಳು ಹೊರಗುತ್ತಿಗೆ ಪಡೆದವರಂತೆ ಬೆಂಡೆತ್ತಲು ಶುರು ಮಾಡಿದಾಗ ಅವರಿಗೆ ಒಳಮರ್ಮ ಅರಿವಾಯಿತು!

ಸೊಳ್ಳೆ ಏಟಿನಲ್ಲಿಯೂ ಇನ್ನೇನು ಕಣ್ಣು ಕಚ್ಚಿತೆನುವಷ್ಟರಲ್ಲಿ ಎಸ್ಸೈ ಸಾಹೇಬರು ಲಾಕಪ್ಪಿನ ಬೀಗ ತೆಗೆದು ನಾಲ್ವರನ್ನೂ ಎಬ್ಬಿಸಿದರು. ಎಸ್ಸೈ ಸಾಹೇಬರು ಬೆಂಡೆತ್ತುವುದು ಗ್ಯಾರಂಟಿ ಎಂದು ನಾಲ್ವರಿಗೂ ನಡುಕ ಶುರುವಾಯಿತು . ಆದರೆ ಸಾಹೇಬರ ಇರಾದೆಯೇ ಬೇರೆಯಿತ್ತು. ಅವರು ನಾಲ್ವರನ್ನೂ ರಮ್ಮಿ ಆಡಲು ಕೂರಿಸಿಕೊಂಡರು!

ರಾಜ ಎಸ್ಸೈ ಸಾಹೇಬ್ರಿಂದ ಒಂದು ಸಾವಿರ ಹೊಡೆದುಕೊಂಡ! ಅವನ ಜತೆಗಾರರೇನು ಕಮ್ಮಿ ಆಸಾಮಿಗಳಲ್ಲ. ಪೇದೆಗಳಿಂದ ಎರಡು ಸಾವಿರ ಕೆರೆದುಕೊಂಡರು! ಈ ಪ್ರಳಯಾಂತಕರು ನಮ್ಮನ್ನು ನುಣ್ಣಗೆ ಬೋಳಿಸಿಬಿಡ್ತಾರೆಂದು ಹೆದರಿದ ಎಸ್ಸೈ ಸಾಹೇಬರು ಆಟವನ್ನು ಬರಖಾಸ್ತುಗೊಳಿದರು! ಮಾರನೇ ಮುಂಜಾನೆ ನಾಲ್ವರಿಗೂ ಟೀ ಕುಡಿಸಿ ಆದರದಿಂದ ಕಳುಹಿಸಿಕೊಟ್ಟರು!

***
ರಾಜನ ನಸೀಬು ಕೆಟ್ಟಿತ್ತು. ಕೈಯಲ್ಲಿದ್ದ ಎರಡು ಸಾವಿರ ರೂಪಾಯಿ ಎರಡು ಬೀಡಿ ಸೇದುವಷ್ಟರಲ್ಲಿ ಭಸ್ಮವಾಯಿತು! ಸರ್ವೀಸಿನಲ್ಲಿ ಲೆಕ್ಕವಿಲ್ಲದಷ್ಟು ಸೋಲು-ಗೆಲುವುಗಳ ರುಚಿ ನೋಡಿದ್ದರಿಂದ, ಸೋಲಿನಿಂದ ಒಂಚೂರೂ ವಿಚಲಿತನಾಗದೆ ಕುಳಿತಿದ್ದ. ಒಂದೋ ಎರಡೋ ಸಾಲ ಕಿತ್ತರೆ ಮತ್ತೆ ಹೊಡೆದುಕೊಳ್ಳಬಹುದೆಂಬ ವಿಶ್ವಾಸದಿಂದ ನಿರುಮ್ಮಳನಾಗಿ ಕೂತಿದ್ದ.

ಅವನ ಮನಶ್ಯಾಂತಿಗೆ ಭಂಗ ಬರಲು ಹೆಚ್ಚು ಸಮಯ ಹಿಡಿಯಲಿಲ್ಲ. ಅವ್ವ ದೇವಮ್ಮ ಹಣೆ ಬಡಿದುಕೊಳ್ಳುತ್ತಾ ಚಾವಡಿಯತ್ತ ಓಡಿ ಬರುತ್ತಿದ್ದಳು. ಎಲ್ಲರ ಕತ್ತುಗಳು ಅತ್ತ ತಿರುಗಿದವು. ಇವರದ್ದು ಮಾಮೂಲಿ ಕೇಸು ಎಂದು ಎಲ್ಲಾ ಕತ್ತುಗಳು ಮತ್ತೆ ಆಟಕ್ಕೆ ಹೊರಳಿದವು.

''ನಿನ್ ಹೆಡ್ತಿ ಬೀದೀಲ್ ನಿಂತ್ಕಂಡು ನಿನ್ ಮಾನ ಹರಾಜಾಕ್ತಾ ಅವ್ಳ ನೋಡು ಬಾ ನಿನ್ ಎದ ಸೀಳವ್ನೆ'' ಸಿಟ್ಟಿನಿಂದ ಮಗನ ತೋಳನ್ನು ಹಿಡಿದೆಳೆದಳು.

''ಆ ಬಡ್ಡೀಕೂಸು ಬಾಯ್ ಬಡ್ಕಂಡ್ ಸಾಯ್ಲಿ ನಿನ್ ಪಾಡ್ಗ್ ಹೋಗವೈ'' ಎಂದು ಪಟ್ಟಾಗಿ ಕುಳಿತ.

ದೇವಮ್ಮ ಹೆಚ್ಚು ಹೊತ್ತು ನಿಂತರೆ ನಮ್ಮ ನೆಮ್ಮದಿಗೂ ಭಂಗ ಬರುತ್ತದೆಂದು ಎಚ್ಚೆತ್ತುಕೊಂಡ ಸಂಗಡಿಗರು ರಾಜನನ್ನು ನೈಸು ಮಾಡಿ ನಾಜೂಕಿನಿಂದ ಕಳುಹಿಸಿಕೊಟ್ಟರು. ಮಾದೇವಿ ಭದ್ರಕಾಳಿಯಂತೆ ತಲೆಕೆದರಿ ನಿಂತಿದ್ದಳು.

''ನನ್ ವಾಲೆವ್ ಎಲ್ಯಾ ನಿನ್ ಕೈ ಸೇದೋಗವ್ನೇ.. ದೇವ್ರ್ ಗೂಡ್ನಿಂದ ಅದ್ಯಾವ್ ಮಾಯ್ದಲ್ಲಿ ಎತ್ಕಂಡೋದ್ಯೋ ನಿನ್ ಕೈಗ್ ನಾಗ್ರಾವ್ ಕಡಿಯವ್ನೇ... ಯಾವ್ ಮುಂಡ ತಂವ್ ಗಿರಿವಿಗ್ ಮಡ್ಗಿದೈ ಬೊಗ್ಳು ನಿನ್ಗ್ ಯಮ್ದ್ ಮಾರಿ ಎರ್ಗವ್ನೇ'' ಮಣ್ಣು ತೂರುತ್ತಾ ಕಿರುಚತೊಡಗಿದಳು.

ರಾಜ ತುಟಿ ಎರಡು ಮಾಡಲಿಲ್ಲ. ತನ್ನ ಪಾಡಿಗೆ ಎತ್ತಿನ ಮೈಕೆರೆಯುತ್ತಿದ್ದ. ಇಂಥಾ ಹಲವಾರು ಸನ್ನಿವೇಶಗಳಲ್ಲಿ ಮಾದೇವಿಯ ಬೈಗುಳಗಳನ್ನು ತಿಂದು ಸಂತನ ಸಮಚಿತ್ತವನ್ನು ಮೈಗೂಡಿಸಿಕೊಂಡಿದ್ದ! ಗಂಡನ ತಣ್ಣನೆಯ ಪ್ರತಿಕ್ರಿಯೆಯನ್ನು ನೋಡಿ ಮಾದೇವಿಗೆ ತನ್ನ ಬಗ್ಗೆಯೇ ಮರುಕ ಉಕ್ಕಿತು. ತವರಿನ ನೆನಪಾಯ್ತು.

''ಬೋಳ್ ಕಿಂವಿಲಿ ತವರಿಗೋದ್ರೆ ನಾದ್ನಿ ಚುಚ್ಚಿ ಚುಚ್ಚಿ ಆಡ್ತಳೆ.. ನಮ್ ಅತ್ಗಮ್ಮನಿಗೆ ಎಷ್ಟ್ ಮಾಡುದ್ರೂ ಗಂಡ ಬಡ್ದು ಬಾಯ್ಗಾಕತಾನೆ.. ನಮ್ ಅತ್ಗಮ್ಮನಿಗೆ ಮಾಡೋದು ಒಂದೇ ಹೊಳೇಲಿ ಹುಣ್ಸೆ ಹಣ್ ತೇಯದು ಒಂದೇ ಅಂತಾ ಹಂಗ್ಸಿ ಮಾತಾಡ್ತಳೆ.. ಯಾವ್ ಮೊಕ ಹಾಕಂಡೋಗ್ಲಿ ನಾನು ಅಪ್ಪನ್ ಮನ್ಗಾ'' ಎಂದು ಒಂದೇ ಉಸುರಿನಲ್ಲಿ ಅತ್ತಳು.

ರಾಜ ಕ್ಯಾರೇ ಅನ್ನಲಿಲ್ಲ. ಮತ್ತೆ ಕೆರಳಿ ಕೆಂಡವಾದ ಮಾದೇವಿ, ''ವಾಲೆಗಳ್ನ ನಿಮ್ಮಪ್ಪ ಮಾಡ್ಸಿದ್ನ ನಿನ್ ಬಾಯಿಗ್ ಮೊಣ್ಣಾಕವ್ನೆ.. ನಿಮ್ಮಪ್ನ ಯೋಗ್ತಿಗೆ ನೆಟ್ಗ ಒಂದ್ ತಾಳಿ ಮಾಡ್ಸಕ್ಕಾಗ್ಲಿಲ್ಲ.. ಇಲ್ನೋಡು ನಿಮ್ಮಪ್ ಮಾಡ್ಸಿರೋ ತಾಳಿ ನಾಕಾಣಿ ಬಿಲ್ಲೆ ಅಗಲವೂ ಇಲ್ಲ'' ಎಂದು ತಾಳಿ ತೋರಿಸಿ ಅಬ್ಬರಿಸಿದಳು. ಹಾಗಂದದ್ದೇ ತಡ, ಅಷ್ಟೊತ್ತೂ ಸುಮ್ಮನಿದ್ದ ಅತ್ತೆ ದೇವಮ್ಮ ಸಿಡಿದು ನಿಂತಳು.

''ಸತ್ತು ಸ್ವರ್ಗ್ದಲ್ಲಿರೋ ನನ್ ಗಂಡನ್ ಸಿಂತ್ಗೋದ್ರೆ ಕೈಗ್ ಬಳ್ಕಡ್ಡಿ ತಕ್ಕತಿನಿ ಉಸಾರು.. ನನ್ ಮಗ ಸಾವ್ರಾರ್ರುಪಾಯ್ ಗೆದ್ತಂದು ನಿನ್ ಮುಂದ್ಕ ಸುರೀತಿದ್ದಾಗ ಪೆಟ್ಟಿಗ್ ತುಂಬ್ಕತಿದ್ಯಲ್ಲಮ್ಮಿ. ಆಗ ಸೀಂಯಾಗಿದ್ದವ್ನು ಇವತ್ತು ಕೆಟ್ಟವ್ನಾಗ್ಬುಟ್ಟ ಯಾನಮ್ಮಿ'' ಅಂದಳು.

ಅತ್ತೆಯ ಅನಿರೀಕ್ಷಿತ ದಾಳಿಯಿಂದ ತತ್ತರಿಸಿದ ಮಾದೇವಿಗೆ ಸಿಟ್ಟು ಮಾಯವಾಗಿ ದುಃಖ ಉಮ್ಮಳಿಸಿ ಬಂತು!

''ನಾನು ಈ ಬೂಮಿ ಮ್ಯಾಲ್ ಇರ್ಬಾರ್ದು ಇನ್ನು'' ಎಂದು ಕಣ್ಣಿಗೆ ಸೆರಗೊತ್ತಿಕೊಂಡು ಬಿರುಸಿನಿಂದ ಮನೆಯತ್ತ ನುಗ್ಗಿದಳು. ಹಬ್ಬದ ದಿನ ಸತ್ತು ಎಲ್ಲಿ ಗ್ರಾಚಾರ ಸುತ್ತಿಸಿಬಿಡ್ತಾಳೋ ಎಂದು ಅವ್ವ-ಮಗ ಇಬ್ಬರೂ ಕಂಗಾಲಾದರು. ಅಷ್ಟರಲ್ಲಿ ಪ್ರಸಾದಿ ಅತ್ತಲಿಂದ ಓಡಿಬರುತ್ತಿದ್ದ. ಐದಾರು ಹೈಕಳು ಅವನನ್ನು ಹಿಂಬಾಲಿಸಿ ಬರುತ್ತಿದ್ದವು. ಓಡಿ ಬಂದು ಖುಷಿಯಿಂದ ಅವ್ವಳನ್ನು ತಬ್ಬಿಕೊಂಡ.

ಹಿಂಬಾಲಿಸಿ ಬಂದ ಹೈಕಳು ಏದುಸಿರುಯ್ಯುತ್ತಾ, ''ಅಕೈ ಪ್ರಸಾದಿ ದೊಡ್ಡವ್ರ್ ಆಟ್ದಲ್ಲಿ ಸಾವರ್ರುಪಾಯ್ ಗೆದ್ದವ್ನೆ ಕಿತ್ಗಳಿ'' ಎಂದವು.

''ನಿಜ್ವಾಗ್ಲುವ ಕಂದಾ'' ಎಂದಳು ಖುಷಿಯಿಂದ ಕಣ್ಣೊರೆಸಿಕೊಳ್ಳುತ್ತಾ. 'ಹೂಂಕವೈ' ಎಂದು ಚೆಡ್ಡಿ ಜೇಬನ್ನು ಮುಟ್ಟಿ ತೋರಿಸಿದ ಪ್ರಸಾದಿ. ಒಂದು ಹಿಡಿ ಚಿಲ್ಲರೆ ಕಾಸನ್ನು ತಂಗಿಯ ಬೊಗಸೆಗೆ ತುಂಬಿದ. ಗಂಡ ನೈಸು ಮಾಡಿ ಆ ದುಡ್ಡನ್ನೂ ಲಪಟಾಯಿಸಿಬಿಡ್ತಾನೆ ಎಂಬ ಆತಂಕದಿಂದ ಮಗನನ್ನು ಮನೆಯತ್ತ ಎಳೆಯುತ್ತಿದ್ದಳು.

''ಎಷ್ಟೇ ಆದ್ರೂ ಅಂವ ನನ್ ಮಗ ಕಣಮ್ಮಿ'' ಎಂದು ಕೂಗುತ್ತಿದ್ದ ಇಸ್ಪೀಟ್ ರಾಜ. ಅವಳು ಕೇಳಿಸಿಕೊಳ್ಳದವಳಂತೆ ನಗುತ್ತಾ ನಾಚುತ್ತಾ ಒಳನುಗ್ಗಿದಳು. [ಗವಿಸ್ವಾಮಿ ಇನ್ನೊಂದು ಸಣ್ಣಕಥೆ]

English summary
On that day of Ugadi. A Kannada short story by Gaviswamy. King of cards Raja was dreaming to win big bouty. But, destiny has the other idea. Raja had lost everything and wife was cursing and weeping unconsolably. There was another twist to the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X