ಶುಭಸಂಕಲ್ಪ : ನಿಮ್ಮಲ್ಲಿನ 'ಹುಲಿ' ಶಕ್ತಿ ಕಂಡುಕೊಳ್ಳಿ

'ಹೌದಲ್ಲಾ!' ಎಂಬಂತೆ ಅವನು ಕೆಲಕ್ಷಣ ಅಂತರ್ಮುಖನಾದ. ನಂತರ ಅವನು 'ಒಮ್ಮೊಮ್ಮೆ ನಾವು ಏನು? ನಮ್ಮ ಕೆಪ್ಯಾಸಿಟಿ ಏನು? ಎಂಬುದೇ ಮರೆತು ಬಿಟ್ಟಿರುತ್ತೇವೆ! ಈ ಭಯದ ಕಾಣದ ಕೈಗೆ ಸಿಕ್ಕಿ ಏನೋ ವಿಪರೀತ ಕಲ್ಪಿಸಿಕೊಂಡು ಬಿಡುತ್ತೇವೆ ಆಲ್ವಾ?' ಎಂದ ಸಮಾಧಾನದಿಂದ, ಕೊಂಚ ಆತ್ಮವಿಶ್ವಾಸದಿಂದ ಮುಗಳ್ನಗುತ್ತಾ. ಮನಶಾಸ್ತ್ರದಲ್ಲಿ ಈ ರೀತಿ ಒಬ್ಬ ವ್ಯಕ್ತಿಯ ಶಕ್ತಿ ಸಾಮರ್ಥ್ಯದ ಬಗ್ಗೆ ನೆನಪಿಸಿ ಉತ್ಸಾಹ ತುಂಬುವುದಕ್ಕೆ ಧನಾತ್ಮಕ ಘಾತ (positive stroke) ಕೊಡುವುದು ಎನ್ನುತ್ತಾರೆ.
ತನ್ನ ಶಕ್ತಿ ಸಾಮರ್ಥ್ಯ ಮರೆತು ಮಂಕಾಗಿ ಕೂತ ಹನುಮಂತನಿಗೆ ಜಾಂಬುವಂತ ಉತ್ಸಾಹ ತುಂಬಿ ಸಾಗರ ಉಲ್ಲಂಘನಕೆ, ಸೀತಾ ಮಾತೆಯನ್ನು ಹುಡುಕಿ ತರುವುದಕ್ಕೆ ಉತ್ತೇಜಿಸಲಿಲ್ಲವೇ? ಒಂದು ರೀತಿ ನಾವೆಲ್ಲಾ ನಮ್ಮ ಶಕ್ತಿ ಸಾಮರ್ಥ್ಯ ಮರೆತ ಅಂಜಿನೆಯರೇ, ಅಲ್ಲವೇ? ಹಾಗೆ ಗೆಳೆಯನ ಹತ್ತಿರ ಮಾತಾಡುತ್ತಿರುವಾಗ ನನಗೆ 'ಕುರಿಯಂತೆ ಬದುಕಿದ ಹುಲಿ'ಯ ಕತೆ ನೆನಪಾಯಿತು. ಅವನೊಂದಿಗೆ ಹಂಚಿಕೊಂಡೆ.
***
ಕುರುಬನೊಬ್ಬ ಕಾಡಿನಲ್ಲಿ ನಡೆದುಕೊಂಡು ಬರುತ್ತಿರುವಾಗ, ತಂದೆ-ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿ ರೋದಿಸುತ್ತಿದ್ದ ಪುಟ್ಟ ಹುಲಿಮರಿಯನ್ನು ಕಂಡ. ಪಾಪವೆನಿಸಿ, ಕರುಣೆಯಿಂದ ಪುಟ್ಟ ಹುಲಿಮರಿಯನ್ನು ತಂದು ಜೋಪಾನ ಮಾಡಿದ. ಬೇರೆ ಏನು ತೋಚಿಸದೆ ತನ್ನ ಕುರಿಗಳೊಂದಿಗೆ ಅದನ್ನು ಬೆಳಸಿದ. ಅನುಕರಣೆಯಿಂದ ಕಲಿಯುವ ವಯಸ್ಸು ಆ ಹುಲಿಮರಿಯದು. ಹುಲಿಮರಿಯ ಸುತ್ತಮುತ್ತಾ ಎಲ್ಲೆಲ್ಲಿಯೂ ಕುರಿಗಳ ಮಂದೆ. ನೋಡಿ... ನೋಡಿ... ಹುಲಿಮರಿಯು ಕೂಡ ಕುರಿಮರಿಯಂತೆ ನಡತೆಯನ್ನು, ವರ್ತಿಸುವುದನ್ನು ರೂಡಿಸಿಕೊಂಡಿತು. ಕಾಡಿನಲ್ಲಿ ಕುರಿಗಳೊಂದಿಗೆ ಹುಲ್ಲು ಮೇಯುವುದಕ್ಕೆ ಹೋದಾಗ, ತೋಳಗಳೋ, ಕತ್ತೆ ಕಿರುಬಗಳೋ, ಚಿರುತೆಯೋ ದಾಳಿ ಮಾಡಿದಾಗ, ಬೆಳೆದ ಈ ಹುಲಿಯು ಕೂಡ ಕುರಿಯಂತೆ ಗಡಗಡ ಹೆದರಿ ಓಡುತ್ತಿತ್ತು.
ಒಮ್ಮೆ ವಿಷಯ ಗೊತ್ತಾದ ನಂತರ ತೋಳಗಳಿಗೆ, ಕತ್ತೆ ಕಿರುಬಗಳಿಗೆ ಇತರ ಕಾಡು ಪ್ರಾಣಿಗಳಿಗೆ ತಮಾಷೆಯ ವಿಷಯವಾಗಿ ಹೋಯಿತು. ಹೀಗೆ ಸುತ್ತಮುತ್ತಲಿನಲ್ಲಿ ಕುರಿಯಂತೆ ವರ್ತಿಸುವ ಹುಲಿ ಎಂಬ ಅಪಖ್ಯಾತಿ ಪಡೆಯಿತು. ಪಾಪ ಅದಕ್ಕೆ ಬೇರೆಯವರು ತನ್ನನ್ನು ಯಾಕೆ ಹೀಯಾಳಿಸಿ ನಗುತ್ತಾರೆ ಎಂಬುದು ಕೂಡ ಗೊತ್ತಾಗುತ್ತಿರಲಿಲ್ಲ. ಒಂದು ರೀತಿ ಕೀಳರಿಮೆಯಲ್ಲಿ ಬಳಲಿ ಕುಗ್ಗಿಹೋಯಿತು. ಸುತ್ತಮುತ್ತಲಿದ್ದ ಕುರಿಗಳಿಗೆ ಹುಲಿಗೆ ತಿಳಿವಳಿಕೆ ಹೇಳುವ, ಅದರ ನಿಜ ಸ್ವರೂಪದ ಬಗ್ಗೆ, ಶಕ್ತಿ ಸಾಮರ್ಥ್ಯದ ಬಗ್ಗೆ ತಿಳಿಸಿ ಹೇಳುವ ಬುದ್ಧಿ ಸಾಮರ್ಥ್ಯಗಳಿರಲಿಲ್ಲ.
ಒಮ್ಮೆ ಕಾಡಲ್ಲಿ ಎಲ್ಲಾ ಕುರಿಗಳೊಂದಿಗೆ ಹುಲ್ಲು ಮೇಯುತ್ತಿರುವಾಗ, ಕಾಡಿಗೆ ಬಂದ ಹೊಸ ಹುಲಿಯೊಂದು ಕುರಿಮಂದೆ ಮೇಲೆ ದಾಳಿ ಮಾಡಿತು. ದಾಳಿ ಮಾಡಿದ ಹುಲಿಗೆ ಕುರಿಮಂದೆಯ ಮಧ್ಯೆ ಇನ್ನೊಂದು ಹುಲಿ ಕಂಡು ಗಾಬರಿ ಮತ್ತು ಆಶ್ಚರ್ಯ. ಆದರೆ ಈ ಹುಲಿ ಗಡಗಡ ನಡಗುತ್ತಾ ಕುರಿಯಂತೆ ವರ್ತಿಸುತ್ತಿತ್ತು. ಕುರಿ ಬೇಟೆಯನು ಬಿಟ್ಟು ಈ ಹುಲಿಯನ್ನು ಕಾಡಿನೊಳಗೆ ಎಳೆದುಕೊಂಡು ಹೋಯಿತು. ಈ ಕುರಿಯಂತೆ ವರ್ತಿಸುವ ಹುಲಿಯ ಕಂಡು ಅದರ ಹಸಿವೆಯು ಮರೆತು ಹೋಗಿತ್ತು. ಈ ಹುಲಿಯ ನಡತೆ ಹುಲಿ ಕುಲಕ್ಕೆ ಕಳಂಕವೆಂಬತ್ತಿತ್ತು. ನಂತರ ಸಮಾಧಾನದಿಂದ ವಿಚಾರಿಸಿದಾಗ ಅದರ ಕತೆ, ಸಮಸ್ಯೆ ಮತ್ತು ಅದರ ಕೀಳರಿಮೆ ಅರ್ಥವಾಯಿತು. ನಂತರ ಕುರಿಯಂತೆ ವರ್ತಿಸುವ ಹುಲಿಯನ್ನು ಹತ್ತಿರ ಕೊಳದ ಬಳಿ ಕರೆದುಕೊಂಡು ಹೋಗಿ ಅದರ ಮುಖ ದರ್ಶನ ಮಾಡಿಸಿ, ಅದರ ನಿಜ ಸ್ವರೂಪ ತಿಳಿಸಿತು. ನಂತರ ಗುರು ಸ್ಥಾನದಲ್ಲಿ ನಿಂತು ಹುಲಿಯ ನಡತೆ, ಶಕ್ತಿ ಸಾಮರ್ಥ್ಯ ರೂಡಿಸಿಕೊಳ್ಳುವ ಬಗೆ ಹೇಳಿಕೊಟ್ಟಿತು.
ನಂತರ ಆ ಹುಲಿಯು ಕುರಿಯ ವರ್ತನೆ ಬಿಟ್ಟು ಹುಲಿಯಂತೆ ಧೈರ್ಯ, ಸಾಹಸದಿಂದ ತಲೆಯೆತ್ತಿ ಬದುಕಿತು. ನಂತರದ ದಿನಗಳಲ್ಲಿ ಅದರ ಒಂದು ಘರ್ಜನೆಗೆ ತೋಳ, ಕತ್ತೆಕಿರುಬ, ಚಿರತೆ ಮತ್ತು ಆಡಿಕೊಂಡು ನಗುತ್ತಿದ್ದ ಎಲ್ಲಾ ಕಾಡು ಪ್ರಾಣಿಗಳು ಓಡಿ ಹೋಗುತ್ತಿದ್ದವು. ಗುರು ರೂಪದಲ್ಲಿ ಆ ಹೊಸ ಹುಲಿ ಕಾಣಿಸಿಕೊಳ್ಳದಿದ್ದರೆ, ನಮ್ಮ ಹುಲಿಗೆ ತನ್ನ ನಿಜ ಸ್ವರೂಪದ ಅರಿವೇ ಮೂಡುತ್ತಿರಲಿಲ್ಲ.
***
ನಮ್ಮ ಶಕ್ತಿ ಸಾಮರ್ಥ್ಯದ ಬಗ್ಗೆ ತಿಳಿವಳಿಕೆ ಕೊಡುವವರು, ನಮ್ಮ ಅಂತಃಶಕ್ತಿಯ ಬಗ್ಗೆ ತಿಳಿಸಿ ಕೊಡುವವರು ನಮ್ಮ ಗುರುಗಳಲ್ಲವೇ? ಅದನ್ನು ಪೋಷಿಯುವವರು ನಮ್ಮ ಹಿತೈಷಿಗಳಲ್ಲವೇ? ಬನ್ನಿ ಈ 'ಕುರಿಮಂದೆ'ಯ ಭಯದ, ಅನುಕರಣೆಯ ನಡವಳಿಕೆ ತ್ಯಜಿಸಿ 'ಹುಲಿ'ಯಂತೆ ನಮ್ಮ ನಿಜ ಶಕ್ತಿ ಸಾಮರ್ಥ್ಯದೊಂದಿಗೆ ಬದುಕುವ 'ಶುಭಸಂಕಲ್ಪ' ಮಾಡೋಣ. [ಲೇಖಕರ ಈಮೇಲ್ : [email protected]]
ಶುಭಸಂಕಲ್ಪ - ನೋವ್ವೆ ಅನಾರೋಗ್ಯ ಸಂತೋಷವೇ ಆರೋಗ್ಯ, ಶುಭಸಂಕಲ್ಪದೊಂದಿಗೆ ಗುಣಮುಖರಾಗುವುದೇ ಭಾಗ್ಯ...!












Click it and Unblock the Notifications