ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರುಣಾಮಯಿ ದೇವರೆ, ಹ್ಯಾಪಿ ನ್ಯೂ ಇಯರ್!

By * ವಿದ್ಯಾಶಂಕರ ಹರಪನಹಳ್ಳಿ
|
Google Oneindia Kannada News

Vidyashankar Harapanahalli
ಡಿಸೆಂಬರ್ ಮೂರನೇ ವಾರದ ದಿನಗಳವು. ಪೋಸ್ಟ್ ಆಫೀಸ್‌ನಲ್ಲಿ ಕ್ರಿಸ್‌ಮಸ್‌ ಮತ್ತು ಹೊಸ ವರುಷದ ಶುಭಾಶಯ ಪತ್ರಗಳಿಂದ ಮತ್ತು ಉಡುಗೊರೆಗಳಿಂದ ತುಂಬಿಹೋಗಿತ್ತು. ಎಲ್ಲಾ ಪತ್ರಗಳನ್ನ ವಿಂಗಡನೆ ಮಾಡುವಾಗ ಗೋಪಾಲನಿಗೆ ಒಂದು ವಿಚಿತ್ರ ಪತ್ರ ಸಿಕ್ಕಿತ್ತು. ಚಿಕ್ಕ ಎನ್‌ವಲಪ್‌. ವಿಳಾಸ ಮಾತ್ರ "ದೇವರು". ಮತ್ತೇನು ವಿವರಗಳಿರಲಿಲ್ಲ. ಗೋಪಾಲನಿಗೆ ಕುತೂಹಲ ತಡೆಯಲಾಗಲಿಲ್ಲ. ಪೋಸ್ಟ್ ಆಫೀಸ್‌ನ ನಿಯಮ ಮೀರಿ ಪತ್ರ ಒಡೆದು ಓದೇ ಬಿಟ್ಟ.

ಅಕ್ಷರಗಳನ್ನು ನೋಡಿದರೆ ನಡುಗುವ ಕೈಯಲ್ಲಿ ಬರೆದಿರಬೇಕು ಅನಿಸಿತು, ಪತ್ರ ಹೀಗಿತ್ತು:

ಪ್ರೀತಿಯ ದೇವರೆ!,

ಪ್ರತಿ ಹೊಸ ವರುಷಕ್ಕೆ ನಾವು ನಾಲ್ಕು ಜನ ಸ್ನೇಹಿತರು ಸೇರಿ ಚಿಕ್ಕದಾಗಿ ಸೆಲೆಬ್ರೇಟ್ ಮಾಡೋದು ವಾಡಿಕೆ. ಸೆಲೆಬ್ರೇಶನ್ ಅಂದ್ರೆ ಜಾಸ್ತಿ ಏನಿಲ್ಲ... ಖುಷಿಗೆ ಎರಡು ಪೆಗ್ ಗುಂಡು, ಒಂದು ಬೊಗಸೆ ಕಡಲೇಬೀಜ ಕೊನೆಗೆ ಒಂದು ಹಿಡಿ ಮೊಸರನ್ನ ಆಷ್ಟೇ! ಜೊತೆಗೆ ಸ್ನೇಹಿತರ ಜೊತೆ ಧಾರಾಕಾರ ಹರಟೆ. ಪ್ರತಿ ವರುಷ ಒಬ್ಬೊಬ್ಬರದು ಆತಿಥ್ಯ. ಈ ವರುಷ ನನ್ನ ಸರತಿ.

ಆದ್ರೇ ಚಿಕ್ಕ ಫಜೀತಿ ಆಗಿಬಿಟ್ಟಿದೆ ಕಣಯ್ಯ! ಮೊನ್ನೆ ಬಿಎಂಟಿಸಿ ಬಸ್‌ನಲ್ಲಿ ಬರುವಾಗ ಪಿಕ್‌ಪಾಕೆಟ್ ಆಗಿಬಿಟ್ತು. ಹೊಸ ವರುಷ ಆಚರಣೆಗೆ ಅಂತ ಇಟ್ಟುಕೊಂಡಿದ್ದ ಸಾವಿರ ರೂಪಾಯಿ ಯಾರೋ ಪಾಪಿ ಹೊಡ್ದ್‌ಬಿಟ್ಟ. ನನಗೆ ಮೊನ್ನೆ ದೀಪಾವಳಿಗೆ ಎಪ್ಪತ್ತಾಯಿತು, ಬ್ರಹ್ಮಚಾರಿ ಬೇರೇ, ಮಕ್ಕಳು ಮರಿ ಅಂತ ಯಾರೂ ಇಲ್ಲ, ಬಂಧು ಬಳಗ ಎಲ್ಲ ದೂರ. ಇರೊ ನಾಲ್ಕು ಜನ ಸ್ನೇಹಿತರ ಹತ್ತಿರ ಕೇಳೋಕೆ ಸಂಕೋಚ!

ಜೀವನದಲ್ಲಿ ಮೊದಲಸಲ ಅನಾಥನಾದೆ ಅನಿಸಿ ಮನಸಿಗೆ ಪಿಚ್ಚ್ ಅನಿಸಿಬಿಟ್ತು. ಕಣ್ಣೀರ್ ಹಾಕಿಬಿಟ್ಟೆ! ಕೊನೆಗೆ ನಿನ್ನಬಿಟ್ರೆ ಇನ್ಯಾರೂ ಅನಿಸಿ ಈ ಪತ್ರ ಬರಿತಿದೀನಿ... ನೀನೇನಾದರು ಸಹಾಯ ಮಾಡಕ್ಕಾಗುತ್ತಾ ಅಂತ? ಸ್ವಲ್ಪ ಅಮೌಂಟ್ ಅಡ್ಜಸ್ಟ್ ಮಾಡಕಾಗುತ್ತಾ? ಮುಂದಿನ ತಿಂಗಳು ಪೆನ್‌ಷನ್ ಬರೋದು ಖಂಡಿತ, ಹಿಂದ್‌ ತಿರ್‌ಗ್‌ಸ್ತೀನಿ.

ಇಂತಿ,

ನಾರಾಯಣ ಸ್ವಾಮಿ

***

ಗೋಪಾಲ ಪತ್ರ ಓದಿ ಕಣ್ಣೀರ್ ಒರೆಸಿಕೊಂಡ. ಎಲ್ಲಾ ಸಹೋದ್ಯೋಗಿಗಳಿಗೆ ತೋರಿಸಿದ. ಎಲ್ಲರಿಗೂ ಗತಿಸಿದ ಅವರ ತಂದೆನೋ, ತಾತಾನೋ ನೆನಪಾದರು. ಆದರೆ ಅವರೇನು ಬಿಬಿಎಂಪಿ ನೌಕರರೇ? ಎಲ್ಲಾ ಬಡ ಪೋಸ್ಟ್ ಆಫೀಸ್‌ನ ನೌಕರರು, ಅದರೆ ಹೃದಯವಂತರು. ಮನಸ್ಪೂರ್ತಿಯಿಂದ ಜೇಬಲ್ಲಿದ್ದ ಬಿಡಿಗಾಸು, ಪುಡಿಗಾಸು ಕೊಟ್ಟರು. ಹನಿಹನಿ ಸೇರಿ ಹಳ್ಳ ಎಂಬಂತೆ ಒಟ್ಟು ಒಂಬೈನೂರರ ನಲವತ್ತೈದು ರೂಪಾಯಿ ಸಂಗ್ರಹವಾಯಿತು.

ಒಂಬೈನೂರ ನಲವತ್ತೈದು ರೂಪಾಯಿಯನ್ನು ಒಂದು ಎನ್‌ವಲಪ್‌ಗೆ ಹಾಕಿ ಹಿರಿಯ ನಾಗರಿಕ ನಾರಾಯಣ ಸ್ವಾಮಿಗೆ ಅತ್ಯಂತ ಪ್ರೀತಿಯಿಂದ ಕಳುಹಿಸಿ ಕೊಟ್ಟರು. ಕೆಲ ದಿನದ ನಂತರ ಆ ವಿಷಯ ಮರೆತೇ ಹೋದರು.

ಹೊಸ ವರುಷದ ಮೊದಲನೇ ವಾರದಲ್ಲಿ ಅದೇ ಪೋಸ್ಟ್ ಆಫೀಸ್‌ಗೆ ಮತ್ತೊಂದು ಪತ್ರ ದೇವರ ಅಡ್ರೆಸ್‌ಗೆ ಬಂತು. ಗೋಪಾಲ ಕುತೂಹಲ ತಾಳಲಾರದೆ ಪತ್ರ ಒಡೆದು ನೋಡಿದ. ಆದೇ ನಡುಗುವ ಕೈಯಲ್ಲಿ ಬರೆದ ಅಕ್ಷರಗಳು ಮತ್ತು ಅದೇ ನಾರಾಯಣ ಸ್ವಾಮಿಗಳು!

ಪತ್ರ ಹೀಗಿತ್ತು:

ಕರುಣಾಮಯಿ ದೇವರೆ!

ಹ್ಯಾಪಿ ನ್ಯೂ ಇಯರ್!

ನಿನ್ನ ಕರುಣೆ ಅಪಾರ. ನೀನು ಕಳುಹಿಸಿದ ಹಣದಿಂದ ಹೊಸ ವರುಷದ ಆಚರಣೆ ಚೆನ್ನಾಗಿ ಆಯಿತು.

ಆದ್ರೆ ಪೋಸ್ಟ್ ಆಫೀಸ್‌ನ ಪಾಪಿಗಳು ಐವತ್ತೈದು ರೂಪಾಯಿ ನುಂಗಿ ಒಂಬೈನೂರ ನಲವತ್ತೈದು ರೂಪಾಯಿಯನ್ನು ಮಾತ್ರ ನನಗೆ ತಲುಪಿಸಿದರು!

ಇಂತಿ,

ನಾರಾಯಣ ಸ್ವಾಮಿ

(ಇಂಟರೆನೆಟ್‌ನಲ್ಲಿ ಓದಿದ ಅನಾಮಧೇಯ ಬರೆದ ಇಂಗ್ಲಿಷ್ ಕತೆಯ ಸ್ಪೂರ್ತಿಯಿಂದ ಬರೆದ ಕತೆ. ಪೊಸ್ಟ್ ಆಫೀಸ್‌ನ ನೌಕರರ ಮೇಲೆ ಅತ್ಯಂತ ಗೌರವದಿಂದ)

English summary
A letter to the God : Kannada Short Story by Vidyashankar Harapanahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X