ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆರೆಯಂಗಳದ ನವಾಬ (ಭಾಗ 1)

By Super
|
Google Oneindia Kannada News

Shi Ju Pasha, Shivamogga
ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಒಂದು ಮೂಲೆಮಗ್ಗುಲಿನ ಬದುಕನ್ನು ಅನಾವರಣಗೊಳಿಸುವ, ತನು ಮನ ಮಿಡಿಯುವ ಕಥೆಯನ್ನು ನಿಮ್ಮ ವಾರಾಂತ್ಯದ ಓದಿಗೆ ಒಪ್ಪಿಸುತ್ತಿದ್ದೇವೆ. ಜತೆಗೆ, ನಮ್ಮ ವೆಬ್ ಪುಟಗಳ ಪ್ರಿಂಟ್ ಔಟ್ ಪಡೆಯುವ ಸೌಲಭ್ಯವನ್ನು ಈಗ ಮತ್ತಷ್ಟು ಸರಳಗೊಳಿಸಲಾಗಿದ್ದು ಪ್ರಿಟ್ ತೆಗೆದುಕೊಳ್ಳುವವರು ತಮ್ಮ ಫೀಡ್ ಬ್ಯಾಕ್ ಕೊಡಲು ಮರೆಯಬಾರದಾಗಿ ಕೋರಿಕೆ -ಸಂಪಾದಕ.

* ಶಿ.ಜು.ಪಾಶ, ಶಿವಮೊಗ್ಗ

ನವಾಬನ ಖತ್ನಾದ ಸುದ್ದಿ ಕೇಳಿ ಇಡೀ ಕೆರೆಯಂಗಳವೇ ಮುಸುಮುಸು ನಗತೊಡಗಿತ್ತು. ಬುರ್ಖಾದೊಳಗಿನ ಹಲ್ಲುಗಳು ಮೊದಲ ಬಾರಿಗೆ ಮಿಂಚಿದಂತೆ, ಕೆರೆಯಂಗಳದ ತುಂಬೆಲ್ಲ ಗುಸುಗುಸು ಮಾತುಗಳು ಕೇಳತೊಡಗಿದ್ದವು. ಗಧೇಕಿ ಉಮ್ಮರ್ ಆದರೂ ಖತ್ನಾ ಆಗಿರಲಿಲ್ಲವೆಂದು ಮೊದಲ ಬಾರಿಗೆ ತಿಳಿದ, ಆಗಷ್ಟೇ ಛಾತಿ ಬೆಳೆದ ಹುಡುಗಿಯರಲ್ಲಿ ವಯೋಸಹಜ ತುಂಟಾಟ ಶುರುಗೊಂಡಿತ್ತು. ಬೆಳೆದ ದೇಹಕ್ಕೆ ಖತ್ನಾ ಮಾಡಿಸುವುದಾದ್ರೂ ಹೇಗೆ? ಎಂಬ ಸವಾಲಿನೊಂದಿಗೆ ಶುರುಗೊಳ್ಳುತ್ತಿದ್ದ ಅವರ ತುಂಟ ಮಾತಿನ ಕುತೂಹಲ, ಖತ್ನಾ ಮಾಡಿಸಿಕೊಂಡ ನವಾಬ ಹೇಗೆ ಕಂಡಾನು, ಎಂಬ ಕುತೂಹಲದೊಂದಿಗೇ ಅಖೈರು ಕಾಣುತ್ತಿತ್ತು.

ನವಾಬನ ಅಮ್ಮಿ ನಯೀಮಾ ತನ್ನ ಮಗನಿಗೆ ಖತ್ನಾ ಮಾಡಿಸುವ ಹಟ ತೊಟ್ಟಿದ್ದೇ ಕರೆಯಂಗಳದ ತುಂಬೆಲ್ಲ ಸುದ್ದಿ ಹರಡತೊಡಗಿತು. ಅವಳ ಹಟಕ್ಕೂ ಒಂದು ಕಾರಣವಿತ್ತು. ನವಾಬನಿಗೀಗಾಗಲೇ ಶಾದಿಯ ವಯಸ್ಸು. ಆದರೂ ಅವನ ಖತ್ನಾ ಆಗಿರಲಿಲ್ಲ. ಯಾಕೋ ನವಾಬನಿಗೆ ಆ ಅದೃಷ್ಟವೇ ಕೂಡಿಬಂದಿರಲಿಲ್ಲ. ಪ್ರತಿಸಾಲಿನ ಬೇಸಿಗೆಯಲ್ಲಿಯೂ ನವಾಬನ ಖತ್ನಾದ ಕನಸು ಕಾಣುತ್ತಿದ್ದ ನಯೀಮಾ ಅಂತಹ ಕನಸು ಕಾಣುವುದರಲ್ಲಿಯೇ ಇಪ್ಪನ್ನಾಲ್ಕು ಸಾಲುಗಳನ್ನು ಕಳೆದುಬಿಟ್ಟಿದ್ದಳು. ಈಗ ನವಾಬನಿಗೆ ಇಪ್ಪತ್ತೈದು ಸಾಲು. ಈಗಲೂ ಖತ್ನಾ ಮಾಡಿಸದಿದ್ದರೆ ಛೀಮಾರಿ ಹಾಕುತ್ತಿರುವ ಜನ ಮುಂದೆ ನಡುಬೀದಿಯಲ್ಲಿ ಉಗಿಯಲೂ ಆರಂಭಿಸಿದರೆ ಆಶ್ಚರ್ಯವಲ್ಲ. ಯಾವ ಗಂಡುಮಕ್ಕಳ ಅಮ್ಮಿಗಳೂ ಇಷ್ಟೊಂದು ತಡವಾಗಿ ಖತ್ನಾ ಮಾಡಿಸಿದ ಉದಾಹರಣೆ ಆ ಕೆರೆಯಂಗಳದ ಕೇರಿಯಲ್ಲಿಯೇ ಸಿಗುತ್ತಿರಲಿಲ್ಲ. ಪ್ರತಿ ವರ್ಷವೂ ನವಾಬನಿಗೆ ಖತ್ನಾ ಮಾಡಿಸಬೇಕೆಂದು ಪ್ರಯತ್ನಿಸಿದಾಗಲೆಲ್ಲಾ ಒಂದಲ್ಲ ಒಂದು ತಾಪತ್ರಯಗಳು ಎದುರಾಗಿಬಿಡುತ್ತಿದ್ದವು. ನಯೀಮಾ ಕಂಗಾಲಾಗಿ ಮುಂದಿನ ಬೇಸಿಗೆಗೆ ಮಾಡಿಸಿಯೇಬಿಡಬೇಕು ಎಂದು ಕೊಳ್ಳುತ್ತಿದ್ದಳು. ಅದ್ಯಾವುದೂ ಸಾಧ್ಯವಾಗದೇ ಆಸ್ಮಾನನ್ನು ನೋಡುತ್ತಾ ಎದುರಾದ ಬೇಸಿಗೆಯನ್ನು ದೂಡಿ ಮತ್ತೊಂದು ಬೇಸಿಗೆಯ ಕನಸಿಗೆ ಸಿದ್ಧಗೊಳ್ಳುತ್ತಿದ್ದಳು.

ತನ್ನಮ್ಮಿ ಯಾವಾಗಲೂ ಹೀಗೇ ಎಂದು ಕೆಲವೊಮ್ಮೆ ಮೌನ ವಹಿಸಿಬಿಡುತ್ತಿದ್ದ ನವಾಬನಿಗೆ ನಿಜವಾಗಲೂ ಚಿಂತೆ ಶುರುವಾಗಿದ್ದು ಗೆಳೆಯರ ಜೊತೆ ಬೆರೆತು ಜಗತ್ತಿನ ಹುಡುಗಿಯರ ಬಗ್ಗೆ ಕತೆ ಕಟ್ಟತೊಡಗುತ್ತಿದ್ದ ಹದಿನೆಂಟರ ವಯಸ್ಸಿನಲ್ಲಿ ರಮ್ಜಾನಿನ ರೋಜೆಗಳನ್ನು (ಉಪವಾಸ) ದಿನಕ್ಕೆ ಐದು ನಮಾಜುಗಳನ್ನು ಆಚರಣೆಗೆ ತರುತ್ತಲೇ ಬೆಳೆಯ ತೊಡಗಿದ್ದ ನವಾಬ ಹೋಗುತ್ತಿದ್ದುದು ಕನ್ನಡ ಶಾಲೆಯೊಂದಕ್ಕೆ, ಆದರೂ ಖುರಾನಿನ ಪ್ರತಿಶಬ್ದವೂ ಇವನ ಬಾಯಿಯಲ್ಲಿ ಉಚ್ಛಾರಣೆ ಗಾಗಿ ಸಾಲುಗಟ್ಟಿ ನಿಂತಂತೆ ಭಾಸವಾಗುತ್ತಿತ್ತು. ಕನ್ನಡ ಶಾಲೆಯಲ್ಲಿ ಕೇಳಿಬಂದರೂ ಆತನ ಜೊತೆಯ ಹುಡುಗರೇ ಅದನ್ನು ನಿರಾಕರಿಸ ತೊಡಗುತ್ತಿದ್ದರು. 'ನವಾಬನಿಗೆ ರಾಮಾಯಣಾನೂ ಗೊತ್ತು, ಮಹಾಭಾರತಾನೂ ಗೊತ್ತು" ಎಂದು ನವಾಬನ ಪರವಾಗಿಯೇ ಹಿಂದೂ ಹುಡುಗರು ಹಣೆಗೆ ಉದ್ದದ ನಾಮ ಎಳೆದು ತನಿಖೆಗೆ ಬಂದವರಿಗೆ ಹೇಳಿಕಳಿಸುತ್ತಿದ್ದರು.

ಕನ್ನಡ ಶಾಲೆಗೆ ನವಾಬನೆಂದರೆ ಒಂದು ರೀತಿಯಲ್ಲಿ ಅವನು ನವಾಬನೇ ಆಗಿಬಿಟ್ಟಿದ್ದ. ಅರಬ್ಬಿ, ಉರ್ದುವಿನಂತೆ ನವಾಬ ಕನ್ನಡವನ್ನು ಸ್ಪಷ್ಪವಾಗಿ ಉಚ್ಛರಿಸುತ್ತಿದ್ದ, ಬರೆಯುತ್ತಿದ್ದ, ಹಿಂದೂ ಗೆಳೆಯರು ಎಷ್ಟೋ ನೋಟ್ಸುಗಳನ್ನು ನವಾಬನಿಂದಲೇ ಬರೆಸಿಕೊಳ್ಳುತ್ತಿದ್ದುದರಿಂದ ಎಷ್ಟೋ ಹಬ್ಬಗಳಲ್ಲಿ ನವಾಬನೇ ಮುಖ್ಯ ಅತಿಥಿಯಾಗಿರುತ್ತಿದ್ದ, ಹೀಗೇ ಕೆಲವೊಮ್ಮೆ ಗೆಳೆಯರೆಲ್ಲ ಸೇರಿಕೊಂಡಾಗ ಗೆಳೆಯರು ಕುತೂಹಲದಿಂದ ಕೇಳುತ್ತಿದ್ದ ಒಂದೇ ಒಂದು ಪ್ರಶ್ನೆಗೆ ಮಾತ್ರ ನವಾಬ ತಲೆತಗ್ಗಿಸಿ ನಿಂತು ಬಿಡುತ್ತಿದ್ದ. “ಖತ್ನಾ ಮಾಡೋವಾಗ ನೋವಾಗ್ತದೆನೋ? ನಿಂದು ಖತ್ನಾ ಮಾಡೋವಾಗನೂ ನೋವಾಗಿತ್ತೇನೋ?" ಭಯಮಿಶ್ರಿತ ಕುತೂಹಲದ ಪ್ರಶ್ನೆ ಯಾವಾಗಲೂ ನವಾಬನನ್ನು ಚುಚ್ಚಿ ಹಾಕುತ್ತಿತ್ತು. “ನಂಗೆ ನೆನ್ಪಿಲ್ರೋ" ಎಂದಷ್ಟೇ ಹೇಳಿ ನವಾಬ ಆ ಗುಂಪಿನಿಂದ ದೂರವಾಗುತ್ತಿದ್ದ.

ಗೆಳೆಯರಿಂದ ದೂರವಾಗಿ ಸೀದಾ ಕೆರೆಯಂಗಳದ ಕೇರಿಗೆ ಊದಿಸಿಕೊಂಡ ಮುಖದೊಂದಿಗೆ ಬರುತ್ತಿದ್ದ ನವಾಬ ಝೋಪಡಿಗೆ ನುಗ್ಗಿ ತನ್ನಮ್ಮಿಯ ಸೆರಗು ಹಿಡಿದು ಕಣ್ಣೀರು ಹಾಕುತ್ತಿದ್ದ. ತಮ್ಮ ಭೈಯ್ಯಾ ಅಳುತ್ತಿರುವುದು ನೋಡಿ ನವಾಬನ ಸುತ್ತುವರಿದ ತಂಗಿಯರು ಮೌನ ವಾಗಿಯೇ ತಮ್ಮ ಭೈಯ್ಯಾನ ಮುಖ ನೋಡಿ, ಏನಾಯ್ತೆಂದು ಕಣ್ಣ ಲ್ಲಿಯೇ ಪ್ರಶ್ನಿಸಿದಾಗ ನವಾಬ ಮತ್ತಷ್ಟು ಕಂಗಾಲಾಗಿ ಅಮ್ಮಿಯ ಸೆರಗಿ ನಿಂದಲೇ ಕಣ್ಣು ತಿಕ್ಕಿ ಅಂಗಳಕ್ಕೆ ಹೋಗಿ ನಿಂತುಬಿಡುತ್ತಿದ್ದ. ಒಂದೊಂದು ಸಾಲಿನ ವ್ಯತ್ಯಾಸದೊಳಗೆಯೇ ಹುಟ್ಟಿದ ರೇಷ್ಮಾ ಮತ್ತು ನೂರಿಯರಿಬ್ಬರಿಗೂ ಗೊತ್ತು. ತಮ್ಮ ಭೈಯ್ಯಾ ಯಾಕೆ ಅಳುತ್ತಿದ್ದಾನೆ ಎಂಬುದು. ಆದರೂ ಕಣ್ಣಲ್ಲಿಯೇ ಇವರು ಪ್ರಶ್ನಿಸುವುದು, ನವಾಬ ಅಂಗಳಕ್ಕೆ ಹೋಗಿ ನಿಲ್ಲುವುದು ಮಾಮೂಲಿನಂತೆ ಆಗಿತ್ತು. ನವಾಬ ಹಾಗೆ ಅತ್ತಾಗಲೆಲ್ಲಾ ಆ ಝೋಪಡಿಯ ತುಂಬೆಲ್ಲ ಮೌನ ಆವರಿಸುತ್ತಿತ್ತು. ಆ ಮೌನ ದಲ್ಲಿ 'ನವಾಬನ ಖತ್ನಾ ಆಗಲಿಲ್ಲ"ವೆಂಬ ಮಾತು ಝೋಪಡಿಯಲ್ಲಿದ್ದ ಎಲ್ಲರಿಗೂ ಸ್ಪಷ್ಟವಾಗಿಯೇ ಕೇಳಿಸುತ್ತಿತ್ತು. ಅಂಥದೊಂದು ಕೀರಲು ಸದ್ದು ಎಷ್ಟೋ ವರ್ಷ ಹಾಗೆಯೇ ಅಲ್ಲಿ ಬೆಳೆಯುತೊಡಗಿತ್ತು.

ಈ ನಡುವೆ ನವಾಬ ಚಿಗುರು ಮೀಸೆಯ ಹುಡುಗನಾಗಿ ರಂಗು ರಂಗಾಗಿ ದುಷ್ಟಪುಷ್ಟವಾಗಿ ಬೆಳೆಯತೊಡಗಿದ್ದ. ಕನ್ನಡ ಶಾಲೆಯಿಂದ ಕಾಲೇಜು ಮೆಟ್ಟಿಲು ಹತ್ತಬೇಕಿದ್ದವನಿಗೆ 'ತನ್ನ ಖತ್ನಾ ಆಗಲಿಲ್ಲ"ವೆಂಬ ಕೊರಗೇ ದಾರಿ ಮಧ್ಯದಲ್ಲಿ ಎಡವಿ ಬೀಳಿಸಿದಂತಾಗಿತ್ತು. ನವಾಬ ಬರೆದುಕೊಟ್ಟ ನೋಟ್ಸುಗಳಿಂದ ಗೆಳೆಯರು ಪಾಸಾಗಿದ್ದರು. ನವಾಬ ಮಾತ್ರ ಫೇಲಾಗಿಬಿಟ್ಟಿದ್ದ. ರೇಷ್ಮಾಳ ಶಾದಿಯ ಸಂದರ್ಭವೂ ಆಗ ಎದು ರಾಗಿದ್ದರಿಂದ ನವಾಬ ಫೇಲಾದ. ವಿಷಯ ಝೋಪಡಿಯಲ್ಲಿ ದೊಡ್ಡ ಬಿರುಗಾಳಿಯಾಗಲಿಲ್ಲ, ರೇಷ್ಮಾ ನೂರಿಯರ ಮುದ್ದು ಮುಖ ನೋಡಿ ದಾಗಲೆಲ್ಲಾ ನವಾಬನಿಗೆ ತಾನು ಚೋಕರಿಯಾಗಿ ಹುಟ್ಟಬೇಕಿತ್ತು ಎನಿಸು ತ್ತಿತ್ತು. ಚೋಕರಿಯಾಗಿದ್ದರೆ ಖತ್ನಾ ಮಾಡಿಸುವ ಸಮಸ್ಯೆ ಇರುತ್ತಿರಲಿಲ್ಲ ಎಂದುಕೊಳ್ಳುತ್ತಿದ್ದ. ಹಾಗೆಯೇ ಕನಸು ಕಂಡು ಮುಗುಳ್ನಕ್ಕು ಸುಮ್ಮನಾಗುತ್ತಿದ್ದ.

ರೇಷ್ಮಾಳ ಶಾದಿಯಾಗಿ ನೂರಿಯ ನಿಕಾಹ್ ಮಾಡಲು ಗಂಡು ಹುಡುಕುವ ಕೆಲಸದಲ್ಲಿ ಈಗ ನಯೀಮಾ ಬಹಳ ಹೊತ್ತು ಕಳೆಯತೊಡಗಿದಾಗ ಕನ್ನಡ ಶಾಲೆಯಲ್ಲಿ ಫೇಲಾಗಿ ಕಾಲೇಜು ಮೆಟ್ಟಿಲು ಹತ್ತದೇ ಉಳಿದ ನವಾಬ, ಮಿಳ್ಳಘಟ್ಟದ ಕೆರೆಯ ಸಖ್ಯ ಬೆಳೆಸಿಕೊಂಡಿದ್ದ. ಗಾಳಕ್ಕೆ ಅಂಗಳದಲ್ಲಿಯೇ ಕೊಚ್ಚೆ ಮಣ್ಣು ಸರಿಸಿ ಹುಳು ಹೇಕ್ಕಿ ಸಿಗಿಸಿದವನೇ ಮಿಳ್ಳಘಟ್ಟದ ಕೆರೆಯತ್ತ ದೌಡಾಯಿಸತೊಡಗಿದ. ಕೆರೆಯ ಏರಿ ಮೇಲಿನ ಮಣ್ಣು, ಹಾದಿ ಬಹುದೂರದವರೆಗೆ ಸಾಗಿ ಆ ಹಾದಿ ಯಲ್ಲಿ ನೂರಾರು ಝೋಪಡಿಗಳು ಟೊಂಗೆಯೊಂದರ ಮೇಲೆ ಕಟ್ಟಿದ ಹಕ್ಕಿ ಗೂಡುಗಳಂತೆ ನವಾಬನಿಗೆ ಕಾಣತೊಡಗಿ, ಮನಸ್ಸಿನೊಳಗೆ ಪುಳಕದ ಅಲೆಗಳು ಏಳುತ್ತಿದ್ದವು. ಮರುಕ್ಷಣದಲ್ಲಿಯೇ ಆ ಹಕ್ಕಿ ಗೂಡು ಗಳಲ್ಲಿ ತನ್ನಂತೆಯೇ ಯೌವನದ ಹಕ್ಕಿಗಳಿರಬಹುದು ಮತ್ತು ಯಾವ ಹಕ್ಕಿಗೂ ಖತ್ನಾ ಆಗದೆ ಉಳಿದಿರಬಹುದು ಎಂದು ಬಿರುಗಾಳಿಗೆ ಉತ್ತರವೆಂಬಂತೆ ನಗತೊಡಗುತ್ತಿದ್ದ. ಮೀನು ಹಿಡಿಯಲು ಕೂತ ಕೂಗಳತೆ ದೂರದಲ್ಲಿಯೇ ಪಕ್ಕದ ಝೋಪಡಿಯ ಮಲ್ಲಿ, ಯೌವನ ವನ್ನೆಲ್ಲ ತನ್ನೆದೆ ಮತ್ತು ತೊಡೆಗಳಲ್ಲಿಯೇ ಅದುಮಿಟ್ಟು ಕೊಂಡಂತಿದ್ದ ರಾಜಿ, ಜೋತು ಮೊಲೆಯ ವಡ್ಡರ ಅಜ್ಜಯೊಂದಿಗೆ ಬಟ್ಟೆ ಒಗೆದೊಗೆದು ಸೊಂಟ ಮುರಿಯುವಾಗೆಲ್ಲ ನವಾಬನ ಮೈಯೊಳಗೆ ಬೆಂಕಿ ಬೀಳುತ್ತಿತ್ತು. ಆಕಾಶದತ್ತ ಮುಚ್ಚಿದ ಕಣ್ಣು ತೂರಿ ನೆಲದಾಳಕ್ಕೆ ಮಣ್ಣ ನಗೆ ಅಗೆದು ಗುಡ್ಡೆ ಹಾಕುತ್ತಿದ್ದಾಗಲೇ ಸೊಂಟ ಮುರಿಯುವ ನೆಪದಲ್ಲಿ ನವಾಬನ ಕಡೆ ಮುಖ ಮಾಡಿದ ರಾಜಿ ಕಿಸಕ್ಕನೆ ನಕ್ಕಿದ್ದು ನೋಡಿ ಕೇಳಿದ ನವಾಬ, ತನ್ನ ಹಗಲು ಗನಸಿನಿಂದಲೇ ಬೆಚ್ಚಿಬೀಳುವ ಕಾರಣವಾದಂತಾಯಿತು.

'ಕೆರೆಯಂಗಳದ ನವಾಬ' ಕಥೆಯ ಎರಡನೆಯ ಭಾಗ »

English summary
Nawab on the tank bed, Kannada short story by shi ju pasha, Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X