ಆಗುಂಬೆಯ ಆಗಂತುಕ!
ಬಹುಕಾಲ ಕಾಡುವ ಈ ಕತೆಯಲ್ಲಿ ಥ್ರಿಲ್,ಫಿಕ್ಷನ್ ಮತ್ತು ಸಸ್ಪೆನ್ಸ್ ಇನ್ನು ಏನೇನೋ? ಓದುಗರಿಗೊಂದು ಹೊಸ ಅನುಭವ..
ಅದು ನನ್ನ ಖಯಾಲಿ.
ರಜಾದಿನಗಳಲ್ಲಿ ಹೆಗಲಿಗೊಂದು ರುಕ್ಸಾಕ್ ಬ್ಯಾಗು ತಗುಲಿಸಿಕೊಂಡು ಗುರುತು ಪರಿಚಯವಿಲ್ಲದ ಊರಿಗೆ ಹೊರಟುಬಿಡುವುದು. ಹಾಗೆ ಹೊರಡುವ ಊರಲ್ಲಿ ಒಂದಷ್ಟು ಕಾಡು ಇದ್ದರೆ ಸಾಕು, ಅಲ್ಲಿ ಉಳಿದುಕೊಳ್ಳುವುದಕ್ಕೆ ಮನೆಯಿದೆಯೋ ಗೆಳೆಯರಿದ್ದಾರೋ ಅನ್ನುವುದನ್ನೆಲ್ಲ ನಾನು ಯೋಚಿಸುತ್ತಿರಲಿಲ್ಲ. ಒಂದು ಸಾರಿ ಹೋದ ಜಾಗಕ್ಕೆ ಮತ್ತೊಂದು ಸಾರಿ ಹೋಗಬಾರದು ಅಂದುಕೊಂಡರೂ ನಾನು ಮತ್ತೊಮ್ಮೆ ಭೇಟಿ ನೀಡುತ್ತಿದ್ದ ಊರುಗಳಲ್ಲಿ ಆಗುಂಬೆಯೂ ಒಂದು. ಅಲ್ಲಿ ಅಂಥದ್ದೇನಿದೆ ಅನ್ನುವ ಪ್ರಶ್ನೆಗೆ ನನ್ನ ಹತ್ತಿರ ಉತ್ತರವಿಲ್ಲ. ಇವತ್ತಿಗೂ ಆಗುಂಬೆ ನನ್ನನ್ನು ಆಕರ್ಷಿಸಿದ್ದು ಅದರ ನಿಗೂಢತೆಯಿಂದಾಗಿ.
ನಾನು 3ನೇ ಸಾರಿ ಆಗುಂಬೆಗೆ ಕಾಲಿಡುವ ಹೊತ್ತಿಗೆ ಅಲ್ಲಿನ ಅಡಕೆ ತೋಟದವರೊಬ್ಬರು ನನಗೆ ಗೆಳೆಯರಿದ್ದರು. ಅವರಿಗೂ ನನಗೂ ಕೆಲವೂ ಸಮಾನ ಆಸಕ್ತಿಗಳಿದ್ದವು. ಹೀಗಾಗಿ ನಾವಿಬ್ಬರೂ ಹೆಗಲಿಗೊಂದು ಕ್ಯಾಮರಾ ನೇತು ಹಾಕಿಕೊಂಡು ಆಗುಂಬೆಯ ಸಮೀಪದ ಕಾಡುಗಳಲ್ಲಿ, ತೀರ್ಥಹಳ್ಳಿ ಸುತ್ತ ಮುತ್ತಲಿನ ಗುಡ್ಡಗಳಲ್ಲಿ ಅಲೆಯುತ್ತಿದ್ದೆವು. ಅವರ ಊರಿನ ಹೆಸರು ಮುತ್ತವಳ್ಳಿ. ಅವರ ಹೆಸರು ಮಹೇಶ್ವರ. ನಾನು ಆಗುಂಬೆಗೆ ಹೋದಾಗಲೆಲ್ಲ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದೆ.
ಹೀಗಿರಬೇಕಾದರೆ ಒಂದು ದಿನ ಮಹೇಶ್ವರ ನಮ್ಮ ಮನೆಗೆ ಬಂದೇಬಿಟ್ಟರು. ನಿಮ್ಮ ಫೋನು ಸತ್ತಿದೆ ಅಂತ ಕಾಣುತ್ತೆ. ಎರಡು ದಿವಸದಿಂದ ಪ್ರಯತ್ನಿಸುತ್ತಿದ್ದೇನೆ. ತಕ್ಷಣ ಹೊರಡಿ. ಅಲ್ಲೊಂದು ವಿಶೇಷವುಂಟು ಎಂದವರೇ ಅವಸರಿಸಿದರು. ತಮ್ಮ ಹಳೆಯ ಮಹೀಂದ್ರಾ ಜೀಪಿಗೆ ನನ್ನನ್ನು ಹತ್ತಿಸಿಯೇ ಬಿಟ್ಟರು.
'ಏನದು ವಿಶೇಷ ಹೇಳಿ...." ದಾರಿಯಲ್ಲಿ ನಾನು ನಾಲ್ಕೈದು ಬಾರಿ ಅವರನ್ನು ಒತ್ತಾಯಿಸಿದೆ. 'ನೀವು ಕಂಡೇ ಅರಿಯಬೇಕು. ನಾನು ಹೇಳಿದರೆ ನೀವು ನಂಬುವುದಿಲ್ಲ. ಯಾಕೆಂದರೆ ನೀವೆಲ್ಲ ನಾಸ್ತಿಕರು. ನಾನು ಹೇಳುವುದಲ್ಲಿ ನಂಬಿಕೆ ಇರುವುದಿಲ್ಲ ನಿಮಗೆ" ಎಂದು ನನ್ನ ಬಾಯಿ ಮುಚ್ಟಿಸಿದರು. 'ಸದ್ಯಕ್ಕೆ ಇದನ್ನು ಓದುತ್ತಿರಿ" ಎಂದು ಹಳೆಯ ಪತ್ರಿಕೆಗಳ ಕಟ್ಟೊಂದನ್ನು ಕೈಗಿತ್ತರು.
ಪತ್ರಿಕೆಗಳಿಂದ ಕತ್ತರಿಸಿದ ಸುದ್ದಿಗಳನ್ನೆಲ್ಲ ನೀಟಾಗಿ ಅಂಟಿಸಿದ್ದ ಕ್ಲಿಪಿಂಗ್ ಅದು. ಅದರಲ್ಲಿದ್ದ ಸುದ್ದಿಗಳೆಲ್ಲ ಒಬ್ಬನೇ ವ್ಯಕ್ತಿಗೆ ಸಂಬಂಧಿಸಿದ್ದು. ಆತನ ಹೆಸರು ರಾಜಶೇಖರ ಪಟ್ವಾಡಿ. ಆಗುಂಬೆಯ ಕಣಿವೆಯಲ್ಲಿ ಹತ್ತೆಕರೆ ತೋಟದ ಮಾಲಿಕ. ಆತ ಸಣ್ಣಮಟ್ಟಿಗಿನ ವಿಜ್ಞಾನಿಯೂ ಆಗಿದ್ದ. ತಾನೇ ವಿದ್ಯುತ್ ಉತ್ಪಾದಿಸುತ್ತಿದ್ದ. ತಾನೇ ಕಂಡುಹಿಡಿದ ರೇಡಿಯೋ ಬಳಸುತ್ತಿದ್ದ. ಸೂರ್ಯನ ಬೆಳಕನ್ನು ಹಿಡಿದಿಡುವ ಯಾವುದೋ ಲೋಹ ಕಂಡುಹಿಡಿದಿದ್ದ ಎಂದೆಲ್ಲ ಆ ಪತ್ರಿಕೆಯಲ್ಲಿ ವರದಿಯಾಗಿತ್ತ್ತು. ಆತ ಮಹತ್ವದ ಸಂಶೋಧನೆಯಲ್ಲಿ ತೊಡಗಿದ್ದಾನೆ ಎಂದೂ ಬರೆದಿತ್ತು.
ಅವೆಲ್ಲ ಮಾಮೂಲಿ ಸುದ್ದಿಗಳು ಅಂದುಕೊಂಡು ನಾನು ಸುಮ್ಮನಾದೆ. ಆದರೆ ಆ ಕಟ್ಟಿನ ಕೊನೆಯಲ್ಲಿದ್ದ ಸುದ್ದಿ ಮಾತ್ರ ನನ್ನನ್ನು ನಿಜಕ್ಕೂ ಗಾಬರಿಗೊಳಿಸಿತು. ರಾಜಶೇಖರ ಪಟ್ವಾಡಿ ಸತ್ತ ಸುದ್ದಿ ಅದು. ಅವ ತನ್ನ ಲೈಬ್ರರಿಯಲ್ಲೇ ಹೃದಯಘಾತಕ್ಕೆ ಒಳಗಾಗಿ ಸತ್ತಿದ್ದ. ಆತನ ಮನೆಯಲ್ಲಿದ್ದ 3 ಜನ ಕೆಲಸದಾಳುಗಳು ಹಾಗೂ ದೂರದ ಪೂನಾದಲ್ಲಿದ್ದ ಆತನ ತಂಗಿ ಅವನ ಶವಸಂಸ್ಕಾರ ಮಾಡಿದ್ದರು.
ಅಷ್ಟನ್ನೂ ಓದಿದ ನಂತರ ನಾನು ಮಹೇಶ್ವರರ ಮುಖ ನೋಡಿದೆ. ಅವರ ಮುಖದಲ್ಲಿ ಆತಂಕವಿತ್ತು. 'ಈಗ ಅಲ್ಲಿ ಯಾರಿದ್ದಾರೆ ಕೇಳಿದೆ" ಪಟ್ಟಾಡಿಯವರ ತಂಗಿ ಆ ಜಾಗವನ್ನು ಮಾರಲು ಯತ್ನಿಸಿದಳು. ಯಾರೂ ಕೊಳ್ಳಲು ಮುಂದೆ ಬಾರದ ಕಾರಣ ಅದು ಹಾಗೇ ಪಾಳುಬಿದ್ದಿದೆ. ಕೆಲಸದವರು ಬೇರೆಲ್ಲೋ ಹೊರಟುಹೋದ ನಂತರ, ಮನೆಯೊಳಗೆ ಜೇಡರ ಬಲೆ ತುಂಬಿ ಭೂತಬಂಗಲೆಯ ಥರ ಕಾಣುತ್ತಿದೆ. ಒಂದು ಸಾರಿ ಅಲ್ಲಿಗೆ ದನ ಹುಡುಕಿಕೊಂಡು ಹೋಗಿದ್ದವನೊಬ್ಬ ಅಲ್ಲಿ ಏನೋ ಕಂಡಂತಾಗಿ ಓಡಿ ಬಂದು ನೆತ್ತರು ಕಾರಿ ಸತ್ತನಂತೆ. ಆವತ್ತಿನಿಂದ ಆ ಮನೆಯತ್ತ ಯಾರೂ ಕಾಲು ಹಾಕುವುದಿಲ್ಲ" ಎಂದರು ಮಹೇಶ್ವರ.
ಅದಕ್ಕೂ ನಮಗೂ ಏನು ಸಂಬಂಧ ಎಂಬಂತೆ ಅವರ ಮುಖ ನೋಡಿದೆ. 'ನಾವು ಅಲ್ಲಿಗೇ ಹೋಗುತ್ತಿದ್ದೇವೆ" ತಣ್ಣಗೆ ಹೇಳಿದರು.
ಕಾಡಿನ ನಡುವೆ ಅದೊಂದು ಸುಂದರವಾದ ಮನೆ. ಪ್ರಶಾಂತ ಸ್ಥಳದಲ್ಲಿತ್ತು. ಅದನ್ನು ನೋಡಿದ ತಕ್ಷಣ ಅಲ್ಲೇನೂ ವಿಲಕ್ಷಣವಾದದ್ದು ನನಗೆ ಕಾಣಿಸಲಿಲ್ಲ. ಅದನ್ನು ಹೇಗಾದರೂ ಮಾಡಿ ಕೊಂಡುಕೊಳ್ಳಬೇಕೆಂದು ನನಗೆ ಆ ಕ್ಷಣ ಅನ್ನಿಸಿತು. ಹೋಗುವುದಕ್ಕೆ ನೆಟ್ಟಗೆ ಹಾದಿಗಳೇ ಇಲ್ಲದ ಕಾಡಿನ ನಡುವೆ ಅಷ್ಟೊಂದು ದೊಡ್ಡ ಮನೆಯನ್ನು ಕಟ್ಟುವುದಕ್ಕೆ ಪಟ್ವಾಡಿ ಎಷ್ಟು ಕಷ್ಟಪಟ್ಟಿರಬಹುದು ಎನ್ನುವುದು ಊಹಿಸುವುದೂ ಕಷ್ಟವಾಗಿತ್ತು.
ಮನೆಯಿಂದ ಒಂದಷ್ಟು ದೂರದಲ್ಲೇ ಜೀಪು ನಿಲ್ಲಿಸಿದ್ದರು ಮಹೇಶ್ವರ. 'ಇಲ್ಲಿಂದ ನಡೆದುಹೋಗೋಣ" ಎಂದವರೇ ಥಟ್ಟನೆ ಕೆಳಗೆ ಜಿಗಿದರು. ಅವರ ಹಾಗೆ ಜಿಗಿಯುವ ಹೊತ್ತಿಗೆ ಅವರ ತೋಳಿಗೆ ಕಟ್ಟಿಕೊಂಡಿದ್ದ ಹಳದಿ ದಾರದ ತಾಯಿತ ನನ್ನ ಕಣ್ಣಿಗೆ ಬಿದ್ದು ನಗೆ ಬಂತು. 'ನಿಮ್ಮ ಹಾಗಲ್ಲ ನಾನು, ಸೇಫ್ಟೀಗೆ ಅಂತ ಕಟ್ಟಿಕೊಂಡೆ" ಎಂದು ನನ್ನ ನಗು ಅರ್ಥವಾದವರಂತೆ ವಿವರಣೆ ಕೊಟ್ಟರು.
ಮನೆ ಮುಂದೆ ಬಂದು ನಿಂತೆವು. ಕೆತ್ತನೆಗಳಿದ್ದ ತೇಗದ ಬಾಗಿಲು. ಪಾಳು ಬಿದ್ದಿದ್ದರೂ ಕುಂಬಾಗಿರಲಿಲ್ಲ. ಮಹೇಶ್ವರ ಜೇಬಿಂದ ಬೀಗದ ಕೈ ತೆಗೆಯುತ್ತಾರೆ ಅಂದುಕೊಂಡೆ. ಅದಕ್ಕೆ ಬದಲಾಗಿ ಅವರು ಬಾಗಿಲನ್ನು ಎರಡು ಸಾರಿ ಕುಟ್ಟಿದರು. ಅವರ ಮುಖ ನೋಡಿದೆ, ಸುಮ್ಮನಿರುವಂತೆ ಸನ್ನೆ ಮಾಡಿದರು. ಎರಡು ನಿಮಿಷದ ನಂತರ ಯಾವ ಸದ್ದೂ ಮಾಡದೆ ಬಾಗಿಲು ತೆರೆದುಕೊಂಡಿತು. ತೆರೆದ ಬಾಗಿಲಾಚೆಗೆ ರಾಜಶೇಖರ ಪಟ್ವಾಡಿ ನಿಂತಿದ್ದರು!
ನಾನು ಅದುರಿಬಿದ್ದೆ.
'ಪರವಾಗಿಲ್ಲ...ಬನ್ನಿ..." ಒಳಗೆ ಕರೆದರು ಪಟ್ವಾಡಿ. ನಾವ್ಬಿರೂ ಒಳಗೆ ಕಾಲಿಟ್ಟೆವು. ಸಿಡುಬು ಮೋರೆಯ ಪಟ್ವಾಡಿ ಸುಮಾರು ಐವತ್ತು ವರುಷದ ಅಜಾನುಬಾಹು. ಮುಖದ ತುಂಬ ಸಿಡುಬಿನ ಕಲೆಗಳಿದ್ದವು ಅನ್ನುವುದನ್ನು ಬಿಟ್ಟರೆ ಸಾಕಷ್ಟು ಲಕ್ಷಣವಾಗೇ ಇದ್ದರು. ದಪ್ಪ ಮೀಸೆಯಡಿ ಒಂದು ಆರ್ದ್ರ ನಗುವಿತ್ತು. ನಗುವಿನಲ್ಲಿ ಕೃತ್ರಿಮವಿರಲಿಲ್ಲ. ಅವರು ನಮ್ಮನ್ನು ತೀರ ಪರಿಚಿತರೋ ಎಂಬಂತೆ ಉದ್ದದ ಕಿರಿದಾದ ಜಗಲಿಯ ಮೂಲಕ ಒಳಗಿನ ಕೋಣೆಗೆ ಕರೆದೊಯ್ದರು.
ನಾವು ಹಾದುಹೋಗುವ ಪ್ಯಾಸೇಜಿನ ಗಾಳಿಯಲ್ಲಿ ತುಂಬಿದ್ದ ಸಾವಿನ ವಾಸನೆಯನ್ನು ನಾನು ಗಮನಿಸದೇ ಇರಲಾಗಲಿಲ್ಲ. ತಕ್ಷಣ ಅಲ್ಲಿಂದ ಓಡಿಹೋಗಬೇಕು ಅನ್ನಿಸಿತು. ಪಟ್ವಾಡಿ ನಡೆಯುತ್ತಿದ್ದಾಗ ಆತನನ್ನೇ ಸೂಕ್ಮವಾಗಿ ಅವಲೋಕಿಸಿದೆ. ಅವನ ನಡಿಗೆಯಲ್ಲಿ ಒಂದು ರೀತಿಯ ನಿರಾತಂಕವಿತ್ತು. ಅದು ಜಗತ್ತಿಗೆ ಸೇರಿದವರ ನಿರಾತಂಕ ಎಂದು ನನಗೆ ಅನ್ನಿಸಲಿಲ್ಲ.
ನಾವು ತಣ್ಣಗಿನ ನಡುಮನೆಯನ್ನು ದಾಟಿ ಒಳಗೆ ಹೋದೆವು. ಅಲ್ಲಿ ಪಟ್ವಾಡಿಯ ಲೈಬ್ರರಿಯಿತ್ತು. ಜಗತ್ತಿನ ಎಲ್ಲ ಭಾಷೆಗಳ ಎಲ್ಲ ವಿಷಯಗಳ ಕುರಿತು ಪುಸ್ತಕಗಳು ಅಲ್ಲಿ ತುಂಬಿದ್ದವು. ಅಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಪಟ್ವಾಡಿ ಯಾವ ಮುನ್ಸೂಚನೆಯೂ ಇಲ್ಲದೆ ಮಾತಿಗಾರಂಭಿಸಿದರು.
ನನ್ನದೊಂದು ಸಿದ್ಧಾಂತವಿತ್ತು. ನಿಮ್ಮ ಪಕ್ಕದಲ್ಲಿ ಒಂದು ಬೊಗಸೆ ಮನುಷ್ಯನ ರಕ್ತವನ್ನಿಟ್ಟುಕೊಂಡು ಅವನನ್ನೇ ಧ್ಯಾನಿಸುತ್ತಾ ಏಕಾಂತದಲ್ಲಿ ರಾತ್ರಿಗಳನ್ನು ಕಳೆದರೆ ಆ ವ್ಯಕ್ತಿ ನಿಮಗೆ ಕಾಣಿಸುತ್ತಾನೆ ಮತ್ತು ನಿಮ್ಮ ಜೊತೆ ಮಾತಾಡುತ್ತಾನೆ. ಅದನ್ನೇ ನಾನು ಪ್ರಯೋಗ ಮಾಡುತ್ತಿದ್ದದ್ದು. ಆದರೆ ಅದು ಯಶಸ್ವಿಯಾಗುವ ಮೊದಲೇ ಹೀಗಾಯಿತು.
ನನಗೊಂದು ಅರ್ಥವಾಗಲಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾದ ಪಟ್ವಾಡಿಯ ಸಾವಿನ ಸುದ್ದಿ ಸುಳ್ಳೋ, ಆತ ಬದುಕಿರುವುದು ಸುಳ್ಳೋ. ನನ್ನನೇಕೆ ಈ ಮಹೇಶ್ವರ ಇಲ್ಲಿಗೆ ಕರೆದುತಂದಿದ್ದಾನೆ. ಮಹೇಶ್ವರನ ಮುಖ ನೋಡಿದೆ. ನನ್ನ ಯೋಚನೆ ಅರ್ಥವಾದವರಂತೆ ಅವರೆಂದರು: 'ಮೊದಲು ಪಟ್ವಾಡಿಯ ಕತೆ ಕೇಳಿ." ಪಟ್ವಾಡಿ ತನ್ನ ಕತೆ ಆರಂಭಿಸಿದ.












Click it and Unblock the Notifications