ಪುಟಾಣಿ ಕೈಗಳಿಗೆ ಮಣಭಾರದ ಸಂಕೋಲೆ
ಸೌತ್ ಎಂಡ್ ವೃತ್ತದ ಸಿಗ್ನಲ್ಸ್‌ನಲ್ಲಿ ಕೆಂಪು ದೀಪ ಕಂಡಾಗ ಕಾರು ನಿಲ್ಲಿಸಿದೆ. ಉರಿ ಬಿಸಿಲು. ಸೆಕೆ ತಾಳಲಾರದೆ ಕಿಟಕಿ ಗಾಜು ಕೆಳಗಿಳಿಸಿದೆ. ತಕ್ಷಣ ಒಣಗಿ ತರಗಾದ ಕಪ್ಪು ಕೈಯಾಂದು ‘ಅವ್ವಾ...’ ಎಂಬ ಕರ್ಕಶ ಶಬ್ದದೊಂದಿಗೆ ಒಳತೂರಿ ಬಂದಾ ‘ಛೀ ಛೀ ರೆಡಿಕ್ಯುಲಸ್ ತೆಗಿ ಈಚೆ’ ಅಷ್ಟೆ ಕರ್ಕಶವಾಗಿ ಅರುಚಿದೆ. ಕೈ ಹಿಂದ್ಹಕ್ಕೋದರೂ ‘ಅವ್ವಾ... ನಾಕು ದಿವ್ಸದಿಂದ ಊಟ ಮಾಡಿಲ್ಲ...’ ಮಾತಿನ ಶಬ್ದ ಮುಂದುವರೆಯುತ್ತಿತ್ತು. ತಿರುಗಿ ನೋಡಿದೆ. ಒಣಗಿ ಕಪ್ಪಗೆ ಸುರುಟಿಕೊಂಡಿದ್ದ ಮುಖ, ಅದರ ಕೆಳಗೊಂದು ಹರುಕಲು ಬಟ್ಟೆಯ ಒಳಗಿನಿಂದಲೇ ಇಣುಕಿ ನೋಡುತ್ತಿದ್ದ ಮೂಳೆ ಕೋಲು! ಹೌದು. ದೇಹವೇ ಇದ್ದಿರಬೇಕು. ಇವೆರಡರ ಮೇಲೆ, ಎರಡು ಕುದುರೆಗಾಗಿ ಮಿಗಬಹುದಾದಷ್ಟು ಒಣ ಹುಲ್ಲಿನ ರಾಶಿಯಂತೆ ಬೆಳೆದು ನಿಂತಿದ್ದ ಬೂದಿ ಕೂದಲು. ಹನ್ನೆರಡು ವರ್ಷ ಇರಬಹುದು ಎಂದುಕೊಂಡೆ.
‘ಚೇಂಜ್ ಇಲ್ಲ ಮುಂದ್ಹಕ್ಕೋಗು’ ಒರಟಾಗಿ ಉತ್ತರಿಸುವಲ್ಲಿ ಹತ್ತಿತು ಸಿಗ್ನಲ್‌ನ ಹಸಿರು ದೀಪ, ಬಲಕ್ಕೆ ಜಯನಗರದ ಕಡೆಗೆ ಇನ್ನೇನು ತಿರುಗಬೇಕು. ‘ಅರೆ, ಆ ಹುಡುಗ... ಸೇಖರ್... ಎಸ್ ಹೀ ಈಸ್ ಸೇಖರ್... ಐ ಮೀನ್ ಶೇಖರ್’ ಅನ್ನಿಸಿತು. ಕೂಡಲೇ ಕಾರು ತಿರುಗಿಸಿ ಅವನನ್ನು ಹಿಡಿಯೋಣ ಅಂದುಕೊಂಡೆ, ಆದರೆ ನಾನು ಏಕಮುಖ ರಸ್ತೆಯಲ್ಲಿದ್ದೆ. ಮನೆ ಬಾಗಿಲು ತೆಗೆಯುತ್ತಾ ‘ನಾಳೆ ಮತ್ತೆ ಅಲ್ಲಿಗೇ ಹೋಗಿ ನಾಲ್ಕೂ ರಸ್ತೆನೂ ಹುಡುಕಿ ಅವನನ್ನು ನೋಡಲೇ ಬೇಕು ಎಂದುಕೊಂಡು ಒಳಗೆ ಬಂದೆ.
‘ಹಲ್ಲೋ ಮ್ಯೇಡಂ ನಾನು ಸೇಕರ್ ಕಾಫಿ ತೊಗೊಳ್ಳಿ...’ ಕಿವಿಯಲ್ಲಿ ರಿಂಗುಣಿಸುತ್ತಲೇ ಇತ್ತು.
***
ಸ್ನೇಹಿತರ ಉಪದೇಶದಂತೆ ಈ ಬಾರಿ ಮಾಮೂಲಿ ಗ್ಯಾರೇಜ್ ಬದಲಿಸಿ, ಕಾರನ್ನು ಜಬ್ಬಾರ್ ಭಯ್ಯನ ಗ್ಯಾರೇಜ್‌ಗೆ ಕೊಂಡ್ಯೊಯ್ದೆ. ನೋಡಲು ಕಟ್ಟಾ ಮುಸಲ್ಮಾನನಂತೆ ಕಂಡ ಜಬ್ಬಾರ್ ಸೌಜನ್ಯದಿಂದ ‘ಕಾಫಿ ತಖ್ಕೋಳಿ ಮೇಡಂ... ಉಡ್ಗೋರ್ಗೆ ಏಳಿ ಕಾರು ಥೋಳಿಸ್ತೀನಿ’ ಎಂದ್ಹೇಳಿ ಮೊಬೈಲಿನಲ್ಲಿ ಮಾತನಾಡುತ್ತಾ ಒಳಗೆ ಹೋದರು. ‘ಹಲೋ ಮ್ಯೇಡಂ ನಾನು ಸೇಕರ್ ಕಾಫಿ ತೊಗೊಳ್ಳಿ’ ಎಂದ ಹತ್ತ್ಹನ್ನೊಂದು ವರ್ಷದ ಗುಂಡು ಗುಂಡಾಗಿ ಫಳ ಫಳನೆ ಹೊಳೆಯುತ್ತಿದ್ದ, ಎಣ್ಣೆ ಹಚ್ಚಿ ತಿದ್ದಿದ್ದ ತಲೆಗೂದಲಿನ ಹುಡುಗ ಕಾಫಿ ಟ್ರೇ ಮುಂದೆ ಹಿಡಿದಾಗ, ಆ ಮುದ್ದು ಮುಖ ಚುರುಕು ಕಣ್ಣು ನನ್ನನ್ನು ಸೆಳೆದಿತ್ತು.
ನನ್ನ ಮಗ ವಿಶಾಲ್ ಇದೇ ವಯಸ್ಸಿನವನಾಗಿದ್ದಾಗ ಇದೇ ಮಿಂಚು ಅವನ ಕಣ್ಣಲ್ಲೂ ಕಂಡಿದ್ದೆ. ನಾನು ಬಾಯಿ ತೆರೆಯುವ ಮೊದಲೇ ಕಾಫಿಯನ್ನು ಟೇಬಲ್ ಮೇಲಿಟ್ಟು, ಕಿಟಕಿ ಕಡೆ ನೋಡಿ ‘ಓ ಸಕೀಲ... ಬಟ್ಟೆ ಗ್ರೀಸ್ ಆಗತ್ತಲೋ...’ ಕೂಗಿಕೊಂಡು ಓಡಿದ. ಯಾವಾಗ ಹೋದರೂ ನಗುನಗುತ್ತಾ ಮಾತನಾಡಿಕೊಂಡು, ಮೆಕ್ಯಾನಿಕ್‌ಗಳಿಗೆ ಸ್ಪ್ಯಾನರ್, ಸ್ಕೂೃ ಡ್ರೈವರ್ ಕೊಡುತ್ತಾ ಜಬ್ಬಾರ್ ಭಯ್ಯನ ಮೂರ್ನಾಲ್ಕು ವರ್ಷದ ಮಗ ಶಕೀಲನನ್ನು ಆಟ ಆಡಿಸಿಕೊಂಡು ಓಡಾಡುತ್ತಿದ್ದನ್ನು ನೋಡಿದ್ದೆ. ನನ್ನ ಮುಂದಿನ ಭೇಟಿಗಳಲ್ಲಿ ಹುಡುಗ ಹತ್ತಿರವಾದ. ಎಲ್ಲಾ ಮಾತುಗಳನ್ನು ಹೆಚ್ಚೇ ಎನ್ನಿಸುವಷ್ಟು ಸ್ಪಷ್ಟವಾಗಿ ಆಡುತ್ತಿದ್ದ ಶೇಖರನಿಗೂ ‘ಶ’ ಕಾರಕ್ಕೂ ಯಾಕೋ ಶತ್ರುತ್ವ; ಅವರಿಬ್ಬರಿಗೂ ರಾಜಿ ಮಾಡಿಸುವಷ್ಟರಲ್ಲಿ ‘ಸ’ ಕಾರ ‘ಸೇಕರ’ನೊಂದಿಗೆ ಸಖ್ಯ ಬೆಳೆಸಿಬಿಟ್ಟಿತ್ತು.
***
ಗಣೇಶನ ಹಬ್ಬಕ್ಕೆ ಬೇಕಾದಷ್ಟು ತಿಂಡಿ ಮಾಡಿಸಿದ್ದೆ. ಶೇಖರನ ನೆನಪಾಯ್ತು, ಗ್ಯಾರೇಜಿಗೆ ಹೋದೆ. ಚಿಕ್ಕದಾದ ಚಪ್ಪರದಡಿಯಲ್ಲಿ ಗಣೇಶನ ಪೂಜೆ ನಡೆಯುತ್ತಿತ್ತು. ಹೊಸ ಬಟ್ಟೆ ತೊಟ್ಟ ಶೇಖರ ನಲಿದಾಡುತ್ತಿದ್ದ. ಶೇಖರ ‘ಶ’ಕಾರವೊಂದನ್ನು ಬಿಟ್ಟು ಎಷ್ಟು ಸ್ಪಷ್ಟವಾಗಿ ಭಜನೆಗಳನ್ನು ಹಾಡುತ್ತಿದ್ದ ಎಂದರೆ ಯಾರೂ ಸುಸ್ಪಷ್ಟವಾಗಿ ತಲೆದೂಗಬಹುದಿತ್ತು. ಹತ್ತಿರ ಹೋಗಿ ಅವನ ತಲೆ ನೇವರಿಸಿ, ತಿಂಡಿಕೊಟ್ಟು ‘ಹೊಸ ಬಟ್ಟೆ ಹೊಲಿಸ್ಕೊಂಡ್ಯಾ?’ ಕೇಳಿದೆ. ‘ಅಯ್ಯೋ ನಾನೆಲ್ಲಿ ಹೊಲಿಸ್ಕೊಳ್ಲಿ ಮ್ಯೇಡಂ ಭಯ್ಯ ತಂದ್ಕೊಟ್ರು’ ಅಂದ. ತಾತನಿಂದ ಮೊಮ್ಮಗನವರೆವಿಗೂ ‘ಭಯ್ಯಾ’ ಆಗಿದ್ದುದು ಜಬ್ಬಾರಾರ ವಿಶೇಷತೆ. ‘ಭಜನೆಯೆಲ್ಲಾ ಎಲ್ಲಿ ಕಲಿತೆ ಶೇಖರ್?’ ಕೇಳಿದೆ. ‘ಅದಾ ಮ್ಯೇಡಂ, ದಿನಾಗ್ಲೂ ಸಕೀಲಂಗೆ ಪಾಠ ಹೇಳಿಕೊಡೋಕೆ ಮೇಸ್ಟ್ರು ಬರ್ತಾರಲ್ಲ... ಅವರೇ ನಂಗೆ ಸುಮ್ನೆ ಯಾಕೋ ಇರ್ತೀಯಾ ಸೇಕರಾ... ಅಂದ್ಬಿಟ್ಟು ಸನ್ಸನಿವಾರ ಬಂದು ಭಜನೆ ಹೇಳಿಕೊಡ್ತಾರೆ’ ಅಂದ ‘ಅಲ್ಲಾ ಶೇಖರ ಇಷ್ಟು ದಿನ ಆದ್ರೂ ನಿನ್ನ ಮನೆಯೆಲ್ಲೀಂತ ನನಗೆ ತೋರ್ಸಿಲ್ಲೇ ಇಲ್ಲ’ ಎಂದಾಗ ನಾನು ‘ಭಯ್ಯಾ ನನ್ನನ್ನು ಅವರ ಮನೇಲೇ ಇಟ್ಕೊಂಡಿದ್ದಾರೆ ಮ್ಯೇಡಂ’ ಎಂದ ಶೇಖರ.
ಚಾಮರಾಜನಗರದ ಹತ್ತಿರದ ಹಳ್ಳಿಯಲ್ಲೊಂದು ಸಂಸಾರ. ಅಪ್ಪ ಕುಡುಕ. ಶೇಖರನ ಬೆನ್ನಿಗೇ ಬಿದ್ದ ಇಬ್ಬರು ತಂಗಿಯರು. ಹಾಗೂ ಹೀಗೂ ಎರಡನೆ ಕ್ಲಾಸಿನವರೆಗೂ ಓದಿದ ಶೇಖರನ ಮನೆಯಲ್ಲಿ ಒಪ್ಪತ್ತಿನ ಗಂಜಿಗೂ ತತ್ವಾರ. ಅಪ್ಪನ ಮನಸ್ಸಿಗೆ, ಅಮ್ಮನ ದೇಹಕ್ಕೆ ಬರಗಾಲ. ನೆಂಟರನ್ನು ನೋಡಲು ಹೋದ ಜಬ್ಬಾರ್ ಭಯ್ಯಾ ನೊಂದು, ಶೇಖರನನ್ನು ತಮ್ಮ ಗ್ಯಾರೇಜಿನ ಪುಟಾಣಿ ಮೇಸ್ತ್ರಿಯನ್ನಾಗಿಸಿ ತಮ್ಮ ಮನೆಯಲ್ಲೇ ಸಾಕಿಕೊಂಡಿದ್ದರು. ತಿಂಗಳು ತಿಂಗಳೂ ಊರಿಗೆ ತಪ್ಪದೆ ಅವನ ಸಂಬಳದ ಪಾಲು ಕಳುಹಿಸುತ್ತಿದ್ದರು. ಶೇಖರನ ಮನೆಯಲ್ಲಿ ಅಪ್ಪನ ಸ್ಥಿತಿ ಬದಲಾಗದಿದ್ದರೂ, ತಾಯಿ, ತಂಗಿಯರು ಎರಡ್ಹೊತ್ತಿನ ಊಟ ಕಾಣುತ್ತಿದ್ದರಷ್ಟೆ ಅಲ್ಲ, ತಂಗಿಯರು ಶಾಲೆಗೂ ಹೋಗುತ್ತಿದ್ದರು. ಗ್ಯಾರೇಜ್ ಮುಚ್ಚಿದ ಬಳಿಕ ಶೇಖರ, ಜಬ್ಬಾರ್ ಭಯ್ಯಾ ತಂದುಕೊಡುವ ಪುಸ್ತಕಗಳನ್ನು ಓದುತ್ತಿದ್ದ. ಒಟ್ಟಿನಲ್ಲಿ ಶೇಖರನನ್ನು ನೋಡಿದ ಯಾರಿಗೇ ಆದರೂ ಜಬ್ಬಾರ್ ಭಯ್ಯಾ ದೇವತೆಯಂತೆ ಕಾಣುತ್ತಿದ್ದರು.
***
ಅಮೇರಿಕಾದ ಮಗನ ಮನೆಯಿಂದ ಹಿಂತಿರುಗಿದ ಮೇಲೆ ಸರಿ ಸುಮಾರು ಐದು ತಿಂಗಳಿಂದ ನಾನು ಗ್ಯಾರೇಜಿಗೆ ಹೋಗಿರಲಿಲ್ಲ. ಇದ್ದಕ್ಕಿದ್ದಂತೆ ಏನಾಯ್ತು? ಶೇಖರ ಹೀಗೆ ಬೀದಿಯಲ್ಲಿ ಭಿಕ್ಷೆ ಕೇಳುತ್ತಾ...
ನಾಳೆ ಅವನನ್ನು ಹುಡುಕಲೇ ಬೇಕು... ಜಬ್ಬಾರ್ ಭಯ್ಯಾರನ್ನೂ ನೋಡಬೇಕು.
***
ಒಳಗೆ ಕೂತು ಹತ್ತು ನಿಮಿಷದ ನಂತರ ನಗುಮುಖದೊಂದಿಗೆ ಜಬ್ಬಾರ್ ಭಯ್ಯಾ ಬಂದಾಗ, ಅವರ ನಡುವಳಿಕೆಯಲ್ಲಾಗಲೀ ಗ್ಯಾರೇಜಿನ ಸ್ಥಿತಿಗತಿಯಲ್ಲಾಗಲೀ ಯಾವುದೇ ವ್ಯತ್ಯಾಸ ಕಾಣಲಿಲ್ಲ. ನೇರವಾಗಿ ಕೇಳಿಯೇ ಬಿಟ್ಟೆ ‘ಎಲ್ಲಿ ಭಯ್ಯಾ ನಮ್ಮ ಚಿನಕುರುಳಿ ‘ಸೇಕರ್’ ಕಾಣುತ್ತಿಲ್ಲ?’ ‘ಹದೂ ಒಂದು ಖಥ್ತೇನೇ ಹಾಗೋಯ್ತು. ನಾನೇನೋ ಉಪ್ಪಕಾರ ಮಾಡೋವಾಂಥ ಮಾಡಿದ್ರೆ ನಂದೂ ಮೇಲೆ ವುಲ್ಟಾ ವಡೀತು ನೋಡಿ. ಹದೇನೋ ಮಕ್ಕ್ಳನ್ನ ಕೇಲ್ಸಕ್ಕೆ ಮಡಿಕ್ಕ್ಯೊಂಡಿದ್ದೀನೀಂತ ಇಬ್ಬರು ಹಾಫಿಸರ್ರು ಪೊಲೀಸ್ನೋರ ಜತ್ಗೇ ಬಂದು. ಕಂಪ್ಲೀಂಟು ಆಕ್ಬುಟ್ರು. ಅಲ್ಲ್ಹಾನ ಕೃಪೆ ಹಗ್ಗೂ ಹಿಗ್ಗೂ ಲಾಯ್ರ ಮಡಿಕೊಂಡು ಎಲ್ಲಾ ಖತಂ ಮಾಡ್ಸಿ ಉಡ್ಗೂನ್ನ ಕಳಿಸ್ಬಿಟ್ಟೆ’ ಎಂದು ಒಂದೇ ಉಸುರಿಗೆ ಹೇಳಿದರು ಜಬ್ಬಾರ್ ಭಯ್ಯಾ ಅವರ ಮಾತಿನ ಧಾಟಿಯಲ್ಲೇ ಶೇಖರನ ಮುಂದಿನ ದಿನದ ಬಗ್ಗೆ ಅವರಿಗೇನೂ ತಿಳಿದಿರಲಾರದೆಂದು ನಾನೇ ತೀರ್ಮಾನಿಸಿ ಭಾರವಾದ ಹೃದಯದಿಂದ ಹೊರ ಬಂದೆ.
***
ಇವತ್ತಿಗೆ ಹತ್ತು ದಿನ ಆಯ್ತು ಆ ಹುಡುಗ ಮತ್ತೇ ಸಿಕ್ಕಿಯೇ ಇಲ್ಲ. ನನ್ನ ಸಂಘ-ಸಂಸ್ಥೆ, ಸಮಾಜ ಸೇವೆಯ ಭರದಲ್ಲಿ ಶೇಖರ ರಭಸ ಕಳೆದುಕೊಳ್ಳುತ್ತಿದ್ದರೂ ಮನದ ಮೂಲೆಯಲ್ಲಿ ಕೂತೇ ಇದ್ದ. ಮತ್ತದೇ ಜಾಗ, ಅದೇ ಹೊತ್ತು, ಅದೇ ಕೈ ಕಾರಿನ ಕಿಟಕಿ ಗಾಜಿನ ಒಳಗೆ ತೂರಿ ಬಂದಾಗ ಮುಖವೂ ನೋಡದೆ ಕೈ ಹಿಡಿದೇ ಬಿಟ್ಟೆ. ‘ಶೇಖರ ಹತ್ತು ಕಾರು’ ಜೋರಾಗಿ ಎಳೆದೆ; ‘ಬೇಡ ಮ್ಯೇಡಂ ಬೇಡ’ ಶೇಖರ ಕೈ ಬಿಡಿಸಿಕೊಳ್ಳಲು ಯತ್ನಿಸಿದ; ಅಷ್ಟೇ ಬಲವಂತದಿಂದ ಅವನನ್ನು ಕಾರೊಳಗೆ ತುರುಕಿಕೊಂಡು ಮನೆಗೆ ಕರೆ ತಂದೆ.
ನೀರು, ಊಟ ಎಲ್ಲದರ ನಂತರ ಸೋಫಾದ ಮೇಲೆ ಕೂರಿಸಿದೆ. ಸಂತೋಷದ ಚಿಲುಮೆ ಗ್ಯಾರೇಜಿನ ‘ಸೇಕರ್’ ಈಗ ಕರುಳಿನಲ್ಲಿ ರಂಧ್ರ ಕೊರೆದಿದ್ದ. ‘ಯಾಕೋ ಶೇಖರಾ... ಏನಾಯ್ತಪ್ಪ?’ ಅಂದೊಡನೆಯೇ ಶೇಖರ ಜೋರಾಗಿ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದ. ನಾನೂ ತಡೆಯಲಿಲ್ಲ. ಅಳು ನಿಲ್ಲಲಿಲ್ಲ. ಹತ್ತ್ಹದಿನೈದು ನಿಮಿಷದ ನಂತರ ಕಣ್ಣೀರು ನಿಂತಿತು. ‘ಒಂದಿನ ಪೊಲೀಸ್ನೋರು ಬಂದು ಭಯ್ಯಾನ ಕರ್ಕೊಂಡ್ಹೋದ್ರು. ಮಾರನೇ ದಿನ ನನ್ನ ಸಂಬಳದಲ್ಲಿ ಉಳಿಸಿದ್ದ ದುಡ್ಡನ್ನು ನನ್ನ ಕೈಗೆ ಕೊಟ್ಟು ಇಲ್ಲಿಂದ ಹೋಗು ಇನ್ನು ಬರಬೇಡ ಅಂತ ಕಳಿಸ್ಬಿಟ್ಟು... ಶೇಖರ ಬಿಕ್ಕುತ್ತಲೇ ಇದ್ದ ‘ಯ್ಯಾಕೇಂತ ಗೊತ್ತಾಗ್ಲಿಲ್ಲ. ಸೀದಾ ಊರಿಗ್ಹೋದೆ... ಅಪ್ಪ ಚೆನ್ನಾಗಿ ಹೊಡೆದು ದುಡ್ಡೆಲ್ಲಾ ಕಿತ್ಕೊಂಡು ಎಲ್ಲೋ ಹೋದೋನು ಹದಿನೈದು ಇಪ್ಪತ್ತು ದಿನ ಕಳೆದ್ರೂ ಮನೆಗೆ ಬರ್ಲೇ ಇಲ್ಲ.
ಮನೇಲಿ ಊಟಕ್ಕೂ ಏನೂ ಇರಲಿಲ್ಲ. ಅವ್ವ ಭಯ್ಯಾನೇ ನೋಡೋಣ ಅಂದ್ಲು. ಮಾವನ ಹತ್ರ ಸಾಲ ಮಾಡ್ಕೊಂಡು ತಂಗ್ಯೀರ್ನೂ ಕರ್ಕೊಂಡು ಇಲ್ಲಿಗೇ ಬಂದೆ ಮ್ಯೇಡಂ’ ಶೇಖರನ ಅಳು ಮುಂದುವರೆದಿತ್ತು. ‘ಏನ್ಮಾಡಿದ್ರು ಭಯ್ಯಾ ಗ್ಯಾರೇಜಿನ ಒಳಗೇ ಬಿಡ್ಲಿಲ್ಲ...’ ಶೇಖರನ ತಲೆ ನೇವರಿಸಿ ನಾನೇ ಕೇಳಿದೆ ‘ನಿಮ್ಮ ತಾಯಿ ತಂಗಿಯರೆಲ್ಲಾ ಎಲ್ಲಪ್ಪಾ’ ಅಂತ ‘ಅವತ್ತೇ ಗ್ಯಾರೇಜಿನೊಳಗೆ ಭಯ್ಯಾ ಬಿಡ್ದೇ ಹೋದ್ಮೇಲೆ, ಈಚೆ ಕಡೆ ನಡ್ಕೋಂಡು ಹೋಗ್ತಾ ಇದ್ವಿ... ಕತ್ತಲಾಯ್ತು... ಮಳೆ ಹನಿ ಸುರು ಆಯ್ತು... ಬೀದಿ ದೀಪಾ ಎಲ್ಲಾ ಆರ್ಹೋಯ್ತು... ಅಲ್ಲೇ ಒಂದು ಮರ್ದಾಕೆಳ್ಗೆ ನಾವೆಲ್ಲ್ರೂ ನಿಂತ್ಕೊಂಡ್ವಿ... ನನ್ನ್ತಂಗಿ ಚೆಲ್ವಿ ಮರೇಗ್ಹೋಬೇಕೂಂತ ಅಲ್ಲೆ ಮರ್ದಾಹಿಂದೆ ಹೋದೋಳು ಬರ್ಲೇ ಇಲ್ಲ... ಯಾಕೋ ಗೊತ್ತೇ ಆಗ್ಲಿಲ್ಲ... ಅವ್ವ ಕೂಗಿದ್ಲು ಆದ್ರೂ ಚೆಲ್ವಿ ಬರ್ಲೇ ಇಲ್ಲ... ನಾವೆಲ್ಲಾ ಜೋರಾಗಿ ಆಳ್ತಾ ಇದ್ವಿ... ಬೆಳಿಗ್ಗೆವರ್ಗೆ ಮಳೆ ಬರ್ತಾನೇ ಇತ್ತು...’ ಆ ದಿನದ ಮಳೆಯಂತೇ ಅಳ್ತಿದ್ದ ಶೇಖರ ‘ಹೊಟ್ಟೆ ಹಸಿವಾಗ್ತಿತ್ತು, ಕಾಸೂ ಇರ್ಲಿಲ್ಲ... ಅಲ್ಲೇ ಇದ್ದ ಮಾದೇವನ ದೇವಸ್ಥಾನದ ಕಟ್ಟೆ ಮೇಲಿದ್ದ ಕಾಯಿ ತಿನ್ಕೊಂಡು ಮೆಟ್ಲು ಇಳೀತಿರ್ವಾಗ ಅವ್ವ ಜಾರಿ ಬಿದ್ಲು... ಕಾಲು ಮುರ್ದೆ ಹೋಯ್ತೋನೊ... ಅಲ್ಲೇ ಬಿಕ್ಸೆ ಬೇಡ್ತಾ ಇರ್ತಾಳೆ... ನಾನು ಸುವ್ವಿ ಈ ಕಡೆಗೆ ಬಂದು ಬಿಕ್ಸೆ ಕೇಳ್ತಿವಿ...’ ಇನ್ನೊಂದೆರಡು ಸರ್ತಿ ಬಿಕ್ಕಳಿಸಿ, ಶೇಖರ ತಣ್ಣಗಾದ. ನನ್ನ ಬಳಿ ಮಾತೇ ಇರಲಿಲ್ಲ. ಸೆಮಿನಾರ್‌ಗಳಿಗೆ ತಯಾರು ಮಾಡಿದ್ದ ಯಾವುದೇ ಪೇಪರ್ ನೆನಪಿಸಿಕೊಂಡ್ರೂ ಸರಿ ಹೋಗುವ ಸಾಲುಗಳೇ ಸಿಗಲಿಲ್ಲ.
‘ಗ್ಯಾರೇಜು ಪಕ್ಕದ ಹೋಟ್ಲಲ್ಲಿ ಕೆಲ್ಸಕಿದ್ದನಲ್ಲಾ ಪುಟ್ನಿಂಗ ನೆನಪಿದ್ಯಾ ಮ್ಯೇಡಂ?’ ಕೇಳಿದ ಶೇಖರ . ‘ಹೂಂ... ಯಾವಾಗ್ಲೋ ಒಂದೆರಡು ಸರ್ತಿ ನೋಡಿದ್ದ ನೆನಪು’ ‘ಹೂಂ, ಅವನ್ನೂ ಹೀಂಗೆ ಕೆಲ್ಸ ಬಿಡ್ಸಿ ಓಡಿಸ್ಬಿಟ್ರು. ಅವನಪ್ಪ ಆರಂಭ ಕಚ್ಚಿಸಿಕೊಂಡು ನ್ಯಾಣು ಹಾಕ್ಕೊಂಡ್ಬಿಟ್ಟ. ಅವನವ್ವ ಅತ್ತೂ ಅತ್ತೂ ಕೆರೆಗೆ ಬಿದ್ಬಿಟ್ಳು. ತಿನ್ನೋಕೂ ಗತಿಯಿಲ್ದೆ ಪುಟ್ನಿಂಗ ಯಾರ್ದೋ ಜ್ಯೋಬ್ನಿಂದ ಕಾಸು ಕದಿಯೋಕೆ ಹೋಗಿ ಸಿಕ್ಕಿ ಬಿದ್ದ. ಪೋಲೀಸ್ನೋರು ಅವನ್ನ ಡಿಮಾಂಡೋಂಗೆ ಕಳಿಸ್ದ್ರಂತೆ’ ಅಂದ. ‘ಅಲ್ವೋ ಶೇಖರ, ಪುಟ್ನಿಂಗನಕ್ಕ ಆ ಅಂಗ್ಡಿ ಶೆಟ್ಟರ ಮನೇಲಿ ಮಗೂನ್ನೋಡ್ಕೊಳ್ಳೋ ಕೆಲಸಕಿದ್ಲಲೋ... ಇವನ್ಯಾಕೆ ಹಾಗೆ ಮಾಡಿದ? ಅಂತ ಕೇಳಿದೆ ‘ಹೂಂ ಮ್ಯೇಡಂ, ಅವ್ವ ಅಪ್ಪ ತೀರ್ಕೋಂಡ ಮ್ಯೇಲೆ ಪುಟ್ನಿಂಗ್ನಕ್ಕಂಗೆ ಜ್ವರ ಬಂದ್ಹಂಗಾಯ್ತಂತೆ ಅದ್ಕೆ ಸೆಟ್ಟರು ಊರಿಗ್ಹೋಗೂಂತ ವಾಪಸ್ಸು ಕಳ್ಬಿಸ್ಟ್ರಂತೆ, ಈಗ ಏನಾಗಿದ್ದಾಳೋ ಗೊತ್ತಿಲ್ಲ... ಎಂದ ಶೇಖರ. ಅವನಿಗೆ ಸ್ವಲ್ಪ ಸಮಾಧಾನ ಆಯ್ತೇಯೋ ಅನ್ನುವ ಅನುಮಾನ ನನಗಂತೂ ಬಂತು.
ಆದರೆ ಈಗ ಮುಂದೇನು? ಶೇಖರನ್ನ ಎಲ್ಲಿಗೆ ಕಳಿಸಲಿ? ಅವನ ತಾಯಿ - ತಂಗಿಯರನ್ನು ಏನು ಮಾಡಲಿ? ನಾನೇನು ಹೇಳಲಿ? ಏನು ಮಾಡಲಿ? ಇವರಿಗೆಲ್ಲಾ ಏನು ದಾರಿ? ನನ್ನ ಯೋಚನೆ... ಯೋಜನೆ... ನನ್ನಲ್ಲಿ ಏನೋ ಗೊಂದಲ. ಎಲ್ಲವೂ ಗೋಜಲು ಗೋಜಲು...
ಫೋನು ರಿಂಗಾಯಿತು. ತಕ್ಷಣ ಎಚ್ಚೆತ್ತೆ. ‘ಹ... ಹಲ್ಲೋ...’ ಇಷ್ಟೇ ಹೊರಟ್ಟಿದ್ದು ಬಾಯಿಂದ ‘ನಮಸ್ಕಾರ ಮೇಡಂ ನಾನು ಸಮಾಜ ಕಲ್ಯಾಣ ಇಲಾಖೆಯಿಂದ ಸೆಕ್ರೆಟರಿ... ಕಂಗ್ರ್ಯಾಜುಲೇಷನ್ಸ್. ಬಾಲ ಕಾರ್ಮಿಕ ನಿರ್ಮೂಲನೆಗಾಗಿ ತಾವು ಮಾಡ್ತಿರೋ ಸೇವೆ ಗುರ್ತಿಸಿ ರಾಜ್ಯೋತ್ಸವ ಅವಾರ್ಡಿಗೆ ನಿಮ್ಮನ್ನು ಸೆಲೆಕ್ಟ್ ಮಾಡಲಾಗಿದೆ...’ ಇನ್ನೂ ಏನೇನೋ ಫೋನೊಳಗಿನ ಮಾತು... ಸಿಗ್ನಲ್ಸ್‌ನಲ್ಲಿ ಹಸಿರು ದೀಪ ಕಂಡ ವಾಹನಗಳಂತೆ ಮುಂದೆ ಹೋಗುತ್ತಲೇ ಇತ್ತು... ನನಗೆ ಮಾತ್ರ ಸರ್ಕಲ್‌ನ ನಾಲ್ಕೂ ಕಡೆ ಕೆಂಪು ದೀಪ ಕಾಣುತ್ತಿತ್ತು!
ನಿಮ್ಮ ಗಮನಕ್ಕೆ :
ನಗರದ 38 ಪುಟಾಣಿ ಕಾರ್ಮಿಕರಿಗೆ ಮುಕ್ತಿ ಸಿಕ್ಕರೆ ಸಾಕೇ?












Click it and Unblock the Notifications