ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾ.ಡಿ ಭಾಷಣ -6 : ರೈತರ ಬದುಕು ಚಂಚಲವಾಗಿಸಿದೆ ಸರ್ಕಾರ

By Mahesh
|
Google Oneindia Kannada News

ಹೌದು ನಾನು ರೈತರ ಹೆಸರನ್ನ ತೆಗೆದೆ. ಕುವೆಂಪು ಅವರ ನೇಗಿಲ ಯೋಗಿ ಕವಿತೆಯ ಮೂಲಕ ರೈತನ ಎಲ್ಲ ಸ್ಥಾನಮಾನ ಬವಣೆಗಳನ್ನ ಬಣ್ಣಿಸುತ್ತಾರೆ. ರೈತ ದೇಶದ ಬೆನ್ನೆಲಬು, ಅವನನ್ನ ನಾವೆಲ್ಲ ಚೆನ್ನಾಗಿ ನೋಡಿಕೊಳ್ಳ ಬೇಕು ಅನ್ನುವ ಆಶಯ ಅಲ್ಲಿದೆ. ಆದರೆ ಇವತ್ತು ಈ ರೈತನನ್ನ ನಾವು ಯಾವ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದೇವೆ ಯೋಚಿಸೋಣ. ಅವನ ದುಡಿಮೆಗೆ ಬೆಲೆ ಇಲ್ಲ. ಅವನ ನೆಲ ಅವನ ಕೈಯಲ್ಲಿ ಉಳಿದಿಲ್ಲ. ಅವನಿಗೆ ಗೌರವವಿಲ್ಲ. ರೈತನಿಗೆ ಹಣದ ಆಸೆ ತೋರಿಸಿ ಅವನ ಜಮೀನಿಗೆ ಲಕ್ಷಾಂತರ ರೂಪಾಯಿ ಬೆಲೆ ಕಟ್ಟಿ ಅದನ್ನ ಆಧುನಿಕ ವ್ಯವಹಾರಗಳಿಗಾಗಿ ಕೊಂಡು ಅವನನ್ನ ಅದೇ ನೆಲದಲ್ಲಿ ತಲೆ ಎತ್ತುತ್ತಿರುವ ಕಾರ್ಖಾನೆಯ ಕಾವಲುಗಾರನನ್ನಾಗಿ ಮಾಡುವ ಹುನ್ನಾರ ನಡೆದಿದೆ.

ನೆಲ ಅನ್ನುವುದು ಒಂದು ಗಟ್ಟಿ ಸಂಪತ್ತು. ನೆಲ ಇದೆ ಅನ್ನುವುದೇ ರೈತನಿಗೆ ಒಂದು ಭರವಸೆ, ಬೆಂಗಾವಲು, ವರ, ಮುಂದಿನ ಬದುಕಿಗೆ ಆಧಾರ, ಇದನ್ನೇ ಅವನಿಂದ ನಾವು ಕಿತ್ತು ಕೊಳ್ಳುತ್ತಿದ್ದೇವೆ. ವ್ಯವಸಾಯವೇ ಬದುಕು ಅನ್ನುವ ನಂಬಿಕೆ ಇದ್ದ ಈ ನಾಡಿನಲ್ಲಿ ವ್ಯವಸಾಯವನ್ನ ದಿವಾಳಿ ಕೋರತನ ಅನ್ನುವಂತೆ ಪ್ರತಿಬಿಂಬಸಲಾಗುತ್ತಿದೆ. ಅಣೆಕಟ್ಟುಗಳು, ಕಾರ್ಖಾನೆಗಳು, ರಸ್ತೆಗಳು, ಹೊಸ ಬಡಾವಣೆಗಳು, ಒಂದು ಕಡೆ ಅಭಿವೃಧ್ದಿಯ ಕತೆ ಹೇಳಿದರೆ, ಇವೇ ಇನ್ನೊಂದು ಕಡೆ ರೈತರ ದುರವಸ್ಥೆಯ ವ್ಯಥೆಯನ್ನ ಹೇಳುತ್ತಿವೆ. ಕುವೆಂಪು ಹೇಳಿದ ನೇಗಿಲ ಯೋಗಿ ನಿತ್ಯ ಆತ್ಮಹತ್ಯೆಯ ಪ್ರತೀಕನಾಗುತ್ತಿದ್ದಾನೆ.

ನಮ್ಮ ಸರಕಾರಗಳು ರೈತರಿಗೆ ಸಂಬಂಧ ಪಟ್ಟ ಸಮಸ್ಯೆಗಳನ್ನ ಕೂಡಲೇ ಪರಿಹರಿಸದೆ, ಅವುಗಳನ್ನ ಜೀವಂತವಾಗಿ ಇರಿಸಿ ಕೊಂಡು ಹೇಗೆ ರೈತರ ಬದುಕು ಚಂಚಲವಾಗಿ ಇಡುತ್ತಾರೆ ಅನ್ನುವುದಕ್ಕೆ ಒಂದು ಉದಾಹರಣೆಯನ್ನ ನೀಡ ಬಯಸುತ್ತೇನೆ.

1952ರಲ್ಲಿ ಕೆಂಗಲ್ ಹನುಮಂತಯ್ಯನವರು ಶಾಲೆಗಳ ಅಭಿವೃಧ್ದಿಗಾಗಿ ಭೂಮಾಲಿಕರಿಂದ ಜಮೀನು ದಾನ ಪಡೆದು ಅದನ್ನ ಕೆಲ ರೈತರಿಗೆ ನೀಡಿ ಶಾಲೆಗೆ ಇಷ್ಟು ಗೇಣಿಯನ್ನ ನೀಡಿ ಎಂಬ ನಿಯಮವನ್ನ ರೂಪಿಸಿದರು. ಇದಾಗಿ ಈಗ 60 ವರ್ಷಗಳು ಉರುಳಿವೆ. 1972ರಲ್ಲಿ ಭೂಸುಧಾರಣಾ ಕಾನೂನು ಬಂದಿತು. ಗೇಣಿ ಪದ್ದತಿ ಅಮಾನುಷವಾದದ್ದು ಎಂದರು. ಉಳುವವನೇ ಹೊಲದೊಡೆಯನಾದ. ಆದರೆ ಈ ಭೂವಿದ್ಯಾದಾನದ ರೈತ ಇಂದಿಗೂ ಗೇಣಿದಾರ. 10,000 ಎಕರೆ ಸರಕಾರೀ ಜಮೀನಿನಲ್ಲಿ ಇಂದು 30,000 ರೈತ ಕುಟುಂಬಗಳು ಗೇಣಿದಾರರಾಗಿ ಬದುಕುತ್ತಿವೆ. ಪುರಾತನವಾದ ಅನಿಷ್ಟ ಗೇಣಿ ಪದ್ದತಿಯನ್ನ ನಿರ್ಮೂಲನೆ ಮಾಡಿದ ದೇಶ ಈ ಪದ್ದತಿಯನ್ನ ಇನ್ನೂ ಕಾಪಾಡಿ ಕೊಂಡು ಬಂದಿದೆ ಅನ್ನುವುದು ಎಂತಹಾ ವಿಪರ್ಯಾಸ ಅಲ್ಲವೆ?

Sahitya Sammelana Madikeri President Norbert D'Souza Speech

ಈ ನಾಡಿನ ರೈತ ಅವನು ಕಬ್ಬು ಬೆಳೆಗಾರ ಇರಬಹುದು, ಭತ್ತ, ಅಡಿಕೆ, ರಾಗಿ, ಜೋಳ, ಏನೇ ಬೆಳೆಯುವವ ಇರಬಹುದು ಅವರೆಲ್ಲ ಸಂತೃಪ್ತಿಯಿಂದಂತೂ ಇಲ್ಲ. ಅವರ ನಿಟ್ಟುಸಿರು, ಸರಕಾರದ ಕಣ್ಣಿಗೆ ಬೀಳದೆ? ಸಭೆ ಸಮಾರಂಭಗಳಲ್ಲಿ ರೈತ ಗೀತೆ ಹಾಡಿದರೆ ಸಾಕೆ?

ನನಗೆ ಬಹಳ ಪ್ರಿಯವಾದದ್ದು ಈ ಪರಿಸರ. ಈ ಪ್ರೀತಿಗೆ ಕಾರಣ ಪರಿಸರದ ಮೇಲೆ ನನಗೆ ಇರುವ ಗೌರವ. ನೆಲದ ಮೇಲೆ ಕೋಟ್ಯಾನು ಕೋಟಿ ಜೀವ ಜಂತುಗಳು ಇವೆ. ಅವುಗಳಲ್ಲಿ ಮಾನವ ಜೀವಿ ಕೂಡ ಒಬ್ಬ. ಪರಿಸರದಲ್ಲಿ ಅವನು ಶ್ರೇಷ್ಠ ಖಂಡಿತಾ ಅಲ್ಲ. ಇದ್ದುದರಲ್ಲಿ ಆತ ಬುದ್ಧಿವಂತ. ಬುಧ್ದಿವಂತ ಅಂದ ಕೂಡಲೇ ಇಡೀ ಪರಿಸರವನ್ನ ಆಳುವ, ಬದಲಾಯಿಸುವ, ಬೇಕಾ ಬಿಟ್ಟಿಯಾಗಿ ಬಳಸಿ ಕೊಳ್ಳುವ ಅಧಿಕಾರವನ್ನ ಈ ಮನುಷ್ಯನಿಗೆ ಯಾರೂ ಕೊಟ್ಟಿಲ್ಲ. ಆದರೆ ತನ್ನ ಕುತಂತ್ರದಿಂದ ಅವನು ಇದನ್ನ ಸಾಧಿಸಿದ್ದಾನೆ. ಹೀಗೆ ಇಲ್ಲದ ಸಾಧನೆಗಳನ್ನ ಮಾಡಿ ತನಗೆ ತಾನೇ ಅಪಾಯ ತಂದು ಕೊಳ್ಳುತ್ತಿದ್ದಾನೆ.

ಮೊನ್ನೆ ಮೊನ್ನೆ ಉತ್ತರಾಖಂಡದಲ್ಲಿ ಏನಾಯಿತು ನಮಗೆ ಗೊತ್ತಿದೆ. ಎಲ್ಲಿಯವರೆಗೆ ನಾವು ಪರಿಸರದ ನಿಯಮಗಳನ್ನ ಅರ್ಥ ಮಾಡಿಕೊಂಡು ನಮ್ಮ ಬದುಕನ್ನ ನಡೆಸುತ್ತೇವೆ, ಅಲ್ಲಿವರೆಗೆ ನಾವು ಸುರಕ್ಷಿತ. ನಾವು ಪರಿಸರದ ನಿಯಮಗಳನ್ನ ಮೀರಿದ ದಿನ ಅದು ನಮ್ಮ ಮೇಲೆ ಸೇಡು ತೀರಿಸಿ ಕೊಳ್ಳುತ್ತದೆ. ಸೇಡು ತೀರಿಸಿ ಕೊಳ್ಳುವ ಅದರ ಪ್ರಕ್ರಿಯೆಯನ್ನ ಅದು ಈಗಾಗಲೇ ಪ್ರಾರಂಭಿಸಿದೆ. ಅಲ್ಲದೆ ಇದೀಗ ಮತ್ತೊಂದು ಮಾತು ಕೇಳಿಬರುತ್ತಿದೆ. ನೇತ್ರಾವತಿ ನದಿ ನೀರನ್ನ ಕೋಲಾರಕ್ಕೆ ತಿರುಗಿಸುವುದು, ಶರಾವತಿಯ ನೀರನ್ನ ಮತ್ತೆಲ್ಲಿಗೋ ಕೊಂಡೊಯ್ಯುವುದು. ಸಮುದ್ರ ಸೇರುವ ನೀರು ವ್ಯರ್ಥ ಎಂದು ಹೇಳುವುದು. ಈ ನೀರನ್ನ ಇಲ್ಲಿಂದ ಮತ್ತೆಲ್ಲಿಗೋ ಸಾಗಿಸುವ ಕೆಲಸ ನಕ್ಷೆಯ ಮೇಲೆ ಸುಲಭ. ಒಂದು ಗೆರೆ ಎಳೆದರಾಯಿತು. ಆದರೆ ಇದು ಕಾರ್ಯರೂಪಕ್ಕೆ ಇಳಿದಾಗ ಪರಿಣಾಮ ಏನಾದೀತು?

ನಾವು ಎಷ್ಟು ಅಣೆಕಟ್ಟುಗಳನ್ನ, ನಾಲೆಗಳನ್ನ ನಿರ್ಮಿಸಬೇಕು. ಕಾಡು ಮೇಡು ಎಂದು ನಷ್ಟವಾಗುವ ಪರಿಸರ ಎಷ್ಟು? ತೊಂದರೆಗೆ ಒಳಗಾಗುವ ಜನರ ಬವಣೆ ಯೋಚಿಸ ಬೇಡವೇ? ಹೊಸದಾಗಿ ತಲೆದೋರುವ ಸಮಸ್ಯೆಗಳ ಅರಿವು ನಮಗಿದೆಯೇ. ಶರಾವತಿಯಲ್ಲಿ ಒಂದು ನಾಲೆ ಕಟ್ಟಿಸಿದರು. ಅದರಲ್ಲಿ ಬಿಟ್ಟ ನೀರು ಅಕ್ಕಪಕ್ಕದ ಗದ್ದೆಗಳಲ್ಲಿ ಪುಟಿಯಿತು. ಕೊನೆಗೆ ಮತ್ತೊಂದು ಸುರಂಗ ತೆಗೆದರು. ಹೀಗೆ ಆಗಬಾರದಲ್ಲವೆ. ಆಸ್ಟ್ರೇಲಿಯಾದಲ್ಲಿ ನದಿ ತಿರುವಿಗೆಂದು ಕಟ್ಟಿದ ಅಣೆಕಟ್ಟುಗಳನ್ನ ಒಡೆದು ಹಾಕಿ ಮತ್ತೆ ಹಿಂದಿನಿಂದ ನದಿಗಳನ್ನ ಹರಿಯ ಬಿಡುತ್ತಿದ್ದಾರಂತೆ. ಅಲ್ಲಿ ಈ ಯೋಜನೆ ಹಲವು ಸಮಸ್ಯೆಗಳಿಗ ಕಾರಣವಾಗಿದೆಯಂತೆ. ಇಂತಹಾ ಯೋಜನೆಗಳು ಈ ದೇಶಕ್ಕೆ ಬೇಕೆ?

ನಮ್ಮ ದೇಶವನ್ನ ಹೊಸದಾಗಿ ನಿರ್ಮಿಸುವ ಸಂದರ್ಭದಲ್ಲಿ ಜವಾಹರಲಾಲ್ ನೆಹರು ಅವರು ಅಣೆಕಟ್ಟುಗಳನ್ನ ದೇಶದ ದೇವಾಲಯಗಳು ಅಂತ ಕರೆದರು. ಇಂದು ಈ ದೇವಾಲಯಗಳು ಜನರ ಪಾಲಿಗೆ ನರಕಗಳಾಗಿ ಪರಿಣಮಿಸಿವೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಏನು ಜನ ನಿರಾಶ್ರಿತರಾದರು ಅದರ ಮೂರು ಪಟ್ಟು ಜನ ಅಣೆಕಟ್ಟುಗಳಿಂದ ತೊಂದರೆಗೆ ಒಳಗಾಗಿದ್ದಾರೆ. ಅಣೆಕಟ್ಟುಗಳು ವಿವಿಧ ಸಮಸ್ಯೆಗಳಿಗೆ ಕಾರಣವಾಗಿವೆ. ಈ ವಿಷಯವನ್ನ ವೈಜ್ಞಾನಿಕವಾಗಿ ನೋಡಿ ಸಮಸ್ಯೆಗಳನ್ನ ಬಗೆಹರಿಸುವ ಯತ್ನ ಆಗಬೇಕಾಗಿದೆ. ಇದೀಗ ಪರಿಸರದ ಬಗ್ಗೆ ವ್ಯಾಪಕವಾದ ಚರ್ಚೆ ಪ್ರಾರಂಭವಾಗಿದೆ.

English summary
The three day Kannada Sahitya Sammelana inaugurated today (Jan.7). Here is the part 6 of complete text of speech by eminent Kannada writer and novelist President for 80th Kannada Sahitya Sammelana Norbert D'Souza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X