ಪರಿವರ್ತನೆ

ಭಾಳ ಸುಧಾರಿಸಿದೇನಿ ಅಂತ
ನನ್ಹಾಂಗ ಇನ್ನೂ ಭಾಳS ಮಂದಿ ಸುಧಾರಿಸಿದಾರ
ಅವ್ರದೆಲ್ಲಾ ಇಲ್ಲದ ಉಸಾಬರಿ ನನಗ್ಯಾಕ?
ಆವಾಗ ನನ್ನೂರಿನ್ಯಾಗ
ಅಲ್ಲಲ್ಲ, ಊರ ಹೊರಗ
ನಮ್ದು ಹರಕ್ ಗುಡಸಲ
ಈಕಡೆ ನಾಯಿ ಆಕಡೆ ಪಾರಾಗತಿದ್ವು
ಕಿಂಡ್ಯಾಗಿನ ಬಿಸಲ ಮನಿತುಂಬS ಚುಕ್ಕಿ
ಕರಿಬೆಕ್ಕ ಬುಟ್ಟ್ಯಾಗS ಬಿದ್ದರಿತಿತ್ತು
ಕರೀ ಮಣ್ಣ ಸೆಗಣಿ ನೆಲಾ
ಅದರಾಗ ಉಳ್ಳ್ಯಾಡಿ
ಮೈಯಲ್ಲಾS ಮಣ್ಣಾ ಸೆಗಣಿ
ಕೆಟ್ಟSS ವಾಸನಿ
ಈಗೆಲ್ಲಾ ಹಾಂಗಿಲ್ಲ
ಕರೀ ಮೈಮ್ಯಾಲ
ಕಲರ್ ಡ್ರೇಸ್ ಹಾಕೇನಿ
ಆ ನೆಲದ ವಾಸನಿ
ಈಗೂ ಬಂದೀತೂ ಅಂತ
ಮ್ಯಾಗ ಸೇಂಟ್ ಹಾಕೇನಿ
ಹಾದಿಮ್ಯಾಲ ಬಂದಾಗ
ಕಣ್ಣೀಗಿ ಗ್ವಾಗಲ್ ಹಾಕಿರ್‍ತೇನಿ!
ಆ ಊರ ಉಸಾಬರಿ ಬ್ಯಾಡಂತ
ಪ್ಯಾಟ್ಯಾಗS ಮನೀ ಮಾಡೇನಿ
ದೊಡ್ಡ್ಲS ಅಪಾರ್ಟ್‌ಮೆಂಟ್
ಆರನೇ ಮಹಡಿಯೊಳಗ
ಎಡಕಿನ ದೊಡ್ಡ ಫ್ಲ್ಯಾಟ್ ನಂದ
ಆ ಸ್ವರ್ಗಂದ್ರ ನಮ್ಮನೀನS ಸಾಕ್ಷಿ!
ಮ್ಯಾಲನಿಂದ ಕೆಳಗ ನೋಡಿದ್ರ
ತಲಿ ಗರ್ರಂತ ತಿರಿಗಿದ್ಹಾಂಗ ಅನಸತೈತಿ!
ಹಿಂಗಾಗಿ, ಇತ್ತೀತ್ತಲಾಗ
ನೆಲಾ ನೋಡೋದS ಕಡಿಮಿ ಮಾಡೇನಿ!
ದೊಡ್ಡ ನೌಕರಿ, ಕೈತುಂಬಾ ರೊಕ್ಕ
ಮನ್ಯಾಗ ನಾನ,
ನನ್ನ ಒಬ್ಬಾಕಿ ಹ್ಯಾಂತಿ
ಇಬ್ಬರು ಮಕ್ಕಳು
ಒಂದು ಆರತಿಗಿ ಇನ್ನೊಂದು ಕೀರ್ತಿಗಿ
ಕಿಟಿಕಿಟಿ ಇಲ್ಲ, ಅರಾಮ ಅದೇವಿ
ಊರ ಓನ್ಯಾಗಿನು, ಅಂಥವು ಇಂಥಾವು ಯಾವಕ್ಕೂ
ಮನೀ ಅಡ್ರೆಸ್ ಮುದ್ದಾಮ ಕೊಟ್ಟಿಲ್ಲ
ಮನೀಗಿ ದೊಡದೊಡ್ಡ ಮಂದಿ ಬರ್‍ತಿರ್‍ತಾರ
ಆವಾಗ ಇಂಥಾವ್ರೆಲ್ಲ ಠಿಕಾಣಿ ಹೂಡಿದ್ರ?
ಅವರ ಎಷ್ಟೋ ವರಸದ
ಮಣ್ಣ ಸೆಗಣಿ ವಾಸನಿ
ಮನಿಯಲ್ಲಾ ಹೊಲಸ ಹಿಡದೀತೂ ಅಂತ
ಅವ್ರನೆಲ್ಲಾ ಕರಿಯೋದS ಬಂದ್ಮಾಡೇನಿ!
ನಿಮಗ ನಾ ಭಾಳ ಪರಿಚಯ ಇರಬೇಕಲ್ಲ?
ಇರದ ಏನು? ಇರಲೇಬೇಕು!
ಬಡವರ -ಬಗ್ಗರ ದಲಿತರ ಗಿಲಿತರ ಅಂತ
ಅಷ್ಟಿಷ್ಟು ಬರದಿದ್ದಕ್ಕಾಗಿ
ಅಂಥಾ ಸಾಹಿತಿ, ಇಂಥಾ ಸಾಹಿತಿ ಅಂತ
ಪೆಪರನ್ಯಾಗ ಬಂದದ್ದು,
ಶ್ಯಾಲ ತೊಡಸಿ, ಮಾಲಿ ಹಾಕಿದ ಪೋಟೊ
ನೀವು ನೋಡಿರಲೇಬೇಕಲ್ಲಾ?
ದೊಡದೊಡ್ಡ ಸಾಹಿತಿಗಳ ನೆಟ್‌ವರ್ಕ್
ಒಂದಿಷ್ಟ ಛಲೋನS ಇಟ್ಕೊಂಡೇನಿ
ಕಿಂಗ್‌ಫಿಶರ್ ಒಳಗ ಇಳದ ತಣ್ಣಗಾದಾಗ
ವಿಸ್ಕಿ ಬ್ರ್ಯಾಂಡಿ ಹಾಟ್ ಏರಿ
ಚಿಕನ್ ಚಂಡ ಮುರದಾಗ
ನಮ್ಮ ಅವಾಜನ S ಬೇರೆ
ಕಾವ್ಯದ ಫಡಕಿ ಹರದ ಹೋಗಿರ್‍ತೇತಿ
ನಾಟಕದ ಪಡದಾ ಕಿತ್ತಿಬಿದ್ದರತೈತಿ
ತುಳಿದಾವ್ರು, ತುಳಿಬೇಕನವ್ರು
ತುಳಿಸಿಕೊಂಡವರ ಇತಿಹಾಸ
ಮ್ಯಾಲ ಬಿದ್ದಾವ್ರು, ಬೀಳಿಸಿಕೋಡಾವ್ರು
ಒಂದS ಎರಡ?
ನಮ್ಮ ಟೀಮ್ ಬೈಟಕ್
ಬಾರ್ ಕ್ಲಬ್‌ನ್ಯಾಗ ಅಷ್ಟ್ಲS ಅಲ್ಲಾ
ಇಂಥ ಚರ್ಚಾ ಸಲುವಾಗಿ
ಬೀಚಿಗೂ ಹೋಗತಿರ್‍ತೇವಿ
ಅಲ್ಲಿ, ಅದರ ಮಜಾನ ಬೇರೆ!
ಹಿಂಗಾಗಿ, ಎಲ್ಲಾ ನಮೂನೆಯ ಪ್ರಶಸ್ತಿಗಳು
ಭಾಳ ಲಗೂನ ಸಿಕ್ಕಾವ
ಅಲ್ಲಿ ಇಲ್ಲಿ ಹೋದಾಗ ಕೋಟ್ಟಿರೊ
ಜುಜಬಿ ಪ್ರಶಸ್ತಿ ಲೆಕ್ಕಾನS ಇಟ್ಟಿಲ್ಲ!
ನನಗಿಂತ ಛಂದ ಬರ್‍ಯಾವ್ರು
ಹಿರಿಯರು ನನ್ಮುಂದS ಅದಾರ
ಪಾಪ, ಅವರಿಗೆಲ್ಲಾ ಇಂಥ ಪ್ರಶಸ್ತಿ
ನನಕ ಮೊದಲS ಸಿಗಬೇಕಾಗಿತ್ತು
ಏನ ಮಾಡೋದು? ಅವರವರ ಹಣೆಬರ!
ಆದರ, ಇನ್ನೂ ಒಂದ ಆಸೆ ಐತಿ
ನನ್ನ ಇಂಥ ಜನಪರ ಸಾಧನೆಗೆ
ಜ್ಞಾನಪೀಠ ಪ್ರಶಸ್ತಿಯೊಂದು
ಸಿಕ್ಕರೆ ಮನಸ್ಸಿಗೆ ಸಮಾಧಾನ
ನಾಳಿ ಯಾವದೋ ಮೂಲ್ಯಾಗ ಸತ್ತರ್ರನೂ
ಜೀವಂತ ಇರ್‍ತೇನಿ ಅಂತ!
ಅಂದಾಂಗS ಒದ್ಮಾತು ಮರ್‍ತೆ-
ನನ್ನ ಬಿಲ್ಡಿಂಗ್ ಕೆಳಗಡೆ
ನೆಲದಮ್ಯಾಲ ಗುಡಸಲೈತಿ
ಅಲ್ಲೊಬ್ಬ ಬಡಪಾಯಿ ಸೆಕ್ಯೂರಿಟಿ
ಬಂದಾಗS ಹ್ವಾದಾಗS ನನ್ನS ನೋಡತಿರ್‍ತಾನ
ನಾನೇನರ ಮಾತಾಡಸೆನಿ
ಏನರS ಕೊಟ್ಟೇನಿ ಅಂತ ಆಸೆ ಇರಬಹುದು ಪಾಪ!
ನನಗರ ಎಲ್ಲಿ ಪುರಸೋತ ಐತಿ?
ಮ್ಯಾಲಾಗಿ ಅವನ ಮೈಯಿ
ಕೆಟ್ಟ ಕಿಮಟ ವಾಸನಿ ತಾಳಲಾರದ
ಮೂಗ, ಬಾಯಿ ಮುಚ್ಕೊಂಡ
ಮನಿಗಿ ಧಾವಿಸಿ ಹೋಗ್ತೇನಿ!
ಮ್ಯಾಲಿನಿಂದ ಕೆಳಗ ನೋಡಿದಾಗ
ಅಂವ ನನ್ನ ಪ್ರತಿಬಿಂಬದ್ಹಾಂಗ ಕಾಣಸ್ತಾನ
ಛೆ! ಹುಚ್ಚ ಕಲ್ಪನೆ
ಎಂದು ತಲಿ ಝಾಡಿಸಿ
ನನ್ನ ಸ್ವರ್ಗದ ಮನ್ಯಾಗ
'ಹಾಯಾಗಿ" ಕುಳಿತಿರ್‍ತೇನಿ!












Click it and Unblock the Notifications