ಸಲಹಿ ಹೋದವಳ ಕುರಿತು...

ಹೂಬನವ ಹಬ್ಬಿಸಿ ಪ್ರೀತಿಯ ಅರಳಿಸಿದೆ
ಗೀಚುವ ಬೆರಳಲ್ಲಿ ಸುಂದರ ಕಲೆ ತುಂಬಿದೆ
ನಿನ್ನ ಕೂಸು ನಾ ನಿನಗೆ ನೆನಪಾಗದೆ ಹೋದೆ
ನಿನ್ನ ಕನಸುಗಳನೆಲ್ಲ ಬಲಿ ಕೊಟ್ಟು
ಆಕಾಶದಾಚೆಗಿನ ಕರೆಗೆ ಓಗೊಟ್ಟು
ಎಲ್ಲ ಚಿಂತೆಗಳ ಮರೆತಂತೆ
ಮೈಕೊಡವಿ ಹೊರಟು ನಿಂತೆ
ಹಿಂತಿರುಗಿ ನೋಡಬಾರದಿತ್ತೇನು?
ದುಗುಡಗೊಂಡ ಪುಟ್ಟ ಹೃದಯ
ನಿನ್ನೆಡೆಗೆ ಕೈಚಾಚಿ ನಿಂತಿತ್ತು
ಎಲ್ಲ ತಿಳಿದ ವಯಸೇನಲ್ಲ ಅದು
ಮನಸು ಭಾರವಿದ್ದರೇನು, ನಾನಿರಲಿಲ್ಲವೇನು
ಬದುಕು ದುಸ್ತರವಿದ್ದರೇನು, ನನ್ನ ಹೆಗಲಿರಲಿಲ್ಲವೇನು
ಕಣ್ಣಿಗೆ ದೂರವಾಗಿ ನೀನೆಲ್ಲಿದ್ದರೇನು
ನನ್ನೊಳಗಿನ ನಿನಗೆ ಈ ಮೊರೆ ಕೇಳಿಸದಿರುವುದೇನು?!
ಸೂರ್ಯಕಿರಣ್ ಜೋಯ್ಸ್ ಬ್ಲಾಗ್ : ಅಂತರಾಳದ ಮಾತು












Click it and Unblock the Notifications