ವರ್ತಮಾನ
*ಡಿ.ಎಸ್.ರಾಮಸ್ವಾಮಿ, ಅರಸೀಕೆರೆ.
ದಪ್ಪ ದಪ್ಪ ಮಣ್ಣು ಗೋಡೆಗಳ
ಅಪ್ಪ. ಅವನಪ್ಪ, ಅವನಪ್ಪನಪ್ಪನೂ ಇದ್ದ
ಈ ಇದೇ ಹಳೆಯ ಮನೆಯೊಳಗೆ
ಪಿತ್ರಾರ್ಜಿತದ ನೆರಳಲ್ಲಲೆಯುತ್ತಿರುವ ನಾನು
ಈ ಇಂಥದೇ ಮನೆಗಂಟಿರುವ ಹಿಂಬದಿಯ ಹಿತ್ತಿಲು
ಅದರೊಳಗಿರಬಹುದಾದ ಹುತ್ತ ಮತ್ತು ಗೆದ್ದಲು
ವಾಲ್ಮೀಕಿಯನ್ನವತರಿಸದಿದ್ದರೂ ಇಷ್ಟೂ ದಿನ
ಮಿಥುನದಲ್ಲಿರುವ ಕ್ರೌಂಚಕ್ಕೆ ಶಾಪವಿಡುತ್ತಲೇ
ಬಿಚ್ಚಿದ್ದ ಕಚ್ಚೆಯ ಮತ್ತೆ ಮತ್ತೆ ಸರಿಪಡಿಸಿಕೊಳ್ಳುತ್ತ
ಬತ್ತುತ್ತಿರುವ ಪುರಾತನತೆಗೆ ನೀರನೆರೆಯುತ್ತ
ಯಾರದೋ ಬಿಲ್ಲಿಗೆ ಮತ್ಯಾರದೋ ಬಾಣವೇರಿಸಿ
ಯಕ್ಷಗಾನ ಬಯಲಾಟಗಳಲ್ಲೇ ನಿರತವಾಗಿರುವಾಗ
ಎದುರಿರುವ ರಾವಣರು ಯುದ್ಧಕ್ಕೆ ಕರೆಯುತ್ತಿದ್ದಾರೆ,
ರಾಮನೇ ಇಲ್ಲದ ರಾಮಾಯಣದ ಈ ಕಾಲದಲ್ಲಿ.
ಕವಿ ಪರಿಚಯ: ಡಿ.ಎಸ್.ರಾಮಸ್ವಾಮಿ, ತರೀಕೆರೆ ಹುಟ್ಟಿದ ಊರು. ಉದ್ಯೋಗ : ಅರಸೀಕೆರೆಯ ಭಾರತೀಯ ಜೀವ ವಿಮಾನಿಗಮದಲ್ಲಿ ಹಿರಿಯ ಲೆಕ್ಕಿಗ. ಪ್ರಕಟಿತ ಕವನ ಸಂಕಲನಗಳು: ಮರೆತ ಮಾತು(2002) ಶಿವಮೊಗ್ಗ ಕರ್ನಾಟಕ ಸಂಘದ ಪ್ರೊ.ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ. ಉಳಿದ ಪ್ರತಿಮೆಗಳು (2007) ಹಸ್ತಪ್ರತಿಗೆ 2006ನೇ ಸಾಲಿನ ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಯ ಪ್ರಶಸ್ತಿ.
ಇತರೆ ಬಹುಮಾನಗಳು : ಪ್ರಜಾವಾಣಿ ಕವನ ಸ್ಪರ್ಧೆ 2004(ತೃತೀಯ), 2005 (ಪ್ರಥಮ), 2008 (ಪ್ರೋತ್ಸಾಹಕ), ಸಂಚಯ ಕಾವ್ಯ ಸ್ಪರ್ಧೆ, ಬಹುತೇಕ ಎಲ್ಲ ಪತ್ರಿಕೆಗಳಲ್ಲಿ ಕವಿತೆ, ಕತೆ ಮತ್ತು ಲೇಖನಗಳು ಪ್ರಕಟವಾಗಿವೆ. ಹಾಸನ ಆಕಾಶವಾಣಿಯಲ್ಲಿ 100ಕ್ಕೂ ಹೆಚ್ಚು ಚಿಂತನಗಳು ಪ್ರಸಾರವಾಗಿವೆ.












Click it and Unblock the Notifications