ಪ್ರತಿಭಾ ನಂದಕುಮಾರ್ ಅವರ ಕವನ
*ಪ್ರತಿಭಾ ನಂದಕುಮಾರ್, ಬೆಂಗಳೂರು
ಸೀಯುವ ಒಗ್ಗರಣೆ, ಕರೆಯುವ ಕಾಲಿಂಗ್ ಬೆಲ್, ಬಚ್ಚಲಿನಿಂದ
ಟವಲ್ ಗಾಗಿ ಕೂಗುವ ಮಗ, ಬಡಿದುಕೊಳ್ಳುವ ಟಿವಿ, ಈಗಲೇ ಬೇಕೆಂದು
ಕೇಳಿಬರುವ ಪಕ್ಕದ ಮನೆಯವಳು, ದುಡ್ಡಿಗೆ ಬರುವ ಇಸ್ತ್ರಿಯವ,
ತಡವಾಯಿತೆಂದು ಎಚ್ಚರಿಸುವ ಗಡಿಯಾರ, ಅರ್ಧ ಬರೆದಿಟ್ಟ ಕವನ,
ದಾಟುವಾಗ ಕನ್ನಡಿಯಲ್ಲಿ ಕಾಣುವ ಸೋತ ಮುಖ
ಜೋತ ಮೊಲೆಯ ಕ್ಷಣ ವಿಷಾದದ ನಡುವೆಯೇ
ಎಲ್ಲವನ್ನೂ ಮರೆತು ಫೋನಿನಲ್ಲಿ ಮಾತು
ಕತೆ. ಅರ್ಧ ಗಂಟೆಯ ನಂತರವೂ ವಿಷಯ ಪ್ರವೇಶವಿಲ್ಲ
ಇಟ್ಟ ನಂತರವೂ ಮುಗಿದಿಲ್ಲ. ಕರೆದ ಕಾರಣವೇನೋ ಗೊತ್ತಿಲ್ಲ.
ಕಂಪನ ನಿಂತ ನಂತರ ಮತ್ತೆ ಒಗ್ಗರಣೆ, ಕಾಲಿಂಗ್ ಬೆಲ್, ಟವಲು, ಟಿವಿ.....
2-
ಕರೆದ ಕಾರಣವೇನೋ?
ರಿಂಗ್ ಟೋನ್ ಗೇ ಕಾಯುತ್ತಿದ್ದಂತೆ
ಒಗ್ಗರಣೆ ಸೀದು ಹೋಗುತ್ತಿದೆ
ಒಂದೆ ಕ್ಷಣಕ್ಕೆ ಸ್ಟೌವ್ ಆರಿಸಿ ಬಂದು ಇಲ್ಲಿ
ಆಧಾರಕ್ಕೆ ಹೀಗೆ ಬಿದ್ದುಕೊಂಡು
ಮಾರುಕಟ್ಟೆಯ ಏರು ಪೆರಿನಿಂದ ಹಿಡಿದು ಡಾನ್ ತನಕ
ವಾರದ ಸಂಚಿಕೆಯಿಂದ ರಾಷ್ಟ್ರಕವಿ ವರೆಗೆ
ಎಲ್ಲಾ ಸಂಗತಿಗಳೂ ಕವರ್ ಆಯಿತು
ಮುಖ್ಯ ವಿಷಯಕ್ಕೆ ಇನ್ನೂ ಪೀಠಿಕೆಯೇ ಹಾಕಿಲ್ಲ
ಸರಿ ಇಡ್ತೀನಿ ಅಂತ ಇಟ್ಟಾಯಿತು
ಕರೆದ ಕಾರಣವೇನೋ?
3-
ರಿಸ್ಕ್ ತಗೊಂಡು ನಾನೇ ಹೇಳಲು
ಆಗೋದೇ ಇಲ್ಲ ಯಾಕಂದರೆ ಆಮೇಲೆ
ಏನೇನೋ ಆಗಿ ಇದೂ ಇಲ್ಲದಾಗಿಹೋದರೆ?












Click it and Unblock the Notifications