ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸೈನಿಕ : ಲೀ ಪದ್ಯದ ಭಾವಾನುವಾದ

By Staff
|
Google Oneindia Kannada News

Poem 'Kannada Soldier' captured in Kannadaಬಹುಜನದ ಕೋರಿಕೆಯ ಮೇರೆಗೆ ಬಹು ಚರ್ಚಿತ ಕವನದ ಕನ್ನಡ ರೂಪಾಂತರವನ್ನು ಸಾದರಪಡಿಸಲಾಗಿದೆ. ಮೂಲ ಇಂಗ್ಲೀಷಿನಲ್ಲಿ ಧೂಳೆಬ್ಬಿಸಿದ, ಸ್ಯಾಸ್ಕೆನ್ ಉದ್ಯೋಗಿ ಲೀ ರಚಿತ "ಕನ್ನಡ ಸೈನಿಕ" ಇಂಗ್ಲಿಷ್ ಪದ್ಯವನ್ನು ಕನ್ನಡದಲ್ಲಿ ಓದಿಬಿಡಿ - ಸಂಪಾದಕ

(**ದಯವಿಟ್ಟು ಕೆಳಗಿನ ಟಿಪ್ಪಣಿಯನ್ನು ಮೊದಲು ಓದಿ**)

ಡಾ. ಮೈ.ಶ್ರೀ. ನಟರಾಜ , ಮೇರಿಲ್ಯಾಂಡ್, ಅಮೆರಿಕ

ಅಲೆಮಾರಿ ಜೀವನದ ಸ್ವಾರಸ್ಯ ಕತೆಗಳನು
ಆಗಾಗ ಹೇಳಿರುವೆ ನಿಮಗಾಗಿ ನಾನು
ಒತ್ತುಶಾವಿಗೆಯನ್ನು ಮುಳ್ಳು-ಚಮಚಕೆ ಸುತ್ತಿ
ಹೆಣೆಯುತ್ತ ಹಾಡುಗಳ ದನಿ ಏರಿಸೆತ್ತಿ
"ಬಾ-ನನ್ನೊಂದಿಗಿರು ಬಂಧು ಈ ಕರುನಾಡಿನಲ್ಲಿ"
ಎಂಬ ಕರೆಗೋಗೊಟ್ಟು ಬಂದು ನೆಲೆಸಿಹೆನಿಲ್ಲಿ (1)

ದೂರದಲಿ ಕೇಳುತಿದೆ "ನೂಡಲಿ"ನ ನುಡಿ-ಹಾಡು
ಹಾಡುತ್ತ ಕೇಳುತ್ತ ಮುದುಕನಾಗಿಹೆ ನೋಡು
ದನಿಗೆ ಮರುದನಿಕೊಟ್ಟು ಸಾರುವರು ಡಂಗುರವ
ನಾಡಭಕುತರು ಇಲ್ಲಿ ಬಾರಿಸುತ ಡಿಂಡಿಮವ
"ಕರುನಾಡ ಸೈನಿಕರು ಎಲ್ಲಿದ್ದರೂ ನಾವು
ಕನ್ನಡದ ಮಕ್ಕಳೇ ಎಂದೆಂದಿಗೂ ನೀವು" (2)

ಜೀವನದಿ ಬಹುದೂರದೂರೂರ ಸುತ್ತಿರುವೆ
ಒತ್ತುಶಾವಿಗೆ ಕತೆಯ ಬಿತ್ತರಿಸೆ ಹೆಣಗಿರುವೆ
ತಣ್ಣಗಾರಿದ ನೂಡಲನು ಮೆಲ್ಲುತ್ತಿದ್ದರು ಹಿಂದೆ
ತವರ ನೆನಪದು ಬಂದು ಕುಣಿಯುವುದು ಕಣ್ಮುಂದೆ
ಇರುತ ಮನೆಯಲಿ ಇಲ್ಲೇ ನೆನೆದು ಸುಖಿಸುವೆ ನಿತ್ಯ
ಶಾವಿಗೆಗು ಶುನಕಗೂ ಇದೆ ತವರು ಸತ್ಯ
(ನೂಡಲಿಗು ಪೂಡಲಿಗು ಇದೆ ತವರು ಸತ್ಯ?) (3)

ನನಗು ವಯಸಾಯ್ತು ಸಾಕಾಯ್ತು ಓಡಾಡಿ
ಹಳದಿ-ಕೆಂಪಿನ ಧ್ವಜವು ಹಾರುತಿದೆ ನೋಡಿ
ದೂರದಲಿ ಕೇಳುತಿದೆ ಅಪ್ಪಳಿಸಿದಲೆಗಳ ಸದ್ದು
ಕೂಗುತಿಹ ಕನ್ನಡಿಗ ಏರುದನಿಯಲಿ ಎದ್ದು
"ಕನ್ನಡದ ಸೈನಿಕರು ಎಲ್ಲಿದ್ದರೂ ನಾವು
ಕರುನಾಡ ಮಕ್ಕಳೇ ಎಂದೆಂದಿಗೂ ನೀವು" (4)


** ಟಿಪ್ಪಣಿ : ಈ ಕವನವನ್ನು/ಹಾಡನ್ನು ಇಂಗೀಷಿನಲ್ಲಿ ಬರೆದ ಲೀ ಎಂಬ ಕವಿ ಮಹಾಶಯನ ಬಗ್ಗೆ ನನಗೆ ಏನೇನೂ ತಿಳಿಯದು. ಇದೇನೂ ಅಂಥಾ ಹೇಳಿಕೊಳ್ಳುವ ಕವನವಲ್ಲ, ಇದೊಂದು ಅಣಕವಾಡು. ಇಂಥಾ ಕವನಗಳನ್ನು ಬರೆಯುವುದು, ಹಾಡುವುದು ಪಾಶ್ಚಿಮಾತ್ಯರ ಪದ್ಧತಿ. ಅಣಕವಾಡುಗಳಲ್ಲಿ ಅಡಕವಾಗಿರುವ ಹಾಸ್ಯ ಮತ್ತು ವ್ಯಂಗ್ಯವನ್ನು ಅನೇಕರು ಮೆಚ್ಚಿಕೊಳ್ಳುತ್ತಾರೆ. (ಉದಾಹರಣೆಗೆ, ಬೇಂದ್ರೆಯವರ "ಕುಣಿಯೋಣು ಬಾರಾ, ಕುಣಿಯೋಣು ಬಾ" ಬದಲು ರಾಶಿಯವರ "ಕೆಣಕೋಣು ಬಾರಾ, ಕೆಣಕೋಣು ಬಾ" ಇತ್ಯಾದಿ.)

ಈ "ಕೆನ್ನಡಿಗ" ಲೀ, (ಈತ ಕೆನಡಾದವನಂತೆ!) ಇದನ್ನು ಯಾವಾಗ ಬರೆದ, ಏಕೆ ಬರೆದ, ಯಾವಾಗ ಹಾಡಿದ, ಹೇಗೆ (ದುರ್)ಉಪಯೋಗಿಸಿದ, ಯಾರು ಅವನ ಶ್ರೋತೃಗಳು, ಏನವನ ಉದ್ದಿಶ್ಯವಾಗಿತ್ತು? ಅಥವಾ ಸುಮ್ಮನೆ ತಮಾಷೆಗೆಂದು ಬರೆದು ಕಷ್ಟಕ್ಕೆ ಸಿಕ್ಕಿಬಿದ್ದನೇ? ಒಂದೂ ಅರಿಯೆನು ನಾ. ಅದುವೆ ಕನ್ನಡದ ಶಾಮಸುಂದರ್ ನನಗೆ ಇಂಗ್ಲಿಷ್ ಮೂಲವನ್ನು ಕಳಿಸಿ ಕನ್ನಡದ ಅವತರಣಿಕೆಯನ್ನು ಕೇಳಿದ್ದಕ್ಕೆ ಮಾಡಿದ್ದೇನೆ, ನನಗೆ ತೋಚಿದ ಭಾವಾನುವಾದ. ಹಿನ್ನೆಲೆ ಗೊತ್ತಿಲ್ಲದೇ ಒಂದಿಷ್ಟು ಊಹಾಪೋಹಗಳಿಂದಾದ ಅವತಾರವಿದು.

ಅವನಿಗೇಕೆ ನೂಡಲಿನ ಅಬ್‌ಸೆಷನ್ನು? (ಆತ ಚೀನೀಭಾಯಿ ಇರಬಹುದೇ? ಎಂಬ ಅನುಮಾನ ಕೆಲವರಿಗೆ ಬಂದಿರಲೂಬಹುದು.) ನೂಡಲ್‌ಪ್ರಿಯನೂ ಅಲ್ಲ, ಪೂಡಲ್‌ಪ್ರಿಯನೂ ಅಲ್ಲ, ಲೇವಡಿಪ್ರಿಯ ನಮ್ಮ ಲೀ ಮಹಾನುಭಾವ! ಪ್ರಾಯಶಃ ಕನ್ನಡ ಚಳವಳಿಯ ಮೆರವಣಿಗೆಯ ಟ್ರ್ಯಾಫಿಕ್ಕಿನಲ್ಲಿ ಸಿಕ್ಕಿಬಿದ್ದಾಗ ಹೊಳೆದ ಈ ಕವನವನ್ನು ತನಗೆ ಚಿರಪರಿಚಿತ ಬ್ಯಾಂಡ್ ಸಾಂಗ್ ಒಂದರ ಧಾಟಿಯಲ್ಲಿ ಹಾಡಿಕೊಳ್ಳುತ್ತಾ ದಾರಿ ಕಳೆದಿರಬಹುದೇ? ಕೆನಡಾದ ಕನ್ನಡಿಗರನ್ನು ಚುಡಾಯಿಸಲು ಬರೆದು ಬೆಂಗಳೂರಿನ ಪಬ್ಬಿನಲ್ಲಿ ಹಾಡಿರಬಹುದೇ?

ಏನೇ ಆಗಲಿ, ಇವನ ಕವನದಿಂದ ಕನ್ನಡಿಗರಿಗೆ ಕೋಪ ಬಂದಿದೆಯೆಂಬ ವಿಷಯ ಅದುವೆಕನ್ನಡದಲ್ಲಿ ಓದಿದಾಗಲೇ ತಿಳಿದದ್ದು. ಕನ್ನಡ ಚಳವಳಿಗಾರರ ಬಗ್ಗೆ ನನಗೆ ತುಂಬಾ ಅಭಿಮಾನವಿದೆ, ಆದರೆ, ಅವನ ಕಂಪನಿಯ ಆಸ್ತಿ-ಪಾಸ್ತಿಗಳನ್ನು ನಷ್ಟಮಾಡಬಾರದಿತ್ತೇನೋ, ಎನ್ನಿಸುತ್ತಿದೆ. ಎಲ್ಲ ವಿವರಗಳು ಗೊತ್ತಿಲ್ಲದೇ ಪ್ರತಿಕ್ರಿಯಿಸುತ್ತಿದ್ದೇನೆ, ಕ್ಷಮಿಸಿ. ಈತನಿಗೆ ತಕ್ಕ ಶಿಕ್ಷೆ ಏನೆಂದರೆ, ಅವನು ಖಡ್ಡಾಯವಾಗಿ ಕನ್ನಡವನ್ನು ಕಲಿಯಬೇಕು, ಒಳ್ಳೆ ಕನ್ನಡ ಪಂಡಿತರಿಂದ ಕಲಿತು ಮುಂದಿನ ಅಣಕವನ್ನು ಕನ್ನಡದಲ್ಲೇ ಬರೆಯಬೇಕು. ಒಪ್ಪಿಗೆಯಿಲ್ಲದಿದ್ದರೆ, ಕನ್ನಡ ಶಾಲೆಯೊಂದರಲ್ಲಿ ವಾರಕ್ಕೊಂದಾವರ್ತಿ ಕಂಪ್ಯೂಟರ್ ಕಲಿಸಬೇಕು, ಮತ್ಯಾವ ಪ್ರತೀಕಾರವೂ ಸ್ವಲ್ಪ ಅತಿರೇಕವಾಗಬಹುದು. ಏನಂತೀರಿ?

ಇಂಗ್ಲಿಷ್‌ನಲ್ಲಿರುವ ಲೀ ರಚಿತ ಮೂಲ ಕವನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X