ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೊಟ್ಟಿ

By Staff
|
Google Oneindia Kannada News
  • ಅಕ್ಷರ ಕಾವ್ಯ : ಡಾ.ಕೆ.ಎನ್.ದೊಡ್ಡಮನಿ, ಬೆಳಗಾವಿ. ರೊಟ್ಟಿ ತಟ್ಟುವ ಸಂಭ್ರಮ
  • ದೃಶ್ಯ ಕಾವ್ಯ : ಡಿ.ಬಿ.ಪಾಟೀಲ, ಬೆಳಗಾವಿ

ಒಂದು ಕಾಲು ಇತ್ತು:
ಕಾರಜ್ವಾಳ -ಬಿಳಿಜ್ವಾಳ ಭಯಂಕರ ಸುಗ್ಗಿ
ಬೆಳ್ಳಿಚುಕ್ಕಿ ಮೂಡಿ ಬೆಳಕ ಹರಿಯೊದ್ರೊಳಗ
ಕಲ್ಲಿನ ನಾದನ್ಯಾಗ ಹಾಡಿನ ಸೊಲ್ಲ ಬೆರಸಿ
ಸಿಗಾರೇರಿ ಬೀಸಿದ ಹಿಟ್ಟನಾದಿ, ರುಬ್ಬಿ
ರೊಟ್ಟಿ ಮಾಡ್ತಿದ್ದರು ನಮ್ಮವ್ವ,
ಚಿಗವ್ವ ಎಲ್ಲರೂ ಒಲಿಮ್ಯಾಲ.

ಹಸಿಬಿಸಿ ಶೆಗಣಿ ಕುಳ್ಳ
ಹಾದಿಬೀದಿ ಮ್ಯಾಲಿನ ಕಳ್ಳಿಕಟ್ಟಿಗಿ
ಕರಿ ನೆಲದಾಗ ಕಿತ್ತಿಬಿದ್ದ ಖ್ವಾಡವಿ ಆರಸಿ
ಬಾಜು ಮನ್ಯಾಗಿನ ಬೆಂಕಿಲೆ ಒಲಿ ಹೊತ್ತಿಸಿ
ಬಡದ ರೊಟ್ಟಿ ಮಾಡ್ತಿದ್ದರು,
ಇಡೀ ಓಣಿಗೇ ಕೇಳುಹಾಂಗ.

ಅಡುಗಿ ಮನ್ಯಾಗ
ಮೈಮುರ್‍ಕೊಂಡ ಬಿದ್ದ ಕತ್ಲ್ಯಾಗ
ಉಸರಗಟ್ಟಿ ಸಾಯೋ ಹೊಗಿಯೊಳಗs
ಒಲ್ಯಾಗ ಮಾರಿಹಾಕಿ
ಊದಿ ಉರಿ ಮಾಡಿ
ರೊಟ್ಟಿ ಬೇಸತ್ತಿದ್ದಳು ನಮ್ಮವ್ವ

ತವ್ಯಾಗ ಉಬ್ಬಿದ ರೊಟ್ಟಿ ನೋಡಿ ನಾವೂs
ಕುಣದ ಕುಪ್ಪಳಿಸಿ
ಹಸದ ಹಲ್ಲಕಿಸದ
ಅವ್ವಕೊಟ್ಟ ಅದs ಬಿಸಿರೊಟ್ಟಿ
ಕೈಸುಟ್ಕೊಂತ ಅಂಗಳದಾಗ
ಹಾಸಿದ ಬೆಳದಿಂಗಳನ್ಯಾಗ
ಹಾಡ್ಯಾಡಿ ತಿಂದ
ಅಲ್ಲೇ ನಿದ್ದಿ ಹೋಗತಿದ್ವಿ.

ಮಾರ್ಡನ್ ಹಾಡ ಹಾಡ್ಕೊಂತs
ಈಗ ನನ್ನ ಹೆಂಡ್ತಿನೂs
ರೊಟ್ಟಿ ಮಾಡ್ತಾಳ
ಕಿಚನ ರೂಮನ್ಯಾಗ ನಿಂತ-
ನಡಮಟ ಕಟ್ಟಿದ ಕಟ್ಟಿಮ್ಯಾಲ
ಗ್ಯಾಸ ಸಿಲೆಂಡರ ಒಲಿಹೊತ್ತಿಸಿ
ಹಾಂ ಅನ್ನೊದಕs ರೊಟ್ಟಿರೆಡಿ!

ಆದರ,
ನಮ್ಮವ್ವನ ರೊಟ್ಟಿಹಾಂಗ ಹೆಂಡ್ತಿ ರೊಟ್ಟಿ
ತವ್ಯಾಗ ಉಬ್ಬಿ ನಿಲ್ಲಾಂಗಿಲ್ಲ
ಎತ್ತಿಹಿಡದರ ಕೈಯಾಗೂs ನಿಲ್ಲಾಂಗಿಲ್ಲ.

ಹಿಂಗ್ಯಾಕs ನಿನ್ನ ರೊಟ್ಟಿ?
ಅಂತ ಹೆಂಡ್ತಿನ ಕೇಳಿದರ:
ಅವಹಂಗ!
ಹೈಬ್ರಿಡಜ್ವಾಳ ರೊಟ್ಟಿ ಅಂತಾಳ!!

[ಬಹಳ ದಿನಕ್ಕೆ ಒಂದು ಪಸಂದ್ ಪದ್ಯ ಓದೋ ಅವಕಾಶ ನಮಗೂ ಮತ್ತು ನಿಮಗೂ.. ಇಂಥ ಪದ್ಯಗಳನ್ನು ಇತರೇ ಕವಿಗಳು ನಮಗೆ ಇನ್ನಷ್ಟು ಕಳುಹಿಸಲಿ.. ಓದೋ ಭಾಗ್ಯ ಎಲ್ಲರದಾಗಲಿ.. : ಸಂಪಾದಕ]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X