ಚಳಿಯ ಬೆಳಗಲಿ
ಈ ಪದ್ಯ ಓದುತ್ತಾ ಓದುತ್ತಾ ಚಳಿ ಕಡಿಮೆಯಾಗುತ್ತದೆ.. ಮೈಮನಗಳಲ್ಲಿ ಬಿಸಿಯೇರುತ್ತದೆ... ನಮಗೆ ಗೊತ್ತಿಲ್ಲದೆಯೇ ಯಾರನ್ನೋ ಹುಡುಕುತ್ತೇವೆ. ಈ ಪದ್ಯ ಓದಿದ ಮೇಲೆ ಕೆ.ಎಸ್.ನರಸಿಂಹಸ್ವಾಮಿ ಅವರ ಪದ್ಯಗಳು ನೆನಪಾದರೆ ಅಚ್ಚರಿಯೇನಿಲ್ಲ. ಒಂದೇ ಸಂಗತಿ ಇಬ್ಬರಿಗೂ ಹೊಳೆದರೆ ಅಚ್ಚರಿಯೇನಿದೆ. ಈ ಚುಮುಚುಮು ಚಳಿಯ ಮಧ್ಯೆ ಒಂದು ಒಳ್ಳೆ ಪದ್ಯ ನೀಡಿದ ಕವಿಗೆ ಹೇಳೋಣ ಥ್ಯಾಂಕ್ಸ್.
- ಶ್ರೀನಿಧಿ ಡಿ.ಎಸ್.
ತೆಳ್ಳಗಿನ ಚಳಿ ಪದರು, ಮುಂಜಾವ ಸುತ್ತೆಲ್ಲಜುಮುರು ಮಳೆ ನಿಂತಿಹುದು, ಆಗತಾನೆ.
ಮನೆಯ ಹಿತ್ತಿಲಲಿಹುದು, ಪಾರಿಜಾತದ ವೃಕ್ಷ
ಎಲೆ ಹಸಿರ ಮೇಲೆಲ್ಲ ಬಿಳಿ ಹೂವ ರಂಗೋಲಿ.
ಹೂವು ಹೆಕ್ಕುವ ಸಮಯ,ಅವಳು ಬರಬೇಕಿತ್ತು
ಇಂದೇಕೆ ಬಂದಿಲ್ಲ, ಬಹಳ ಚಳಿಯೆಂದೆ?
ನಿನ್ನೆ ನನಗೂ ಮೊದಲೆ ಬಂದುನಿಂತಿದ್ದಳು,
ಯಾಕಿಂದು ಈ ರೀತಿ, ತಿಳಿಯದಲ್ಲ
ಚಳಿಯು ಕಾರಣವಲ್ಲ, ಬೇರೇನೋ ಇರಬೇಕು
ಅಥವಾ ಚಳಿಯೇ ಹೌದೋ?, ಇರಲೂಬಹುದು!
ಎಂದೂ ತಡಮಾಡಿಲ್ಲ, ಅವಳು ನನ್ನ ಹಾಗಲ್ಲ.
ಪಾರಿಜಾತಕೂ ಗೊತ್ತು ಅದು, ಅಲ್ಲವೇನೆ?
ನಾನು ತಡವಾದಂದು ಹುಸಿಮುನಿಸು ತೋರುವಳು
ಮಾತೇ ಆಡುವುದಿಲ್ಲ ಮೂರು ನಿಮಿಷ!
ಮತ್ತೆ ನಾನೇ ಮೆಲ್ಲ ಬೆರಳು ತಾಕಿಸಿ, ಕಣ್ಣು ಹೊಡೆದು
ನಗಿಸಿ, ಕಿವಿ ಹಿಡಿದು ಕ್ಷಮೆ ಕೇಳಿ- ಅಬ್ಬಬ್ಬ, ಕಷ್ಟ ಕಷ್ಟ.
ಇಂದು ಮಾಡುವೆ ಶಾಸ್ತಿ, ಬರಲಿ ನನ್ನಯ ಬಳಿಗೆ
ಮಾತಾನಾಡುವುದಿಲ್ಲ, ನೋಡುವುದೂ ಇಲ್ಲ
ನನ್ನ ಪಾಡಿಗೆ ನಾನು ಹೂಹೆಕ್ಕಿ ನಡೆಯುವೆನು
ನನ್ನ ಕಾಡಿಸುವಳಲ್ಲ, ಇಂದು ಗೊತ್ತಾಗಲಿ!
ಮುನಿಸೇನಾದರೂ ಇದೆಯೆ ? ಹೇಗೆ ಸಾಧ್ಯ
ನವಿಲುಗರಿ ಕೊಟ್ಟಿದ್ದು ನಿನ್ನೆ ಬೆಳಗೆಯೆ ತಾನೆ?
ಬಾರೆ ಬೇಗನೆ ಹುಡುಗಿ, ಒಬ್ಬನೇ ಇರಲಾರೆ
ದೇವಪೂಜೆಗೆ ಹೂವು ನನಗಂತೂ ನೆಪವೇ.
ಅಪ್ಪ ಹೊಗಳುತಿದ್ದ ನಿನ್ನೆ, ಮಗನು ಉತ್ತಮನೀಗ
ಶ್ರದ್ಧೆ ಭಕ್ತಿಯು ಬರುತಿದೆ ಜೀವನದೊಳು.
ನೀನು ಕಾರಣವೆಂದು ಅವಗೆಂತು ಗೊತ್ತು,ಇಲ್ಲದಿರೆ
ಈ ಕೊರೆವ ಚಳಿಯಲ್ಲಿ ಹೂವ ಹೆಕ್ಕಲು ಹುಚ್ಚೆ?
ಒಂದೊಂದೆ ಹೂ ಹೆಕ್ಕಿ, ಬಿದಿರ ಬುಟ್ಟಿಗೆ ಹಾಕಿ
ಮತ್ತೆ ನೋಡಿದನವನು ಮಂಜದಾರಿ.
ಮೆಲು ಗೆಜ್ಜೆಯಾದನಿಯು, ಬೇಲಿದಾಟುತಲಿರಲು
ಬುಟ್ಟಿಯಾ ಹೂ ಮತ್ತೆ, ಭೂಮಿಪಾಲು.


Click it and Unblock the Notifications
