ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ಕವಿತೆಗಳು

By Staff
|
Google Oneindia Kannada News
ಇಂಥ ಮಧ್ಯಾಹ್ನ

ಸಿಟ್ಟೋ ಸೆಡವೋ ಹಠವೋ ಜ್ವರವೋ
ತನಗೇ ತಿಳಿಯದೇ ಧುಮುಗುಡುವ ಸೂರ್ಯ,
ಕರಗುವುದ ಮರೆತು ಬಿಳುಚು ಹೊಡೆದು
ಹಿಂಜಿದ ಹತ್ತಿಯಂತಹ ಮೋಡಗಳು,
ಹನಿ ನೀರಿಗೆ ಕಳವಳಿಸಿದ ವಿಭ್ರಾಂತ ಭುವಿ,
ಕಾಕಾ ಎನ್ನಲೂ ತ್ರಾಣವಿಲ್ಲದ ಮರದ ಮೇಲಿನ ಕಾಗೆ...
ಬಿರುಬೇಸಿಗೆಯ ನಡು ಮಧ್ಯಾಹ್ನಗಳು
ಸ್ತಬ್ಧ ಚಿತ್ರಗಳಂತೆ.. ಅಲ್ಲಾಡದ ಎಲೆಗಳಂತೆ;

ಇಂಥ ಮಧ್ಯಾಹ್ನ
ಪುಟ್ಟ ಬೆರಳಲಿ ಬಾಗಿಲು ತೆರೆದು
ಗೇಟು ಸಂಧಿಯಲಿ ತೂರಿಕೊಂಡು
ಮಗುವೊಂದು ಓಡುತಿದೆ ರಸ್ತೆಯಲಿ
ಚಪ್ಪಲಿ ಕೂಡ ಹಾಕದ ಗುಲಾಬಿ ಪಾದಗಳು
ಯಾವುದೋ ಕರೆಯ ಬೆನ್ನತ್ತಿದಂತೆ,
ಮಗು ಎದುರು ಮನೆಯ ಬಾಗಿಲು ಬಡಿಯುತಿದೆ
ಎಳೆ ಬೆರಳ ಮಾಂತ್ರಿಕ ಸ್ಪರ್ಶಕೆ ತಟ್ಟನೆ ತೆರೆದ ಬಾಗಿಲು..
ತೆಕ್ಕೆ ಬಡಿದ ಬಾಹುಗಳಲಿ
ಪುಟ್ಟ ಮಗುವಿನ ಕೇಕೆ..

ಇಂಥ ಮಧ್ಯಾಹ್ನ
ನನ್ನೊಳಗೆ ಬೆಂಕಿಹೂಗಳ ಅರಳಿಸಿ
ತಟಸ್ಥ ನಿಂತ ಕೆಂಡಸಂಪಿಗೆ ಮರ
ಧ್ಯಾನಿಸುತಿದೆ ಮಳೆಯ ಸಂಜೆಯನು,
ಮಾಗಿಯ ಬೆಳಗನು, ಆಳದ ಮೌನವನು,
ಅನವರತ ಕನವರಿಸುತಿದೆ
ತುಕ್ಕು ಹಿಡಿದ ಗೇಟಿನ ಬಳಿ
ಕೇಳಲಿರುವ ಅಂಚೆಯವನ ಕರೆಯನು.

*

ಬಳೆ ಅಂಗಡಿಯ ಮುಂದೆ

ಬಳೆ ಅಂಗಡಿಯ ಮುಂದೆ ನಿಂತವಳು
ಒಳ ಹೋಗಲಾರಳು.. ಮನಸ್ಸು
ಕಿಣಿಕಿಣಿಸುತ್ತ ಹೊರಬರಲೊಲ್ಲದು;
ಬಣ್ಣ ಖರ್ಚಾಗಿ ಅರ್ಧಕ್ಕೇ ನಿಲ್ಲಿಸಿದ
ಕಲಾವಿದನ ಚಿತ್ರದಂತೆ
ನಿಲ್ಲುತ್ತಾಳವಳು ಹೀಗೆ ಅಲ್ಲಾಡದ ರೇಖೆಯಂತೆ
ಯಾವುದೋ ಹುಡುಗಿಯ ಮೆಹಂದಿ ಬೆರಳ ಲಾಸ್ಯವನ್ನು
ಕಾಡಿಗೆ ಕಣ್ಣ ಹೊಳಪನ್ನು ನೋಡುತ್ತ,
ಸಂಜೆ ಸಿಂಗಾರವಾಗಿ
ಗೇಟಿಗಾತು ನಿಂತ ಹೆಂಗಸರ ಹಗುರ ಪರಿಮಳವ,
ಕೋಲಾಟದ ಹುಡುಗಿಯರ ಗೆಜ್ಜೆ ಹೆಜ್ಜೆಗಳ,
ತುಂಬಿದ ಬಸುರಿಯಾಳಗಿನ ಮಿಸುಗಾಟವ
ಗಮನಿಸುತ್ತ.. ಫಕ್ಕನೆ ನಿಂತು ಬಿಡುತ್ತಾಳೆ;

ಇದೆಂಥ ಎದೆ ಭಾರ
ಯಾವ ಕ್ಷಣದೊಳು ಮನ ಒಳ ಸರಿದು
ಯಾರದು ಬಾಗಿಲು ಮುಚ್ಚಿ ಬೀಗ ಜಡಿದಿದ್ದು?
ಯಾರು ಯಾರದು ಕೀ ಕಳೆದಿದ್ದು?
ಅಥವ ಕೀ ಇಲ್ಲದ ಬೀಗವೆ?
ಒಳಗಿನ ಮೌನ
ಹೊರಗಿನ ಮೌನಕೆ ಕೇಳುತಿದೆ
ಬೀಗ ಮುರಿಯಲಾರೆಯಾ?

*

ಪ್ರಾರ್ಥನೆ

ಅಲ್ಲಿ
ನೀನು ಪ್ರಾರ್ಥನೆಗೆ ತೊಡಗುವ ಹೊತ್ತು
ಇಲ್ಲಿ ಮಾಮರದಲ್ಲಿ
ಹಕ್ಕಿಗಳ ಚಿಲಿಪಿಲಿ ಸದ್ದು
ಹಕ್ಕಿಯಾಲಿಸಿತೆ ಪ್ರಾರ್ಥನೆಗೆ ಕುಳಿತ ನಿನ್ನೆದೆಯ ಮೊರೆತ?
ಹಕ್ಕಿಯಾತ್ಮದ ಕೂಗು ನಿನ್ನ ತಟ್ಟಿತೆ?
ಗೊತ್ತಿಲ್ಲ ನನಗೆ
ನನ್ನೊಳಗೆ ಮಾತ್ರ ಎರಡೂ ದನಿ
ಶುದ್ಧ ನೀರೊಳಗಿನ ಬಿಂಬಪ್ರತಿಬಿಂಬದಂತೆ;

ದೇವರಿದ್ದಾನೆಯೇ..
ಇದ್ದರೆ ಅವನದಾವ ಧರ್ಮವಂತೆ
ಅವನ ಭಾಷೆ, ವೇಷಭೂಷಣ, ದೇಶ, ಕಾಲ
ಎಲ್ಲ ಯಾವ್ಯದಂತೆ?
ಅದೂ ಗೊತ್ತಿಲ್ಲ ನನಗೆ
ಸುಜ್ಞಾನಿ ಹಕ್ಕಿ ಮತ್ತು ನಿನ್ನ ನಡುವೆ
ಪರಮ ಅಜ್ಞಾನಿ ನಾನು

ಆದರೂ ನಿನ್ನ ಪ್ರಾರ್ಥನೆ ಮುಗಿದ ಹೊತ್ತು,
ಹಕ್ಕಿ ಮಾಮರವ ಬಿಟ್ಟು ಹಾರಿದ ಹೊತ್ತು
ನನ್ನ ಆತ್ಮ ಮೆಲ್ಲನೆ ಮೊರೆಯಿಡುತ್ತೆ
ದೇವರಿರುವುದೇ ಆದರೆ
ಅನವರತ ರಕ್ಷಿಸಲಿ ಸಕಲ ಚರಾಚರಗಳನು,
ಮಣ್ಣೊಳಗಿನ ಹಸಿಬೇರಿನಂತೆ
ಕಾಯ್ದು ಕಾಪಿಡಲಿ ನಿನ್ನೊಳಗಿನ ಜೀವಜಲವನು
ಮತ್ತು ಆ ಹಕ್ಕಿಗೂ ದೊರೆಯಲಿ
ಪ್ರತಿದಿನದ ಕಾಳು.


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X