ಅಕ್ಷರಮಾಲೆ (ತಿಮ್ಮೋಪಾಖ್ಯಾನ)
- ಹಂ. ಕ. ರಾಮಪ್ರಿಯನ್,
ಕ್ಲಾರ್ಕ್ಸ್‌ವಿಲ್, ಮೇರಿಲ್ಯಾಂಡ್
E-mail : [email protected]
ಅಕ್ಸ್ರಾ ಕಲ್ಯಾಕ್ ಆಸೆಪಟ್ಕೊಂಡ್ ಇಸ್ಕೂಲ್ಸೇರ್ದ ತಿಮ್ಮಈಸಂಗ್ ಬೊಗ್ಬಿದ್ದ್ ಉಂಡೋಗ್ಲಾಂತ ಊಟ ಕೊಟ್ಳವ್ನಮ್ಮ
‘ಋಷ್ಯಂತಿವ್ರೀಂತ್’ ತಿಮ್ಮ ಯೋಳ್ದ ‘ೠ’ ಯಾಕ್ಸಾರ್ ನಮ್ಗ್ಬೇಕು
ಲೃ ಲೄ ಸಾವಾಸ್ ಬ್ಯಾಡಾ ದ್ಯಾವ್ರೆ ಸಂಸ್ಕೃತ್ದೋರ್ಗೇ ಸಾಕು...
ಎಸ್ಟ್ಕಸ್ಟಾದ್ರೂ ಏನ್ ಕಲ್ಸಿದ್ರೂ ದಿನಕ್ ಐದಕ್ಸ್ರ ಕಲ್ತ
ಒತ್ತಾರ್ ಓದ್ತಾ ತಲ್ನೋವ್ ಬಂದಾಗ್ ತಿಮ್ಮಂಗ್ ಡಾಕ್ಟ್ರತ್ರಲ್ತ
ಔಸ್ದ ಕುಡ್ದ್ಬುಟ್ ಮನೀಕ್ಯಂಡ್ಮೇಲ್ ತಲ್ನೋವೋಯ್ತು ರೋಷ್ಟು
ಅಂಗ್ಡೀ ಬೀದ್ಯಾಗೇಳ್ದ ತಿಮ್ಮ ‘ಕಲ್ತ್ಕೊಂಡಿವ್ನಿ’ ಅಃಷ್ಟು!
ಕಲ್ಯೋದ್ಕಷ್ಟ ಮಿದ್ಳಿಗ್ನಂಗೆ ಖಾರ ಆಕ್ದಂಗೈತೆ
ಗಡ್ಬಿಡಿ ಮಾಡ್ಕೊಂಡೋದ್ತೀನ್ ನಾನು ಘಾಬ್ರಿ ಆಗ್ಬುಡ್ತೈತೆ
ಚಳೀಗ್ ಕಂಬ್ಳಿ ಬಿಸ್ಲಿಗ್ ಮಳ್ಗೆ ಛತ್ರಿ ಇಡ್ಕೋತೀನಿ
ಜಾಗ್ರತ್ಯಾಗೇ ಝಳ್ಕ ಮಾಡ್ಕೊಂಡ್ ಇಸ್ಕೂಲ್ಗೋಗ್ಬಿಡ್ತೀನಿ
ಟೊಪೀ ಆಕೋ ಠಕ್ಕರ್ ಬಂದ್ರೂ ಅವ್ರನ್ನೋಡಾಕಿಲ್ಲ
ಡುಂ ಡುಂ ಅಂತ ಢೋಲ್ ಬಾರ್ಸ್ತಿದ್ರೂ ಅದ್ನ ಕೇಳಾಕಿಲ್ಲ
ತಾಯೀ ತಂದೆ ಥರ್‌ಥರ್ವಾಗಿ ಪುಸ್ತ್ಕ ಕೊಂಡ್ಕೊಟ್ಟವ್ರೆ
‘ದನ್ಕಾಯ್ಬೇಡ್ಲಾ ಧನ್ವಂತ್ನಾಗ್ಲಾಂತ್’ ಆಸೆಪಟ್ಕೊಂಡವ್ರೆ
ಪಾಂಡುರಂಗ ಫಾಲನೇತ್ರ ಒಬ್ನೇ ದ್ಯಾವ್ರು ನಮ್ಗೆ
ಬಲ್ಬಲ್ ಭಾರಾ ಒತ್ತಿದೀನಿ ಒಪ್ಪಿಸ್ತೀನವಂಗೆ
‘ಙಾ’ನೂ ಬ್ಯಾಡಾ ‘ಞಾ’ನೂ ಬ್ಯಾಡಾ ‘ಣಾ’ ನಂಗ್ಯಾಕ್ರೀ ಬೇಕು
ನಮೋ ನಮೋ ಅಂತ್ಯೋಳಾಕೆ ‘ನಾ’ನೂ ‘ಮಾ’ನೂ ಸಾಕು
‘ಯಾದವ್ ರಾಘವ್ ಲಾಭವ್ ಕೊಡ್ಲಿ ವಂದ್ಸೂಂತ್’ ಮೇಷ್ಟ್ರು ಅಂದ್ರು
ಶುದ್ಧ್ ಮಾತಾಡ್ತಾ ಷೋಕೀ ಬಿಡ್ತಾ ಸರ್ಯಾಗೋದ್ಕೋಂತಂದ್ರು
ಹೆನ್ರಿ ಹಿಗಿನ್ಸ್ ‘ಹಾರ್ಟ್‌ಫರ್ಡ್ ಹೆರಿಫರ್ಡ್ ಹ್ಯಾಂಪ್ಷೈರ್’ ಹೇಳ್ಕೊಟ್ ಹಂಗೆ
ಹೆಂಗೆ ಹತ್ರ ಹಕ್ಕಿ ಹಾರೋದ್ ಮೇಷ್ಟ್ರ್ ಹೇಳ್ಕೊಟ್ರು ನಮ್ಗೆ
ಗುರುವಿಂ ಕಲಿತೆನ್ ತುಂಬಾ ಪದವಾಕ್ಯಂಗಳಂ ಸದಾ
ಳಾರಬ್ಧಪದವಂ ಮಾತ್ರ ಜಗದೊಳ್ ನಾನು ಕಾಣೆನು
ಫಲಶ್ರುತಿ
ತಿಮ್ಮೋಪಾಖ್ಯಾನವನ್ನಿಂತು ನಿತ್ಯವಾರೋದುತಿರ್ಪರೋ
ಸರ್ವಾಕ್ಷರಂಗಳಂ ಕಲ್ತು ಸರ್ವಸಂತೋಷ ಪೊಂದುವರ್ ।।
ಪೂರಕ ಓದಿಗೆ ಸಾಮಗ್ರಿ..
ಕನ್ನಡ ಹಾಗೂ ಕೈಲಾಸಂ
ಕನ್ನಡವನ್ನು ಕೈ ಬಿಡಲಾಗಿದೆ !












Click it and Unblock the Notifications