Women’s Reservation: ಮಹಿಳಾ ಮೀಸಲಾತಿ - ಕ್ಷೇತ್ರ ಮರು ವಿಂಗಡಣೆ ವಿವಾದ: ಬಿಜೆಪಿ ಟ್ವೀಟ್‌ಗಳಿಗೆ ಕನ್ನಡಿಗರಿಂದ ಕ್ಲಾಸ್
Women's Reservation - Delimitation: ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಹಾಗೂ ಈ ಮರು ವಿಂಗಡಣೆಯ ಆಧಾರದ ಮೇಲೆ ಮಹಿಳಾ ಮೀಸಲಾತಿ ಮಂಡನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಡನೆ ಮಾಡಲಾಗಿರುವ ಮಸೂದೆಗಳಿಗೆ ಸೋಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರವು ವಿರೋಧ ಪಕ್ಷಗಳ ವಿರುದ್ಧ ಕೆಂಡಕಾರಿದ್ದು, ಆಕ್ಷೇಪ ವ್ಯಕ್ತಪಡಿಸುತ್ತಿದೆ. ಇದರ ನಡುವೆ ಕರ್ನಾಟಕ ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಸರಣಿ ಟ್ವೀಟ್ ಮಾಡಿದ್ದು, ಬಹುತೇಕ ಟ್ವೀಟ್ ಹಾಗೂ ಬರಹಗಳಿಗೆ ಕನ್ನಡಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಜೆಪಿ ಹೇಳಿದ್ದೇನು ಹಾಗೂ ಇದಕ್ಕೆ ಕನ್ನಡಿಗರ ಪ್ರತಿಕ್ರಿಯೆ ಏನು ಎನ್ನುವ ವಿವರ ಇಲ್ಲಿದೆ.
ಮಹಿಳೆಯರಿಗೆ ಹಕ್ಕು ಸಿಗಬಾರದು ಎಂಬುದೇ ಕಾಂಗ್ರೆಸ್‌ನ ಅಜೆಂಡಾ. 33% ಮಹಿಳಾ ಮೀಸಲಾತಿ ಕಾಯಿದೆಯನ್ನು ಜಾರಿಗೆ ತರಲು ದಶಕಗಳಿಂದ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್‌ನ ಅಸಲಿ ಮುಖ ಇಂದು ಮತ್ತೆ ಬಯಲಾಗಿದೆ. ಕ್ಷೇತ್ರ ಪುನರ್ ವಿಂಗಡಣೆಯಿಂದ ಕರ್ನಾಟಕದ ಲೋಕಸಭಾ ಸೀಟುಗಳು 28 ರಿಂದ 42 ಕ್ಕೆ ಏರಿಕೆಯಾಗುತ್ತವೆ. ದಕ್ಷಿಣ ಭಾರತದ ಒಟ್ಟು ಬಲ ಹೆಚ್ಚಾಗುತ್ತದೆ. ಕರ್ನಾಟಕದ ಪ್ರಾತಿನಿಧ್ಯದ ಪಾಲು 5.15% ಯಥಾವತ್ತು ಇರುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.

ವಾಸ್ತವ ಹೀಗಿರುವಾಗ ಕರ್ನಾಟಕಕ್ಕೆ ಅನ್ಯಾಯವಾಗುತ್ತದೆ ಎಂದು ಬೊಬ್ಬೆ ಹೊಡೆದು ಕ್ಷೇತ್ರ ಪುನರ್'ವಿಂಗಡಣೆ ವಿರೋಧಿಸುವ Indian National Congress - Karnataka ನಾಯಕರೇ, ಹೇಗೆ ಅನ್ಯಾಯವಾಗುತ್ತದೆ ತಿಳಿಸುವಿರಾ? ಕನ್ನಡಿಗರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವುದು ಕಾಂಗ್ರೆಸ್ ಗೆ ಸಹಿಸಲು ಸಾಧ್ಯವಾಗುವುದಿಲ್ಲವೇ? ರಾಜ್ಯದ ಹಿತಾಸಕ್ತಿಗಿಂತ ಕಾಂಗ್ರೆಸ್ಸಿಗರಿಗೆ ರಾಜಕೀಯವೇ ಮುಖ್ಯವಾಗಿದೆ ಎಂದು ಕರ್ನಾಟಕ ಬಿಜೆಪಿ ಪ್ರಶ್ನೆ ಮಾಡಿದೆ.
ಮುಂದುವರಿದು ಮಹಿಳೆಯರಿಗೆ ದ್ರೋಹ ಬಗೆದ ಕಾಂಗ್ರೆಸ್ ವಿರುದ್ಧ ಮಹಿಳೆಯರ ಆಕ್ರೋಶ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ನಿರ್ಬಂಧಿಸಿದ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಎನ್ನುವ ಪ್ರತಿಭಟನಾ ವಿಡಿಯೋವನ್ನು ಸಹ ಬಿಜೆಪಿ ಹಂಚಿಕೊಂಡಿದೆ. ಮಹಿಳೆಯರಿಗೆ 33% ಮೀಸಲಾತಿ ನೀಡುವ ಐತಿಹಾಸಿಕ ಮಸೂದೆಯ ವಿರುದ್ಧ ಸಂಸತ್ತಿನಲ್ಲಿ ಮತ ಚಲಾಯಿಸುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಮಹಿಳಾ ವಿರೋಧಿ ನೀತಿಯನ್ನು ಸಾಬೀತುಪಡಿಸಿದೆ. ನಾರಿ ಶಕ್ತಿಯ ಹಕ್ಕನ್ನು ಕಸಿದುಕೊಂಡ ಈ ರಾಜ್ಯದ ಕಾಂಗ್ರೆಸ್ ಸಂಸದರನ್ನು ಕರ್ನಾಟಕದ ಹೆಣ್ಣುಮಕ್ಕಳು ಎಂದಿಗೂ ಕ್ಷಮಿಸುವುದಿಲ್ಲ. ಅಧಿಕಾರದ ಆಸೆಗಾಗಿ ಮಹಿಳೆಯರ ಪ್ರಗತಿಗೆ ಅಡ್ಡಿಯಾದ ಕರ್ನಾಟಕದ ಕಾಂಗ್ರೆಸ್ ಸಂಸದರಿಗೆ ರಾಜ್ಯದ ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ.
ಇನ್ನು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು, ಮಹಿಳಾ ಮೀಸಲಾತಿ ಜಾರಿ ರಾಜಕೀಯ ಲಾಭಕ್ಕಾಗಿ ಅನ್ನೋದು ತಪ್ಪು. ಒಳ್ಳೆಯ ನೀತಿ ಯಾವಾಗ ಬಂದರೂ ಒಳ್ಳೆಯದಾಗಿದೆ. ಬಸವಣ್ಣನವರು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಅವಕಾಶದ ಬಗ್ಗೆ ಹೇಳಿದ್ದಾರೆ. ಅವರ ಕಾಲದಲ್ಲಿ ಹೆಣ್ಣು-ಗಂಡು ಭೇದವಿಲ್ಲದೆ ಸಮಾನ ಹಕ್ಕಿಗಾಗಿ ಹೋರಾಡಿದ್ದರು. ಮಹಿಳಾ ಮೀಸಲಾತಿ ವಿರೋಧಿಸುವುದು ಸಮಾನತೆ ತತ್ವಕ್ಕೆ ವಿರೋಧವಾಗಿದೆ. ವಿರೋಧ ಪಕ್ಷದ ಈ ನೀತಿಯನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.Women's
Women's Reservation: ನೆಟ್ಟಿಗರು ಹೇಳಿದ್ದೇನು
ಇನ್ನು ಬಿಜೆಪಿಯ ಈ ಸರಣಿ ಟ್ವೀಟ್‌ಗೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಬಹುತೇಕ ಟ್ವೀಟ್ ಹಾಗೂ ಪೋಸ್ಟ್‌ಗಳಿಗೆ ನೆಗಿಟಿವ್ ಕಾಮೆಂಟ್‌ಗಳೇ ಹೆಚ್ಚಾಗಿ ಬಂದಿವೆ. ದಕ್ಷಿಣ ರಾಜ್ಯಗಳ ಹಕ್ಕುಗಳನ್ನು ಮಾರಣ ಹೋಮ ಮಾಡಲು ಹೊರಟ ಬಿಜೆಪಿ ಹಾಗೂ ಬಿಜೆಪಿ ಬೆಂಬಲಿತ ಸಂಸದರಿಗೆ ಧಿಕ್ಕಾರ, 2023ರಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಸರ್ವಾನುಮತದ ಅಂಗೀಕಾರ ದೊರೆತಿದ್ದು ಇಡೀ ದೇಶಕ್ಕೆ ತಿಳಿದಿರುವ ಸತ್ಯ ಇಂತಹ ಐತಿಹಾಸಿಕ ಮಸೂದೆಯು ಕಾನೂನಾಗಿ ರೂಪಗೊಂಡ ಮೇಲೆಯೂ ಬಿಜೆಪಿ ಪಕ್ಷ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ.
ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿ ಜಾರಿಗೆ ಅಡ್ಡಿಪಡಿಸುತ್ತಿದೆ ಎಂದು ಹೇಳುವುದು ಸತ್ಯಕ್ಕೆ ದೂರವಾದ ಮತ್ತು ಹಾಸ್ಯಾಸ್ಪದ ಸಂಗತಿಯಾಗಿದೆ ಅಧಿಕಾರದಲ್ಲಿರುವವರು ತಮ್ಮ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಅಥವಾ ಜಾರಿ ಪ್ರಕ್ರಿಯೆಯ ವಿಳಂಬವನ್ನು ಸಮರ್ಥಿಸಿಕೊಳ್ಳಲು ಈ ರೀತಿ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವುದು ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ.
ಮಹಿಳಾ ವಿರೋಧಿ ನೀತಿ ಅಲ್ಲ. ವಿರೋಧ ಪಕ್ಷದ ಜವಾಬ್ದಾರಿ. ಕೈನಲ್ಲಿ ಬಹುಮತ ಇಲ್ಲ ಅಂದಮೇಲೆ ಮೈಯಾಕೆ ಪರ್ಚಿಕೊಳ್ಳಬೇಕು. ಅವರು ಬೆಂಬಲ ಕೊಟ್ಟುಕಂಡು ನಿಮ್ಗೆ ಕ್ರೆಡಿಟ್ ಕೊಡೋಕೆ ಅವರೇನ್ ಹುಚ್ಚರ. ಅಷ್ಟುಕು ಮಹಿಳಾ ಮೀಸಲಾತಿ 2023ಕ್ಕೇ ಆಗಿದೆ ಇನ್ನೊಂದೇನು. ಡಿ ಲಿಮಿಟೇಶನ ಅದರ ಅವಶ್ಯಕತೆ ಇಲ್ಲ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications