ವೇಷ
*ಪ್ರಕಾಶ್ ನಾಯಕ್, ಕ್ಯಾಲಿಫೋರ್ನಿಯಾ
ಇದಾವ ಜನ್ಮದ ನಂಟು,
ಅಂಟಿಯೇ ಬಂದಿಹುದು,
ಬಿಟ್ಟರೂ ಬಿಡದಿಹುದು :
ಹುಲಿ, ಹ್ಯಾಲೊವಿನ್ ,
ದೇಶ ಬಿಟ್ಟರೂ ಬಿಡದ ಗಳ ಆವೇಶ!
‘ಇದೆಲ್ಲಿಂದ ಕಲಿತೆಯೋ ಈ ಹುಲಿ ’
ಅಪ್ಪ ಗದರಿದ್ದ ವರ್ಷಗಳ ಹಿಂದೆ.
‘ನಮ್ಮವರಿಗಲ್ಲ ಇದು ನೋಡು’
ಅಮ್ಮನ ಸೀರೆಯಂಚು ಕಣ್ಣ ಮರೆಮಾಡಿತ್ತು.
ಆದರೂ ಅದೇಕೋ ಅರಿವಿಗೆ ಮೀರಿದ ಆಸೆ:
ಹುಲಿಯೋ, ಮೇಕೆಯೋ, ಒಂದು ಕರಿ ಕುರಿ ಮರಿಯೋ,
ಯಾವುದಾದರೊಂದು ಹಾಕಿ ಊರು ಸುತ್ತುವ ಆಸೆ!
ಊರ ಪ್ರತಿಮನೆಯ ಮೂಲೆ ಇಣುಕುವ ಆಸೆ!
ದಿನಕ್ಕೊಂದು ಹಾಕಿ,
ಕಂಬಗಳಿಗೂ ಭಾಷೆ ಕೊಟ್ಟು
ಮೀನಮೇಷ ಎಣಿಸದೇ ದಾಟಿ ಬಂದಾಗಿತ್ತು!
ಸೂರ್ಯನ ಬೆಂಬತ್ತಿ, ಕತ್ತಲೆಯ ಹಿಂದಟ್ಟಿ
ಹನುಮ ನಾಚುವ ಹಾಗೆ ನಭಕ್ಕೆ ನೆಗೆದಾಗಿತ್ತು!
ಮಗ ಬಂದು ಎದುರು ನಿಂತು,
ಭಯಹುಟ್ಟಿಸುವ ಮುಖವಾಡ ತೊಟ್ಟು
‘ಅಪ್ಪ, ಹ್ಯಾಲೋವಿನ್ ’ ಎಂದು ಬೊಬ್ಬಿಟ್ಟಾಗ,
ಬಾಯಿ ತೊದಲಿತ್ತು ‘ಎಲ್ಲಿತ್ತೋ ಈ ಹ್ಯಾಲೋವಿನ್ ?’
ಮನಸು ಬಿಕ್ಕಳಿಸಿತ್ತು ‘ನಮ್ಮವರಿಗಲ್ಲ ಇದು ನೋಡು’,
ಯಾವುದೋ , ಯಾವುದೋ ದೇಶ,
ಭೂಮಿಸುತ್ತಿ ಬಂದರೂ ಮತ್ತದೇ ಮಾತು.
ಕೋಶ ಓದಿ, ದೇಶ ಸುತ್ತಿದರೂ
ಬೆನ್ನಬಿಡಲಿಲ್ಲ ನೋಡಿ!












Click it and Unblock the Notifications