ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಸ್ವಾಮಿ ವೆಂಕಟರಾಮನ್ ಹೇಗೆ?

By Staff
|
Google Oneindia Kannada News

RV: A Gentleman and a President
ಮುಖ್ಯವಾಗಿ ಮಾಜಿ ರಾಷ್ಟ್ರಪತಿ ಆರ್ ವೆಂಕಟರಾಮನ್ ಒಬ್ಬ ಜಂಟಲ್‌ಮನ್. ನಿಜವಾದ ಕಾಂಗ್ರೆಸ್ಸಿಗ. ವಿದ್ವಾಂಸ. ರಾಷ್ಟ್ರಭಕ್ತ. ಕಾವೇರಿ ನೀರು ರಗಳೆ ಬಂದಾಗ ಮಾತ್ರ ತಮಿಳು ಪ್ರಜೆ.

* ಮಂಜುನಾಥ ಅಜ್ಜಂಪುರ, ಬೆಂಗಳೂರು.

ಬುಧವಾರ ಹೈದರಾಬಾದಿನಲ್ಲಿ ನಿಧನರಾದ ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ಕಾಂಗ್ರೆಸ್ಸಿಗರಲ್ಲಿ ತುಂಬಾ ತುಂಬಾ ಅಪರೂಪದ ಸಭ್ಯ ರಾಜಕಾರಣಿ. ಹೌದಪ್ಪಗಳು, ಹೊಗಳುಭಟ್ಟರುಗಳೇ ತುಂಬಿಹೋಗಿರುವ ಪಕ್ಷದಲ್ಲಿ ಇಂತಹವರೂ ಇದ್ದರೆ ಎಂದು ಅನುಮಾನ ಪಡುವಷ್ಟು ಜಂಟಲ್‌ಮನ್ ಈ ವೆಂಕಟರಾಮನ್.

ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಮೂರು ತಲೆಮಾರಿನ ನೆಹರೂ ಗಾಂಧಿ ಕುಟುಂಬಕ್ಕೆ ತುಂಬ ಹತ್ತಿರವಾಗಿದ್ದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಒಬ್ಬರು ವೆಂಕಟರಾಮನ್. ರಾಮಸ್ವಾಮಿ ವೆಂಕಟರಾಮನ್ ರಾಷ್ಟ್ರಪತಿ ಆಗಿದ್ದಾಗ, ರಾಜೀವ್ ಪ್ರಧಾನಮಂತ್ರಿ ಆಗಿದ್ದರು. ರಾಜೀವ್ ಶ್ರೀಲಂಕಾಗೆ ಭೇಟಿನೀಡಿದಾಗ, ಯಾರೋ ಒಬ್ಬ ಅವರ ಮೇಲೆ ದಾಳಿ ಮಾಡಿದ್ದ. ರಾಜೀವ್‌ರಿಗೆ ಏನೂ ಆಗಲಿಲ್ಲ ಎನ್ನುವ ಮಾತು ಬೇರೆ. ರಾಜೀವ್ ಪ್ರವಾಸದಿಂದ ಭಾರತಕ್ಕೆ ಹಿಂತಿರುಗಿ ಬಂದಾಗ, ವೆಂಕಟರಾಮನ್ ಅವರು ಶಿಷ್ಟಾಚಾರ(Protocol) ಮೀರಿ ರಾಜೀವ್‌ರನ್ನು ನೋಡಲು ವಿಮಾನ ನಿಲ್ದಾಣಕ್ಕೆ ಹೋಗಿ ದಾಖಲೆ ಮಾಡಿದರು. ಆವರೆಗೆ ಯಾವ ರಾಷ್ಟ್ರಪತಿಯೂ ಶಿಷ್ಟಾಚಾರ ಉಲ್ಲಂಘಿಸಿರಲಿಲ್ಲ. ರಾಜೀವ್ ಬಗ್ಗೆ ಅವರಿಗೆ ಅಂತಹ ವೈಯಕ್ತಿಕ ಪ್ರೀತಿ ವಾತ್ಸಲ್ಯ ಇತ್ತು.

ಅವರು ಪಂಜಾಬ್ ಹಿಂಸಾಕಾಂಡ, ಬೋಫೋರ್ಸ್ ಹಗರಣ, ಎಲ್.ಟಿ.ಟಿ.ಇ. ಹಿಂಸಾತಿರೇಕ, ರಾಜೀವ್ ಹತ್ಯೆ, ಸ್ಟಾಕ್ ಮಾರ್ಕೆಟ್ (ಹರ್ಷದ್ ಮೆಹ್ತಾ) ಪ್ರಕರಣ ಮುಂತಾದ ದೇಶವನ್ನೇ ನಡುಗಿಸಿದ ಅವಧಿಯಲ್ಲಿ ರಾಷ್ಟ್ರಪತಿ ಆಗಿದ್ದರು. ಅದು ನಿಜಕ್ಕೂ ಸವಾಲು ಎಂಬಂತಹ ಅವಧಿ. ಆದರೆ ವೆಂಕಟರಾಮನ್ ಕಾನೂನು ತಜ್ಞರು ಮತ್ತು ಜಾಣರು. ರಾಷ್ಟ್ರಪತಿ ಹುದ್ದೆಯನ್ನು ವಿವಾದಕ್ಕೆ ಎಳೆದು ತರದೆ ನಾಜೂಕಿನಿಂದ ತಮ್ಮ ಕರ್ತವ್ಯವನ್ನು ನಿಭಾಯಿಸಿದರು. ತಮ್ಮ ಹುದ್ದೆಯ ಮಿತಿಯನ್ನು ಅರಿತ ಅಪರೂಪದ ರಾಷ್ಟ್ರಪತಿ ಅವರು. ವಿಶೇಷವೆಂದರೆ, ಐದು ವರ್ಷಗಳ ತಮ್ಮ ಅಧಿಕಾರಾವಧಿಯಲ್ಲಿ ವೆಂಕಟರಾಮನ್ ಒಮ್ಮೆಯೂ ಪತ್ರಿಕಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿಲ್ಲ. ಅವರು ಒಳ್ಳೆಯ ಲೇಖಕರು. ಅವರ ಏಳುನೂರು ಪುಟಗಳ ಬೃಹತ್ ಆತ್ಮವೃತ್ತಾಂತ "My Presidential Years" ಓದಿ ಮೆಚ್ಚಿದ್ದೇನೆ.

ಹರಿಯಾಣದ ಮೇಹಂನಲ್ಲಿ ನಡೆದ ಕುಖ್ಯಾತ ಚುನಾವಣಾ ಹಿಂಸೆ, ದೇವೀಲಾಲರ ಹಠಮಾರಿತನ, ಅವರ ಮಗ ಓಂ ಪ್ರಕಾಶ್ ಚೌತಾಲಾ ಅವರ ಗೂಂಡಾಗಿರಿ, ಬಿಹಾರದಲ್ಲಿ ಕುಸಿದುಬಿದ್ದ ಕಾನೂನು ವ್ಯವಸ್ಥೆ, ಯಾರು ಹೇಗೇ ಮತದಾನ ಮಾಡಲಿ ಚುನಾವಣೆಗಳಲ್ಲಿ ತನ್ನ ಕಡೆಯವರಿಗೇ ಗೆಲುವು ಎಂದು ಲಾಲು ಪ್ರಸಾದ್ ಯಾದವ್ ಘೋಷಿಸಿದ್ದು, ಅಂದಿನ ಪ್ರಧಾನಮಂತ್ರಿ ಚಂದ್ರಶೇಖರ್ ಅವರು ಬಿಹಾರದಲ್ಲಿ ರಾಷ್ಟ್ರಪತಿ ಆಡಳಿತ ತರಲು ಯೋಚಿಸಿದ್ದು, ಅದೇ ಚಂದ್ರಶೇಖರ್ ಅಮೆರಿಕಾದ ಯುದ್ಧ ವಿಮಾನಗಳಿಗೆ ಕೊಲ್ಲಿ ಯುದ್ಧದ ಸಮಯದಲ್ಲಿ, ಭಾರತದಲ್ಲಿ ಇಂಧನ ತುಂಬಿಸಿಕೊಳ್ಳಲು ಅವಕಾಶ ನೀಡಿದ ಅವಿವೇಕದ ನಿರ್ಧಾರ, ಭಾರತದ ಅಲಿಪ್ತ ನೀತಿಗೆ ವ್ಯತಿರಿಕ್ತವಾಗಿ ಚಂದ್ರಶೇಖರ್ ಮಾಡಿದ ಈ ಕೆಲಸದಿಂದ ದೇಶದ ಘನತೆಗೆ ಕುಂದು ಬಂದಿದ್ದು, ಇತ್ಯಾದಿ ಪ್ರಮುಖ ಘಟನೆಗಳನ್ನು ಇಲ್ಲಿ ಅವರು ನಿರ್ಭಿಡೆಯಿಂದ ವಿಶ್ಲೇಷಿಸಿದ್ದಾರೆ.

ಟಿಬೆಟ್ ಕುರಿತಂತೆ ವೆಂಕಟರಾಮನ್ ಅವರು ತಮ್ಮ ಚೀನಾ ಪ್ರವಾಸದಲ್ಲಿ ಆಡಿದ ಮಾತುಗಳು ಅವರ ರಾಜಕೀಯ ಜಾಣ್ಮೆಯ ಪ್ರತೀಕವಾಗಿವೆ. ಟಿಬೆಟ್ಟನ್ನು ನುಂಗಿ ಕೂತಿರುವ ಚೀನಾ ಎಂಬ ರಾಕ್ಷಸ ಡ್ರ್ಯಾಗನ್ ಬಗೆಗೆ ರಾಷ್ಟ್ರಪತಿ ಎಷ್ಟು ಎಚ್ಚರಿಕೆಯಿಂದ ಮಾತನಾಡಿದರೂ ಸಾಲದು. "ಟಿಬೆಟ್ ಚೀನಾದೇಶದ ಅವಿಭಾಜ್ಯ ಅಂಗ ಎನ್ನುವುದನ್ನು ಭಾರತ ಎಂದೋ ಒಪ್ಪಿಕೊಂಡಿದೆ. ಅಂತೆಯೇ ಟಿಬೆಟ್ಟಿನ ಧರ್ಮಗುರು (ಭಾರತ ಅವರಿಗೆ ಅಧಿಕೃತವಾಗಿ ಆಶ್ರಯ ನೀಡಿದೆ) ದಲಾಯಿಲಾಮಾ ಅವರನ್ನು ಮಹಾನ್ ಧಾರ್ಮಿಕ ನೇತಾರ ಎಂದು ಗೌರವಿಸಿದ್ದೇವೆ, ಸನ್ಮಾನಿಸಿದ್ದೇವೆ. ಭಾರತದಂತಹ ಪ್ರಜಾಸತ್ತಾತ್ಮಕ ದೇಶದಲ್ಲಿ ಜನರ ಭಾವನೆಗಳನ್ನು ಸರ್ಕಾರದ ಅಭಿಪ್ರಾಯ ಎಂದು ಪರಿಗಣಿಸುವಂತಿಲ್ಲ. ಅದೇ ಬೇರೆ, ಇದೇ ಬೇರೆ" (ಪುಟ 621).

ನಾನು ದೆಹಲಿಯಲ್ಲಿ ತುಂಬ ಸಮಯ ಕಳೆದಿದ್ದೇನೆ. ಇಂಗ್ಲಿಷರು ತಮ್ಮ ಆಳ್ವಿಕೆಗೆ, ತಮ್ಮ ಅನುಕೂಲಕ್ಕೆ ದೆಹಲಿಯಲ್ಲಿ ದೊಡ್ಡ ದೊಡ್ಡ ಭವನಗಳನ್ನು ನಿರ್ಮಿಸಿದರು. ಅದೇನು ಇಂಗ್ಲೆಂಡಿನಿಂದ ತಂದ ಹಣವಲ್ಲ. ಈ ಭವನಗಳ ಅಂದಚೆಂದ ಮುಚ್ಚುವಂತಹವೇ. ನಾನೇನೂ ಇಲ್ಲವೆನ್ನುವುದಿಲ್ಲ. ಆದರೆ ವೆಂಕಟರಾಮನ್ ಅವರಿಗೆ ಅವೆಲ್ಲಾ ಬ್ರಿಟಿಷರ ಮಹೋಪಕಾರ ಎನ್ನಿಸುವುದು ಮಾತ್ರ ವಿಚಿತ್ರವಾಗಿದೆ. ನಮ್ಮ ಮೈಸೂರು, ಚೆನ್ನೈ, ಕೊಲ್ಕತ್ತಾ, ಪುಣೆಗಳಲ್ಲಿ ಇರುವಂತಹ ಭಾರತೀಯತೆ ದೆಹಲಿಯಲ್ಲಿ ಕಂಡುಬರುವುದಿಲ್ಲ. ಅದು ವೆಂಕಟರಾಮನ್ ಅವರಿಗೆ ಕಾಣುವುದೇ ಇಲ್ಲ. ರಾಷ್ಟ್ರಪತಿಗಳ ಪದಗ್ರಹಣದಲ್ಲಿ, ಸೇನಾ ಆಚರಣೆಗಳಲ್ಲಿ, ವಿಧಿ - ಸಂಪ್ರದಾಯಗಳಲ್ಲಿ ಈಗಲೂ ಬ್ರಿಟಿಷರ ಪ್ರಭಾವ ದಟ್ಟವಾಗಿದೆ. ವೆಂಕಟರಾಮನ್ ಅವರು ತುಂಬ ಧನ್ಯತೆಯಿಂದ ಅವುಗಳನ್ನೆಲ್ಲಾ ವರ್ಣಿಸುತ್ತಾರೆ.

ಏನೇ ಇರಲಿ, ಕಾವೇರಿ ವಿವಾದ ಕುರಿತು ಅವರು ಬರೆದಿರುವ ಸಾಲುಗಳು, ಮುತ್ಸದ್ದಿತನ ತೋರುವುದಿಲ್ಲ. ಅವರು ತಮಿಳುನಾಡಿನ ಒಬ್ಬ ಸಾಮಾನ್ಯ ರಾಜಕಾರಣಿಯ ಮಟ್ಟದಿಂದ ಮೇಲೇರುವುದಿಲ್ಲ. ಅದೇ ನಮ್ಮ ಕರ್ನಾಟಕದ ರಾಜಕಾರಣಿಗಳದ್ದು ಇನ್ನೊಂದೇ ಬಗೆ. ಜತ್ತಿ, ನಿಜಲಿಂಗಪ್ಪ, ದೇವೇಗೌಡ, ದೇವರಾಜ ಅರಸು, ರಾಮಕೃಷ್ಣ ಹೆಗಡೆ ಯಾರೇ ಆಗಲಿ ಅವರಿಗೆ ರಾಜ್ಯದ ಹಿತ ಮರೆತು ಹೋಗುತ್ತದೆ. ತಮ್ಮ ಮಿತಿ ಅರಿಯಲೆತ್ನಿಸದೇ "ರಾಷ್ಟ್ರಮಟ್ಟದಲ್ಲಿ - ವಿಶ್ವಮಟ್ಟದಲ್ಲಿ" ರಾರಾಜಿಸಲು ಪ್ರಯತ್ನಪಡುತ್ತಾರೆ. ದೇವೇಗೌಡರು ರಾತ್ರೋರಾತ್ರಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಾರೆ. ಇಂಗ್ಲಿಷ್ ಬಲ್ಲವರಾದರೂ ಕರುಣಾನಿಧಿ ದೆಹಲಿಯಲ್ಲೂ ತಮಿಳು ಮಾತನಾಡುತ್ತಾರೆ, ತಮಿಳುನಾಡಿನ ಪಾಲನ್ನು (ಕೇಂದ್ರದಿಂದ) ಪ್ರತಿಬಾರಿಯೂ ಹೆಚ್ಚಿಸಿಕೊಳ್ಳುತ್ತಾರೆ, ಕಿತ್ತುಕೊಳ್ಳುತ್ತಾರೆ. ವೆಂಕಟರಾಮನ್ ಅವರಾಗಲೀ, ಯಾರೇ ಆಗಲೀ ತಮಿಳುನಾಡಿನ ರಾಜಕಾರಣಿಗಳು, ತಮ್ಮ ಭಾಷೆ ನೀರು ರಾಜ್ಯದ ಪ್ರಶ್ನೆ ಬಂದಾಗ ಒಟ್ಟಾಗಿ ನಿಲ್ಲುತ್ತಾರೆ, ಒಂದೇ ಬಗೆ ವರ್ತಿಸುತ್ತಾರೆ.

ಈ ರಾಷ್ಟ್ರಪತಿಗಳ ಶಿಷ್ಟಾಚಾರ (protocol) ಎನ್ನುವುದು ನನಗೆ ಭಯಂಕರ ಎನ್ನಿಸಿದ್ದು, ನಮ್ಮ ಚೆನ್ನೈ ಗೆಳೆಯರೊಬ್ಬರ ಮನೆಗೆ ವೆಂಕಟರಾಮನ್ ಉಪಾಹಾರಕ್ಕೆ ಬಂದು ಹೋದ ವಿಷಯ ತಿಳಿದಾಗ. ಉಪಾಹಾರದ ವಿವರಗಳು, ಮೆನುಕಾರ್ಡ್ ಮುದ್ರಣ, ವೇಳಾಪಟ್ಟಿ, ಸುರಕ್ಷತೆ, ಪೋಲೀಸ್‌ರ ಅಧಿಕಾರಿ ಪರಿವಾರದವರ ಕಿರಿಕಿರಿ ಎಷ್ಟೊಂದು ಎಂದರೆ ತಲೆ ಚಿಟ್ಟು ಹಿಡಿಯುವಷ್ಟು. ಆ ಕಾಲಕ್ಕೆ ಆತಿಥೇಯರಿಗೆ (Host) ಎಂಬತ್ತು ಸಾವಿರ ಖರ್ಚಾಯಿತು ಎಂದು ಕೇಳಿ ನಾನು ಮೂರ್ಛೆ ಹೋಗುವುದೊಂದೇ ಬಾಕಿ ಇತ್ತು. ನಾನು ನನ್ನ ಚೆನ್ನೈ ಗೆಳೆಯರಿಗೆ ಅಚ್ಚರಿಯಿಂದ, "ಅಲ್ಲಾ ಸ್ವಾಮೀ, ಸಸ್ಯಾಹಾರಿಗಳಾದ ವೆಂಕಟರಾಮನ್ ಅವರನ್ನು ಕರೆದಿದ್ದಕ್ಕೇ ಎಂಬತ್ತು ಸಾವಿರ ಖರ್ಚಾಯಿತು ಎಂದಿರಿ, ಕೋಳಿ ಕುರಿ ಕತ್ತರಿಸುವ ಜೈಲ್‌ಸಿಂಗ್, ನೀಲಂ ಸಂಜೀವ ರೆಡ್ಡಿ ಅಂತಹವರನ್ನು ಕರೆದಿದ್ದರೆ ಗತಿ ಏನಾಗುತ್ತಿತ್ತು", ಎಂದೆ.

ವಿ.ವಿ.ಗಿರಿ, ಸಂಜೀವರೆಡ್ಡಿ, ಫಕ್ರುದ್ದೀನ್ ಅಲಿ ಅಹಮದ್, ಜೈಲ್‌ಸಿಂಗ್ ಅಂತಹ ಪ್ರಭೃತಿಗಳಿಗೆ ಹೋಲಿಸಿದರೆ, ವೆಂಕಟರಾಮನ್ ಸಭ್ಯರಾಗಿ ಕಾಣುತ್ತಾರೆ, ಅವರ ವಿದ್ವತ್ತು, ಕಾನೂನು ಪರಿಜ್ಞಾನಗಳು ಚಂದದ ಸ್ಮೃತಿಗಳಾಗಿ ಉಳಿಯುತ್ತವೆ.

ಅಜ್ಜಂಪುರ ಅವರ ಇನ್ನೊಂದು ಲೇಖನ

ಗಾಂಧೀ ತಾತನ ಫೋಟೋ ನೋಡಿದ್ರಾ?ಗಾಂಧೀ ತಾತನ ಫೋಟೋ ನೋಡಿದ್ರಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X