ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಯನಿರತ ಪತ್ರಕರ್ತನ ಆತ್ಮಾಲಾಪಗಳು

By Super
|
Google Oneindia Kannada News

ಅವರಿವರ ಬಗೆಗೆ ಅವಿರತವಾಗಿ ಸರಿಸುಮಾರು ಮುನ್ನೂರೈವತ್ತು ಲೇಖನಗಳನ್ನು ಬರೆದಿರುವ ಕಾರ್ಯನಿರತ ಪತ್ರಕರ್ತ ಮತ್ತು ಅಂಕಣಕಾರ ಪ್ರತಾಪ್ ಸಿಂಹ ತಮ್ಮ ಬಗ್ಗೆ ತಾವೇ ಬರೆದುಕೊಂಡ ಒಂದು ಹಾಳೆಯನ್ನು ಇಲ್ಲಿ ಮುದ್ರಿಸಲಾಗಿದೆ. ಇದನ್ನು ಸ್ವಗತ ಭಾಷಣವೆನ್ನುವಿರೋ, ಆತ್ಮಾಲಾಪ ಎನ್ನುವಿರೋ, ಸೆಲ್ಫ್ ಪೋರ್ಟ್ ಟ್ರೇಟ್ ಎನ್ನುವಿರೋ ನಿಮಗೆ ಬಿಟ್ಟದ್ದು. ಸಾರ್ವಜನಿಕ ಕ್ಷೇತ್ರದಲ್ಲಿರುವವರು ಈ ಬಗೆಯ ಸ್ವಯಂ ನೋಟಗಳನ್ನು ಬರೆದರೆ ಅವುಗಳನ್ನು ಪ್ರಕಟಿಸುವುದಕ್ಕೆ ದಟ್ಸ್ ಕನ್ನಡ ಹಿಂದೆ ಮುಂದೆ ನೊಡುವುದಿಲ್ಲ!

ಪ್ರತಾಪ್ ಸಿಂಹ, ಬೆಂಗಳೂರು.

“ಆ ಪ್ರತಾಪ್ ಸಿಂಹ 'ಫೋರ್ಡ್ ಐಕಾನ್" ಕಾರ್‌ನಲ್ಲಿ ಓಡಾಡುತ್ತಿರುತ್ತಾನೆ ಅಂತ ನನ್ನ ಸ್ನೇಹಿತನೊಬ್ಬ ಹೇಳುತ್ತಿದ್ದ. ನೀವು ಅಷ್ಟು ಫೇಮಸ್ ಜರ್ನಲಿಸ್ಟ್ ಅಲ್ವಾ, ಹಾಗಾಗಿ ಇರಬಹುದು ಅಂತ ನಾನೂ ಅಂದುಕೊಂಡಿದ್ದೆ. ಆದರೆ ನಿಮ್ಮನ್ನು ಖುದ್ದಾಗಿ ಕಂಡು ಮಾತನಾಡಿದಾಗ, ನಿಮಗೆ ಸಿಗುತ್ತಿರುವ ಸಂಬಳ ಎಷ್ಟು ಅಂತ ಗೊತ್ತಾದಾಗ ನಿಜಕ್ಕೂ ಆಶ್ಚರ್ಯ ಆಯಿತು. ಸಾರ್, ನೀವೇಕೆ ಬೇರೆ ಕೆಲಸ ನೋಡಿಕೊಳ್ಳಬಾರದು? ನಾನು ನಿಮ್ಮ ಅಭಿಮಾನಿ, ನಿಮ್ಮ ಆರ್ಟಿಕಲ್ಸ್ ಅಂದರೆ ತುಂಬಾ ಇಷ್ಟ. ಆದರೂ ನಿಮ್ಮ ಪರಿಸ್ಥಿತಿಯನ್ನು ನೋಡಿದಾಗ ಬೇರೆ ಕೆಲಸ ನೋಡಿಕೊಳ್ಳುವುದೇ ಉತ್ತಮ ಅನಿಸುತ್ತಿದೆ. ಸಾಧ್ಯವಾದರೆ ನಿಮ್ಮ ಕಾಲಂ ಉಳಿಸಿಕೊಳ್ಳಿ ಸಾಕು".

ಹಾಗಂತ ಹೇಳಿದ್ದು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿರುವ ಉಡುಪಿಯ ಶ್ರೀವತ್ಸ ಅಡಿಗ. ನಿಮ್ಮ ಜತೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇನೆ. ಹಠಕ್ಕೆ ಬಿದ್ದವನಂತೆ ವಾದಿಸುತ್ತೇನೆ. ಅದನ್ನೆಲ್ಲ ಒಪ್ಪಿಕೊಂಡು ಬೆನ್ನುತಟ್ಟಿ ಬೆಳೆಸುತ್ತಿರುವ ನಿಮ್ಮ ಜತೆ ನನ್ನ ಬರವಣಿಗೆಯ ಬದುಕಿನ ನೋವು-ನಲಿವುಗಳನ್ನು ಹಂಚಿಕೊಳ್ಳುವುದಕ್ಕೇಕೆ ನಾಚಿಕೆ ಅಲ್ವಾ? ಶ್ರೀವತ್ಸನ ಹಾಗೇ ನಿಮಗೂ ಅನಿಸಿರಬಹುದು. ಅಷ್ಟಕ್ಕೂ 22ನೇ ವಯಸ್ಸಿಗೆ ಪತ್ರಿಕೋದ್ಯಮಕ್ಕೆ ಬಂದ ನನಗೆ ಈ ಕ್ಷೇತ್ರದಲ್ಲಿ ಎಂಟೂವರೆ ವರ್ಷ ಅನುಭವ ಆಗಿದೆ. ಇಷ್ಟೇ ಅನುಭವ ಇರುವ ಅದೆಷ್ಟೋ ಪತ್ರಕರ್ತರು ಮನೆ, ಕಾರು, ಸೈಟು ಮಾಡಿ ಕೋಟ್ಯಂತರ ರೂ. ಬೆಲೆ ಬಾಳುತ್ತಿದ್ದಾರೆ.

/literature/people/2008/0311-prologue-by-pratap-simha-bettale-jagattu.html

ಹಾಗಿರುವಾಗ ನಾನೇನು ಕಡಿಮೆ?! ಖಂಡಿತ ನಾನು ಯಾರಿಗೂ ಕಡಿಮೆಯಲ್ಲ. ನಿಮ್ಮಂಥ ಓದುಗರನ್ನು ಪಡೆದಿರುವ ನಾನು ಬಡವನಾಗಲು ಹೇಗೆತಾನೇ ಸಾಧ್ಯ? ನಾನು ಗಳಿಸಿರುವ ಅತಿದೊಡ್ಡ ಹಾಗೂ ಬೆಲೆಕಟ್ಟಲಾಗದ ಆಸ್ತಿ ಅಂದರೆ ನೀವೇ. ಆದರೆ ಈ ನಿಮ್ಮ ಪ್ರೀತಿ ಕೆಲವೊಮ್ಮೆ ನನ್ನನ್ನು ಬಂಧಿಯನ್ನಾಗಿಯೂ ಮಾಡಿದೆ. “ಬೆತ್ತಲೆ ಜಗತ್ತು" ಭಾಗ-6 ಹೊರಬರುವ ಹೊತ್ತಿಗಾಗಲೇ ನಾನು 'ವಿಜಯ ಕರ್ನಾಟಕ"ವನ್ನು ಬಿಟ್ಟು ಕನಿಷ್ಠ ಎರಡು ತಿಂಗಳಾಗಿರಬೇಕಿತ್ತು! ಅದಕ್ಕೂ ಕಾರಣವಿದೆ. ಸ್ನೇಹಿತರ ಜತೆ ಸೇರಿ 'ಗರ್ವ" ಎನ್ನುವ ಪತ್ರಿಕಾ ಸಾಹಸ ಮಾಡಲು ಹೋಗಿ ಕೈಯಲ್ಲಿದ್ದ ಕಾಸು ಕಳೆದುಕೊಂಡಿದ್ದಲ್ಲದೆ ಸಾಲವನ್ನೂ ತಲೆಗೆಳೆದುಕೊಂಡಿದ್ದೇನೆ.

ಇತ್ತ "ನಿನಗೆ ಇಷ್ಟೊಂದು ಜನ ಹುಡುಗಿಯರು ಅಭಿಮಾನಿಗಳಿದ್ದಾರೆ, ಯಾರನ್ನಾದರೂ ಮದುವೆಯಾಗಬಹುದಲ್ಲವೇನೋ" ಅಂತ ಸ್ನೇಹಿತರು ಕೇಳುತ್ತಾರೆ. ಆದರೆ ನನಗೆ ಬರುವ ಸಂಬಳ ಸಾಲದ ಕಂತು ಕಟ್ಟಿದರೆ ನನ್ನೊಬ್ಬನ ಜೀವನಕ್ಕಾಗುತ್ತದಷ್ಟೆ. ಇನ್ನೊಂದೆಡೆ ಹೆತ್ತು ಹೊತ್ತು ಸಾಕಿದ ಅಮ್ಮ ಇವತ್ತೂ ಕಷ್ಟದಲ್ಲೇ ಕೈತೊಳೆಯುತ್ತಿದ್ದಾಳೆ. ಅವಳ ಕಣ್ಣೀರನ್ನೇ ಒರೆಸಲು ನನ್ನಿಂದಾಗುತ್ತಿಲ್ಲ. ಹಾಗಾಗಿ ಚಿಕ್ಕಾಸು ಕೊಡುವ ಈ ವೃತ್ತಿಯೇ ಬೇಡ. ಹೇಗೂ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನಲ್ಲಾ, ಕಾರ್ಪೊರೇಟ್ ಕ್ಷೇತ್ರಕ್ಕೆ ಹೋದರಾಯಿತು ಎಂಬ ಗಟ್ಟಿ ನಿರ್ಧಾರಕ್ಕೆ ಬಂದೆ. ಸ್ನೇಹಿತರಲ್ಲಿ ನೋವು ತೋಡಿಕೊಂಡೆ. ಪತ್ರಿಕೋದ್ಯಮಕ್ಕೆ ವಿದಾಯ ಹೇಳುವ ನನ್ನ ನಿರ್ಧಾರಕ್ಕೆ ಅವರೂ ಬೆಂಬಲ ನೀಡಿದರು.

ಆದರೆ “ಗಟ್ಟಿ ನಿರ್ಧಾರ ಮಾಡಿದ್ದೀಯಾ ತಾನೇ?" ಅಂತ ಮತ್ತೆ ಮತ್ತೆ ಪ್ರಶ್ನಿಸಿದರು. ನಾನೂ ಕೂಡ ಅಷ್ಟೇ ಸ್ಪಷ್ಟವಾಗಿ 'ಹೌದು" ಅಂತ ಉತ್ತರ ಕೊಡುತ್ತಿದ್ದೆ. 'ರೆಸ್ಯೂಮೆ" ರೆಡಿ ಮಾಡಿ ಉದ್ಯೋಗದ ಬೇಟೆಯೂ ಆರಂಭವಾಯಿತು. ಅಂತೂ ಇಂತೂ ಇಲ್ಲಿಗಿಂತ ಒಳ್ಳೆಯ ಸಂಬಳ ಸಿಗುವ ವೃತ್ತಿಯೊಂದು ದೊರೆಯುವ ಅವಕಾಶವೂ ಸೃಷ್ಟಿಯಾಯಿತು. ಅದೇ ಸಂದರ್ಭದಲ್ಲಿ ನಮ್ಮ ಪತ್ರಿಕೆಯಲ್ಲಿ ಖ್ಯಾತ ವ್ಯಂಗ್ಯಚಿತ್ರ ಬರಹಗಾರರಾಗಿದ್ದ ಎಸ್.ವಿ. ಪದ್ಮನಾಭ ಅವರೂ ನನ್ನಂತಹ 'ಪರಿಸ್ಥಿತಿ"ಯಿಂದಾಗಿಯೇ ಪತ್ರಿಕೆಯನ್ನು ತೊರೆದು "ಕನ್ನಡಪ್ರಭ" ಸೇರಿದಾಗ 'ಆರ್ಕಟ್ ಡಾಟ್‌ಕಾಮ್"ನಲ್ಲಿರುವ ನನ್ನ ಕಮ್ಯುನಿಟಿಯಲ್ಲಿ “There is more in the pipeline" ಅಂತ ಪರೋಕ್ಷವಾಗಿ ನನ್ನ ವಿದಾಯದ ಬಗ್ಗೆಯೂ ಸೂಚನೆ ನೀಡಿದ್ದೆ. ಆದರೆ ಪತ್ರಿಕೋದ್ಯಮಕ್ಕೇ ಗುಡ್‌ಬೈ ಹೇಳಿ ಹೊರಡುವ ಆ ಸಂದಿಗ್ಧ ಸಂದರ್ಭದಲ್ಲಿ ನನ್ನ ನಿರ್ಧಾರವೇ ಸಡಿಲಗೊಳ್ಳತೊಡಗಿತು!

ಅವತ್ತು ನನ್ನನ್ನು ಸೋಲಿಸಿ ನಿರ್ಧಾರ ಬದಲಿಸಿದ್ದು ಮತ್ತಾರೂ ಅಲ್ಲ, ನೀವೇ! ಮಗು ಹುಟ್ಟಿದ ಕೂಡಲೇ ಹೊಕ್ಕುಳ ಬಳ್ಳಿಯನ್ನು ಕತ್ತರಿಸುತ್ತಾರೆ. ಇಲ್ಲದಿದ್ದರೆ ಮಗು ಮತ್ತು ತಾಯಿ ಇಬ್ಬರೂ ಉಳಿಯುವುದಿಲ್ಲ. ಆದರೆ 'ವಿಜಯ ಕರ್ನಾಟಕ" ಹಾಗೂ ವಿಜಯ ಕರ್ನಾಟಕದ ಪೋಷಕರಾದ ನಿಮ್ಮ ಜತೆ ಒಬ್ಬ ಅಂಕಣಕಾರನಾಗಿ ನಾನು ಹೊಂದಿರುವ ಹೊಕ್ಕುಳ ಬಳ್ಳಿಯನ್ನು ಕಡಿದುಕೊಳ್ಳುವುದಿದೆಯಲ್ಲಾ....ಅದು ಕೊಡುವ ನೋವನ್ನು ತಾಳಿಕೊಳ್ಳಲು ನನ್ನಿಂದಾಗಲಿಲ್ಲ. ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುವ ಸಲುವಾಗಿ ನಿಮ್ಮೊಂದಿಗಿನ ಹೊಕ್ಕುಳ ಬಳ್ಳಿಯನ್ನು ಕಡಿದುಕೊಂಡು ಜೀವನ ಪರ್ಯಂತ ನೋವು ನುಂಗುವುದಕ್ಕಿಂತ ನಿಮ್ಮ ಪ್ರೋತ್ಸಾಹ, ಮೆಚ್ಚುಗೆಯ ಮಾತುಗಳು ಕೊಡುವ ಖುಷಿಯಲ್ಲಿ ಕಷ್ಟವನ್ನು ಮರೆಯುವುದೇ ಲೇಸು ಅನಿಸಿತು. ಹಾಗಾಗಿ ಇಲ್ಲಿಯೇ ಉಳಿದುಕೊಂಡಿದ್ದೇನೆ.

ನಿಮ್ಮ ಪ್ರೋತ್ಸಾಹದಿಂದಾಗಿ ಇದುವರೆಗೂ 350ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದೇನೆ. ಆ ಯಾವ ಲೇಖನಗಳಲ್ಲೂ “ನಾನು" ಎಂಬ ಪದವನ್ನು ಒಮ್ಮೆಯೂ ಬರೆದಿಲ್ಲ. ಏಕೆಂದರೆ ಪ್ರತಾಪ್ ಎನ್ನುವ ಹೆಸರು ಇಲ್ಲಿ immaterial. ಜನರಿಗೆ ವಿಚಾರಗಳನ್ನು ಮುಟ್ಟಿಸಬೇಕಾದುದು, ತರ್ಕಬದ್ಧ ವಿಶ್ಲೇಷಣೆಯ ಮೂಲಕ ಜನರ ಮುಂದೆ ಸತ್ಯಾಸತ್ಯತೆಯನ್ನು ತೆರೆದಿಡಬೇಕಾದುದು ಪ್ರತಿಯೊಬ್ಬ ಪತ್ರಕರ್ತನ ಕರ್ತವ್ಯ. “ನೀನು ಎಲ್ಲರನ್ನೂ ಬೈಯ್ಯುತ್ತೀಯಾ. ಬರೀ ಬೈದರೆ ಏನು ಲಾಭ? ಯಾರನ್ನಾದರೂ ಹೊಗಳಿ 'ಒಂದಿಷ್ಟು" ಮಾಡಿಕೊಳ್ಳೋ. ನೀನೆಷ್ಟೇ ಫೇಮಸ್ ರೈಟರ್ ಆದರೂ ಜನ ಕಾಸು ಇದೆಯೋ ಇಲ್ಲವೋ ಅಂತ ನೋಡಿಯೇ ಹತ್ತಿರಕ್ಕೆ ಬರುತ್ತಾರೆ. ಅದಕ್ಕೂ ಮಿಗಿಲಾಗಿ ಕಾಸಿದ್ದರಷ್ಟೇ ಜೀವನ" ಅಂತ ಸಲಹೆ ಕೊಟ್ಟವರೂ ಇದ್ದಾರೆ. ಆದರೆ “ನಮ್ಮ ವ್ಯಕ್ತಿತ್ವ ಅನ್ನೋದು ನಾವು ಬರೆಯುವ ಲೇಖನಿಯಲ್ಲಷ್ಟೇ ಮೂಡಬಾರದು, ಅದು ನಮ್ಮ ಸ್ವಂತ ವ್ಯಕ್ತಿತ್ವವೂ ಆಗಿರಬೇಕು" ಎಂದಿದ್ದರು ಶಿವರಾಮ ಕಾರಂತರು. ಆ ಮಾತುಗಳೇ ನನಗೂ ಪ್ರೇರಣೆ. ಇರಲಿ, ವಿಷಯಕ್ಕೆ ಬರೋಣ.

ನನ್ನನ್ನು ಹೊಗಳುವ, ಪ್ರೋತ್ಸಾಹಿಸುವವರ ಜತೆಗೆ ಟೀಕಿಸುವ ಒಂದು 'ದೊಡ್ಡ" (ಬಾಯಿಯ) ವರ್ಗವೂ ಇದೆ. “ಒಮ್ಮೆ ಹೊಗಳುತ್ತೀಯಾ, ಕೆಲವೊಮ್ಮೆ ಅದೇ ವ್ಯಕ್ತಿಯನ್ನು ತೆಗಳುತ್ತೀಯಾ" ಎಂಬ ಟೀಕೆ ನನ್ನ ಮೇಲಿದೆ. ಹೌದು, ವಾಜಪೇಯಿಯವರನ್ನು ಹೊಗಳಿ ಇದುವರೆಗೂ ಮೂರು ಲೇಖನಗಳನ್ನು ಬರೆದಿದ್ದೇನೆ. ಆದರೆ ಅದೇ ವಾಜಪೇಯಿಯವರು ಗುಜರಾತ್ ಹಿಂಸಾಚಾರದ ನಂತರ ನರೇಂದ್ರ ಮೋದಿಯವರನ್ನು ಪದಚ್ಯುತಗೊಳಿಸಲು ಮುಂದಾದಾಗ “ಹರಕೆ ಕುರಿ ಹುಡುಕುತ್ತಿರುವ ವಾಜಪೇಯಿ" ಎಂದು ಕಟು ಶಬ್ದಗಳಿಂದ ಟೀಕಿಸಿದ್ದೇನೆ. ಒಳ್ಳೆಯ ಕೆಲಸ ಮಾಡಿದಾಗ ಹೊಗಳುತ್ತೇನೆ. ತಪ್ಪು ಮಾಡಿದಾಗ ತೆಗಳುತ್ತೇನೆ. ಅದರಲ್ಲಿ ತಪ್ಪೇನಿದೆ? ಒಮ್ಮೆ ಹೊಗಳಿದ್ದೇನೆಂಬ ಕಾರಣಕ್ಕೆ ತಪ್ಪು ಮಾಡಿದಾಗಲೂ ಸುಮ್ಮನಿರಬೇಕೆ?

ಪತ್ರಕರ್ತನಾದವನಿಗೆ ಬೇಕಾಗಿರುವುದು ವಸ್ತು'ನಿಷ್ಠೆ"ಯೇ ಹೊರತು, ವ್ಯಕ್ತಿನಿಷ್ಠೆಯಲ್ಲ. ರಾಷ್ಟ್ರೀಯ ವಿಚಾರಗಳು, ರಾಷ್ಟ್ರಪ್ರೇಮ, ದೇಶಾಭಿಮಾನದ ಬಗ್ಗೆ ಬರೆದಾಗ ಬಿಜೆಪಿ, ಆರೆಸ್ಸೆಸ್, ಚೆಡ್ಡಿ ಎಂದು ಕೆಲವರು ವಿನಾಕಾರಣ ನನ್ನನ್ನು ಟೀಕಿಸುತ್ತಾರೆ. ಆದರೆ ರಾಷ್ಟ್ರೀಯತೆ, ರಾಷ್ಟ್ರಪ್ರೇಮವನ್ನು ಆರೆಸ್ಸೆಸ್‌ನವರಿಗೇನು ಗುತ್ತಿಗೆ ಕೊಟ್ಟಿದ್ದೇವೆಯೇ? ಅಥವಾ ರಾಷ್ಟ್ರಪ್ರೇಮ ಇರುವವರನ್ನೆಲ್ಲ ಆರೆಸ್ಸೆಸ್, ಬಿಜೆಪಿ ಎನ್ನುವುದಾದರೆ ಆರೆಸ್ಸೆಸ್, ಬಿಜೆಪಿಗೆ ಮಾತ್ರ ದೇಶಪ್ರೇಮವಿದೆ ಎಂದು ಒಪ್ಪಿಕೊಂಡಂತಾಗುವುದಿಲ್ಲವೆ?

ಇನ್ನೊಂದೆಡೆ ನನ್ನನ್ನು ಹಿಂದುತ್ವವಾದಿ ಎನ್ನುವವರೂ ಇದ್ದಾರೆ. ಹೌದು, ನಾನು ಹಿಂದುತ್ವವಾದಿ. ಅದರಲ್ಲಿ ನಾಚಿಕೆಪಟ್ಟುಕೊಳ್ಳುವಂಥದ್ದೇನಿದೆ? ಹಿಂದೂ ಧರ್ಮವೆಂದರೆ ಅದೊಂದು ಜೀವನ ವಿಧಾನ ಎಂದು ಸುಪ್ರೀಂ ಕೋರ್ಟೇ ಹೇಳಿದೆ. ಹಾಗಾಗಿ ನಮ್ಮ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಬೇಕಾದುದು, ರಕ್ಷಿಸಬೇಕಾದುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ನಮ್ಮ ಸಂಸ್ಕೃತಿಯ ಮೇಲೆ ಪರಧರ್ಮಗಳ ಆಕ್ರಮಣ ನಡೆದಾಗ ಅದನ್ನು ವಿರೋಧಿಸುತ್ತೇನೆ, ಖಂಡಿಸುತ್ತೇನೆ ಹಾಗೂ ನಮ್ಮವರನ್ನು ಎಚ್ಚರಿಸುತ್ತೇನೆ. ಒಂದು ಭಾಷೆ ಜತೆ ಸಂಸ್ಕೃತಿ, ಶಿಷ್ಟಾಚಾರಗಳೂ ಹೆಣೆದುಕೊಂಡಿರುತ್ತವೆ. ಹಾಗಾಗಿ ಈ ದೇಶದ ನೆಲ, ಜಲಗಳ ಜತೆ ಭಾಷೆ, ಧರ್ಮವನ್ನೂ ರಕ್ಷಿಸಿಕೊಳ್ಳಬೇಕಾಗುತ್ತದೆ. ಆ ಕಾರಣಕ್ಕಾಗಿ ಕ್ರೈಸ್ತರ ಮತಾಂತರವನ್ನು, ಮುಸ್ಲಿಮರ ಕೃತಘ್ನತೆಯನ್ನು ಟೀಕಿಸಿ ಬರೆಯುತ್ತೇನೆ.

ಹಾಗೆ ಸತ್ಯಸಂಗತಿಗಳನ್ನು ನೇರಾನೇರ ಬರೆದು ಕಷ್ಟಕ್ಕೆ ಸಿಲುಕಿದ್ದೂ ಇದೆ. ಕನಿಷ್ಠ ಏಳೆಂಟು ಬಾರಿ ಕೆಲಸ ಕಳೆದುಕೊಳ್ಳುವ ಹಂತಕ್ಕೂ ಹೋಗಿದ್ದೆ. ಹೊಲಸು ನಿಂದನೆಗಳಿಗೂ ಒಳಗಾಗಿದ್ದೆ. ಆ ಎಲ್ಲ ಸಂದರ್ಭಗಳಲ್ಲೂ ನನ್ನ ಬೆಂಗಾವಲಿಗೆ ನಿಂತಿದ್ದು, ಕೆಲಸವನ್ನು ಉಳಿಸಿದ್ದು ನನ್ನ ಪ್ರೀತಿಯ ಸಂಪಾದಕರಾದ ವಿಶ್ವೇಶ್ವರ್ ಭಟ್. ನನ್ನ ಯಶಸ್ಸಿನಲ್ಲಿ ಅವರ ಪಾತ್ರ ಹಿರಿದು.

ಇನ್ನು “ನೀನು ನಿನ್ನ ಅಭಿಪ್ರಾಯವನ್ನು ಓದುಗರ ಮೇಲೆ ಹೇರುತ್ತೀಯಾ" ಎಂದು ಕೆಲವರು ದೂರುತ್ತಾರೆ. ಆ ಮಾತನ್ನು ಒಪ್ಪಲು ಖಂಡಿತ ನಾನು ತಯಾರಿಲ್ಲ. ನಾನು ನನ್ನ ಅಭಿಪ್ರಾಯಗಳನ್ನು ಬಲವಾಗಿ, ತಾರ್ಕಿಕವಾಗಿ ಮಂಡಿಸುತ್ತೇನಷ್ಟೇ. ಅದನ್ನು ಒಪ್ಪುವುದು ಬಿಡುವುದು ನಿಮಗೆ ಬಿಟ್ಟಿದ್ದು. ನೀವೇ ಯೋಚನೆ ಮಾಡಿ, ಯಾರಾದರೂ ಒಬ್ಬ ಒಳ್ಳೆಯ ಡಾಕ್ಟರ್ ಇದ್ದಾನೆಂದರೆ ಎಲ್ಲರೂ ಆತನ ಬಳಿಗೇ ಹೋಗುತ್ತಾರೆ. ಏಕೆಂದರೆ ಆತನ ಮೇಲೆ ಜನರಿಗೆ ವಿಶ್ವಾಸವಿರುತ್ತದೆ. ಒಬ್ಬ ಪತ್ರಕರ್ತ ಹಾಗೂ ಓದುಗರ ನಡುವೆಯೂ ಅಂತಹ ವಿಶ್ವಾಸಾರ್ಹತೆ ಇರಬೇಕು. ನಾನು ಬರೆಯುವುದು ಓದುಗರಾದ ನಿಮಗೆ ಸತ್ಯ ಎನಿಸಿದರಷ್ಟೇ ನನ್ನ ಲೇಖನಗಳನ್ನು ಓದುತ್ತೀರಿ ಅಲ್ಲವೆ? ಹಾಗೆ ನೀವು ನನ್ನ ಮೇಲಿಟ್ಟಿರುವ ವಿಶ್ವಾಸವೇ ನನಗೆ ಪ್ರೇರಣೆಯಾಗಿದ್ದು, ಪ್ರತಿ ಲೇಖನ ಬರೆಯುವಾಗಲೂ ಸೂಕ್ತ ತಯಾರಿ ನಡೆಸುತ್ತೇನೆ.

ಡೀಮ್ಡ್ ಯೂನಿವರ್ಸಿಟಿಗಳ ಬಗ್ಗೆ ಬರೆದಾಗಲಂತೂ ಎರಡು ತಿಂಗಳುಗಳ ಕಾಲ ಮಾಹಿತಿ ಕಲೆಹಾಕಿದ್ದೆ. ಪ್ರತಿವಾರವೂ ಬರೆಯುವ ಮೊದಲು ನನ್ನ ಜತೆ ಸಂಪರ್ಕದಲ್ಲಿರುವ ಕೆಲವು ಓದುಗರ ಮುಂದೆ ಅಂಕಣದ ವಿಷಯವನ್ನಿಟ್ಟು ಅಭಿಪ್ರಾಯ ಕೇಳುತ್ತೇನೆ. 'ಬೆತ್ತಲೆ ಜಗತ್ತು" ಏಕೆ ಇಷ್ಟೊಂದು ಪ್ರಸಿದ್ಧಿಯಾಗಿದೆಯೆಂದರೆ ಅದು ಜನರ ಅಭಿಪ್ರಾಯಗಳಿಗೆ ವೇದಿಕೆಯಾಗಿದೆ. ಅದನ್ನು ಬರೆಯುವವನು ನಾನೇ ಆಗಿದ್ದರೂ ಅದು ನಿಮಿತ್ತ ಮಾತ್ರ. ನನ್ನ ಹಿರಿಯಣ್ಣನಂತಿರುವ 'ಇಂಡಿಯನ್ ಎಕ್ಸ್‌ಪ್ರೆಸ್"ನ ಹೇಮಂತ್ ಕುಮಾರ್, ಕೆ.ಎಸ್. ಜಗನ್ನಾಥ್, ಎಸ್.ವಿ. ಪದ್ಮನಾಭ, ಕಿರಿಯ ಸ್ನೇಹಿತರಾದ ಶ್ರೀವತ್ಸ ಅಡಿಗ, ಶ್ರೀಶ ಪುಣಚ, ಚೈತ್ರಾ ಭಟ್, ನನ್ನ ಸಹೋದ್ಯೋಗಿ ಶಿವಕುಮಾರ್, ಹಿತೈಷಿಗಳಾದ ವಾದಿರಾಜ್, ಡಾ.ಜಿ.ಬಿ. ಹರೀಶ್ ಅವರ ಚಿಂತನೆ, ಅಭಿಪ್ರಾಯಗಳಿಗೂ 'ಬೆತ್ತಲೆ ಜಗತ್ತು" ವೇದಿಕೆಯಾಗಿದೆ.

ನಾನೊಬ್ಬನೇ ಕೀರ್ತಿಗೆ ಭಾಜನನಾಗುತ್ತಿದ್ದರೂ ಪರಿಶ್ರಮ ಬೇರೆಯವರದ್ದೂ ಇದೆ. ಅದರಲ್ಲೂ ಶ್ರೀವತ್ಸ ಹಾಗೂ ಚೈತ್ರಾ ವಯಸ್ಸಿನಲ್ಲಿ ನನಗಿಂತ ಕಿರಿಯರಾದರೂ ಪ್ರತಿಭೆಯಲ್ಲಿ ಯಾರಿಗೂ ಕಡಿಮೆಯಿಲ್ಲ. ನನ್ನ ಅಂಕಣಗಳಿಗೆ ಎಷ್ಟೋ ವಿಷಯಗಳನ್ನು ಒದಗಿಸಿರುವವರು ಇವರೇ. ಹೊಸ ವಿಷಯಗಳನ್ನು ಹೆಕ್ಕಿ ತಂದುಕೊಡುತ್ತಾರೆ. ಹಾಗೆ ನಾನು ಎಲ್ಲರ ಅಭಿಪ್ರಾಯಗಳನ್ನೂ ಸ್ವೀಕರಿಸುವುದರಿಂದ ಹಾಗೂ ಆ ಅಭಿಪ್ರಾಯಗಳು ಜನರದ್ದೇ ಆಗಿರುವುದ ರಿಂದ ಸಹಜವಾಗಿಯೇ ನನ್ನ ಲೇಖನಗಳು ಜನಮನ್ನಣೆ ಗಳಿಸುತ್ತಿವೆ. ಅದರಲ್ಲೂ ವಚನಭ್ರಷ್ಟ ಕುಮಾರಸ್ವಾಮಿಯವರನ್ನು “ತಾಕತ್ತಿದ್ದರೆ ಈಗ ಗ್ರಾಮ ವಾಸ್ತವ್ಯ ಮಾಡಿ" ಎಂದು ಹಿಗ್ಗಾಮುಗ್ಗಾ ತೆಗಳಿ ಬರೆದಾಗ ಭಾರೀ ಪ್ರತಿಕ್ರಿಯೆ ಬಂತು. ಏಕೆ?

ನಾನು ಹೊಸದೇನನ್ನೂ ಹೇಳಿರಲಿಲ್ಲ. ಜನರ ಮನಸ್ಸಿನಲ್ಲೂ ಅದೇ ಭಾವನೆಗಳಿದ್ದವು. ಆ ಭಾವನೆ, ಅಭಿಪ್ರಾಯಗಳಿಗೆ ನನ್ನ ಅಂಕಣ ವೇದಿಕೆಯಾಯಿತಷ್ಟೆ. ನನ್ನ ಪ್ರಕಾರ ಅದೇ ಪತ್ರಿಕೋದ್ಯಮ. ಜನರ ಗಮನಕ್ಕೆ ಬಾರದ ವಿಷಯಗಳ ಮೇಲೆ ಬೆಳಕು ಚೆಲ್ಲಬೇಕಾದುದು ಎಷ್ಟು ಮುಖ್ಯವೋ, ಜನರ ಅಭಿಪ್ರಾಯಗಳಿಗೆ ವೇದಿಕೆಯಾಗ ಬೇಕಾದುದು ಅದಕ್ಕಿಂತಲೂ ಮುಖ್ಯ. ಹಾಗಾಗಿಯೇ ಜನ ಖುಷಿಪಟ್ಟರು.

ಇಷ್ಟಾಗಿಯೂ ಹಿಂದುತ್ವಕ್ಕೆ ಸಂಬಂಧಿಸಿದಂತೆ ವರ್ಷವೊಂದರಲ್ಲಿ ನಾನು ಬರೆಯುವ ಮೂರ್ನಾಲ್ಕು ಲೇಖನಗಳನ್ನೇ ಮುಂದಿಟ್ಟುಕೊಂಡು ನನ್ನನ್ನು ಬಲಪಂಥೀಯವಾದಿ ಎಂದು ದೂರುವ ವರಿದ್ದಾರೆ. ಆ ಮೂರ್ನಾಲ್ಕು ಲೇಖನಗಳನ್ನು ಹೊರತುಪಡಿಸಿ, ವರ್ಷದಲ್ಲಿ ಬರುವ ಉಳಿದ 48 ಶನಿವಾರಗಳಂದು ಬರೆದ ಹೊಸ ವಿಚಾರಗಳ ಬಗ್ಗೆ ಜಾಣ ಮರೆವು ತೋರುತ್ತಾರೆ! ಅಂಥವರ ಬಗ್ಗೆ ಏಕೆ ತಲೆಕೆಡಿಸಿಕೊಳ್ಳುತ್ತೀಯಾ ಎಂದು ನನ್ನನ್ನು ಹುರಿದುಂಬಿಸಿದವರು ನೀವೇ. ನನ್ನನ್ನು ವಿನಾಕಾರಣ ರೈಟ್‌ವಿಂಗ್ ರೈಟರ್, ಆರೆಸ್ಸೆಸ್, ಹಿಂದೂ ಬಾಲಕ ಅಂತ ನಿಂದಿಸುವುದನ್ನೆ ವೃತ್ತಿಯಾಗಿಸಿಕೊಂಡಿರುವ ಒಂದಿಬ್ಬರು ಟ್ಯಾಬ್ಲಾಯ್ಡ್ ಪತ್ರಕರ್ತರೂ ಇದ್ದಾರೆ.

ಆದರೆ ನಾನೆಂದೂ ಅವರಿಗೆ ಉತ್ತರಿಸಲು ಹೋಗಿಲ್ಲ. ಏಕೆಂದರೆ ಪ್ರತಿಬಾರಿಯೂ ನನ್ನ ಲೇಖನಗಳಿಗೆ ಅದ್ಭುತ ಪ್ರತಿಕ್ರಿಯೆ ನೀಡುವ ಮೂಲಕ ಅವರಿಗೆ ನೀವೇ ಉತ್ತರ ನೀಡಿದ್ದೀರಿ. ನಾನು ಬರೆದ ಕೆಲವು ಲೇಖನಗಳು ನನಗೇ ಮರೆತು ಹೋಗಿರುತ್ತವೆ. ಆದರೆ ನೀವು ಬಂದು ಜ್ಞಾಪಿಸುತ್ತೀರಿ, ಮೆಚ್ಚುಗೆಯ ಮಾತನಾಡುತ್ತೀರಿ. ಆಗ ಆಗುವ ಆನಂದ ಈ ಜನ್ಮಕ್ಕೆ ಸಾಕು. ಅಷ್ಟಕ್ಕೂ ನಿಮ್ಮಂಥ ಓದುಗರಿಗಿಂತ ದೊಡ್ಡ ಆಸ್ತಿ ಯಾವುದಿದೆ ಹೇಳಿ? "I can break, but I can't bend" ಎಂದಿದ್ದರು ವಾಜಪೇಯಿ. ನಿಮ್ಮ ಪ್ರೀತಿ, ಪ್ರೋತ್ಸಾಹ ಇರುವವರೆಗೆ ನಾನೂ ಕೂಡ bend ಅಗಬೇಕಾದ ಅಗತ್ಯ ಎದುರಾಗುವುದಿಲ್ಲ. ಅಷ್ಟಕ್ಕೂ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದವರು ನೀವೇ.

(ಬೆತ್ತಲೆ ಜಗತ್ತು ಭಾಗ 6 ಕೃತಿಯ ಲೇಖಕರ ಮಾತುಗಳಿಂದ ಹೆಕ್ಕಿದ ಬರಹ)

English summary
About me : A prologue by Pratap Simha, working journalist and columnist in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X