• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಥಾಯಿ ಕರಿಮಾಯಿ ‘ಮರ’ತಾಯಿ ಶರಣು

By Staff
|
  • ರಘುನಾಥ ಚ.ಹ.

Wangari Maathai, Founder of Green Bely Movement2004ರ ನೊಬೆಲ್‌ ಶಾಂತಿ ಪ್ರಶಸ್ತಿ ಪಡೆದ ಕೀನ್ಯಾದ ವಾಂಗರಿ ಮಾಥಾಯ್‌ ನಮ್ಮ ಸಾಲು ಮರದ ತಿಮ್ಮಕ್ಕನಂಥ ಹೆಣ್ಣುಮಕ್ಕಳು. ಇಬ್ಬರೂ ಗಿಡಗಳನ್ನು ನೆಟ್ಟ ತಾಯಂದಿರು; ಹಸುರೇ ಉಸಿರೆಂದು ನಂಬಿದವರು. ಮಾಥಾಯ್‌ ಮತ್ತು ತಿಮ್ಮಕ್ಕಜ್ಜಿಗೆ ಇರುವ ವ್ಯತ್ಯಾಸ ಇಷ್ಟೇ : ತಿಮ್ಮಕ್ಕ ಅನಕ್ಷರಸ್ಥೆ ಹಾಗೂ ಒಂಟಿ, ಮಾಥಾಯ್‌ ಸುಶಿಕ್ಷಿತೆ ಹಾಗೂ ಸಂಘಟನೆ ಸಾಮರ್ಥ್ಯವುಳ್ಳ ನಾಯಕಿ. ಒಬ್ಬಾಕೆ ತನ್ನೂರಿನ ರಸ್ತೆಯ ಇಕ್ಕೆಲಗಳಲ್ಲಿ ಸಾಲುಮರಗಳ ನೆಟ್ಟರೆ, ಮತ್ತೊಬ್ಬ ಹೆಣ್ಣುಮಗಳು ದೇಶದೆಲ್ಲೆಡೆ ಹಸಿರು ಆಂದೋಲನಕ್ಕೆ ಬೀಜ ನೆಟ್ಟಳು. ಮಾಥಾಯ್‌ಗೆ ಇಡೀ ದೇಶವೇ ಹಳ್ಳಿಯಾಯಿತು. ಆಕೆಯ ಕುರಿತು ಕೇಳಿಬರುವ ‘ಜಾಗತಿಕ ಚಿಂತನೆ, ಪ್ರಾದೇಶಿಕ ಕಾರ್ಯಾಚರಣೆ’ ಎನ್ನುವ ಮಾತು ಮಾಥಾಯ್‌ಳ ವ್ಯಕ್ತಿತ್ವಕ್ಕೆ ಒಪ್ಪುವಂತದ್ದು. ಈಕೆಯ ಹಸಿರುಪ್ರೇಮ ಅಕ್ಕಪಕ್ಕದ ದೇಶಗಳಿಗೂ ಮಾದರಿಯಾಯಿತು. ಆ ಕಾರಣದಿಂದಲೇ ಮಾಥಾಯ್‌ ಎಂದಕೂಡಲೇ ಸಾಲುಮರಗಳ ಹಸುರು, ಹಸುರೊಳಗಿನ ಉಸಿರು ಕಣ್ಮುಂದೆ ಬರುತ್ತದೆ. ಮಾಥಾಯ್‌ಗೆ ಸಲ್ಲುವ ಮೂಲಕ ನೊಬೆಲ್‌ ಶಾಂತಿ ಪ್ರಶಸ್ತಿಯ ಗೌರವ ಹೆಚ್ಚಿತು.

ಆಫ್ರಿಕಾ ಖಂಡದಲ್ಲಿನ ಒಂದು ಪುಟ್ಟರಾಷ್ಟ್ರ ಕೀನ್ಯಾ. ಆಫ್ರಿಕಾದಲ್ಲಿನ ಕಗ್ಗತ್ತಲು ಕೀನ್ಯಾದಲ್ಲೂ ಇದೆ. ಆದರೆ ಕೀನ್ಯಾಕ್ಕೆ ಬೆಳಕಿನ ರೂಪದಲ್ಲಿ ಪರಿಣಮಿಸಿದ ಹೆಣ್ಣುಮಗಳು ಮಾಥಾಯ್‌. ಪ್ರಜಾಪ್ರಭುತ್ವ, ಶಾಂತಿ ಹಾಗೂ ದೀರ್ಘಕಾಲೀನ ಅಭಿವೃದ್ಧಿಗಾಗಿ ಆಕೆ ನೀಡಿರುವ ಕೊಡುಗೆಯನ್ನು ಗೌರವಿಸಿ ಸ್ವೀಡಿಷ್‌ ಅಕಾಡೆಮಿ ನೊಬೆಲ್‌ ಶಾಂತಿ ಪುರಸ್ಕಾರ ಪ್ರಕಟಿಸಿದೆ. ನೊಬೆಲ್‌ ಶಾಂತಿ ಪುರಸ್ಕಾರ ಪಡೆದ ಆಫ್ರಿಕಾದ ಪ್ರಥಮ ಮಹಿಳೆ ಮಾಥಾಯ್‌.

ಅಭಿವೃದ್ಧಿಯ ಮೊದಲ ಹೆಜ್ಜೆ ಮಹಿಳೆಯರ ಮೂಲಕವೇ ಪ್ರಾರಂಭವಾಗಬೇಕು ಎನ್ನುವ ಗಾಂಧಿಯ ನಂಬುಗೆ ಮಾಥಾಯ್‌ಳದು ಕೂಡ. ಆ ಕಾರಣದಿಂದಲೇ ಆಕೆ ತನ್ನ ‘ಹಸುರು ಆಂದೋಲನ’ದಲ್ಲಿ ಮಹಿಳೆಯರನ್ನು ಸೇರಿಸಿಕೊಂಡಳು. ಈ ಆಂದೋಲನದ ಮೂಲಕ ವೃಕ್ಷಸಂಪತ್ತು ಹೆಚ್ಚಿಸುವುದಷ್ಟೇ ಆಕೆಯ ಗುರಿಯಾಗಿರಲಿಲ್ಲ , ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದೂ ಆಗಿತ್ತು . ಭ್ರಷ್ಟಾಚಾರದ ವಿರೋಧ, ಕುಟುಂಬ ನಿಯಂತ್ರಣದ ಅರಿವು, ಅಪೌಷ್ಟಿಕತೆಯ ಹೋಗಲಾಡಿಕೆ, ಭೂಕಬಳಿಕೆಯ ವಿರೋಧ, ಶಿಕ್ಷಣ ಮುಂತಾದ ಉದ್ದೇಶಗಳಿಗಾಗಿಯೂ ಮಾಥಾಯ್‌ ಆಂದೋಲವನ್ನು ಬಳಸಿಕೊಂಡಳು. ಈ ಬಹುಮುಖಿ ಚಿಂತನೆಯ ಕಾರಣದಿಂದಲೇ ಮಾಥಾಯ್‌ ಮನುಕುಲಕ್ಕೆ ಹೆಚ್ಚು ಆಪ್ತಳೆನಿಸುತ್ತಾಳೆ.

ಮಾಥಾಯ್‌ ಪರಿಸರವಾದಿಯಷ್ಟೇ ಅಲ್ಲ , ಹೋರಾಟಗಾರ್ತಿಯೂ ಹೌದು. ವಿಜ್ಞಾನ, ಸಾಮಾಜಿಕ ಬದ್ಧತೆ ಹಾಗೂ ಸಕ್ರಿಯ ರಾಜಕಾರಣವನ್ನು ಒಟ್ಟಿಗೆ ಕಂಡ ಹೆಣ್ಣುಮಗಳು. ರಾಜಕೀಯ ದಬ್ಬಾಳಿಕೆಯ ಕುರಿತು ತನ್ನ ಹೋರಾಟಗಳ ಮೂಲಕ ಮಾಥಾಯ್‌ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಗಮನ ಸೆಳೆದಿದ್ದಾರೆ. ಮಹಿಳೆಯರು ತಮ್ಮ ಸ್ಥಿತಿ ಉತ್ತಮಪಡಿಸಕೊಳ್ಳುವ ಕುರಿತು ಸದಾ ದನಿಯೆತ್ತುತ್ತಲೇ ಇರುವ ಮಾಥಾಯ್‌, ಮಾತು ಕಳಕೊಂಡ ಮಹಿಳೆಯರಿಗೆ ದನಿಯಾಗಿದ್ದಾರೆ.

ಮಾಥಾಯ್‌ ಎಂದಕೂಡಲೇ ತಕ್ಷಣ ನೆನಪಿಗೆ ಬರುವುದು ಆಕೆ 1977ರಲ್ಲಿ ಪ್ರಾರಂಭಿಸಿದ ‘ಗ್ರೀನ್‌ಬೆಲ್ಟ್‌ ಮೂಮೆಂಟ್‌’. ತನ್ನೂರಿನಲ್ಲಿ ಉರುವಲು ಬರ ಬಂದಿರುವುದನ್ನು ಗಮನಿಸಿದ ಮಾಥಾಯ್‌ ಬರಡಾಗುತ್ತಿರುವ ವೃಕ್ಷಸಂಕುಲದ ಕುರಿತು ಆತಂಕಗೊಂಡಳು. ಹಸುರು ಆಂದೋಲನದ ಬೀಜ ಬಿತ್ತನೆಯಾದದ್ದೇ ಆಗ. ಅಂದಾಜು 3 ಕೋಟಿ ಮರಗಳನ್ನು ನೆಡುವಂತೆ ಆಕೆ ಬಡ ಮಹಿಳೆಯರನ್ನು ಉತ್ತೇಜಿಸಿದ್ದೇ ಅಲ್ಲದೇ, ಈ ಕಾರ್ಯದಲ್ಲಿ ಸಾಕಷ್ಟು ಯಶಸ್ವಿಯೂ ಆದಳು.

Maathai planting trees ensures a greener and cleaner environment for everyone1976ರಲ್ಲಿ ರಾಷ್ಟ್ರೀಯ ಮಹಿಳಾ ಸಮಿತಿಯ ಮೂಲಕ ಗಿಡ ನೆಡುವ ಕಾರ್ಯಕ್ರಮಕ್ಕೆ ಮಾಥಾಯ್‌ ಚಾಲನೆ ನೀಡಿದರು. ಮುಖ್ಯವಾಗಿ ಮಹಿಳೆಯರ ಗುಂಪುಗಳನ್ನು ಸೇರಿಸಿಕೊಂಡು ಗಿಡ ನೆಡುವ ಮೂಲಕ ಮಹಿಳೆಯರ ಸ್ಥಾನಮಾನ ಸುಧಾರಿಸುವ ಆಶಯ ಅವರದು. ಈ ಕಾರ್ಯಕ್ರಮವೇ ‘ಗ್ರೀನ್‌ಬೆಲ್ಟ್‌ ಮೂಮೆಂಟ್‌’ ಹೆಸರಿನಲ್ಲಿ 1977ರಲ್ಲಿ ವಿಸ್ತುತ ರೂಪ ಪಡೆಯಿತು. ಪರಿಣಾಮವಾಗಿ ದೇಶದೆಲ್ಲೆಡೆ ಬಯಲುಭೂಮಿಗಳಲ್ಲಿ , ಶಾಲಾ ಆವರಣಗಳಲ್ಲಿ , ಚರ್ಚ್‌ ಪರಿಸರದಲ್ಲಿ ಗಿಡ ನೆಡಲಾಯಿತು. ಗುರಿ 3 ಕೋಟಿ ; ಕನಿಷ್ಠ 2 ಕೋಟಿ ಗಿಡ ನೆಟ್ಟ ದಾಖಲೆಯಿದೆ. 1986ರಲ್ಲಿ ಸಮಗ್ರ ಆಫ್ರಿಕಾಕ್ಕೆ ಗ್ರೀನ್‌ಬೆಲ್ಟ್‌ ಸಂಪರ್ಕಜಾಲ ಹಬ್ಬಿತು. ಆಫ್ರಿಕಾದ ಇತರ ದೇಶಗಳ ಸುಮಾರು 40 ಮಂದಿ ಮಾಥಾಯ್‌ರ ಕಾರ್ಯಕ್ರಮದಿಂದ ಸ್ಫೂರ್ತಿಹೊಂದಿ ತಂತಮ್ಮ ದೇಶಗಳಲ್ಲೂ ಹಸುರು ಆಂದೋಲನ ಚುರುಕುಗೊಳಿಸಿದರು; ಅನೇಕರು ತಮ್ಮ ಈವರೆಗಿನ ಕಾರ್ಯವಿಧಾನವನ್ನು ಬದಲಿಸಿಕೊಂಡರು. ತಾಂಜಾನಿಯ, ಉಗಾಂಡ, ಇಥಿಯೋಪಿಯ, ಜಿಂಬಾಬ್ವೆ ಮುಂತಾದ ದೇಶಗಳಲ್ಲಿ ಮಾಥಾಯ್‌ ಸ್ಫೂರ್ತಿಯ ಹಸುರುಹೆಜ್ಜೆಗಳ ಕಾಣಬಹುದು.

ವಾಂಗರಿ ಮಾಥಾಯ್‌ ಹುಟ್ಟಿದ್ದು 1940ರ ಏಪ್ರಿಲ್‌ 1ರಂದು. ಈ ಅರವತ್ತಾಲ್ಕು ವರ್ಷಗಳ ಹಾದಿಯಲ್ಲಿ ಹಲವು ಪ್ರಥಮಗಳ ಸಾಧನೆ ಆಕೆಯದಾಗಿದೆ. ಡಾಕ್ಟರೇಟ್‌ ಪದವಿ ಪಡೆದ ಪೂರ್ವ ಮತ್ತು ಕೇಂದ್ರ ಆಫ್ರಿಕಾದ ಮೊದಲ ಮಹಿಳೆ, ನೈರೋಬಿ ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕಿ ಹಾಗೂ ಪಶುವೈದ್ಯಕೀಯ ಅಂಗಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ಆ ಸ್ಥಾನಗಳನ್ನು ಅಲಂಕರಿಸಿದ ಮೊದಲ ಮಹಿಳೆ ಎನ್ನುವ ಅಗ್ಗಳಿಕೆ ಆಕೆಯದು. ಇವೆಲ್ಲಕ್ಕೂ ಮುಕುಟಪ್ರಾಯವಾಗಿ ಇದೀಗ ನೊಬೆಲ್‌ ಶಾಂತಿ ಪುರಸ್ಕಾರ ಪಡೆದ ಆಫ್ರಿಕಾದ ಮಹಿಳೆ ಎನ್ನುವ ಹಿರಿಮೆ.

ಮಾಥಾಯ್‌ ಹಾಗೂ ಆಕೆ ರೂಪಿಸಿದ ‘ಗ್ರೀನ್‌ಬೆಲ್ಟ್‌’ ಆಂದೋಲನಕ್ಕೆ- ಎಡಿನ್‌ಬರ್ಗ್‌ ಪದಕ, ವಿಂಡ್‌ಸ್ಟಾರ್‌ ಪ್ರಿಸರ ಪ್ರಶಸ್ತಿ , ಜೇನ್‌ ಆಡಮ್ಸ್‌ ನಾಯಕತ್ವ ಪ್ರಶಸ್ತಿ , ಗೋಲ್ಡ್‌ಮನ್‌ ಪರಿಸರ ಪ್ರಶಸ್ತಿ , ವಿಶ್ವಸಂಸ್ಥೆ ನೀಡುವ ಆಫ್ರಿಕಾದ ನಾಯಕತ್ವ ಪ್ರಶಸ್ತಿ , ಪೆಟ್ರ ಕೆಲ್ಲಿ ಪರಿಸರ ಪ್ರಶಸ್ತಿ , ರೈಟ್‌ ಲೈವ್ಲಿಹುಡ್‌ ಪ್ರಶಸ್ತಿ ಸೇರಿದಂತೆ ಹಲವು ರಾಷ್ಟ್ರೀಯ ಅಂತರರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಚಿತ್ರಗಳು, ಸಾಕ್ಷ್ಯಚಿತ್ರಗಳು ಮಾಥಾಯ್‌ ಕುರಿತು ತಯಾರಾಗಿವೆ. ಅನೇಕ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‌ಗಳು ಮಾಥಾಯ್‌ಗೆ ಸಂದಿದ್ದು , ವಿಶ್ವದ ನೂರು ಪ್ರಮುಖ ವ್ಯಕ್ತಿಗಳಲ್ಲಿ ಅವರ ಹೆಸರೂ ಇದೆ.

ಕೀನ್ಯಾ ರೆಡ್‌ಕ್ರಾಸ್‌ನ ನಿರ್ದೇಶಕಿಯಾಗಿಯೂ ಮಾಥಾಯ್‌ ಕಾರ್ಯ ನಿರ್ವಹಿಸಿದ್ದಾರೆ. 2002ರ ಡಿಸೆಂಬರ್‌ನಲ್ಲಿ ಕೀನ್ಯಾ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ಶೇ.98 ಮತಗಳನ್ನು ಪಡೆದು ಆಯ್ಕೆಯಾದುದು ಮಾಥಾಯ್‌ರ ಬೇರುಮಟ್ಟದ ಜನಪ್ರಿಯತೆಗೆ ಸಾಕ್ಷಿ . ಪ್ರಸ್ತುತ ಕೀನ್ಯಾದ ಪರಿಸರ, ಸ್ವಾಭಾವಿಕ ಸಂಪನ್ಮೂಲಗಳು ಮತ್ತು ವನ್ಯಜೀವಿ ಖಾತೆಯ ಸಹ ಸಚಿವೆಯಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

‘ನಾವು ಪರಿಸರವನ್ನು ಹೇಗೆ ರಕ್ಷಿಸುತ್ತೇವೆ ಎನ್ನುವುದರ ಮೇಲೆ ಭೂಮಿಯ ಮೇಲಿನ ಶಾಂತಿ ಅವಲಂಬಿತವಾಗಿದೆ’ ಎನ್ನುವುದು ಆಕೆಯ ನಂಬಿಕೆ. ಮಾಥಾಯ್‌ಳ ಹೆಸರು, ಆಂದೋಲನದ ಹಸುರು ಆಫ್ರಿಕಾದಲ್ಲಷ್ಟೇ ಅಲ್ಲದೆ, ಇತರೆಡೆಗಳಲ್ಲೂ ಜನಪ್ರಿಯ. ಅನೇಕ ದೇಶಗಳು- ಸಂಘಸಂಸ್ಥೆಗಳು ಮಾಥಾಯ್‌ ಹೆಜ್ಜೆಗುಂಟ ನಡೆದಿವೆ. ಆ ಹಾದಿ ನಿರಂತರವಾಗಿರಲಿ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X