ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕೇಶ್‌ : ಕಳೆದುಹೋದ ದಶಾವತಾರಿ!

By Staff
|
Google Oneindia Kannada News
  • ನಟೇಶ್‌ಬಾಬು ಹ.ಚ.
Lokesh : A pen portraitನಟ ಲೋಕೇಶ್‌ ಸಾವು ಅನಿರೀಕ್ಷಿತವಲ್ಲ. ಆದರೆ ಅವರು ಇನ್ನಿಲ್ಲ ಎನ್ನುವ ಭಾವ ಚಿತ್ರರಸಿಕರನ್ನು ಕಾಡುತ್ತಿರುವುದು ಸುಳ್ಳಲ್ಲ. ಪತ್ರಿಕೆಗಳಲ್ಲಿ ಲೋಕೇಶ್‌ರ ಆರೋಗ್ಯ ಪರಿಸ್ಥಿತಿಯ ವರದಿಗಳ ಓದುತ್ತಲೇ ಕನ್ನಡಿಗರು ಮನದಲ್ಲೇ ಮರುಗಿದ್ದರು. ಲೋಕೇಶ್‌ ನಾಯಕನಟರಾಗಿ ಜನಮಾನಸದಲ್ಲಿ ಮಿಂಚಿರಲಿಲ್ಲ. ನಮ್ಮ ನಡುವಿನ ಗೆಂಡೆ ತಿಮ್ಮನಾಗಿ, ನಮ್ಮ ಊರಿನ ಭುಜಂಗಯ್ಯನಾಗಿ, ರಸ್ತೆ ಬದಿಯ ಬ್ಯಾಂಕರ್‌ ಮಾರ್ಗಯ್ಯನಾಗಿ, ಎಲ್ಲರ ಅನುಕಂಪದ ಅಯ್ಯು ಆಗಿ ಲೋಕೇಶ್‌ ಬೆಳೆದಿದ್ದರು.

ರಾಜ್‌ಕುಮಾರ್‌, ವಿಷ್ಣುವರ್ಧನ್‌ರಂತೆ ಲೋಕೇಶ್‌ ಆಕರ್ಷಕ ಮೈಮಾಟ ಹೊಂದಿರಲಿಲ್ಲ. ಅಂಬರೀಷ್‌, ಪ್ರಭಾಕರ್‌ರಂತೆ ಚಿತ್ರಗಳಲ್ಲಿ ಹೊಡೆದಾಡಿ, ಪ್ರೇಕ್ಷಕರ ಮೆಚ್ಚುಕೆಗೆ ಪಾತ್ರರಾದವರಲ್ಲ. ಹೋಗಲಿ ಅಶೋಕ್‌, ಅನಂತನಾಗ್‌, ಶ್ರೀನಾಥ್‌ರಂತೆ ನಾಯಕ ನಟರಾಗಿ ಡುಯೆಟ್‌ ಹಾಡಿ ಮಿಂಚಿದವರಲ್ಲ. ಸದ್ದಿಲ್ಲದೆ ಕ್ರಿಯಾಶೀಲತೆಯನ್ನು ಬದುಕಿನುದ್ದಕ್ಕೂ ಉಳಿಸಿಕೊಂಡಿದ್ದ ಲೋಕೇಶ್‌, ಮರೆಯಲಾರದ ಅಭಿನಯದ ಮೂಲಕ ಪ್ರೇಕ್ಷರನ್ನು ಕಾಡುತ್ತಲೇ ಬಂದಿದ್ದರು.

ಅಕ್ಟೋಬರ್‌ 11 ರಂದು ಆಸ್ಪತ್ರೆಗೆ ದಾಖಲಾಗಿದ್ದ, ಲೋಕೇಶ್‌ ಅರೆಪ್ರಜ್ಞಾವಸ್ಥೆಯಲ್ಲಿಯೇ ಹಾಸಿಗೆ ಮೇಲೆ ಸಾವಿನ ಕ್ಷಣಗಳನ್ನು ಎಣಿಸುತ್ತಿದ್ದರು. ಆದರೆ ಲೋಕೇಶ್‌ಗೆ ಸಾವಿನ ಬಗ್ಗೆ ಭಯವಿರಲಿಲ್ಲ . ದೇಹದ ಬಗ್ಗೆ ಮಮಕಾರವೂ ಇರಲಿಲ್ಲ . ಆ ಕಾರಣದಿಂದಲೇ ತಮ್ಮ ಕಣ್ಣು ಹಾಗೂ ಕಿಡ್ನಿಗಳನ್ನು ಮರು ಬಳಕೆಗಾಗಿ ಅವರು ದಾನ ಮಾಡಿದ್ದರು. ಇಷ್ಟು ಮಾತ್ರವಲ್ಲ , ತಮ್ಮ ದೇಹವನ್ನು ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ವೈದ್ಯಕೀಯ ಉದ್ದೇಶಕ್ಕೆಬಳಸಲು ನೀಡ ಬೇಕೆನ್ನುವುದು ಲೋಕೇಶ್‌ ಆಶಯವಾಗಿತ್ತು. ಸಾರ್ವಜನಿಕರ ದರ್ಶನದ ನಂತರ ದೇಹವನ್ನು ಅಸ್ಪತ್ರೆಗೆ ಒಪ್ಪಿಸಲು ಅವರ ಕುಟುಂಬ ಸಿದ್ಧತೆ ನಡೆಸಿದೆ.

ರಕ್ತಗತ ಕಲೆ : ಅವಿಸ್ಮರಣೀಯ ಅಭಿನಯ, ಪಂಚ್‌ ನೀಡುವ ಸಂಭಾಷಣೆ ಹೇಳುವ ತಾಕತ್ತು ಇವೆಲ್ಲಾ ಲೋಕೇಶ್‌ಗೆ ಬಂದದ್ದು ಬಳುವಳಿಯಾಗಿ. ಅವರ ತಂದೆ ಸುಬ್ಬಯ್ಯನಾಯ್ಡು ಯಾರಿಗೆ ಗೊತ್ತಿಲ್ಲ . ಕನ್ನಡದ ಮೊದಲ ವಾಕಿ ಚಿತ್ರ ಸತಿಸುಲೋಚನಾ(1934) ನಿರ್ಮಿಸಿದ ಸಾಹಸಿ ಸುಬ್ಬಯ್ಯ ನಾಯ್ಡು. 1958ರಲ್ಲಿ ಬಾಲನಟನಾಗಿ ಭಕ್ತ ಪ್ರಹ್ಲಾದ ಚಿತ್ರದ ಮೂಲಕ ಲೋಕೇಶ್‌ ಕಲಾಜೀವನಕ್ಕೆ ಕಾಲಿಟ್ಟರು. ಮೊದಲ ಬಾರಿಗೆ ನಿರ್ಮಾಪಕರಾಗಿ, ನಿರ್ದೇಶಕರಾಗಿ ಲೋಕೇಶ್‌ ಕಾಣಿಸಿದ್ದು ಭುಜಂಗಯ್ಯನ ದಶಾವತಾರ(ಶ್ರೀಕೃಷ್ಣ ಅಲವಳ್ಳಿಯ ಕಾದಂಬರಿ)ಚಿತ್ರದ ಮೂಲಕ. ಈ ಸಿನಿಮಾ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿತ್ತು.

ಹೆಮ್ಮೆಯ ಗರಿಗಳು : 1974 ರಲ್ಲಿ ಭೂತಯ್ಯನ ಮಗ ಅಯ್ಯು, 1979 ರಲ್ಲಿ ಪರಸಂಗದ ಗೆಂಡೆತಿಮ್ಮ, 1984 ರಲ್ಲಿ ಬ್ಯಾಂಕರ್‌ ಮಾರ್ಗಯ್ಯ ಚಿತ್ರಗಳಿಗೆ ಲೋಕೇಶ್‌ ರಾಜ್ಯಪ್ರಶಸ್ತಿ ಪಡೆದಿದ್ದರು. ಕಾಕನ ಕೋಟೆ-ಲೋಕೇಶ್‌ರನ್ನು ಪೂರ್ಣ ಪ್ರಮಾಣದ ಹೀರೋ ಆಗಿ ಬಿಂಬಿಸಿತ್ತು. ಭೂತಯ್ಯನ ಮಗ ಅಯ್ಯು, ಕಾಕನಕೋಟೆ, ಕಾಡು, ದೇವರ ಕಣ್ಣು, ಎಲ್ಲಿಂದಲೇ ಬಂದವರು, ಪರಸಂಗದ ಗೆಂಡೆತಿಮ್ಮ, ಮುಯ್ಯಿ, ಬ್ಯಾಂಕರ್‌ ಮಾರ್ಗಯ್ಯ, ಪಟ್ಟಣಕ್ಕೆ ಬಂದ ಪತ್ನಿಯರು, ಭಕ್ತ ಸಿರಿಯಾಳ, ಮಾನಿನಿ, ಮುಂಗಾರಿನ ಮಿಂಚು, ಗಾನಯೋಗಿ ಪಂಚಾಕ್ಷರಿ ಗವಾಯಿ, ಭುಜಂಗಯ್ಯನ ದಶಾವತಾರ, ಮತ್ತಿತರ ಚಿತ್ರಗಳನ್ನು ಕನ್ನಡ ಚಿತ್ರಪ್ರೇಮಿಗಳು ಮರೆಯಲು ಸಾಧ್ಯವೇ ಇಲ್ಲ.

ರಂಗಭೂಮಿಯಲ್ಲಿ ತುಘಲಕ್‌, ಕಾಕನಕೋಟೆ, ಭಕ್ತ ಅಂಬರೀಷ ನಾಟಕಗಳ ಮೂಲಕ ಲೋಕೇಶ್‌ ಪ್ರಸಿದ್ಧರು. ಎರಡುಮೂರು ವರ್ಷಗಳ ಹಿಂದೆ ವರನಟ ರಾಜ್‌ರೊಂದಿಗೆ ಭಕ್ತ ಅಂಬರೀಷ ನಾಟಕಕ್ಕಾಗಿ ಲೋಕೇಶ್‌ ಬಣ್ಣ ಹಚ್ಚಿದ್ದರು.

ನಾಟಕ ಮತ್ತು ನೃತ್ಯಕ್ಕೆ ಸಂಬಂಧಿಸಿದ ಇಲಾಖೆಯಲ್ಲಿ ನೌಕರರಾಗಿ ಕೆಲವು ಕಾಲ ಸೇವೆ ಸಲ್ಲಿಸಿದ್ದರು. ಕನ್ನಡದೊಂದಿಗೆ ತಮಿಳು ತೆಲುಗು ಸೇರಿದಂತೆ, ಸುಮಾರು 60 ಸಿನಿಮಾಗಳಲ್ಲಿ ಲೋಕೇಶ್‌ ಅಭಿನಯಿಸಿದ್ದಾರೆ. 70 ರ ದಶಕದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಭೂತಯ್ಯನ ಮಗ ಅಯ್ಯು ಕ್ರಾಂತಿಯನ್ನು ಮಾಡಿತ್ತು. ಈ ಚಿತ್ರವನ್ನು ಹಿಂದಿಗೆ ಡಬ್ಬಿಂಗ್‌ಮಾಡಲಾಗಿದೆ.

ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ಎಲ್ಲರನ್ನು ನಕ್ಕುನಲಿಸಿದ್ದ ಲೋಕೇಶ್‌ರ ಖಾಸಗಿ ಬದುಕು ಹಸನಾಗೇನೂ ಇರಲಿಲ್ಲ. ಅದರಲ್ಲೂ 1990 ರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಲೋಕೇಶ್‌ ಸಿಲುಕಿದ್ದರು. ಲೋಕೇಶ್‌ರದು ಕಲಾವಿದರ ಕುಟುಂಬ. ಕನ್ನಡ ಚಿತ್ರರಂಗಕ್ಕೆ ಲೋಕೇಶ್‌ ನೀಡಿದ್ದು ಅವರ ಶ್ರೀಮಂತ ಕಲೆ. ಪತ್ನಿ ಗಿರಿಜಾ ಲೋಕೇಶ್‌, ಪುತ್ರಿ ಪೂಜಾ ಲೋಕೇಶ್‌, ಪುತ್ರ ಸೃಜನ್‌ರಂತಹ ಕಲಾವಿದರ ಬೆಳವಣಿಗೆಗೆ ಲೋಕೇಶ್‌ ಸ್ಫೂರ್ತಿಯ ಚಿಲುಮೆಯಾಗಿದ್ದರು.

ಕಳೆದ 57 ವರ್ಷಗಳಲ್ಲಿ ಯಾವುದೇ ವಿವಾದಗಳಿಲ್ಲದೇ, ಸದ್ದಿಲ್ಲದೇ ಬದುಕು ಸವೆಸಿದ ಲೋಕೇಶ್‌ ಗೈರುಹಾಜರಿ ಕನ್ನಡ ಚಿತ್ರರಂಗಕ್ಕೆ ಒಂದು ಹೊಡೆತವೇ ಸರಿ. ಅವರು ಜನನಾಯಕರಾಗಿರಲಿಲ್ಲ ; ಪ್ರತಿಭಾವಂತರಾಗಿದ್ದರು. ಕನಸುಗಾರರಾಗಿದ್ದರು. ಅಂತಹ ದಶಾವತಾರಿಗಳು ಯಾವುದೇ ಕ್ಷೇತ್ರಕ್ಕೆ ಆಸ್ತಿ ಎನ್ನುವುದರಲ್ಲಿ ಅನುಮಾನವಿಲ್ಲ . ಅಂಥದೊಂದು ಆಸ್ತಿಯನ್ನು ನಾವು ಕಳಕೊಂಡಿದ್ದೇವೆ. ಕಳೆದುಕೊಂಡ ಅರಿವು ಯಾರಿಗಿದೆ ಎನ್ನುವ ಪ್ರಶ್ನೆ ಇಲ್ಲಿ ಪ್ರಸ್ತುತವಲ್ಲ .


ವಾರ್ತಾ ಸಂಚಯ
ಗೆಂಡೆತಿಮ್ಮ ‘ಪರ’ಸಂಗ: ಲೋಕೇಶ್‌ ನಿಧನ


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X