ರಷೀದಾ-ಚಂಪಾ: ಬೆಂಕಿಯಲ್ಲಿ ಅರಳಿದ ಹೂಗಳು

  • ರಘುನಾಥ ಚ.ಹ.
Champa devi and Rashida with prestigious Goldman Environmental awardರಷೀದಾ ಬೀ. ವಯಸ್ಸು 48.

ಚಂಪಾದೇವಿ ಶುಕ್ಲಾ . 52 ವರ್ಷ.

ಮೇಲಿನ ಹೆಸರುಗಳೇ ಇಬ್ಬರ ನಡುವಣ ವ್ಯತ್ಯಾಸವನ್ನು ಹೇಳಿಬಿಟ್ಟರೂ, ಒಬ್ಬರ ಹೆಸರನ್ನು ಬಿಟ್ಟು ಮತ್ತೊಬ್ಬರನ್ನು ನೆನಪಿಸಿಕೊಳ್ಳಲಾಗದಂತೆ ಈ ಹೆಣ್ಣುಮಕ್ಕಳು ತಮ್ಮನ್ನು ಗುರ್ತಿಸಿಕೊಂಡಿದ್ದಾರೆ. ಭಿನ್ನ ಕೋಮುಗಳಿಗೆ ಸೇರಿದ್ದರೂ ಇಬ್ಬರ ಗುರಿಯೂ ಒಂದೇ. ಹಾಗಾಗಿ, ವ್ಯಕ್ತಿಗಳು ಇಬ್ಬರಾದರೂ ಶಕ್ತಿಯಾಗಿ ರಷೀದಾ ಹಾಗೂ ಚಂಪಾ ಅಭಿನ್ನರು.

ಈ ಬಾರಿಯ ‘ಗೋಲ್ಡ್‌ಮನ್‌ ಪರಿಸರ ಪ್ರಶಸ್ತಿ’ ಪಟ್ಟಿ ಪ್ರಕಟವಾದಾಗ, ಆವರೆಗೂ ಎಲೆಮರೆಯ ಕಾಯಿಯಂತಿದ್ದ ರಷೀದಾ-ಚಂಪಾ ಜೋಡಿ ಒಮ್ಮೆಗೇ ಸುದ್ದಿಯಾದರು. ಅಷ್ಟೇ ವೇಗವಾಗಿ ಸುದ್ದಿಪ್ರಕಾಶದಿಂದ ಮರೆಯಾಗಿಯೂ ಹೋದರು. ‘ಗೋಲ್ಡ್‌ಮನ್‌ ಪ್ರಶಸ್ತಿ’ ಪರಿಸರ ಕ್ಷೇತ್ರದ ನೊಬೆಲ್‌ ಎಂದೇ ಹೆಸರಾದ ಪ್ರತಿಷ್ಠಿತ ಪ್ರಶಸ್ತಿ . 125,000 ಡಾಲರ್‌ಗಳ ಮೊತ್ತದ ಭಾರೀ ಪ್ರಶಸ್ತಿ . ಇಂಥದೊಂದು ಪ್ರತಿಷ್ಠಿತ ಪ್ರಶಸ್ತಿ ಅಷ್ಟೇನೂ ಕಲಿಯದ ಈ ಭಾರತೀಯ ಹೆಣ್ಣುಮಕ್ಕಳಿಗೆ ಬಂದುದಾದರೂ ಹೇಗೆ ?

ಭೋಪಾಲ್‌ ದುರಂತ ನೆನಪಿದೆ ತಾನೆ ? ಸಾರಾಸಗಟಾಗಿ ಇಪ್ಪತ್ತು ಸಾವಿರ ಮಂದಿಯನ್ನು ಆಹುತಿ ತೆಗೆದುಕೊಂಡ ವಿಷಾನಿಲದ ದುರಂತವದು. ಮರೆತಿದ್ದರೆ ನೆನಪಿಸಿಕೊಳ್ಳಲಿಕ್ಕೊಂದು ಅವಕಾಶ ದೊರೆತಿದೆ : ಭೋಪಾಲದ ಯೂನಿಯನ್‌ ಕಾರ್ಬೈಡ್‌ ಅನಿಲ ದುರಂತ ಘಟನೆಯ ಇಪ್ಪತ್ತನೇ ವಾರ್ಷಿಕ ಶ್ರಾದ್ಧದ ವರ್ಷವಿದು. ಇದು ವಿಶ್ವದ ಅತಿದೊಡ್ಡ ಕೈಗಾರಿಕಾ ದುರಂತವೂ ಹೌದು. ಸತ್ತವರ ಮಾತು ಬಿಡಿ, ಇವತ್ತು ಹುಟ್ಟುತ್ತಿರುವ ಅಮಾಯಕ ಕಂದಮ್ಮಗಳು ಕೂಡ ಈ ದುರಂತದ ವಿಷಜ್ವಾಲೆಯಿಂದ ಪಾರಾಗಲು ಸಾಧ್ಯವಾಗಿಲ್ಲ . ಇಂಥದೊಂದು ದುರಂತದ ಹಿನ್ನೆಲೆ, ಹೋರಾಟದ ಕಥೆ ರಷೀದಾ-ಚಂಪಾ ಜೋಡಿಗಿದೆ. ಈ ಹೋರಾಟವೇ ಅವರಿಗೆ ‘ಗೋಲ್ಡ್‌ಮನ್‌ ಪರಿಸರ ಪ್ರಶಸ್ತಿ’ ತಂದುಕೊಟ್ಟಿದೆ.

ಈ ಗೆಳತಿಯರದು ನೊಂದವರಿಗೆ ಸಾಂತ್ವನ ಹೇಳುವ ಕಾಯಕ, ನತದೃಷ್ಟರಿಗೆ ನ್ಯಾಯ ದೊರಕಿಸಿಕೊಡುವ ಹೋರಾಟ. ಭೋಪಾಲ ದುರಂತದ ನತದೃಷ್ಟರಿಗೆ ಪರಿಹಾರ ಒದಗಿಸಿಕೊಡಲು ರಷೀದಾ-ಚಂಪಾ ನಡೆಸಿದ ಹೋರಾಟ, ಪಟ್ಟಪಾಡು ಒಂದೆರಡಲ್ಲ . ಹಾಗೆ ನೋಡಿದರೆ, ಇವರಿಬ್ಬರೂ ಕಲಿತ ಹೆಣ್ಣುಮಕ್ಕಳಲ್ಲ . ಹೋರಾಟದ ಕಂಕಣ ತೊಟ್ಟಾಗಿದ್ದ ಲೋಕಜ್ಞಾನವೂ ಅಷ್ಟಕ್ಕಷ್ಟೆ . ಆದರೆ, ಭೋಪಾಲದ ಕೇರಿಕೇರಿಗಳಲ್ಲಿ ಅಲೆಯಾದ ಆಕ್ರಂದನ ಇಬ್ಬರ ಬದುಕಿನ ದಿಕ್ಕುಗಳನ್ನು ಬದಲಿಸಿತು. ನೋವು ಅವರಿಗೆ ನೋಡಿಕೇಳಿದ ಕಥೆಯಲ್ಲ ; ಇಬ್ಬರೂ ಸ್ವತಃ ನಷ್ಟ ಅನುಭವಿಸಿದ ನತದೃಷ್ಟರು. ರಷೀದಾ ಒಳ್ಳೆಯ ಮಾತುಗಾರಳು. ಚಂಪಾದೇವಿ ಅದ್ಭುತ ಸಂಘಟನಾಶಕ್ತಿಯ ಶಿಸ್ತಿನ ಸಿಪಾಯಿ. ಇಬ್ಬರೂ ಜೊತೆ ಸೇರಿದಾಗ ‘ಬೆಂಕಿ ಬಿರುಗಾಳಿ’.

ಇಷ್ಟಕ್ಕೂ ಭೋಪಾಲದಲ್ಲಿ ಆದದ್ದೇನು ಗೊತ್ತಾ ? ಅದು 1984ನೇ ಇಸವಿ. ಡಿಸೆಂಬರ್‌ 3, ಭೋಪಾಲದಲ್ಲಿನ ಯೂನಿಯನ್‌ ಕಾರ್ಬೈಡ್‌ ಪೆಸ್ಟಿಸೈಡ್‌ ಕಾರ್ಖಾನೆಯಲ್ಲಿ 27 ಟನ್‌ಗೂ ಅಧಿಕ ವಿಷಾನಿಲ ಸೋರಿಕೆಯಾಯಿತು. ತಕ್ಷಣ ಸತ್ತವರು 8000 ಮಂದಿ. ಈವರೆಗೆ ಸತ್ತವರ ಸಂಖ್ಯೆ ಕನಿಷ್ಠ 20 ಸಾವಿರ; ಸಾವಿನ ಓಟ ಮುಂದುವರಿದಿದೆ. ಹುಟ್ಟುವ ಮಕ್ಕಳು ರೋಗದ ಗೂಡೆಗಳ ಹೊತ್ತುಕೊಂಡೇ ಕಣ್ಣುಬಿಡುತ್ತಿದ್ದಾರೆ. ದೀರ್ಘಕಾಲದ ರೋಗಗಳು, ಕ್ಯಾನ್ಸರ್‌, ಕ್ಷಯ ಇಲ್ಲಿ ಮಾಮೂಲು. ಅಂತರ್ಜಲದಲ್ಲಿ ಪಾದರಸ, ನಿಕ್ಕಲ್‌ ಹಾಗೂ ವಿಷಪೂರಿತ ಟಾಕ್ಸಿನ್‌ಗಳು ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಅನೇಕ ಅಧ್ಯಯನಗಳು ಸ್ಪಷ್ಟಪಡಿಸಿವೆ. ದುರಂತ ಸಂಭವಿಸಿದ ಸ್ಥಳದ ಸಮೀಪದ ತಾಯಂದಿರ ಮೊಲೆಹಾಲಲ್ಲೂ ನಂಜಿನ ಅಂಶವಿದೆ ಎಂದರೆ ದುರಂತದ ಪ್ರಮಾಣವನ್ನು ಕಲ್ಪಿಸಿಕೊಳ್ಳಿ. ದುರಂತದ ತೀವ್ರತೆಯ ಕುರಿತು ರಷೀದಾ ಹೇಳುವುದು ಹೀಗೆ : ಮೂಗು, ತುಟಿ, ಕಿವಿ ಇಲ್ಲದೆ ಹುಟ್ಟುವ ಮಕ್ಕಳಿಲ್ಲಿ ವಿಶೇಷವೇ ಅಲ್ಲ . ಕೆಲವೊಮ್ಮೆ ಹುಟ್ಟುವ ಕೂಸಿನ ಸಂಪೂರ್ಣ ಕೈ ಮಾಯವಾಗಿರುತ್ತದೆ. ಇನ್ನು ಅಮ್ಮಂದಿರ ಪಾಡಂತೂ ದೇವರಿಗೇ ಪ್ರೀತಿ. ಕೆಟ್ಟುಕೂರುವ ಋತುಚಕ್ರ, ಉಸಿರಾಟದ ತೊಂದರೆಗಳು.... ಮಗುವಿಗೆ ಹಾಲುಣಿಸೋಣವೆಂದರೆ, ಮೊಲೆಹಾಲೂ ನಂಜಾಗಿರುವ ಭಯ....

ಗೆಳೆತನ ಕುದುರಿದ್ದು ಹೀಗೆ....

1986ನೇ ಇಸವಿ. ಲೇಖನ ಸಾಮಗ್ರಿಗಳ ಕಾರ್ಖಾನೆಯಾಂದರಲ್ಲಿ ರಷೀದಾ ಹಾಗೂ ಚಂಪಾ ದುಡಿಯುತ್ತಿದ್ದ ದಿನಗಳವು. ದುಡಿಮೆಗೆ ತಕ್ಕ ಸಂಬಳ ಹಾಗೂ ಇತರ ಸೌಲಭ್ಯಗಳಿಗಾಗಿ ತಮ್ಮದೇ ಆದ ಸಂಘಟನೆ ಬೇಕನ್ನಿಸಿತು. ಪುರುಷ ಸಂಘಟನೆಗಳು ಪ್ರಬಲವಾಗಿದ್ದ ಆ ದಿನಗಳಲ್ಲಿ ಮಹಿಳೆಯರ ಸಂಘಟನೆ ಕಣ್ಣು ಬಿಡುವುದು ಸುಲಭದ ಮಾತಾಗಿರಲಿಲ್ಲ . ಇಂಥದೊಂದು ಸಂದರ್ಭದಲ್ಲಿ ಮಹಿಳೆಯರ ಸಂಘಟನೆ ಬೀದಿಗಿಳಿದೇ ಬಿಟ್ಟಿತು. 1989ರಲ್ಲಿ 469 ಮೈಲುಗಳ ಪಾದಯಾತ್ರೆಯನ್ನು ಭೋಪಾಲದಿಂದ ದೆಹಲಿಗೆ ಹಮ್ಮಿಕೊಂಡಿತು. ನೂರಕ್ಕೂ ಹೆಚ್ಚು ಹೆಣ್ಣುಮಕ್ಕಳು ಈ ಹೋರಾಟದ ಹಾದಿಯಲ್ಲಿ ನಡೆದಿದ್ದರು. ಅನೇಕರು ಒಡವೆ ಮಾರಿದರು. ಕೊನೆಗೂ ಮಹಿಳೆಯರು ದೆಹಲಿ ಮುಟ್ಟಿದರು. ಪ್ರಧಾನಿಗೆ ಮನವಿಪತ್ರವನ್ನೂ ಅರ್ಪಿಸಲಾಯಿತು. ಪರಿಣಾಮವಾಗಿ ವೇತನದ ಹೆಚ್ಚಳ, ಕೆಲಸದ ಚೌಕಟ್ಟಿನಲ್ಲಿ ಒಂದಿಷ್ಟು ಸಡಿಲಿಕೆ. ರಷೀದಾ-ಚಂಪಾಗೆ ಹೋರಾಟದ ಕಾವು ಹತ್ತಿಸಿದ್ದೇ ಈ ಪಾದಯಾತ್ರೆ.

ಲೇಖನ ಸಾಮಗ್ರಿಗಳ ಕಾರ್ಖಾನೆಯಲ್ಲಿನ ಹೋರಾಟದ ಗೆಲುವಿನಿಂದ ಉತ್ತೇಜಿತರಾದ ರಷೀದಾ-ಚಂಪಾ ಕಣ್ಣು ಹೊರಳಿದ್ದು ವಿಷಾನಿಲ ದುರಂತದ ಸಂತ್ರಸ್ತರತ್ತ . ದುರಂತಕ್ಕೆ ಕಾರಣವಾದವರಿಂದ ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಡುವ ಹೋರಾಟಕ್ಕೆ ಈ ಗೆಳತಿಯರು ದನಿಯಾದರು. ರಷೀದಾ ಕುಟುಂಬದ ಸ್ಥಿತಿಯೂ ನೆಟ್ಟಗಿರಲಿಲ್ಲ . 1984ರಿಂದೀಚೆಗೆ ಆಕೆಯ ಕುಟುಂಬದ 6 ಮಂದಿಯನ್ನು ಕ್ಯಾನ್ಸರ್‌ ಬಲಿತೆಗೆದುಕೊಂಡಿತ್ತು . ಚಂಪಾದೇವಿಯ ಮನೆಯಲ್ಲೂ ನಗುವಿರಲಿಲ್ಲ . ಆಕೆಯ ಮೊಮ್ಮಗು ಹುಟ್ಟಿನಿಂದಲೇ ವಿರೂಪಕ್ಕೆ ತುತ್ತಾಗಿತ್ತು . ಸಾಲದೆನ್ನುವಂತೆ ಗಂಡನನ್ನು , ಆರೋಗ್ಯವನ್ನು ಚಂಪಾ ಕಳಕೊಂಡಿದ್ದಳು. ಆಕೆಯಲ್ಲಿ ಉಳಿದಿದ್ದುದೊಂದೇ- ಹೋರಾಟದ ಛಲ.

ಹತ್ತು ವರ್ಷಗಳ ಹೋರಾಟದ ನಂತರ ಸಂತ್ರಸ್ತರಿಗೆ ಒಂದಷ್ಟು ಪರಿಹಾರ ದೊರೆಯುವ ಆಶ್ವಾಸನೆ ದೊರೆಯಿತು. 500 ಡಾಲರ್‌ಗಳಿಗಿಂತಲೂ ಕಡಿಮೆ ಮೊತ್ತದ ಪರಿಹಾರ. ಒಟ್ಟು 470 ಮಿಲಿಯನ್‌ ಡಾಲರ್‌ಗಳನ್ನು ಯೂನಿಯನ್‌ ಕಾರ್ಬೈಡ್‌ ಪರಿಹಾರವಾಗಿ ನೀಡಲು ಮುಂದಾಯಿತು. ಆದರೆ, ಅಧಿಕಾರಷಾಹಿಯ ಯಡವಟ್ಟು ನಡವಳಿಕೆಯಿಂದ ಪರಿಹಾರ ಕಾರ್ಯ ವಿಳಂಬಗೊಂಡಿತು. ಈ ನಡುವೆ 2001ರಲ್ಲಿ ಯೂನಿಯನ್‌ ಕಾರ್ಬೈಡ್‌ನ್ನು ತನ್ನ ಅಧೀನಕ್ಕೆ ತೆಗೆದುಕೊಂಡ ಡೌ ಕೆಮಿಕಲ್ಸ್‌ (Dow Chemical), ಕೈಗಾರಿಕಾ ದುರಂತದ ಹೊಣೆಯಿಂದ ನುಣುಚಿಕೊಂಡಿತು.

ಹೋರಾಟ ಮತ್ತೆ ಚುರುಕಾಯಿತು. 2002ರಲ್ಲಿ ರಷೀದಾ-ಚಂಪಾ ದೆಹಲಿಯಲ್ಲಿ 19 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಕೈಗೊಂಡರು. ಅವರ ಬೇಡಿಕೆಗಳು ಇಂತಿದ್ದವು :

  • ಯೂನಿಯನ್‌ ಕಾರ್ಬೈಡ್‌ ಕಾರ್ಪೊರೇಷನ್‌ನ ಅಧಿಕಾರಿಗಳು ಹಾಗೂ ಮಾಜಿ ಅಧ್ಯಕ್ಷ ಹಾಗೂ ಸಿಇಒ ವಾರೆನ್‌ ಆ್ಯಂಡರ್ಸನ್‌ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು. ವಿಚಾರಣೆ ಭೋಪಾಲ್‌ನಲ್ಲಿಯೇ ನಡೆಯಬೇಕು.
  • ಸಂತ್ರಸ್ತರು ಹಾಗೂ ಅವರ ಮಕ್ಕಳಿಗೆ ದೀರ್ಘಕಾಲೀನ ಚಿಕಿತ್ಸೆಯ ಸೌಲಭ್ಯಗಳನ್ನು ಕಲ್ಪಿಸಬೇಕು.
  • ದುರಂತ ಸಂಭವಿಸಿದ ಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಶುದ್ಧೀಕರಣಗೊಳಿಸಬೇಕು.
  • ದುರಂತದಲ್ಲಿ ವಿಧವೆಯಾದವರು ಹಾಗೂ ಕಾಯಿಲೆಬಿದ್ದು ದುಡಿಯಲಾಗದವರಿಗೆ ಆರ್ಥಿಕ ಹಾಗೂ ಸಾಮಾಜಿಕ ಬೆಂಬಲ ಕಲ್ಪಿಸಬೇಕು.
ದೆಹಲಿಯಲ್ಲಿ ರಷೀದಾ ಹಾಗೂ ಚಂಪಾ ಉಪವಾಸ ಕೂತಿರುವ ಸಮಯದಲ್ಲಿಯೇ ಇತ್ತ ಭೋಪಾಲದಲ್ಲೂ ಪ್ರತಿಭಟನೆಗಳು ಜೋರಾಗಿದ್ದವು. ಯೂನಿಯನ್‌ ಕಾರ್ಬೈಡ್‌ ಕಾರ್ಖಾನೆಯ ಮುಂಭಾಗದಲ್ಲಿ ವಿಶ್ವದ 10 ರಾಷ್ಟ್ರಗಳ ಸುಮಾರು 1500 ಮಂದಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಹೆಚ್ಚೂಕಡಿಮೆ ತಿಂಗಳ ಕಾಲ ನಡೆದ ಈ ಉಪವಾಸ ಸತ್ಯಾಗ್ರಹ, ನೊಂದವರ ಕಣ್ಣೀರ ತೊಡೆಯಲು ರೂಪುಗೊಂಡ ಜಾಗತಿಕ ಸ್ಪಂದನವಾಗಿತ್ತು . ಇತಿಹಾಸದಲ್ಲಿ ಇಂಥ ಸ್ಪಂದನಗಳು ತೀರಾ ವಿರಳ.

ಮಹಿಳೆಯರ ಹೋರಾಟದ ಮುಂದಿನ ಹಂತ ಪೊರಕೆ ಪೂಜೆ. ‘ಡೌ’ ಅಧಿಕಾರಿಗಳಿಗೆ ಕಸಬರಿಕೆಯನ್ನು ಕಾಣಿಕೆಯನ್ನಾಗಿ ನೀಡಲಾಯಿತು. ‘ಡೌ ಅನ್ನು ಕಸಬರಿಕೆಯಿಂದ ಸದೆಬಡಿಯಿರಿ’ ಎನ್ನುವ ಘೋಷವಾಕ್ಯ ಹುಟ್ಟಿದ್ದೇ ಆಗ. 2003ರಲ್ಲಿ ಮುಂಬಯಿ ಹಾಗೂ ನೆದರ್‌ಲ್ಯಾಂಡ್‌ನಲ್ಲಿ ‘ಡೌ’ ಅಧಿಕಾರಿಗಳನ್ನು ಭೇಟಿ ಮಾಡಿದ ರಷೀದಾ-ಚಂಪಾ, ಟಾಕ್ಸಿಕ್‌ ತ್ಯಾಜ್ಯಗಳ ಸ್ಯಾಂಪಲ್‌ಗಳನ್ನು ಕೊಡುಗೆಯಾಗಿ ನೀಡಿದರು. ಇದರೊಂದಿಗೆ ‘ಡೌ’ ವಿರುದ್ಧದ ಸಮರ ಇನ್ನಷ್ಟು ಚುರುಕುಗೊಂಡಿತು. ನ್ಯೂಯಾರ್ಕ್‌ನ ವಾಲ್‌ಸ್ಟ್ರೀಟ್‌ನಲ್ಲಿ ಪ್ರತಿಭಟನಾಕಾರರು 12 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು. ನಿತ್ರಾಣರಾಗಿ ಕುಸಿದುಬಿದ್ದ ರಷೀದಾ-ಚಂಪಾರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ಮಿಚಿಗನ್‌ನಲ್ಲಿ ಜರುಗಿದ ‘ಡೌ’ನ ಷೇರುದಾರರ ಸಭೆ ಸಂದರ್ಭದಲ್ಲೂ ಪ್ರತಿಭಟನೆ ನಡೆಯಿತು. ಇಂಗ್ಲೆಂಡ್‌, ಚೀನಾ, ಕೆನಡಾ, ಥೈಲ್ಯಾಂಡ್‌, ಸ್ಪೇನ್‌ ದೇಶಗಳ ಹಲವಾರು ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗುವ ಮೂಲಕ ಹೋರಾಟದ ಕಾವು ಇನ್ನಷ್ಟು ಬಲಗೊಂಡಿತು.

‘ಡೌ’ ಜೊತೆಗಿನ ವ್ಯಾಜ್ಯವನ್ನು ಗೆಳತಿಯರು ನ್ಯಾಯಾಲಯದ ಕಟಕಟೆಗೂ ಒಯ್ದಿದ್ದಾರೆ. ದುರಂತ ಸಂಭವಿಸಿದ ಕಾರ್ಖಾನೆಯ ನಿವೇಶನವನ್ನು ಶುದ್ಧೀಕರಣಗೊಳಿಸುವಂತೆ, ಚಿಕಿತ್ಸೆಯ ಖರ್ಚುಗಳನ್ನು ತುಂಬಿಕೊಡುವಂತೆ ಯೂನಿಯನ್‌ ಕಾರ್ಬೈಡ್‌ಗೆ ಆದೇಶಿಸುವಂತೆ, ಸಂತ್ರಸ್ತರು ಹಾಗೂ ಕಾನೂನು ಸಂಘಟನೆಗಳೊಂದಿಗೆ ಸೇರಿ ರಷೀದಾ-ಚಂಪಾ ಪ್ರಕರಣ ದಾಖಲಿಸಿದ್ದರು. ವಾದ ಪ್ರತಿವಾದಗಳು ಅಮೆರಿಕದಲ್ಲೂ ಜರುಗಿವೆ. ಅಮೆರಿಕದ ನ್ಯಾಯಾಲಯವೊಂದು ಸಂತ್ರಸ್ತರ ಪರವಾಗಿ ತೀರ್ಪು ನೀಡಿದೆ. ಸಂತ್ರಸ್ತರಿಗೆ ಪರಿಹಾರ ಕಟ್ಟಿಕೊಡಬೇಕೆಂದು ಅಮೆರಿಕ ಕಾಂಗ್ರೆಸ್‌ನ ಬಹುಸಂಖ್ಯೆಯ ಸದಸ್ಯರು ‘ಡೌ’ಗ ಬಹಿರಂಗವಾಗಿ ಆಗ್ರಹಿಸಿದ್ದಾರೆ.

ಪರಿಹಾರದ ಹೊಣೆಗಾರಿಕೆ ತನಗಿಲ್ಲವೆಂದು ಪಟ್ಟುಹಿಡಿದ ‘ಡೌ’ ತನ್ನ ಹಠಮಾರಿತನಕ್ಕೆ ಭಾರೀ ಬೆಲೆ ತೆರಬೇಕಾಯಿತು. ಯೂನಿಯನ್‌ ಕಾರ್ಬೈಡ್‌ ಖರೀದಿಸಿದ ಎರಡೇ ವರ್ಷದಲ್ಲಿ ‘ಡೌ’ನ ಷೇರುಮೌಲ್ಯ ಶೇ.13ರಷ್ಟು ಕುಸಿಯಿತು. ಇಷ್ಟಾದರೂ ‘ಡೌ’ ಸೋಲು ಒಪ್ಪಿಕೊಂಡಿಲ್ಲ . ರಷೀದಾ-ಚಂಪಾ ಹೋರಾಟ ಬಿಟ್ಟುಕೊಟ್ಟಿಲ್ಲ , ಆಶಾಭಾವನೆ ಕಳಕೊಂಡಿಲ್ಲ . ಚಂಪಾ ಹೇಳುತ್ತಾರೆ : ‘ವರ್ಷಗಳ ಕಾಲದ ನಮ್ಮ ಹೋರಾಟ ಈಗಲೂ ಮುಂದುವರೆದಿದೆ. ಪ್ರತಿದಿನವೂ ಜನರ ಬೆಂಬಲ ನಮ್ಮ ಹೋರಾಟಕ್ಕೆ ಹೆಚ್ಚುತ್ತಿದೆ. ಒಂದಂತೂ ಖಚಿತ- ಇಂದಲ್ಲಾ ನಾಳೆ ‘ಡೌ’ ತನ್ನ ಪಟ್ಟು ಸಡಿಲಿಸಲೇಬೇಕು’.

‘ಗೋಲ್ಡ್‌ಮನ್‌ ಪರಿಸರ ಪ್ರಶಸ್ತಿ’ ರಷೀದಾ-ಚಂಪಾರ ಹೋರಾಟಕ್ಕೆ ಸಂದ ಜಾಗತಿಕ ಮಾನ್ಯತೆಯಾಗಿದೆ. ಈ ಮಾನ್ಯತೆ ಅವರ ಹೋರಾಟದ ಹುಮ್ಮಸ್ಸಿಗೆ ನೀರೆರೆದಿದೆ. ‘ಭೋಪಾಲ್‌ ದುರಂತದ ಬಗೆಗೆ ಜಾಗತಿಕ ಗಮನ ಸೆಳೆಯಲು ಈ ಪ್ರಶಸ್ತಿ ನೆರವಾಗಿದೆ. ಮುಂದಿನ ಹೋರಾಟದಲ್ಲಿ ಸಂತ್ರಸ್ತರ ನೆರವಿಗೆ ವಿದ್ಯಾರ್ಥಿಗಳು, ಕಾರ್ಮಿಕ ಸಂಘಟನೆಗಳು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಾರೆಂದು ನಂಬಿದ್ದೇವೆ’ ಎಂದು ಗೋಲ್ಡ್‌ಮನ್‌ ಕಚೇರಿಯಲ್ಲಿ ನೀಡಿದ ಸಂದರ್ಶನದಲ್ಲಿ ರಷೀದಾ ಅಭಿಪ್ರಾಯಪಟ್ಟಿದ್ದಾರೆ. ‘ಭಾರತದ ಇತರ ಹೆಣ್ಣುಮಕ್ಕಳೂ ನಮ್ಮ ಹೋರಾಟದಲ್ಲಿ ಕೈಜೋಡಿಸಬೇಕು’ ಎಂದು ಚಂಪಾದೇವಿ ಆಗ್ರಹಿಸುತ್ತಾರೆ. 125,000 ಡಾಲರ್‌ಗಳ ಬಹುಮಾನವನ್ನು ಕೂಡ ಸಂತ್ರಸ್ತರಿಗಾಗಿ ಖರ್ಚು ಮಾಡಲು ಗೆಳತಿಯರು ನಿಶ್ಚಯಿಸಿದ್ದಾರೆ. ವಿಷಾನಿಲ ದುರಂತಕ್ಕೆ ತುತ್ತಾದ ನತದೃಷ್ಟ ಮಕ್ಕಳ ಆರೋಗ್ಯ, ಸಂತ್ರಸ್ತರಿಗೆ ಉದ್ಯೋಗಾವಕಾಶಗಳ ಅಭಿವೃದ್ಧಿ ಮುಂತಾದ ಕಾರ್ಯಗಳಿಗಾಗಿ ಈ ನಿಧಿ ಬಳಸಿ ದತ್ತಿಯಾಂದನ್ನು ಸ್ಥಾಪಿಸಲು ಚಂಪಾ-ರಷೀದಾ ಮುಂದಾಗಿದ್ದಾರೆ. ಕಾರ್ಪೊರೇಟ್‌ ಅಪರಾಧಗಳ ವಿರುದ್ಧ ಅಸಾಧಾರಣ ಹೋರಾಟ ನಡೆಸುವ ಸಾಮಾನ್ಯರಿಗಾಗಿ ಪ್ರಶಸ್ತಿಯಾಂದನ್ನು ನೀಡಲು ಬಹುಮಾನದ ಒಂದು ಭಾಗವನ್ನು ಮೀಸಲಿಡುವ ಉದ್ದೇಶವೂ ಅವರಿಗಿದೆ.

ಭೋಪಾಲದ ಹೆಣ್ಣುಮಕ್ಕಳಿಬ್ಬರ ನೇತೃತ್ವದ ಈ ಹೋರಾಟಕ್ಕೆ ದೊರೆತಿರುವ ಜಾಗತಿಕ ಬೆಂಬಲಕ್ಕೆ ಹೋಲಿಸಿದರೆ ದೇಶದೊಳಗೆ ಸಿಕ್ಕಿರುವ ಬೆಂಬಲ-ಪ್ರಚಾರ ತೀರಾ ಕಡಿಮೆ. ಭೋಪಾಲದಿಂದ ಹೊರಗೆ ರಷೀದಾ-ಚಂಪಾ ನಡೆಸುತ್ತಿರುವ ಹೋರಾಟದ ಬಗೆಗೆ ಅರಿವೇ ಇಲ್ಲ . ವಿದ್ಯಾರ್ಥಿಗಳ ಪಾಲಿಗಂತೂ ಭೋಪಾಲ ದುರಂತ ಒಂದಾನೊಂದು ಕಾಲದ ದುರಂತ. ಆದರೆ ಭೋಪಾಲ ದುರಂತ ಮುಗಿದುಹೋದ ಅಧ್ಯಾಯವಾಗಿರದೆ, ಇಂದಿಗೂ ಜ್ವಲಂತವಾಗಿರುವ- ಹಾನಿ ಉಂಟು ಮಾಡುತ್ತಿರುವ ದುರಂತ. ಸೋನಿಯಾ ಪ್ರಧಾನಿ ಪದ ನಿರಾಕರಿಸಿದ್ದು ಐತಿಹಾಸಿಕ ತ್ಯಾಗವಾಗಿ ಬಿಂಬಿತವಾಗುತ್ತದೆ; ಐಶ್ವರ್ಯಾ ರೈ ಚುಂಬನಕ್ಕೆ ಒಪ್ಪಿಕೊಂಡ ವಿಷಯ ಮುಖಪುಟ ಸುದ್ದಿಯಾಗುತ್ತದೆ ; ರೇಣುಕಾ ಚೌಧರಿಯ ಹೊಸ ಮುಖವಾಡದ ಬಗೆಗೂ ಮಾಧ್ಯಮಗಳು ಚರ್ಚಿಸುತ್ತವೆ ; ಆದರೆ ಬೆಂಕಿಯ ಹಾದಿಯಲ್ಲಿ ಸಾಗುತ್ತಿರುವ ರಷೀದಾ-ಚಂಪಾ ಗೆಳತಿಯರ ಬಗ್ಗೆ ಯಾರೂ ಚಕಾರವೆತ್ತುವುದಿಲ್ಲ . ‘ಗೋಲ್ಡ್‌ಮನ್‌ ಪರಿಸರ ಪ್ರಶಸ್ತಿ’ ಪ್ರಭೆಯಲ್ಲಾದರೂ ನಾವು ರಷೀದಾ-ಚಂಪಾರನ್ನು ಗುರ್ತಿಸಬೇಕಾಗಿದೆ. ಏಕೆಂದರೆ ರಷೀದಾ ಹಾಗೂ ಚಂಪಾ ಅನಕ್ಷರಸ್ಥ ಹಾಗೂ ಅತ್ಯಂತ ಕಡಿಮೆ ಆದಾಯದ ಅಸಂಖ್ಯ ಭಾರತೀಯ ಹೆಣ್ಣುಮಕ್ಕಳ ಪ್ರತಿನಿಧಿಯಾಗಿದ್ದಾರೆ. ಸಾಮಾನ್ಯವರ್ಗ-ಕುಟುಂಬಗಳಿಂದ ಮೂಡಿಬಂದ ಇಂಥ ಅಸಾಧಾರಣರ ಚರಿತ್ರೆಯೇ ಭಾರತದ ಅಂತಃಸತ್ವವಾಗಿದೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+