ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರಾ ಅಬೂಬಕರ್‌ ಸಂದರ್ಶನ

By Staff
|
Google Oneindia Kannada News

Sara Abubkar
ಸುರತ್ಕಲ್‌ ಮೂಲದ ಎಸ್‌.ಬಬಿತಾಗೆ ಬರವಣಿಗೆ ಎಂದರೆ ಇಷ್ಟ . ಬರಹಗಳ ಜೊತೆಗೇ ಇರುವ ಆಶೆಯಿಂದ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡು, ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಕಲಿಯುತ್ತಿರುವ ಎಸ್‌. ಬಬಿತಾ 'ಚಂದ್ರಗಿರಿ ತೀರ"ದ ಸಾರಾ ಅವರನ್ನು ದಟ್ಸ್‌ಕನ್ನಡಕ್ಕಾಗಿ ಮಾತನಾಡಿಸಿದ್ದಾರೆ.

ಕಾಸರಗೋಡಿನ ಸಾರಾ ಅಬೂಬಕರ್‌ ಕನ್ನಡ ಲೇಖಕಿಯರಲ್ಲಿ ಎದ್ದು ಕಾಣುವ ಹೆಸರು. ಅಕ್ಷರವೆನ್ನುವುದು ಸಾರಾ ಪಾಲಿಗೆ ಬಂಡೇಳುವ ಅಸ್ತ್ರವಲ್ಲ ; ಕಂಡದ್ದನ್ನು ಉಂಡದ್ದನ್ನು ಅದು ಇದ್ದಂತೆಯೇ ನಿರ್ಲಿಪ್ತವಾಗಿ ದಾಖಲಿಸಿದವರು ಅವರು. ಬರಹದಾಚೆಗೆ ಅತ್ಯಂತ ತಣ್ಣಗಿನ ಸರಳ ವ್ಯಕ್ತಿ ಸಾರಾ ಅಬೂಬಕರ್‌. ಮುಸ್ಲಿಂ ಸಮುದಾಯದ ಸಂವೇದನೆಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಸೇರ್ಪಡೆಗೊಳಿಸಿದವರಲ್ಲಿ ಪ್ರಮುಖರಾದ ಸಾರಾ- ತಮ್ಮನ್ನು ಗುರ್ತಿಸಿಕೊಳ್ಳುವುದು ಕನ್ನಡ ಲೇಖಕಿಯೆಂದೇ. ಈ ಪರಿಯ ಸಾರಾ ಅವರೀಗ ಗೊರೂರು ಪ್ರತಿಷ್ಠಾನದ 'ಅಂಬೇಡ್ಕರ್‌ ಪ್ರಶಸ್ತಿ"ಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಲೇಖಕಿಯ ಜೊತೆಗೊಂದು ಪುಟ್ಟ ಸಂವಾದ :

ನಿಮ್ಮ ಸಾಹಿತ್ಯ ಕ್ಷೇತ್ರದ ಆಸಕ್ತಿಯ ಹಿನ್ನೆಲೆ ಏನು ?
ಉ : ಸಾಹಿತ್ಯ ಸಂವೇದನೆ ಎಂಬುದು ಪ್ರತಿಯಾಬ್ಬರಲ್ಲೂ ಸುಪ್ತವಾಗಿರುತ್ತದೆ. ಅದೊಂದು ಹುಟ್ಟುಗುಣ. ಅದಕ್ಕೆ ಯಾವುದೇ ಹಿನ್ನೆಲೆ ಬೇಡ. ನನಗೆ ಈ ಕ್ಷೇತ್ರದಲ್ಲಿ ವಿಶೇಷ ಪ್ರೋತ್ಸಾಹ ದೊರೆಯಲಿಲ್ಲ . ಆದರೆ ನನ್ನ ತಂದೆ ಏನಾದರೂ ಓದುವಂತೆ ಹಾಗೂ ಏನನ್ನು ಹೇಳಬೇಕು ಎಂದು ಅನಿಸುತ್ತದೋ ಅದನ್ನು ಬರೆಯುವಂತೆ ಪ್ರೇರೇಪಿಸುತ್ತಿದ್ದರು. ಆದರೂ ಸಾಹಿತ್ಯ ಕ್ಷೇತ್ರದಲ್ಲಿ ನಾನು ತೊಡಗಿಕೊಂಡದ್ದು ತೀರಾ ತಡವಾಗಿ" .

ನಿಮ್ಮ ಕೃತಿಗಳು ಹೆಚ್ಚಾಗಿ ಮುಸ್ಲಿಂ ಜನಾಂಗದ ಸಂವೇದನೆಯನ್ನು ಹೊಂದಿರುತ್ತದೆ, ಇದಕ್ಕೆ ಕಾರಣವೇನು ?
ಉ : ಯಾವುದೇ ಒಂದು ಸಮುದಾಯದ ಬಗ್ಗೆ ಬರೆಯಬೇಕಾದರೂ ಆ ಸಮಾಜದ ಬಗ್ಗೆ ಆಳವಾಗಿ ತಿಳಿದಿರಬೇಕು. ಶಿವರಾಮ ಕಾರಂತರು ಬ್ರಾಹ್ಮಣ ಸಮಾಜದಲ್ಲಿ ಅನುಭವಿಸಿದ್ದನ್ನು ನೋಡಿದ್ದನ್ನು ಬರೆದರು. ಹೀಗೆ ಅನುಭವದಿಂದ ಬರೆಯಬೇಕು. ಆಗ ಮಾತ್ರ ಅದು ಸಹಜವಾಗಿರುತ್ತದೆ. ನಾನು ಮುಸ್ಲಿಂ ಜನಾಂಗದವಳಾಗಿದ್ದ ನನ್ನ ಕೃತಿಗಳಲ್ಲಿ ಮುಸ್ಲಿಂ ಬದುಕಿನ ನೋವು ನಲಿವುಗಳಿರುವುದು ಸ್ವಾಭಾವಿಕ.

ಮುಸ್ಲಿಂ ಮಹಿಳಾ ಸಾಹಿತಿ ಎಂದು ನಿಮ್ಮನ್ನು ಗುರುತಿಸುವ ಕುರಿತು ಏನಂತೀರಿ ?
ಉ : ನನ್ನನ್ನು ಕನ್ನಡ ಲೇಖಕಿ ಎಂದು ಗುರುತಿಸಿ. ಮನುಷ್ಯರಾದ ಮೇಲೆ ಮಾನವರಾಗಿ ಬದುಕಬೇಕು. ಈ ಜಾತಿ- ಧರ್ಮ ಎಲ್ಲಾ ಯಾಕೆ ? ಸಾಹಿತ್ಯದಲ್ಲಿ ಜಾತಿ ಧರ್ಮ ಬರಬಾರದು. ನಾನು ಬರೆದ ಕೃತಿಗಳೆಲ್ಲ ಕಾಲ್ಪನಿಕ ಅಲ್ಲ . ನಮ್ಮ ಸಮಾಜದ ವಾಸ್ತವಿಕತೆಯನ್ನೇ ಬರೆದಿದ್ದೇನೆ.

ಮಹಿಳಾ ಸಾಹಿತ್ಯ ಎಂದು ಪ್ರತ್ಯೇಕ ವರ್ಗೀಕರಣ ಮಾಡುವುದು ಸೂಕ್ತವೇ ?
ಉ : ಪ್ರತ್ಯೇಕ ವರ್ಗೀಕರಣ ಸರಿಯಲ್ಲ ಎಂದು ಅನಿಸಿದರೂ ಇಂದು ವರ್ಗೀಕರಣ ಮಾಡಬೇಕಾದ ಪರಿಸ್ಥಿತಿ ಇದೆ. ಮಹಿಳೆಯರು ಸಾಹಿತ್ಯದಲ್ಲಿ ಧೈರ್ಯವಾಗಿ ತೊಡಗಿಸಿಕೊಂಡದ್ದೇ ಇತ್ತೀಚೆಗೆ. ಇವರಿಗೆ ತಮ್ಮ ಕೌಟುಂಬಿಕ ವ್ಯವಸ್ಥೆಯಿಂದ ಹೊರಬಂದು ಪ್ರಪಂಚ ಕಾಣಲು ಬಹಳ ಸಮಯ ಹಿಡಿಯಿತು. ಇಂದು ಸಮಾಜದಲ್ಲಿ ಸಮಾನತೆ ಇದೆ ಎಂದು ಹೇಳಿದರೂ ಮಹಿಳೆಯರ ಶೋಷಣೆ ನಡೆಯುತ್ತಲೇ ಇದೆ. ಆದ್ದರಿಂದ ಸಮಾಜದ ಮುಖ್ಯವಾಹಿನಿಂಯಲ್ಲಿ ಮಹಿಳೆ ತನ್ನನ್ನು ತಾನು ಗುರುತಿಸಿಕೊಳ್ಳಬೇಕಾದರೆ ವರ್ಗೀಕರಣ ಅವಶ್ಯವೆನಿಸುತ್ತದೆ.

ಮುಸ್ಲಿಂ ಬದುಕನ್ನು ಒಳಗೊಂಡ ಸಾಹಿತ್ಯ ಮುಸ್ಲಿಂ ಜನಾಂಗದಲ್ಲಿ ಏನಾದರೂ ಬದಲಾವಣೆಯನ್ನು ತಂದಿದೆಯೇ ?
ಉ : ಕೇವಲ ಸಾಹಿತ್ಯದಿಂದಲೇ ಒಂದು ಜನಾಂಗದಲ್ಲಿ ಆಳವಾಗಿ ಬೇರೂರಿರುವ ಸಂಪ್ರದಾಯವನ್ನು ಬದಲಾಯಿಸಲು ಸಾಧ್ಯವಿಲ್ಲ . ಅಭಿರುಚಿ ಇದ್ದವರು ಓದುತ್ತಾರೆ. ಮುಸ್ಲಿಂ ಬದುಕನ್ನು ಒಳಗೊಂಡ ಸಾಹಿತ್ಯ ಮುಸ್ಲಿಂ ಸಮಾಜದಲ್ಲಿ ಹೆಚ್ಚಲ್ಲದಿದ್ದರೂ ಸ್ವಲ್ಪ ಪ್ರಮಾಣದ ಬದಲಾವಣೆ ತಂದಿದೆ. ಆದರೆ ಕೆಲವರು ಬರಹದ ಮೂಲಕ ಕೋಮುವಾದ ಹರಡಲು ಪ್ರಯತ್ನಿಸುತ್ತಿದ್ದಾರೆ. ನಾವು ಅಪಘಾನಿಸ್ತಾನದ ತಾಲಿಬಾನ್‌ಗಳ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮಲ್ಲಿಯೂ ತಾಲಿಬಾನರು ಇದ್ದು ಸಮಾಜದ ಸಾಮರಸ್ಯ ಕೆಡಿಸುತ್ತಿದ್ದಾರೆ.

ಸುಮಾರು 60-70ರ ದಶಕದಲ್ಲಿ ಇದ್ದ ಕ್ರಿಯಾಶೀಲತೆ ಈಗ ಸಾಹಿತ್ಯದಲ್ಲಿ ಇಲ್ಲ ಎನ್ನುವ ಭಾವವಿದೆ. ನಿಮ್ಮ ಅಭಿಪ್ರಾಯ ?
ಉ: ಹೌದು, ಸುಮಾರು 50ರಿಂದ 70ರ ದಶಕದವರೆಗೂ ಉತ್ತಮ ಕೃತಿಗಳು ಪ್ರಕಟವಾಗಿ ಜನರಲ್ಲಿ ಓದುವ ಉತ್ಸಾಹವಿತ್ತು. ಆದರೆ ಈ ಪುಸ್ತಕ ಓದುವವರ, ಅದರಲ್ಲೂ ಕೊಂಡು ಓದುವವರ ಸಂಖ್ಯೆ ಕಡಿಮೆಯಾಗಿದೆ. ಅದೇ ಕೇರಳದಲ್ಲಿ ಮಲೆಯಾಳಂ ಭಾಷೆಯ ಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಅಲ್ಲಿ ಜನರು ಓದುವುದನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ವಿಮರ್ಶಾ ಪುಸ್ತಕಗಳ ಪುನರ್‌ ಮುದ್ರಣವಾಗುತ್ತದೆ. ಇಲ್ಲಿ ಮಾತ್ರ ತದ್ವಿರುದ್ಧ. ಇಂಗ್ಲಿಷ್‌ ಮಾಧ್ಯಮದ ವಿದ್ಯಾಭ್ಯಾಸದಿಂದ ಕನ್ನಡ ಓದುಗರ ಅಭಿರುಚಿ ಕಡಿಮೆಯಾಗಿದೆ ಎನ್ನಬಹುದು.

ಸಮಾಜದಲ್ಲಿ ಆಗುತ್ತಿರುವ ಸಾಮಾಜಿಕ, ಆರ್ಥಿಕ ಬದಲಾವಣೆ ಪ್ರಸ್ತುತ ಸಾಹಿತ್ಯದಲ್ಲಿ ಪ್ರತಿಬಿಂಬಿತವಾಗಿದೆಯೇ ?
ಉ : ಇತ್ತೀಚಿನ ದಶಕಗಳಲ್ಲಿ ನಮ್ಮ ಸಮಾಜದಲ್ಲಿ ಆಗುತ್ತಿರುವ ಸಾಮಾಜಿಕ, ಆರ್ಥಿಕ ಬದಲಾವಣೆ ಸಾಹಿತ್ಯದಲ್ಲೂ ಕಂಡು ಬರುತ್ತಿದೆ. ಬದಲಾವಣೆಯನ್ನು ಸಾಹಿತ್ಯ ಪರಿಚಯಿಸುತ್ತಿದೆ. ಈಗಿನ ಕೆಲವು ಸಾಹಿತಿಗಳು ಮುಖ್ಯವಾಗಿ ಮಹಿಳಾ ಸಾಹಿತಿಗಳು ಬದಲಾವಣೆಗೆ ಪ್ರಯತ್ನಿಸುತ್ತಿದ್ದಾರೆ. ನೇಮಿಚಂದ್ರ, ವೀಣಾ ಶಾಂತೇಶ್ವರ ಮೊದಲಾದವರು ಸ್ತ್ರೀ ಸಮಸ್ಯೆಯ ಬಗ್ಗೆ ಧೈರ್ಯವಾಗಿ ಬರೆಯುತ್ತಿದ್ದಾರೆ. 50ರ ದಶಕದಲ್ಲಿ ತ್ರಿವೇಣಿ, ಎಂ. ಕೆ. ಇಂದಿರಾ ಅವರು ವಿಧವಾ ವಿವಾಹಗಳಂತಹ ವಿಷಯಗಳ ಬಗ್ಗೆ ಬರೆದಿದ್ದರೂ ಬೋಲ್ಡ್‌ನೆಸ್‌ ಇರಲಿಲ್ಲ . ಈಗ ಆತ್ಮವಿಶ್ವಾಸದಿಂದ ಮಹಿಳೆಯರು ಬರೆಯುತ್ತಿದ್ದಾರೆ.

ನಿಮ್ಮ ಮುಂದಿನ ಕಾರ್ಯಯೋಜನೆಗಳಾವುವು ?
ಉ : ನಾನು ಬರೆಯಲು 1980ರಲ್ಲಿ ಪ್ರಾರಂಭಿಸಿದೆ. ಮಹಿಳಾ ಶೋಷಣೆಯ ಮೇಲೆ ಬೆಳಕು ಚೆಲ್ಲಬೇಕು. ಸಮಾಜದಲ್ಲಿ ಈ ರೀತಿ ನಡೆಯುತ್ತಿದೆ ಎಂಬುದರ ಅರಿವು ಮೂಡಿಸುವುದೇ ನನ್ನ ಉದ್ದೇಶವಾಗಿತ್ತು . ಪ್ರಶಸ್ತಿಗಾಗಿ ನಾನೆಂದೂ ಬರೆಯಲಿಲ್ಲ . ಇನ್ನು ಮುಂದೆಯೂ ಶೋಷಿತ ವರ್ಗದವರ ನೋವು ನಲಿವುಗಳನ್ನೇ ವಸ್ತುವನ್ನಾಗಿಸಿ ಕೃತಿ ರಚಿಸುತ್ತೇನೆ. ಇಂತಹ ವಸ್ತುವನ್ನು ಆಧರಿಸಿ ಕಾದಂಬರಿ ಬರೆಯುವ ಯೋಜನೆ ಹಾಕಿಕೊಂಡಿದ್ದೇನೆ.

ಸಾಹಿತ್ಯಿಕ ಮೌಲ್ಯ ಹೆಚ್ಚಿಸುವಲ್ಲಿ ಮತ್ತು ಜನಪ್ರಿಯಗೊಳಿಸುವಲ್ಲಿ ಸಮೂಹ ಮಾಧ್ಯಮದ ಪಾತ್ರವೇನು ?
ಉ : ಪತ್ರಿಕೋದ್ಯಮ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕ. ಸಾಹಿತಿಗಳ ಕುರಿತು ಬರೆಯುವುದು, ವಿಮರ್ಶೆ ಮಾಡುವುದು ಪತ್ರಕರ್ತನ ಜವಾಬ್ದಾರಿ. ಯಾವುದೇ ಪತ್ರಕರ್ತನಾಗಲಿ ಬರಹಗಾರನಾಗಿರುವುದು ಮುಖ್ಯ. ಸಾಹಿತ್ಯದ ಮೂಲಕ ಪತ್ರಿಕೋದ್ಯಮ ಬೆಳೆಯುತ್ತದೆ. ಸಾಹಿತಿಗಳು ಪತ್ರಕರ್ತರಾಗಲು ಸಾಧ್ಯ. ಆದರೆ ಪತ್ರಕರ್ತರು ಸಾಹಿತಿಗಳಾಗಲು ಸಾಧ್ಯವಿಲ್ಲ.

*

ಸಾರಾ ಅಬೂಬಕರ್‌ ಅವರ ಕೃತಿಗಳು :

ಕಾದಂಬರಿ - 'ಚಂದ್ರಗಿರಿಯ ತೀರದಲ್ಲಿ", 'ತಳ ಒಡೆದ ದೋಣಿಯಲಿ", 'ವಜ್ರಗಳು", 'ಕದನ ವಿರಾಮ", 'ಸುಳಿಯಲ್ಲಿ ಸಿಕ್ಕವರು", 'ಸಹನಾ".
ಪ್ರಮುಖ ಕಥಾ ಸಂಕಲನ -'ಚಪ್ಪಲಿಗಳು", 'ಅರ್ಧ ರಾತ್ರಿಯಲ್ಲಿ ಹುಟ್ಟಿದ ಕೂಸು", ' ಪಯಣ ಮತ್ತು ಇತರ ಕಥೆಗಳು"
ಅಮೆರಿಕಾ ಪ್ರವಾಸ ಕಥನ - 'ಐಶಾರಾಮದ ಆಳದಲ್ಲಿ "
ಲೇಖನ ಸಂಗ್ರಹ- 'ಲೇಖನ ಗುಚ್ಛ" .

ಪ್ರಶಸ್ತಿ : ಚಂದ್ರಗಿರಿಯ ತೀರದಲ್ಲಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಹನಾ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ಸುಳಿಯಲ್ಲಿ ಸಿಕ್ಕವರು ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ ಸಾರಾ ಅವರಿಗೆ ದೊರೆತಿವೆ. ಕರ್ನಾಟಕ ಸರಕಾರದ ಪ್ರತಿಷ್ಠಿತ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯೂ ಅವರಿಗೆ ದೊರೆತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X