ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎ.ಆರ್‌.ಕೃಷ್ಣಶಾಸ್ತ್ರಿ ಯೆಂಬ ಕನ್ನಡದ ಅಶ್ವಿನಿ ದೇವತೆ

By Staff
|
Google Oneindia Kannada News

*ರಘುನಾಥ ಚ.ಹ.

A.R. Krishna Shastry‘ಮಾತೃಭಾಷೆ ಕನ್ನಡಕ್ಕೆ ಮೊದಲ ಸ್ಥಾನ. ದೇಶಭಾಷೆಗೆ ಎರಡನೆಯ ಸ್ಥಾನ. ಇಂಗ್ಲಿಷ್‌ ಮೂರನೆಯದು’ - ಕನ್ನಡದ ಅಶ್ವಿನೀ ದೇವತೆಗಳು ಎಂದು ಹೆಸರು ಪಡೆದ ಜೋಡಿಯಲ್ಲೊಬ್ಬರಾದ ಎ.ಆರ್‌.ಕೃಷ್ಣಶಾಸ್ತ್ರಿ ಅವರ ಜೀವನದ ಧ್ಯೇಯವಿದು.

ಎ.ಆರ್‌.ಕೃಷ್ಣಶಾಸ್ತ್ರಿಗಳೆಂದರೆ ಮೊದಲು ನೆನಪಿಗೆ ಬರುವುದು- ವಚನ ಭಾರತ. ಮಹಾಭಾರತದ ಕಥೆಯನ್ನು ಸರಳ, ಸಂಗ್ರಹ ಹಾಗೂ ತಿಳಿಗನ್ನಡ ಗದ್ಯದಲ್ಲಿ ಹೇಳಿದ ಮೊದಲ ಕೃತಿಯಿದು. ವಚನ ಭಾರತ ಅವರ ಮೇರುಕೃತಿಯೂ ಹೌದು. ಇಂದೇನಾದಾರೂ ಮಹಾಭಾರತದ ಕಥೆ ಕನ್ನಡದ ಜನ ಸಾಮಾನ್ಯನಿಗೂ ಪೂರ್ಣರೂಪದಲ್ಲಿ ಗೊತ್ತಿದ್ದರೆ, ಅದರ ಕೀರ್ತಿ ಕೃಷ್ಣಶಾಸ್ತ್ರಿಗಳಿಗೆ ಸಲ್ಲಬೇಕು.

ಕೃಷ್ಣಶಾಸ್ತ್ರಿ ಅವರಿಗೆ ವಚನಭಾರತ ಹೆಸರು ತಂದುಕೊಟ್ಟಿತು, ನಿಜ. ಆದರೆ ವಚನಭಾರತವಷ್ಟೇ ಅವರ ಸಾಧನೆಯಲ್ಲ . ವಚನಭಾರತ ಹೊರತುಪಡಿಸಿಯೂ ಕೃಷ್ಣಶಾಸ್ತ್ರಿ ಕನ್ನಡಿಗರ ಪಾಲಿಗೆ ಪ್ರಾತಃಸ್ಮರಣೀಯರು. ಅವರೊಬ್ಬ ಒಳ್ಳೆಯ ಗುರುವಾಗಿದ್ದರು. ಕನ್ನಡದ ಪರಿಚಾರಕರಾಗಿದ್ದರು. ವಿದ್ವಾಂಸರಾಗಿದ್ದರು. ಕನ್ನಡ ಸಂಸ್ಕೃತಿಯ ಪ್ರತೀಕವಾಗಿದ್ದರು.
ರಸಋಷಿ ಕುವೆಂಪು ಅವರ ಶಿಷ್ಯರಲ್ಲೊಬ್ಬರು.

ಕೃಷ್ಣಶಾಸ್ತ್ರಿಗಳು ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಅಂಬಳೆಯಲ್ಲಿ - 1890, ಫೆಬ್ರವರಿ 12 ರಂದು. ತಾಯಿ ವೆಂಕಮ್ಮ . ತಂದೆ ಅಂಬಳೆ ರಾಮಕೃಷ್ಣ ಶಾಸ್ತ್ರೀ ಮೈಸೂರು ಸಂಸ್ಕೃತ ಪಾಠಶಾಲೆಯಲ್ಲಿ ಪ್ರಾಧ್ಯಾಪಕರು. ತಂದೆಯಿಂದ ಮಗನಿಗೂ ಕನ್ನಡ-ಸಂಸ್ಕೃತದ ವಿದ್ವತ್‌ ಬಳವಳಿಯಾಗಿ ಬಂತು. ಆನಂತರ ಬಂಗಾಳಿಯಲ್ಲಿಯೂ ಕೃಷ್ಣಶಾಸ್ತ್ರಿ ಪರಿಣತಿ ಸಾಧಿಸಿದರು. ಭಾಷೆ ಅವರ ಪಾಲಿಗೆ ಸಾಧನ ಮಾತ್ರವಾಗಿರಲಿಲ್ಲ - ಸರ್ವಸ್ವವಾಗಿತ್ತು , ಸೃಜನಶೀಲತೆಯ ಜೀವಂತಿಕೆಯ ಪ್ರತೀಕವಾಗಿತ್ತು .

1915 ರಲ್ಲಿ ಮದ್ರಾಸ್‌ ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಕೃಷ್ಣಶಾಸ್ತ್ರಿ , ಅಠಾರಾ ಕಚೇರಿಯಾಂದರಲ್ಲಿ ಗುಮಾಸ್ತರಾಗಿ ವೃತ್ತಿ ಪ್ರಾರಂಭಿಸಿದರು. 1926 ರಲ್ಲಿ ಅಧ್ಯಾಪನ ವೃತ್ತಿ ಗೆ ಹೊರಳಿದರು. ಬೆಂಗಳೂರಿನ ಸೆಂಟ್ರಲ್‌ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ ಗೌರವ ಪ್ರಾಧ್ಯಾಪಕರಾಗಿ ಉಚಿತ ಸೇವೆ ಸಲ್ಲಿಸಿದರು.

ಸೆಂಟ್ರಲ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಸಮಯದಲ್ಲಿ ಕೃಷ್ಣಶಾಸ್ತ್ರಿಗಳು ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೇಮ ಹಾಗೂ ಓದುವ ಅಭಿರುಚಿ ಬೆಳೆಸಿದರು. ಕನ್ನಡ ಮೇಷ್ಟ್ರು ಶ್ರೀಮಂತ ಪರಂಪರೆಯಲ್ಲಿ ಅವರದು ಎದ್ದು ಕಾಣುವ ಹೆಸರು. ಸೆಂಟ್ರಲ್‌ ಕಾಲೇಜಿನಲ್ಲಿದ್ದಾಗಲೇ ‘ಪ್ರಬುದ್ಧ ಕರ್ನಾಟಕ’ ತ್ರೆೃಮಾಸಿಕವನ್ನು ಕೃಷ್ಣಶಾಸ್ತ್ರಿಗಳು ಪ್ರಾರಂಭಿಸಿದರು. 13 ವರ್ಷಗಳ ಕಾಲ ಅದರ ಸಂಪಾದಕರಾಗಿದ್ದರು. ಬರಹಗಾರರು ಹಾಗೂ ಸಹೃದಯರ ನಡುವಿನ ಕೊಂಡಿಯಾಗಿ ಬೆಳೆದ ಪ್ರಬುದ್ಧ ಕರ್ನಾಟಕ ಗುಣಮಟ್ಟದಲ್ಲೂ ಪ್ರಬುದ್ಧತೆ ಸಾಧಿಸಿತ್ತು . ಪ್ರಬುದ್ಧ ಕರ್ನಾಟಕ ಈಗ ಪ್ರಕಟವಾಗುತ್ತಿಲ್ಲ . ಆದರೆ, ಕನ್ನಡ ಸಾರಸ್ವತ ಲೋಕದ ಚಾರಿತ್ರಿಕ ದಾಖಲೆಯಾಗಿ ಪ್ರಬುದ್ಧ ಕರ್ನಾಟಕ ಪತ್ರಿಕೆ ಹಾಗೂ ಕೃಷ್ಣಶಾಸ್ತ್ರಿಗಳ ಹೆಸರು ಶಾಶ್ವತ.

ಕನ್ನಡ ಸಾಹಿತ್ಯ ಪರಿಷತ್ತಿನ ಏಳಿಗೆಗಾಗಿ ಕೃಷ್ಣಶಾಸ್ತ್ರಿಗಳು ಸಲ್ಲಿಸಿದ ಸೇವೆ ಮಹತ್ವವಾದುದು. ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು- ನಿಘಂಟು ರಚನಾ ಸಮಿತಿ ಅಧ್ಯಕ್ಷರಾಗಿ, ಕೆಲಕಾಲ ಪರಿಷತ್ಪತ್ರಿಕೆಯ ಸಂಪಾದಕರಾಗಿ ದುಡಿದರು.

Kathamrutha, by A.R.K.ಬರಹ-ಬದುಕು : ಅಧ್ಯಾಪನ ಹಾಗೂ ಕನ್ನಡ ಪರಿಚಾರಿಕೆಯಲ್ಲಿಯೇ ಬಹುಕಾಲ ಕಳೆದ ಕೃಷ್ಣಶಾಸ್ತ್ರಿಗಳ ಬರವಣಿಗೆ ಸಂಖ್ಯೆಯ ದೃಷ್ಟಿಯಿಂದ ಕಡಿಮೆ. ಆದರೆ ಬರೆದದ್ದೆಲ್ಲಾ ಮಹತ್ವವಾದದ್ದು . ಅವರು ಅನುವಾದಿಸಿದ ‘ಕಥಾಸರಿತ್ಸಾಗರ’ದ ಕನ್ನಡ ರೂಪ ‘ಕಥಾಮೃತ’ ಕಥೆ ಹೇಳುವ ಅಜ್ಜಿಯಷ್ಟು ಆಪ್ತವಾಗಬಲ್ಲದು.

ಭಾಸಕವಿ, ಸರ್ವಜ್ಞ ಕವಿ, ಸಂಸ್ಕೃತ ನಾಟಕ, ವಚನ ಭಾರತ, ಕಥಾಮೃತ, ಬಂಕಿಮಚಂದ್ರ, ಶ್ರೀಪತಿಯ ಕಥೆಗಳು ಹಾಗೂ ನಾಗ ಮಹಾಶಯ ಕೃಷ್ಣಶಾಸ್ತ್ರಿಗಳ ಇತರ ಕೃತಿಗಳು. ಈ ಪೈಕಿ ಬಂಕಿಮಚಂದ್ರ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ.

1941 ರಲ್ಲಿ ಹೈದರಾಬಾದಿನಲ್ಲಿ ನಡೆದ 26 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಕೃಷ್ಣಶಾಸ್ತ್ರಿಗಳು ವಹಿಸಿದ್ದರು.

1968 ರಲ್ಲಿ ಕೃಷ್ಣಶಾಸ್ತ್ರಿಗಳು ನಿಧನರಾದಾಗ ಅವರಿಗೆ 78 ವರ್ಷ. ಈಗ ಬದುಕಿದ್ದಿದ್ದರೆ ನೂರು ತುಂಬಿರುತ್ತಿತ್ತು . ನಿಟ್ಟೂರು, ಮೂರ್ತಿರಾವ್‌ ಜೊತೆ ಕೃಷ್ಣಶಾಸ್ತ್ರಿಗಳೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಿಂಚುತ್ತಿದ್ದರೇನೊ!

ನುಡಿಹಬ್ಬದ ಹೆಸರಿನಲ್ಲಿ ಗಡಿಜಿಲ್ಲೆ ಬೆಳಗಾವಿಯಲ್ಲಿ ಸದ್ದುಗದ್ದಲ ನಡೆಯುತ್ತಿರುವ ಹೊತ್ತಿನಲ್ಲಿ , ಸದ್ದುಗದ್ದಲವಿಲ್ಲದೆ ಸಂದು ಹೋದ ಕೃಷ್ಣಶಾಸ್ತ್ರಿಗಳ ನೆನಪು ಮತ್ತೆ ಮತ್ತೆ ಕಾಡುತ್ತದೆ ; ಮತ್ತೆ ಮತ್ತೆ ಓದಿಸಿಕೊಳ್ಳುವ ವಚನ ಭಾರತದಂತೆ.


ಪೂರಕ ಓದಿಗೆ-
ಭೂಮಿಕಾ ಮಾಹೆ ಮಂಥನದಲ್ಲಿ ‘ವಚನ ಭಾರತ’

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X