ಬೆಂಗಳೂರು ಟೆಕ್ ಪಾರ್ಕ್ ಒಳಗೆ ಅಮೆರಿಕ ದರ್ಶನ, ಹೊರಗಡೆ ಗುಂಡಿಗಳದ್ದೇ ಕಾರುಬಾರು; ಮೋಹನ್‌ದಾಸ್ ಪೈ
Bengaluru infrastructure: ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನ್‌ದಾಸ್ ಪೈ ಅವರು ಭಾರತದ ನಗರ ಮೂಲಸೌಕರ್ಯಗಳ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಬೆಂಗಳೂರು ಮತ್ತು ಮುಂಬೈನಂತಹ ಮಹಾನಗರಗಳಲ್ಲಿನ ಅತ್ಯಾಧುನಿಕ ಖಾಸಗಿ ಕಟ್ಟಡಗಳು ಮತ್ತು ಅವ್ಯವಸ್ಥಿತ ಸಾರ್ವಜನಿಕ ರಸ್ತೆಗಳ ನಡುವಿನ ಅಜಗಜಾಂತರ ವ್ಯತ್ಯಾಸವನ್ನು ಕಂಡು ಅವರು ವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ.
ಮೋಹನ್‌ದಾಸ್ ಪೈ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ, ನಗರ ಆಡಳಿತದಲ್ಲಿನ ವೈಫಲ್ಯವನ್ನು ಎತ್ತಿ ತೋರಿಸಿದ್ದಾರೆ. ಭಾರತವು ವಿಶ್ವದರ್ಜೆಯ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿದೆ. ಆದರೆ ಆ ಕಟ್ಟಡಗಳ ಸುತ್ತಮುತ್ತಲಿನ ರಸ್ತೆಗಳು ಮಾತ್ರ ಶೋಚನೀಯವಾಗಿವೆ. ಕಳಪೆ ರಸ್ತೆಗಳು, ಶಿಥಿಲಗೊಂಡ ಫುಟ್‌ಪಾತ್‌ಗಳ ವ್ಯವಸ್ಥೆಗೆ ಭ್ರಷ್ಟಾಚಾರವೇ ಪ್ರಮುಖ ಸಾಕ್ಷಿ ಎಂದು ಅವರು ನೇರವಾಗಿ ಗುಡುಗಿದ್ದಾರೆ.

ಇದನ್ನು ನಮ್ಮ ನಗರಗಳ ದುರಂತ ಎಂದು ಕರೆದಿರುವ ಅವರು, "ಕಳಪೆ ಗುಣಮಟ್ಟದ ರಸ್ತೆಗಳು ಮತ್ತು ಫುಟ್‌ಪಾತ್‌ಗಳಿಂದ ಜನರು ಆಗೂ ವಾಹನ ಸವಾರರು ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದರಿಂದಲೇ ಗೊತ್ತಾಗುತ್ತದೆ ಇಲ್ಲಿ ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ನಡೆಯುತ್ತಿದ," ಎಂದು ಕಿಡಿಕಾರಿದ್ದಾರೆ.
ಮುಂಬೈ ಜೀವನದ ಅನುಭವ ಬಿಚ್ಚಿಟ್ಟ ಮೋಹನ್‌ದಾಸ್ ಪೈ
ಮುಂಬೈನಲ್ಲಿ ತಮಗಾದ ಇತ್ತೀಚಿನ ಅನುಭವವನ್ನು ಹಂಚಿಕೊಂಡಿರುವ ಮೋಹನ್‌ದಾಸ್ ಪೈ ಅವರು, ಅಂಧೇರಿ ಭಾಗದ ಪರಿಸ್ಥಿತಿಯನ್ನು ಕಂಡು ತಾವು ದಿಗ್ಭ್ರಮೆಗೊಂಡಿರುವುದಾಗಿ ತಿಳಿಸಿದ್ದಾರೆ. ಅಲ್ಲಿನ ಹಾಳಾದ ರಸ್ತೆಗಳು, ರಸ್ತೆಗಳಿಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ನಿರ್ಮಾಣ ಹಂತದ ಕಟ್ಟಡದ ಅವಶೇಷಗಳು, ಆಮೆಗತಿಯ ಕಾಮಗಾರಿ ಮತ್ತು ಹೊಸದಾಗಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಗಳ ಕಳಪೆ ಗುಣಮಟ್ಟದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕಳಪೆ ಗುಣಮಟ್ಟದ ರಸ್ತೆಗಳಿಂದ ದೈನಂದಿನ ಪ್ರಯಾಣಿಕರಿಗೆ ಭಾರಿ ತೊಂದರೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕುರಿತು ಹೇಳಿದ್ದೇನು?
ಬೆಂಗಳೂರಿನ ಕುರಿತಾದ ವೈರಲ್ ಪೋಸ್ಟ್ ಒಂದಕ್ಕೆ ಧ್ವನಿಗೂಡಿಸಿದ ಮೋಹನ್‌ದಾಸ್ ಪೈ, "ನಗರದ ವಿಲಕ್ಷಣ ವೈರುಧ್ಯವನ್ನು ಬಿಚ್ಚಿಟ್ಟಿದ್ದಾರೆ. ಜನರು ಇಲ್ಲಿನ ಕಸದ ರಾಶಿ, ಧೂಳು ಮತ್ತು ಗುಂಡಿಬಿದ್ದ ರಸ್ತೆಯಲ್ಲಿ ಹರಸಾಹಸ ಪಡುತ್ತಾ ಸಾಗಬೇಕು. ಅದೇ ಪ್ರಯಾಣಿಕ ಒಮ್ಮೆ 'ಗೇಟೆಡ್ ಟೆಕ್ ಪಾರ್ಕ್' ಒಳಗೆ ಕಾಲಿಟ್ಟರೆ ಸಾಕು, ಅಲ್ಲಿ ವಿದೇಶಕ್ಕೆ ಬಂದಂತಹ ಅನುಭವವಾಗುತ್ತದೆ. ಆದರೆ, ಗೇಟ್‌ನಿಂದ ಹೊರಬರುತ್ತಿದ್ದಂತೆಯೇ ಸಾರ್ವಜನಿಕ ವ್ಯವಸ್ಥೆಯ ಹದಗೆಟ್ಟ ಮುಖದರ್ಶನವಾಗುತ್ತದೆ," ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೋಹನ್‌ದಾಸ್ ಪೈಗೆ ನೆಟ್ಟಿಗರ ಬೆಂಬಲ
ಸಾಮಾಜಿಕ ಜಾಲತಾಣಗಳಲ್ಲಿ ಈ ಚರ್ಚೆ ಭಾರಿ ಸದ್ದು ಮಾಡುತ್ತಿದ್ದು, ಅನೇಕ ನೆಟ್ಟಿಗರು ಪೈ ಅವರಿಗೆ ಬೆಂಬಲ ಸೂಚಿಸಿದ್ದಾರೆ. "ಅಪರೂಪಕ್ಕೊಮ್ಮೆ ಬಳಸುವ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ಮೇಲೆ ಭಾರಿ ಹೂಡಿಕೆ ಮಾಡಲಾಗುತ್ತಿದೆ. ಆದರೆ, ಕೋಟ್ಯಂತರ ಜನ ಪ್ರತಿನಿತ್ಯ ಬಳಸುವ ನಗರದ ಒಳಗಿನ ರಸ್ತೆಗಳು ಮಾತ್ರ ಅತ್ಯಂತ ಕಳಪೆ ಸ್ಥಿತಿಯಲ್ಲಿವೆ," ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, "ಈ ವ್ಯವಸ್ಥೆಯನ್ನು ಸರಿಪಡಿಸಲು ಸೂಕ್ತ ಅಧಿಕಾರಿಗಳ ಅಗತ್ಯವಿದೆ," ಅಂತಲೂ ಒತ್ತಾಯಿಸಿದ್ದಾರೆ.
ಇನ್ನೂ ಕೆಲವರು ಹಣಕಾಸಿನ ಹಂಚಿಕೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದ್ದಾರೆ. ಮೆಟ್ರೋ ನಗರಗಳು ದೇಶದ ಆರ್ಥಿಕತೆಗೆ ಅತಿ ದೊಡ್ಡ ಕೊಡುಗೆ ನೀಡುತ್ತಿದ್ದರೂ ಸಹ, ನಗರದ ನಾಗರಿಕ ಅಭಿವೃದ್ಧಿಗಾಗಿ ಸಿಗುತ್ತಿರುವ ಬಜೆಟ್ ಹಂಚಿಕೆ ಮಾತ್ರ ಬಹಳ ಸೀಮಿತವಾಗಿದೆ," ಎಂದು ವಾದಿಸಿದ್ದಾರೆ. ಮೆಟ್ರೋ ರೈಲು ಮತ್ತು ಉಪನಗರ ರೈಲು ಜಾಲಗಳಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ವಿಸ್ತರಣೆಯಲ್ಲಿ ಆಗುತ್ತಿರುವ ವಿಳಂಬಕ್ಕೆ ಈ ಹಣಕಾಸಿನ ಕೊರತೆಯೇ ನೇರ ಕಾರಣ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Bangalore: You drive on the broken roads, invisible footpaths, unchecked garbage. Every sign of a third-world city. And then you enter the gate of business parks where the first-world experience awaits you. pic.twitter.com/4TkLJtY0tf
— Vishal Bhargava (@VishalBhargava5) April 20, 2026
ಮತ್ತೊಂದು ವರ್ಗ, ಈ ಸಮಸ್ಯೆಯನ್ನು ವಿಶಾಲ ದೃಷ್ಟಿಕೋನದಿಂದ ವಿಶ್ಲೇಷಿಸಿದೆ. "ನಗರ ಯೋಜನೆಯಲ್ಲಿನ ಲೋಪದೋಷಗಳು ಹಾಗೂ ನೈರ್ಮಲ್ಯ, ಸಂಚಾರ ವ್ಯವಸ್ಥೆ ಮತ್ತು ಸುರಕ್ಷತೆಯ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯವೇ ಇದಕ್ಕೆ ಮೂಲ ಕಾರಣ," ಎಂದು ಅವರು ದೂರಿದ್ದಾರೆ. ಒಟ್ಟಿನಲ್ಲಿ ಭಾರತದ ಅತ್ಯಾಧುನಿಕ ವಾಣಿಜ್ಯ ಕೇಂದ್ರಗಳಿಗೆ ಆಸರೆಯಾಗಿರುವ ಈ ನಗರಗಳು, ಅತಿ ವೇಗವಾಗಿ ಬೆಳೆಯುತ್ತಿದ್ದರೂ ಸಹ ಇನ್ನೂ ಕನಿಷ್ಠ ಮಟ್ಟದ ಮೂಲಸೌಕರ್ಯಗಳಂತಹ ಸಮಸ್ಯೆ ಎದುರಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಈ ಅಭಿಪ್ರಾಯಗಳು ಎತ್ತಿ ತೋರಿಸಿದಂತಿವೆ.












Click it and Unblock the Notifications