Bengaluru Travel Package: ಬೆಂಗಳೂರಿಂದ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಪ್ರವಾಸ: ಕೆಎಸ್‌ಟಿಡಿಸಿ ಭರ್ಜರಿ ಪ್ರವಾಸ ಪ್ಯಾಕೇಜ್
Bengaluru Travel Package: ಬೇಸಿಗೆ ರಜೆ ಸಂಭ್ರಮದಲ್ಲಿ ನೀವು ಬೆಂಗಳೂರಿನಿಂದ ಒಂದು ದಿನದ ಮಟ್ಟಿಗೆ ಪ್ರವಾಸ ಮಾಡಬೇಕು ಎಂದು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದರೆ, ಇಲ್ಲಿ ನಿಮಗೊಂದು ಭರ್ಜರಿ ಆಯ್ಕೆ ಇದೆ. ವಿಶ್ವ ಪರಂಪರೆಯ ಸ್ಮಾರಕಗಳ ಪ್ರವಾಸಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ)ದ ಬಸ್ ಪ್ಯಾಕೇಜ್ ವ್ಯವಸ್ಥೆ ಇದೆ. ಬೆಂಗಳೂರಿನಿಂದ ಒಂದೇ ದಿನದಲ್ಲಿ ನೀವು ಬೇಲೂರು ಮತ್ತು ಹಳೇಬೀಡು ಸೇರಿದಂತೆ ವಿವಿಧ ಪ್ರದೇಶಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಕರ್ನಾಟಕದ ಶ್ರೀಮಂತ ಹಾಗೂ ವಿಶ್ವ ಪರಂಪರೆಯ ಸ್ಮಾರಕಗಳ ಪ್ರವಾಸ ಮಾಡುವುದಕ್ಕೆ ಸುವರ್ಣ ಅವಕಾಶ ಇದಾಗಿದೆ. ಬೇಲೂರು ಮತ್ತು ಹಳೇಬೀಡು ಹೊಯ್ಸಳ ರಾಜವಂಶದ ಅತ್ಯಂತ ಪ್ರಸಿದ್ಧ ದೇವಾಲಯಗಳಾಗಿವೆ. ಬೇಲೂರು ಮತ್ತು ಹಳೇಬೀಡು ದೇವಾಲಯಗಳು ಹಿಂದೂ ದೇವಾಲಯ ಕಲೆಯ ಅಮೋಘ ಒಳನೋಟವನ್ನು ನಿಮಗೆ ನೀಡುತ್ತದೆ. ಬೇಲೂರು ಮತ್ತು ಹಳೇಬೀಡು ದೇವಾಲಯಗಳು ಶಿಲ್ಪಿಗಳ ಕೆತ್ತನೆಗಳು ಮತ್ತು ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಶ್ರವಣಬೆಳಗೊಳವು ಜೈನ ದೇವಾಲಯಗಳ ಕಲಾರೂಪಕ್ಕೆ ಪ್ರಸಿದ್ಧಿ ಗಳಿಸಿದೆ. ಈ ಸ್ಥಳದಲ್ಲಿರುವ ಗೊಮ್ಮಟೇಶ್ವರ ಬಾಹುಬಲಿ ಪ್ರತಿಮೆಯು ಜೈನರಿಗೆ ಮಹತ್ವದ ಯಾತ್ರಾ ಸ್ಥಳವಾಗಿದೆ. ಈ ಪ್ರಮುಖ ಸ್ಥಳಗಳಿಗೆ ನೀವು ಕುಟುಂಬ ಸಮೇತರಾಗಿ ಅಥವಾ ಸ್ನೇಹಿತರೊಂದಿಗೆ ಒಂದು ದಿನ ಪ್ರವಾಸ ಪ್ಲ್ಯಾನ್ ಮಾಡಿಕೊಳ್ಳಬಹುದಾಗಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ)ದ ಬಸ್ ಪ್ಯಾಕೇಜ್ ಕಲ್ಪಿಸಿದೆ. ಹವಾನಿಯಂತ್ರಣ ಡಿಲಕ್ಸ್ ಕೋಚ್ ಮೂಲಕ ನೀವು ಒಂದು ದಿನದ ಪ್ರವಾಸವನ್ನು ಮಾಡಬಹುದಾಗಿದೆ.
ಈ ಮೂರು ಸ್ಥಳಗಳಿಗೆ ಭೇಟಿ ನೀಡಬಹುದು
ಇನ್ನು ಈ ಪ್ಯಾಕೇಜ್‌ನ ಮೂಲಕ ನೀವು ಬೆಂಗಳೂರಿನಿಂದ ಬೇಲೂರು | ಹಳೇಬೀಡು | ಶ್ರವಣಬೆಳಗೊಳ ಪ್ರದೇಶಗಳಿಗೆ ಭೇಟಿ ನೀಡಬಹುದಾಗಿದೆ. ಈ ಮೂರು ಪ್ರದೇಶಗಳ ವೀಕ್ಷಣೆಗೆ ನಿರ್ದಿಷ್ಟ ಸಮಯವನ್ನು ನಿಗದಿ ಮಾಡಲಾಗಿದೆ. ಎಲ್ಲಾ ಪ್ರಮುಖ ಪ್ರದೇಶಗಳನ್ನೂ ನೀವು ಸಮಯ ತೆಗೆದುಕೊಂಡು ನೋಡುವುದಕ್ಕೆ ಅವಕಾಶ ಇರಲಿದೆ. ಪ್ರವಾಸಿ ತಾಣಗಳ ಬಗ್ಗೆ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಅಥವಾ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕೆ ವೃತ್ತಿಪರ ಮಾರ್ಗದರ್ಶಿ (ಗೈಡ್) ಲಭ್ಯವಿರಲಿದ್ದಾರೆ. ಅಲ್ಲದೆ ರಾಜ್ಯ, ಕೇಂದ್ರ ಮತ್ತು ಪಿಎಸ್‌ಯು ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯಗಳು ಇರಲಿವೆ.
ಬೆಂಗಳೂರಿನಿಂದ ಬೇಲೂರು | ಹಳೇಬೀಡು | ಶ್ರವಣಬೆಳಗೊಳ ಪ್ರವಾಸ ವಿವರ
ಪ್ರವಾಸದ ಅವಧಿ: ಒಂದು ದಿನ
ನಿರ್ಗಮನ ಸ್ಥಳ: KSTDC ಬುಕಿಂಗ್ ಕೌಂಟರ್, BMTC ಬಸ್ ನಿಲ್ದಾಣ ಯಶವಂತಪುರ
ನಿರ್ಗಮನ ಸಮಯ: ಪ್ರತಿದಿನ ಬೆಳಿಗ್ಗೆ 6.30ಕ್ಕೆ
ಡಿಲಕ್ಸ್ ಎಸಿ ಬಸ್ ಮೊತ್ತ (ಪ್ರತಿ ವ್ಯಕ್ತಿಗೆ): 950 ರೂಪಾಯಿ.
ಸಂಪರ್ಕ ಸಂಖ್ಯೆ: 080- 4334 4334
Bengaluru Travel Package: ಪ್ರವಾಸ ಮಾರ್ಗ ಹಾಗೂ ಸಮಯದ ವಿವರ
ಬೆಳಿಗ್ಗೆ 6:30ಕ್ಕೆ ಯಶವಂತಪುರದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ನಿರ್ಗಮನ
ಬೆಳಿಗ್ಗೆ 8:30 ಮಾರ್ಗ ಮಧ್ಯೆ ಉಪಾಹಾರ
ಬೆಳಿಗ್ಗೆ 9ಕ್ಕೆ: ಯಡಿಯೂರಿನಿಂದ ನಿರ್ಗಮನ
ಬೆಳಿಗ್ಗೆ 10:30ಕ್ಕೆ ಶ್ರವಣಬೆಳಗೊಳಕ್ಕೆ ಭೇಟಿ - ಭಗವಾನ್ ಬಾಹುಬಲಿ (ಗೊಮ್ಮಟೇಶ್ವರ ಪ್ರತಿಮೆ) ದರ್ಶನ
ಬೆಳಿಗ್ಗೆ 11:30ಕ್ಕೆ ಶ್ರವಣಬೆಳಗೊಳದಿಂದ ನಿರ್ಗಮನ
ಮಧ್ಯಾಹ್ನ 1:30 ಬೇಲೂರಿ ದೇವಾಲಯ ಪ್ರದೇಶಕ್ಕೆ ಭೇಟಿ - ಹೋಟೆಲ್ ಮಯೂರ ವೇಲಾಪುರಿಯಲ್ಲಿ ಊಟ ಮತ್ತು ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ
ಮಧ್ಯಾಹ್ನ 3ಕ್ಕೆ ಬೇಲೂರಿನಿಂದ ನಿರ್ಗಮನ
ಮಧ್ಯಾಹ್ನ 3:45 ಹಳೇಬೀಡು ಪ್ರದೇಶಕ್ಕೆ ಆಗಮನ - ಹೊಯ್ಸಳೇಶ್ವರ ದೇವಸ್ಥಾನಕ್ಕೆ ಭೇಟಿ
ಸಂಜೆ 4:45 ಹಳೇಬೀಡುವಿನಿಂದ ನಿರ್ಗಮನ
ರಾತ್ರಿ 10ಕ್ಕೆ ಪ್ರವಾಸವು ಬೆಂಗಳೂರಿಗೆ ಹಿಂದಿರುಗುವುದರೊಂದಿಗೆ ಮುಕ್ತಾಯವಾಗಲಿದೆ
ಇನ್ನು ಈ ಪ್ರವಾಸದಲ್ಲಿ ಉಳಿದುಕೊಳ್ಳುವ ಅವಕಾಶವೂ ಇರಲಿದೆ. ಪ್ರತಿ ವ್ಯಕ್ತಿಗೆ 1330 ರೂಪಾಯಿ, ಇಬ್ಬರಿಗೆ 1330 ರೂಪಾಯಿ, ಮೂರು ಜನರಿಗೆ 1330 ರೂಪಾಯಿ ಇರಲಿದೆ.
ಬೆಂಗಳೂರಿನಿಂದ ಬೇಲೂರು | ಹಳೇಬೀಡು | ಶ್ರವಣಬೆಳಗೊಳ ಪ್ರವಾಸ ವಿವರದ ವಿವರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ: ಕೆಎಸ್‌ಟಿಡಿಸಿ ವೆಬ್‌ಸೈಟ್ ಲಿಂಕ್‌ಗೆ ಭೇಟಿ ನೀಡಬಹುದಾಗಿದೆ. https://kstdc.co/tour_packages/belur-halebeedu-shravanabelagola-blr/












Click it and Unblock the Notifications