ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಭಾವಿತ ಕ್ರಿಕೆಟಿಗನಿಗೆಎಟುಕಿದ ಆಕಾಶ

By Staff
|
Google Oneindia Kannada News

* ವಿಶಾಖ ಎನ್‌.

ಈತ ಸೋಲು- ಗೆಲುವು ಎರಡಕ್ಕೂ ಹಲ್ಲು ಕಿರಿಯುತ್ತಾನೆ. ಗೆಲುವು ಖುಷಿ ತಂದರೆ, ಸೋಲು ತನಗೆ ತಾನೇ ಪಾಠ ಹೇಳಿಕೊಳ್ಳುವಂತೆ ಈತನನ್ನು ಪ್ರೇರೇಪಿಸುತ್ತದೆ. ಕಳೆದ 17 ವರ್ಷಗಳಿಂದ ಇದನ್ನು ನಡೆಸುತ್ತಾ, ಉಸ್ಸಪ್ಪಾ ಅನ್ನದೆ ಚೆಂಡನ್ನು ಎಸೆಯುತ್ತಲೇ ಬಂದಿರುವ ಈ ಸ್ಥಿತಪ್ರಜ್ಞ ವಿಂಡೀಸ್‌ನ ಕರ್ಟ್ನಿ ವಾಲ್ಷ್‌ ಈಗ 500 ವಿಕೆಟ್‌ಗಳ ವೀರ.

ಮಾರ್ಚ್‌ 19, ಸೋಮವಾರವನ್ನು ವಾಲ್ಷ್‌ ಅಷ್ಟೇ ಅಲ್ಲ, ಕ್ರಿಕೆಟ್‌ ಪ್ರೇಮಿಗಳೂ ಮರೆಯುವುದಿಲ್ಲ. ದಕ್ಷಿಣ ಆಫ್ರಿಕ ವಿರುದ್ಧದ 3 ಟೆಸ್ಟ್‌ ಪಂದ್ಯಗಳ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಜಾಕ್ವೆಸ್‌ ಕಾಲಿಸ್‌ ವಾಲ್ಷ್‌ಗೆ 500ನೇ ಬಲಿಯಾದರು. ವಾಲ್ಷ್‌ ಕೇವಲ 129 ಟೆಸ್ಟ್‌ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. 1999ರ ಮಾರ್ಚ್‌ನಲ್ಲಿ ಭಾರತದ ಕಪಿಲ್‌ ದೇವ್‌ ಅವರ ವಿಶ್ವ ದಾಖಲೆ (434 ವಿಕೆಟ್‌) ಮುರಿದ ವಾಲ್ಷ್‌ ಈಗ ಸುಲಭವಾಗಿ ಮುಟ್ಟಲಾರದಷ್ಟು ದೂರ ಪಯಣಿಸಿದ್ದಾರೆ.

1984ರಲ್ಲಿ ಇಂಗ್ಲಿಷ್‌ ಕೌಂಟಿಗೆ ಮೊದಲ ಬಾರಿಗೆ ವಾಲ್ಷ್‌ ಆಡಿದರು. 34.55 ಸರಾಸರಿಯಲ್ಲಿ 18 ವಿಕೆಟ್‌ಗಳನ್ನು ಆ ಋತುವಿನಲ್ಲಿ ಬುಟ್ಟಿಗೆ ಹಾಕಿಕೊಂಡರು. ದುರಾದೃಷ್ಟವೆಂಬಂತೆ ವಿಂಡೀಸ್‌ ತಂಡ ಅದೇ ಸಮಯದಲ್ಲಿ ಇಂಗ್ಲೆಂಡ್‌ ಪ್ರವಾಸ ಬೆಳೆಸಿದ್ದರಿಂದ ಕೌಂಟಿ ಪಂದ್ಯಗಳ ಸಂಖ್ಯೆಯನ್ನು ಕಡಿತಗೊಳಿಸಲಾಯಿತು. ಆದರೆ ಅದಾದ ವರ್ಷದ ನಂತರ ವಾಲ್ಷ್‌ 82 ಕೌಂಟಿ ವಿಕೆಟ್‌ಗಳನ್ನು ಕಿತ್ತು , ತಮ್ಮ ಸಾಮರ್ಥ್ಯ ಮೆರೆದರು.

ರಾಷ್ಟ್ರೀಯ ತಂಡಕ್ಕೆ ವಾಲ್ಷ್‌ಗೆ ಸ್ಪರ್ಧಿಯಾಗಿದ್ದುದು ಮೈಕೆಲ್‌ ಹೋಲ್ಡಿಂಗ್‌. ಆತ ಹೊಮ್ಮಿಸುತ್ತಿದ್ದ ವೇಗವನ್ನು ವಾಲ್ಷ್‌ ಕೊಡಲಾಗಲಿಲ್ಲ. ಹೀಗಾಗಿ ಹೋಲ್ಡಿಂಗ್‌ ಎದುರು ವಾಲ್ಷ್‌ ಸೋತರು. ತಂಡದಲ್ಲಿ ಆಗೊಮ್ಮೆ ಈಗೊಮ್ಮೆ ಅವಕಾಶ ಸಿಕ್ಕಿತಷ್ಟೆ . ಆದರೆ ವರ್ಷಗಳುರುಳಿದಂತೆ ವೇಗ ವೀರ ಮಾಲ್ಕಮ್‌ ಮಾರ್ಷಲ್‌ ಉತ್ತರಾಧಿಕಾರಿ ಸ್ಥಾನವನ್ನು ವಾಲ್ಷ್‌ ಕಸಿದುಕೊಂಡರು. ಕಳೆದ ಐದಾರು ವರ್ಷಗಳಲ್ಲಿ ಆ್ಯಂಬ್ರೋಸ್‌ ಮತ್ತು ವಾಲ್ಷ್‌ ಜೋಡಿ ಅನೇಕ ತಂಡಗಳ ಬುಡವನ್ನು ಅಲ್ಲಾಡಿಸಿತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆ್ಯಂಬ್ರೋಸ್‌ ನಿವೃತ್ತಿಯಾದರು. ವಾಲ್ಷ್‌ ಮಾತ್ರ ದಣಿಯಲಿಲ್ಲ.

ಜಮೈಕಾದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ವಾಲ್ಷ್‌ ದೈಹಿಕವಾಗಿ ಹಾಗೂ ಮಾನಸಿಕವಾಗಿ ಎತ್ತರಕ್ಕೆ ಬೆಳೆದರು. 1994ರಲ್ಲಿ ಹಾಗೂ 1996- 97ರಲ್ಲಿ ತಂಡದ ನಾಯಕತ್ವವನ್ನೂ ವಹಿಸಿದರು. 1998, ನವೆಂಬರ್‌ನಲ್ಲಿ ಮಾಲ್ಕಂ ಮಾರ್ಷಲ್‌ ಗಳಿಸಿದ್ದ 376 ವಿಕೆಟ್‌ಗಳ ಗಡಿಯನ್ನು ಮೀರಿದ ವಾಲ್ಷ್‌, ನಂತರದ ಎರಡು ವರ್ಷಗಳಲ್ಲೇ ನ್ಯೂಜಿಲೆಂಡ್‌ನ ರಿಚರ್ಡ್‌ ಹ್ಯಾಡ್ಲಿ ಹಾಗೂ ಭಾರತದ ಕಪಿಲ್‌ ದಾಖಲೆಯನ್ನೂ ಮುರಿದರು. ಎರಡೇ ವರ್ಷಗಳಲ್ಲಿ ಕಪಿಲ್‌ಗಿಂತ 66 ಹೆಚ್ಚು ವಿಕೆಟ್‌ಗಳನ್ನು ಈ ವಯಸ್ಸಿನಲ್ಲಿಯೂ ಕಿತ್ತಿರುವುದು ವಾಲ್ಷ್‌ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ.

ಒಮ್ಮೆಯೂ ವಿವಾದಕ್ಕೆ ಸಿಲುಕದೆ, ತಂಡ ಅಲ್ಲಾಡುತ್ತಿದ್ದರೂ ತಮ್ಮ ಮೊನಚು ಕಳೆದುಕೊಳ್ಳದೆ, ಎಲ್ಲಕ್ಕೂ ಮಿಗಿಲಾಗಿ ಯದ್ವಾತದ್ವಾ ವೇಗವಾಗಿ ಚೆಂಡನ್ನು ಎಸೆಯಲು ಹೋಗಿ ಕೈಕಾಲು ನೋಯಿಸಿಕೊಳ್ಳದೆ ಈಗಲೂ ತಮ್ಮ ವೇಗ ವೈವಿಧ್ಯತೆ ಮೆರೆಯುತ್ತಿರುವ 38ರ ಹರೆಯದ ವಾಲ್ಷ್‌ ಕ್ರಿಕೆಟ್ಟಿಗೇ ಒಂದು ಭೂಷಣ. ಅವರಿಗೆ ಶುಭಾಶಯಗಳು.

ವಾರ್ತಾಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X