ಬಿಎಂಎಸ್ ಕಾಲೇಜಿನ ವಿಶ್ವನಾಥ್ ಮೇಷ್ಟ್ರು
ವಿಶ್ವನಾಥ್ ಮೇಷ್ಟ್ರು ! ಬಹುಶಃ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಲ್ಲಿ ಓದಿದ ಅನೇಕ ವಿದ್ಯಾರ್ಥಿಗಳಿಗೆ ಈ ಹೆಸರು ಪರಿಚಿತ. ಇವತ್ತು ಈ ಮೇಷ್ಟ್ರು ಬಲು ಎತ್ತರಕ್ಕೆ ಏರಿದ್ದಾರೆ. ಎಷ್ಟೆಂದರೆ, ವಿಶ್ವಸಂಸ್ಥೆಯ ವಿಶೇಷ ಅಧಿವೇಶನಕ್ಕೆ ಇವರು ಆಹ್ವಾನಿತ ಅತಿಥಿ.
ಎಲ್ಲರಿಗೂ ಈ ಭಾಗ್ಯ ದಕ್ಕೋದಿಲ್ಲ- ಹೆಬ್ಬಳಲು ರಾಮರಾವ್ ವಿಶ್ವನಾಥ್ ಸಿವಿಲ್ ಎಂಜಿನಿಯರಿಂಗ್ ಓದಿದ್ದು ಬಿಎಂಎಸ್ ಕಾಲೇಜಲ್ಲಿ. ಓದು ಮುಗಿದ ನಂತರ ಅದೇ ಕಾಲೇಜಲ್ಲಿ ಅಧ್ಯಾಪಕರಾಗುತ್ತಾರೆ. ಕೊನೆಗೆ ಪ್ರಾಂಶುಪಾಲ ಹುದ್ದೆಯೂ ಸಲ್ಲುತ್ತದೆ. 10 ವರ್ಷ ಕಾಲ ಪ್ರಾಂಶುಪಾಲರಾಗಿ ಬೆಂಗಳೂರಿನ ಈ ಪ್ರತಿಷ್ಠಿತ ಕಾಲೇಜಲ್ಲಿ ಪ್ರೊ.ವಿಶ್ವನಾಥ್ ಸೇವೆ ಸಲ್ಲಿಸುತ್ತಾರೆ.
ಹೊಸತನಗಳ ಹುಡುಕಾಟದ ವಿಶ್ವನಾಥ್, ಸಿವಿಲ್ ಎಂಜಿನಿಯರಿಂಗನ್ನೇ ಉಸಿರಾಗಿಸಿಕೊಳ್ಳುತ್ತಾರೆ. ಜರ್ಮನಿಗೆ ಹೋಗಿ, ಪಿಎಚ್.ಡಿ. ಮಾಡುತ್ತಾರೆ. ಜರ್ಮನಿಯಲ್ಲಿ ಪಾಠ ಹೇಳುತ್ತಿದ್ದುದು ಜರ್ಮನ್ ಭಾಷೆಯಲ್ಲಿ. ಈ ಕಾರಣ ಇವರು ಜರ್ಮನಿ ಭಾಷೆಯನ್ನು ಕಲಿಯುತ್ತಾರೆ. ಈಗಂತೂ ಜರ್ಮನ್ ಭಾಷೆ ಇವರಿಗೆ ಅಂಗೈ ನೆಲ್ಲಿ.
ಕಾಲೇಜಲ್ಲಿ ಪಾಠ ಹೇಳುತ್ತಿದ್ದ ಕಾಲದಲ್ಲೇ ‘ಜರೇಮ್’ ಎಂಬ ಕಂಪನಿ ಕಟ್ಟುತ್ತಾರೆ. ಸಿವಿಲ್ ಎಂಜಿನಿಯರಿಂಗ್ ವಿಷಯದಲ್ಲಿ ಸಲಹೆಗಾರರಾಗಿಯೂ ಹಲವಾರು ಕೆಲಸಗಳ ಮಾಡುತ್ತಾರೆ. 70ರ ಈ ಇಳಿವಯಸ್ಸಲ್ಲೂ ಉತ್ಸಾಹದ ಬುಗ್ಗೆ ಬೆಂಗಳೂರಿನ ಶಂಕರಪುರಂನ ಈ ನಿವಾಸಿ.
ನಿಮಗಿದು ಗೊತ್ತೆ ?
ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಕಾವೇರಿ ಭವನ, ಸಂತೋಷ್, ಪೂರ್ಣಿಮ, ಪಲ್ಲವಿ, ಅಪರ್ಣಾ ಮೊದಲಾದ ಥಿಯೇಟರ್‌ಗಳು, ಮೈಸೂರಿನ ಥೀಮ್ ಪಾರ್ಕ್, ದೆಹಲಿಯ ಟಿವಿ ಟವರ್- ಇವೆಲ್ಲದರ ವಿನ್ಯಾಸ ಮಾಡಿದ್ದು ಇದೇ ಪ್ರೊ.ವಿಶ್ವನಾಥ್. ಇವತ್ತು ಈತ ಬಾನೆತ್ತರದ ಕಟ್ಟಡಗಳ ವಿನ್ಯಾಸದಲ್ಲಿ ಪರಿಣತ.
ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ವಿಜಯ ರತ್ನ ಸೇರಿದಂತೆ 20ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ವಿಶ್ವನಾಥ್ ಭಾಜನರಾಗಿದ್ದಾರೆ. ಸಿವಿಲ್ ಎಂಜಿನಿಯರಿಂಗ್‌ಗೆ ಸಂಬಂಧಿಸಿದಂತೆ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಉನ್ನತ ಸ್ಥಾನ- ಮಾನದ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರೊ.ವಿಶ್ವನಾಥ್ ಒಬ್ಬ ಕಟ್ಟಡ ವಿಜ್ಞಾನಿ! ಪ್ರತಿಭಾನ್ವಿತ ಶಿಲ್ಪಿ. ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮರೆಯಬಾರದ ಹೆಸರು. ಇವರ ಬಗ್ಗೆ ಬರೆದಷ್ಟೂ ವಿಷಯ ಉಂಟು. ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications