ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗೀತ ಸಂದರ್ಶನ : ಅನುರಾಧ ಪಾಲ್‌

By Staff
|
Google Oneindia Kannada News

*ಪಾರಿತೋಷ್‌ ಪರಾಶರ್‌

ಸಿಡ್ನಿ : ಹೆಸರು ಅನುರಾಧ ಪಾಲ್‌. ಸಂಗೀತಾಸಕ್ತರಿಗೆ ಇಷ್ಟು ಹೇಳಿಬಿಟ್ಟರೆ ಸಾಕು, ಇದರ ಬೆನ್ನಲ್ಲೇ ಸಾಕಷ್ಟು ವಿಷಯಗಳು ತಂತಾವೇ ಬಿಚ್ಚಿಕೊಳ್ಳುತ್ತವೆ. ಸಂಗೀತ ಕ್ಷೇತ್ರದಲ್ಲಿನ ಸಂಪ್ರದಾಯವನ್ನೇ ಮುರಿದು, ‘ಭಾರತದ ಮೊದಲ ಮಹಿಳಾ ತಬಲ ವಾದಕಿ’ ಎಂಬ ಹೆಗ್ಗಳಿಕೆಗೆ ಗುರಿಯಾಗಿರುವ ಈ ಪಂಜಾಬಿ ಈ ಹೊತ್ತು ಪುರುಷ ಪ್ರಧಾನ ವಾದ್ಯವನ್ನು ಬಾರಿಸುವಲ್ಲಿ ಆತನನ್ನೂ ಮೀರಿಸುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ.

ಅನೇಕ ಭಾರತದ ಹಾಗೂ ವಿದೇಶೀ ಸಂಗೀತಾನುಭಾವಿಗಳು ಈಕೆ ತಬಲದಿಂದ ಹೊಮ್ಮಿಸುವ ನಾದಕ್ಕೆ ಮನಸೋತಿದ್ದಾರೆ, ತಲೆದೂಗಿದ್ದಾರೆ. ಈಚೆಗೆ ಆಸ್ಟ್ರೇಲಿಯಾದ ಸಿಡ್ನಿಯಲ್ಲೂ ಒಂದು ಸಂಗೀತ ಸಂಜೆ ಏರ್ಪಾಟಾಗಿತ್ತು. ಪ್ರಸಿದ್ಧ ಕೊಳಲು ವಾದಕ ಹರಿಪ್ರಸಾದ್‌ ಚೌರಾಸಿಯಾ ಅವರಿಗೆ ಸಾಥ್‌ ನೀಡುತ್ತಿದ್ದ ಪಾಲ್‌, ಸಭೆಯ ಕೇಂದ್ರ ಬಿಂದುವಾದರು. ಜನರ ಕಂಗಳು ಮುಚ್ಚಿದ್ದರೂ, ಕಿವಿಗಳೇ ಇವರನ್ನು ನೋಡುತ್ತಿದ್ದವು!

ಅಪ್ಪ ಉಸ್ತಾದ್‌ ಅಲ್ಲಾ ರಖಾ (ದಿವಂಗತ) ಹಾಗೂ ಮಗ ಉಸ್ತಾದ್‌ ಜಾಕಿರ್‌ ಹುಸೇನ್‌ ಕಳೆದೆರಡು ದಶಕಗಳಿಂದ ಸಂಗೀತಪ್ರಿಯರ ಹಸಿವನ್ನು ತಮ್ಮ ತಬಲ ವಾದನದಿಂದ ತಣಿಸಿದ್ದಾರೆ. ಜಾಕಿರ್‌ ತಮ್ಮ 11ನೇ ವಯಸ್ಸಿನಿಂದ ತಬಲಾ ಅಭ್ಯಾಸ ಪ್ರಾರಂಭಿಸಿದ್ದರೆ, ಪಾಲ್‌ 7 ವರ್ಷದ ಹುಡುಗಿಯಾಗಿದ್ದಾಗಲೇ ತಬಲದ ಮೇಲೆ ಕೈಯಾಡಿಸಲು ಶುರುವಿಟ್ಟವರು.

ಶಾಸ್ತ್ರೀಯ ಸಂಗೀತದ ನಂತರದ ಬಿಡುವಿನ ಕೆಲ ಸಮಯವನ್ನು ಪಾಲ್‌ ಹಂಚಿಕೊಂಡಿದ್ದು ಹೀಗೆ....

  • ನೀವು ತಬಲವನ್ನೇ ಆಯ್ದುಕೊಂಡದ್ದೇಕೆ?
ಲಯದ ಪಕ್ಕಾ ಅನುಭವ ಪಡೆಯಲೆಂದು ನಾನು ತಬಲವನ್ನು ಆಯ್ದುಕೊಂಡೆ. ಆದರೆ ಅದನ್ನು ಬಾರಿಸತೊಡಗಿದಾಗ ನನ್ನ ನಿಲುವೇ ಬದಲಾಗಿ, ನಾನು ತಬಲಾ ವಾದಕಿಯಾಗೇ ಹೆಸರು ಮಾಡಬೇಕೆಂಡು ನಿರ್ಧರಿಸಿಬಿಟ್ಟೆ. ತಬಲಾ ಬಾರಿಸುವುದರಲ್ಲಿ ನನಗೆ ಅಂಥ ಬ್ರಹ್ಮಾನಂದ ಆಗಲೇ ಸಿಕ್ಕಿತ್ತು.

  • ಕಲಿಕೆಗೆ ನಿಮಗೆ ಏನೂ ಅಡ್ಡಿ ಆತಂಕ ಬರಲಿಲ್ಲವೇ?
ಪ್ರಾರಂಭದಲ್ಲಿ ನಾನು ಅನುಭವಿಸಿದ ಕಷ್ಟ ಶತ್ರುವಿಗೂ ಬೇಡ. ಪೀಚು ವಯಸ್ಸು. ಹುಚ್ಚು ಮನಸ್ಸು. ಹುಡುಗಿ ಬೇರೆ. ಸಂಪ್ರದಾಯಕ್ಕೇ ಕೊಡಲಿ ಹಾಕಲು ಬಿಟ್ಟರೂ ಬಿಟ್ಟಾರೆ? ಜೊತೆಗೆ ನಮ್ಮದು ಸಂಗೀತದ ಹಿನ್ನೆಲೆಯಿಲ್ಲದ ಸಂಸಾರ. ಎಲ್ಲಕ್ಕೂ ಮೀರಿ ಯಾವ ಗುರು ನನಗೆ ಅಭ್ಯಾಸ ಮಾಡಿಸಲು ಒಪ್ಪಿಯಾರು? ಇಷ್ಟೆಲ್ಲಾ ಒತ್ತಡಗಳ ನಡುವೆಯೂ ನಾನು ಪಟ್ಟು ಬಿಡಲಿಲ್ಲ. ಅಮ್ಮ ಇಲಾ ಪಾಲ್‌ ನನ್ನ ಪಾಲಿಗೆ ದೇವತೆಯೇ ಸರಿ. ಆಕೆ ಮನಸ್ಸು ಮಾಡಿದ್ದಕ್ಕೇ ನಾನಿವತ್ತು ವೇದಿಕೆ ಹತ್ತುವ ಮಟ್ಟ ತಲುಪಿರುವುದು.

ನನಗೆ ಎಷ್ಟೋ ಗುರುಗಳು ತಬಲ ಬಾರಿಸೋದು ಬಹಳ ಕಷ್ಟ, ಅದರ ಆಸೆ ಬಿಟ್ಟು ಸಿತಾರ ನುಡಿಸೋದನ್ನ ಕಲಿ ಅಂತಲೂ ಹೇಳಿದರು. ಆದರೆ ತಬಲ- ನಾನು ಒಂದಾಗಿಬಿಟ್ಟಿದ್ದೆವು. ಯಾವುದಕ್ಕೂ ನಾನು ಜಗ್ಗಲಿಲ್ಲ. ಇಷ್ಟೆಲ್ಲಾ ತಾಕೀತು, ‘ಬೇಡ’ಗಳನ್ನು ಬೇಧಿಸಿ ಈ ಹೊತ್ತು ನಾನು ಅಂದುಕೊಂಡದ್ದನ್ನು ಸಾಧಿಸಿದ್ದೇನೆ, ಸಾಧಿಸುತ್ತಿದ್ದೇನೆ. ಇದಕ್ಕೆ ನನಗೆ ಅತಿಯಾದ ಹೆಮ್ಮೆ.

  • ಪ್ರಸ್ತುತ ಕ್ಷೇತ್ರದಲ್ಲಿ ಹೇಗೆ ತೊಡಗಿಕೊಂಡಿದ್ದೀರಿ?
ಶಾಸ್ತ್ರೀಯ ಸಂಗೀತದ ಕಲಿಕೆ ಅನಂತ. ಮೊಗೆದಷ್ಟೂ ಜ್ಞಾನ ಸಿಗುತ್ತಲೇ ಇರುತ್ತದೆ. ಹತಾಶರಾಗದೆ ಅದನ್ನು ದಕ್ಕಿಸಿಕೊಳ್ಳುವುದು ಬಹು ಮುಖ್ಯ. ಪ್ರಸ್ತುತ ನಾನು ಓಬಿರಾಯನ ಕಾಲದ ಸಂಗೀತಕ್ಕೆ ಹೊಸ ರೂಪು ಕೊಡುವ ಉದ್ದೇಶದಿಂದ ‘ಬೆಸುಗೆ ಸಂಗೀತ’ (ಫ್ಯೂಷನ್‌ ಮ್ಯೂಸಿಕ್‌) ಹೊಸ ಪ್ರಯೋಗಗಳಲ್ಲಿ ತೊಡಗಿಕೊಂಡಿದ್ದೇನೆ. ಇದೊಂದು ಸವಾಲಿನ ಕೆಲಸ. ನಾನು ಒಂದು ಬಾರಿ ತಬಲಾ ಬಾರಿಸಿದರೆ ಅದೇ ತಾಳ/ರಾಗದಲ್ಲಿನ ಹೊಸ ಸಂಭವನೀಯತೆ ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತದೆ. ಇದು ನಿರಂತರವಾಗಿ ಆಗಬೇಕು. ಆಗಲೇ ನಮ್ಮಲ್ಲಿ ಕ್ರಿಯಾಶೀಲತೆ ಉಳಿಯುವುದು.

  • ನೀವು ಯಾವುದಾದರೂ ಕ್ಯಾಸೆಟ್‌ಗಳನ್ನು ಹೊರ ತಂದಿದ್ದೀರಾ?
ನಾನು ಎರಡು ‘ಸಿಡಿ’ಗಳನ್ನು ಹೊರ ತಂದಿದ್ದೇನೆ. ಒಂದು ‘ಶಾಂತಿ’, ಮತ್ತೊಂದು ‘ಸ್ತ್ರೀ ಶಕ್ತಿ’. ಇವು ಕಳೆದ ಐದಾರು ವರ್ಷಗಳಿಂದ ನಾನು ನನ್ನ ಕ್ಷೇತ್ರದಲ್ಲಿ ನಡೆಸಿರುವ ಪ್ರಯೋಗ ಹಾಗೂ ಸಂಶೋಧನೆಗಳ ಫಲ. ಸ್ತ್ರೀ ಶಕ್ತಿ ಮಹಿಳಾ ವಾದದ ಅಭಿವ್ಯಕ್ತಿಯ ರಚನೆಯಲ್ಲ ; ಪುರುಷನ ಸಮಾನಕ್ಕೆ ನಾನೂ ಬೆಳೆಯಬೇಕೆಂಬ ಹೆಣ್ಣಿನ ಅಂತರಂಗದ ಉತ್ಕಟೇಚ್ಛೆಯನ್ನು ಬಿಂಬಿಸುವಂಥದು.

  • ಈವತ್ತು ದಿನಕ್ಕೊಂದರಂತೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಇಂಡಿ- ಪಾಪ್‌ ಆಲ್ಬಂಗಳ ಬಗ್ಗೆ ನೀವೇನಂತೀರಿ?
ಇಂಡಿ- ಪಾಪ್‌ನ ಪರಿಕಲ್ಪನೆ ವಿಶಾಲವಾದ್ದರಿಂದ ಅದರ ಬಗ್ಗೆ ನಾನು ವ್ಯಾಖ್ಯಾನ ಕೊಡಲು ಇಷ್ಟಪಡೋದಿಲ್ಲ. ಒಂದಂತೂ ನಿಜ, ಈವತ್ತಿನ ಅನೇಕ ಇಂಡಿ- ಪಾಪ್‌ಗಳನ್ನು ಬುರ್ನಾಸು ಎನ್ನಬಹುದು. ರಚನೆಗಳು ‘ಫ್ಯೂಷನ್‌ ವಿಥೌಟ್‌ ಕನ್‌ಫ್ಯುಷನ್‌’ ಅನ್ನುವಂತಿರಬೇಕು. ಇಂಥ ಎಲ್ಲೋ ಅಲ್ಲೊಂದು ಇಲ್ಲೊಂದು ಕೇಳ ಸಿಗುವ ರಚನೆಗಳನ್ನು ನಾನು ಮೆಚ್ಚಿದ್ದೇನೆ.

ಸಂಗೀತವನ್ನು ಕೇವಲ ಹವ್ಯಾಸವ್ನನಾಗಿಸಿಕೊಳ್ಳದೆ ಅದನ್ನು ಒಂದು ಕಸುಬನ್ನಾಗಿ ಸ್ವೀಕರಿಸಿರುವ ಅನುರಾಧ ಪಾಲ್‌ ‘ನಾನು ಕಲಿತುದು ಕರದಗಲ, ಕಲಿಯದುದು ಕಡಲಗಲ’ ಅನ್ನುವಾಗ ಇವರ ಜೀವನಾಸಕ್ತಿ, ದೊಡ್ಡತನ ತಾವೇ ತಾವಾಗಿ ವ್ಯಕ್ತವಾಗುತ್ತವೆ.

(ಐಎಎನ್‌ಎಸ್‌)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X