ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಷರ ಪ್ರೀತಿಯ ಸುಬ್ಬಣ್ಣ

By Staff
|
Google Oneindia Kannada News

*ಸತ್ಯವ್ರತ ಹೊಸಬೆಟ್ಟು

K.V. Subbannaನಿಮಗೆ ಕುಂಟಗೋಡು ವಿಭೂತಿ ಸುಬ್ಬಣ್ಣ ಗೊತ್ತೇ ?

ಬಹುಶಃ ಗೊತ್ತಿರಲಿಕ್ಕಿಲ್ಲ . ಹೆಗ್ಗೋಡಿನ ಸುಬ್ಬಣ್ಣ ಅಂದರೆ ಅರೆ ಪರಿಚಯವಾಗುತ್ತದೆ. ನೀನಾಸಂ ಸುಬ್ಬಣ್ಣ ಅಂದರೆ ಸ್ಪಷ್ಟವಾಗುತ್ತದೆ.

ಗುಬ್ಬಚ್ಚಿಯಂತಹ ಸುಬ್ಬಣ್ಣನವರ ಹೆಸರು ಕೇಳಿದಾಗಲೆಲ್ಲ ಕನ್ನಡಿಗರಿಗೆ ಮಾಸ್ತಿಯವರ ಸುಬ್ಬಣ್ಣ ಕಾದಂಬರಿ ನೆನಪಾಗುತ್ತದೆ. ಒಂದು ಕಾಲದಲ್ಲಿ ಕಾರಂತರಿಗಿಂತ ಜಾಣರೂ, ಅನಂತ ಮೂರ್ತಿಯವರಿಗಿಂತ ಕಡಿಮೆ ಶ್ಯಾಣ್ಯಾರೂ ಆಗಿದ್ದ ಸುಬ್ಬಣ್ಣ, ಹೆಗ್ಗೋಡಿನಂಥ ಪುಟ್ಟ ಊರನ್ನು ಕಲೆ, ಸಂಸ್ಕೃತಿ, ಸಾಹಿತ್ಯ, ನಾಟಕ, ಸಿನಿಮಾಗಳ ರಂಗಸ್ಥಳವನ್ನಾಗಿ ಮಾಡಿದ್ದು ನಮ್ಮ ಕಾಲದ ಒಂದು ಪವಾಡ. ಜೊತೆಗೇ ಅವರು ಅತ್ಯುತ್ತಮ ಕೃತಿಗಳ ಮುದ್ರಣಕ್ಕೆ ಹೆಗಲು ಕೊಟ್ಟವರು. ನೀಲಕಂಠೇಶ್ವರ ನಾಟ್ಯಸೇವಾ ಸಂಘದ ಮೂಲಕ ಕರ್ನಾಟಕದ ಹಳ್ಳಿಗಳನ್ನೂ ತಲುಪಿ, ಅವರಿಗೆಲ್ಲಾ ಆಧುನಿಕ ನಾಟಕದ ಹುಚ್ಚು ಹಿಡಿಸಿದವರು.

ಸುಬ್ಬಣ್ಣನವರ ಬದುಕೂ ಒಂದು ತಿರುಗಾಟವೇ... ಅವರು ನಿಂತಲ್ಲಿ ನಿಂತವರಲ್ಲ. ಸಾಹಿತ್ಯ, ವಿಮರ್ಶೆ, ಸಂಪಾದನೆ, ಅನುವಾದ, ನಾಟಕ ಸಿನಿಮಾ ಕುರಿತ ಸಾಹಿತ್ಯ ಹೀಗೆ ಅವರ ಬೀಸು ವಿಶಾಲವಾದದ್ದು. ಹೀಗಾಗಿ ಅವರ ಹೆಗ್ಗೋಡು, ಕರ್ನಾಟಕದ ಶಾಂತಿ ನಿಕೇತನ ಅನ್ನಿಸಿಕೊಂಡಿತ್ತು.

ಸುಬ್ಬಣ್ಣ ಇದನ್ನೆಲ್ಲಾ ಒಂಟಿಯಾಗಿಯೇ ಮಾಡಿದರು ಕೂಡ. ಅವರ ಜೊತೆಗೆ ಜನಲೋಲುಪ ವಿಮರ್ಶಕ ಟಿ.ಪಿ. ಅಶೋಕ, ಜನವಿರೋಧಿ ನಿರ್ದೇಶಕ ಪ್ರಸನ್ನ ಮುಂತಾದವರು ಇದ್ದರು ನಿಜ. ಆದರೆ ಅವರಿಗೆ ಕಟ್ಟುವುದು ಗೊತ್ತಿರಲಿಲ್ಲ. ಕಟ್ಟಿದಷ್ಟೆ ಚೆನ್ನಾಗಿ ಬೆಳೆಸುವುದು ಗೊತ್ತಿರಲಿಲ್ಲ. ಆದರೆ ಸುಬ್ಬಣ್ಣ ಮೂಲತಃ ಕೃಷಿಕರು. ಅವರಿಗೆ ಕೃಷಿಯ ಮೂಲ ಅಗತ್ಯಗಳು ಗೊತ್ತಿದ್ದವು. ಅಲ್ಲಿ ಸಂದವನು ಎಲ್ಲಿಯೂ ಸಲ್ಲಬಲ್ಲ ಅನ್ನುವುದು ಗೊತ್ತಿತ್ತು.

ಈಗ ಸುಬ್ಬಣ್ಣನವರಿಗೆ 68. ಮೊದಲಿನ ಬಿರುಸು , ಬಿಸುಪು ಕಳೆಗುಂದಿರಲೇ ಬೇಕು. ಚಿಂತನೆಗಳು ಅಸ್ಪಷ್ಟವಾಗಿರಬಹುದು. ಈ ಕಾಲದ ಹುಡುಗರ ಆಸಕ್ತಿಗಳು, ಅನಾಸಕ್ತಿಗಳೂ ಅವರಿಗೆ ಬೇಸರ ತಂದಿರಬಹುದು. ಆದರೆ, ಅವರ ಕೃತಿಗಳನ್ನು ಓದಿದವರೆಲ್ಲಾ ಸುಬ್ಬಣ್ಣನವರನ್ನು ಬಹುಕಾಲ ನೆನೆಯುತ್ತಾರೆ. ಅವರು ಅನುವಾದಿಸಿರುವ ಝೆನ್‌, ಲೋಹಿಯಾರ ರಾಜಕೀಯದ ಮಧ್ಯೆ ಬಿಡುವು ಓದಿದವರು ಅವರ ಭಾಷೆಯ ಬಳಕೆಯ ಬಗ್ಗೆ ಬೆರಗಾಗದೇ ಇರುವುದಿಲ್ಲ. ಒಂದು ಪುಟ್ಟ ಕರಪತ್ರಕ್ಕೂ ಹೊಸತನದ ಲೇಪ ಕೊಡುವುದು ಅವರಿಗೆ ಸಿದ್ದಿಸಿದಂತಿತ್ತು.

ಸುಬ್ಬಣ್ಣ ಅವರ ಬರಹ ಎಷ್ಟು ಆಪ್ತವಾಗಿತ್ತು ಎನ್ನುವುದಕ್ಕೆ, ಪುಟ್ಟ ಉದಾಹರಣೆ ಇಲ್ಲಿದೆ. ಮ್ಯಾಗ್ಸೆಸೆ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಅವರ ಭಾಷಣ ಶುರುವಾದದ್ದು ಹೀಗೆ. ನನ್ನದು ನದಿಗಳ ದೇಶ. ನಿಮ್ಮದು ಸಮುದ್ರದ ದೇಶ. ನದಿಗಳ ದೇಶದ ನನ್ನ ಜನತೆಯಿಂದ ಸಮುದ್ರ ದೇಶದ ನಿಮ್ಮ ಜನತೆಗೆ ಶುಭಾಶಯಗಳನ್ನು ಹೊತ್ತು ತಂದಿದ್ದೇನೆ. ಎತ್ತಿಕೊಳ್ಳಿ...

ಅಷ್ಟು ಹರ್ಷವುಕ್ಕಿಸುವುಂತೆ ಬರೆಯುತ್ತಿದ್ದ ಸುಬ್ಬಣ್ಣ ಅವರ ಹೊಸ ಪುಸ್ತಕ ಬಿಡುಗಡೆಯಾಗಿದೆ. ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು. ಸುಬ್ಬಣ್ಣ ದೆಹಲಿಯಲ್ಲಿ ತಮ್ಮ ಮಿತ್ರರ ಜೊತೆ ನಡೆಸಿದ ಮಾತುಕತೆಯಿಂದಾಯ್ದ ಒಂದು ಭಾಗ, ಕವಿರಾಜ ಮಾರ್ಗದ ಬಗ್ಗೆ ವಿಸ್ತಾರವಾದ ಒಳಗೊಳ್ಳುವ ವಿಮರ್ಶೆ, ಜೊತೆಗೇ ಕನ್ನಡ ದಕ್ಕಿಸಿಕೊಂಡ ಅರಿವು ಮತ್ತು ಎಚ್ಚರ ಎಂಬ ಮೂರು ಲೇಖನಗಳು ಇದರಲ್ಲಿವೆ. ಇದನ್ನು ಬರೆಯಲು ಸುಬ್ಬಣ್ಣ ಅವರು ತೆಗೆದುಕೊಂಡಿರಬಹುದಾದ ಶ್ರಮದ ಬಗ್ಗೆ ಗೌರವ ಮತ್ತು ಪ್ರೀತಿ ಇಟ್ಟುಕೊಂಡರೂ, ಅವರ ಲೇಖನಗಳು ನಮಗೆ ದಕ್ಕುವುದೇ ಇಲ್ಲವೇನೋ ಅನಿಸಿಬಿಡುತ್ತದೆ. ಕೆಲವೊಮ್ಮೆ ಅಸ್ಪಷ್ಟವಾಗಿ, ಮತ್ತೊಮ್ಮೆ ಸಂಕೀರ್ಣವಾಗಿ, ಹಲವು ಕಡೆ ತಮಗೆ ಪರಕೀಯ ಎನ್ನಿಸುವ ರೀತಿಯಲ್ಲಿ ಸುಬ್ಬಣ್ಣ ಬರೆಯುತ್ತಾ ಹೋಗಿದ್ದಾರೆ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X