ಸಿಮ್ಮ 61- ಸಿಂಹಾವಲೋಕನ

ಅರುವತ್ತಕ್ಕೆ ಅರಳು-ಮರಳು. ಈ ಗಾದೆ ಸಾಮಾನ್ಯರಿಗೆ. ಸೃಜನಾತ್ಮಕವಾಗಿರುತ್ತಾ , ಕ್ರಿಯಾಶೀಲರಾಗಿರುವ ಸಿಂಹರಂಥ ಶ್ರೇಷ್ಠ ನಟರಿಗೆ ಇದರ ಅರ್ಥವೇ ಬೇರೆ. ಸಾಮಾನ್ಯರಿಗೆ ಅರಳು-ಮರುಳೆಂದರೆ ಮರೆಗುಳಿತನ ಹೆಚ್ಚುತ್ತದೆ ಎಂಬ ಅರ್ಥ; ಸಿಂಹರಿಗೆ 'ಅರಳು ' ಎಂದರೆ ಹೂ-ಅರಳುವಂತೆ; 'ಮರಳು ' ಎಂದರೆ ಕೆನೆಗಟ್ಟಿ ಮರಳುವ ಹಾಲಿನಂತೆ. ಅಂತೆಯೇ ಅರುವತ್ತು ತುಂಬಿದಾಗ ಮಿಕ್ಕವರಂತೆ ಉಶ್ಯಪ್ಪಾ ಎಂದು ನಿವೃತ್ತಿಯ ದಾರಿ ಹಿಡಿಯಲಿಲ್ಲ. ಯುವಕರೂ ನಾಚುವಂತೆ, ಸಿಂಹ ತಮ್ಮ ತಾರುಣ್ಯದಲ್ಲೂ ಮಾಡಿರದಷ್ಟು ನಿರಂತರತೆಯ ಬಿಜಿ ಶೆಡ್ಯೂಲ್‌ನ ರಂಗ-ಪ್ರಯೋಗ-ಪ್ರದರ್ಶನಗಳನ್ನು ಹಮ್ಮಿಕೊಂಡು, ತಮ್ಮ ಅರುವತ್ತನೇ ಹುಟ್ಟುಹಬ್ಬವನ್ನು ' ಸ್ವೀಟ್‌ ಸಿಕ್‌ಸ್ಟಿಯತ್‌ ಬರ್ತ್‌-ಡೇ ಯನ್ನಾಗಿಸಿಕೊಂಡು, ' ವಾರಕ್ಕೊಂದು ನಾಟಕ' ಎನ್ನುತ್ತಾ ಸಮರೋಪಾದಿಯಲ್ಲಿ ರಂಗ-ಚಟುವಟಿಕೆಗಳಲ್ಲಿ ತೊಡಗಿ ಯಶಸ್ವಿಯಾದವರು. ನಿವೃತ್ತಿ ವೃತ್ತಿಗೆ; ಪ್ರವೃತ್ತಿಗೆಂಥ ನಿವೃತ್ತಿ.

ತಮ್ಮ ಬದುಕಿನ ಮುಕ್ಕಾಲು ಭಾಗ ನಾಟಕ, ಸಿನಿಮಾ, ಕಿರುತೆರೆಗಳಿಗೆ ಮೀಸಲಿಟ್ಟ ಸಿಂಹ ಸಲ್ಲುವುದು ರಂಗಭೂಮಿಗೇ. ರಂಗಭೂಮಿಯಲ್ಲಿ ಅವರು ಪರಕಾಯ ಪ್ರವೇಶವಿತ್ತು ಪೋಷಿಸಿದ ತುಘಲಕ್‌, ಒಥೆಲೋ, ಚೆಗೆವಾರಾ, ಟಿಪಿಕಲ್‌ ಟಿಪಿ ಕೈಲಾಸಂ, ರಸಋಷಿ, ಭೈರವಿ ಮೊದಲಾದ ಪಾತ್ರಗಳು ಅನನ್ಯ; ಅನುಕರಣೀಯ. ಆಧುನಿಕ ನಟನ ಶೈಲಿಗೆ ಹೊಸ ಆಕೃತಿಯನ್ನೇ ನಿರ್ಮಿಸಿರುವ ಸಿಂಹರದ್ದು ಸ್ಮರಣೀಯ ಛಾಪು.

ಶೂದ್ರಕನಿಂದ ಶೇಕ್ಸ್‌ಪಿಯರ್‌ವರೆಗೂ ಅನೇಕ ವಿಶ್ವಶ್ರೇಷ್ಠ ನಾಟಕಗಳ ಜತೆಗೆ ನಮ್ಮವರೇ ಆದ ಮಾಸ್ತಿ, ಲಂಕೇಶ್‌ ನಾಟಕಗಳನ್ನು ತಮ್ಮ ಅರ್ಥಪೂರ್ಣ ನಿರ್ದೇಶನದ ಮೂಲಕ ಪರಿಣಾಮಕಾರಿ ಪ್ರಯೋಗಗಳಾಗಿ ' ನಟರಂಗ' ಹಾಗೂ 'ವೇದಿಕೆ' ತಂಡಗಳಿಂದ ನೀಡಿ ಮುನ್ನಡೆಯುತ್ತಿದ್ದಾರೆ. ಬಿ. ಎಲ್‌.ಟಿ.(Bangalore Little Theatre) ಮೂಲಕ ಇಂಗ್ಲೀಷ್‌ ನಾಟಕಗಳಲ್ಲೂ ಹೆಸರು ಮಾಡಿರುವುದಲ್ಲದೆ ಕರ್ಣ, ಭೈರವಿ, ರಸ-ಋಷಿ ಗಳಂಥ ನಾಟಕ ರಚನೆಗಳಲ್ಲಿ ಸೈ ಎನಿಸಿಕೊಂಡು ನಾಟಕಕಾರರೂ ಆಗಿರುವ ಸಿಂಹ , ' ಟಿಪಿಕಲ್‌ ಟಿಪಿ ಕೈಲಾಸಂ' ಮೂಲಕ ಅಮೆರಿಕದ ಹಲವೆಡೆ ಯಶಸ್ವಿ ಪ್ರದರ್ಶನಗಳನ್ನಿತ್ತು ಆ ನೆಲದಲ್ಲಿ ಕನ್ನಡ ರಂಗ-ಪತಾಕೆ ಹಾರಿಸಿದ ಮೊದಲಿಗರು.

' ಅಮೆರಿಕಾದಲ್ಲಿ ಗೊರೂರು' ಧಾರಾವಾಹಿಗಾಗಿ ಗೊರೂರರ ಪಾತ್ರಕ್ಕೆ ಜೀವ ತುಂಬುವ ಮೂಲಕ ಕನ್ನಡದ ಇನ್ನೂ ಒಬ್ಬ ಸಾಹಿತಿಯ ಬದುಕು-ಸಾಧನೆಗಳು ಕಿರುತೆರೆಯ ಮೇಲೆ ಮೂಡಿಬರಲು ಸಿಂಹ ಪೂರಕ ಕೊಡುಗೆ ನೀಡಿದ್ದಾರೆ.

'ಸಂಸ್ಕಾರ' ದಿಂದ ಆರಂಭಗೊಂಡ ಸಿಂಹರ ಚಲನಚಿತ್ರ ಯಾತ್ರೆ- ಕಾಕನಕೋಟೆ, ಸಿಂಹಾಸನ, ಶಿಕಾರಿಯಂಥ ಕಲಾತ್ಮಕ ಚಿತ್ರಗಳ ನಿರ್ದೇಶನ; 'ಚಿತೆಗೂ ಚಿಂತೆ ' ' ಬರ' ದಂತಹ ಚಿತ್ರಗಳ ಪಾತ್ರದಲ್ಲಿ ಭೇಷ್‌ ಎನಿಸುವ ಅಭಿನಯವಿತ್ತಿರುವ ಸಿಂಹ ಅನೇಕ ಜನಪ್ರಿಯ, ವ್ಯಾಪಾರಿ ಚಿತ್ರಗಳಲ್ಲೂ ತಾನು ಗೆಲ್ಲಬಲ್ಲೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ನಾಟಕದ ಅಂಕ ಅಂಕಗಳಿಗೂ ಕಳೆಕಟ್ಟಬಲ್ಲ ಅಭಿನಯ, ನಿರ್ದೇಶನಗಳಿಗೆ ಅಧಿಕ ಅಂಕಗಳನ್ನು ಗಿಟ್ಟಿಸಿಕೊಂಡು ಹೆಸರಾಗಿರುವ ಸಿಂಹ ಇದೀಗ ' ನಿಮ್ಮ ಸಿಂಹ ' ದಂಥ ಪತ್ರಿಕಾ ಅಂಕಣ ( ವಿಜಯ ಕರ್ನಾಟಕ) ಬರಹದ ಮೂಲಕವೂ ಓದುಗರೊಂದಿಗೆ ಸಮರ್ಥವಾಗಿ ಸಂವಾದಿಸಬಲ್ಲೆ ಎನ್ನುವುದನ್ನು ಸಿದ್ಧಗೊಳಿಸಿದ್ದಾರೆ.

ಸಿಂಹ-ರ ಷಷ್ಟ್ಯಬ್ದಿ ಈಗ ಪೂರ್ತಿ ಆಗಿದೆ. ಭಾನುವಾರದಿಂದ ( ಜನನ : 16 ಜೂನ್‌ 1942) ಅರುವತ್ತೊಂದಕ್ಕೆ ಅಡಿ ಇಡುತ್ತಿರುವ ನಮ್ಮ ಸಿಮ್ಮ-ರಂಗಭೂಮಿಗೆ ಬಂದು ಇಂದಿಗೆ ಐವತ್ತು ವರ್ಷಗಳು ತುಂಬುತ್ತಿರುವುದೂ ಒಂದು ಯೋಗಾಯೋಗ.

ಸಿಂಹ ಅವರಿಗೆ ಜನ್ಮದಿನ ಶುಭಾಶಯ ಕಳಿಸುವವರು [email protected]ಇಮೇಲ್‌ ವಿಳಾಸ ಬಳಸಬಹುದು. ದೂರವಾಣಿ : 91-080-6724783

ಸಿಂಹಾವಲೋಕನ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+