ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರಕ್ಕೇರದ ಮೂರಕ್ಕಿಳಿಯಿದ ‘ಸಾಯಿ’ಪ್ರಕಾಶ್‌

By Staff
|
Google Oneindia Kannada News

*ಮಹೇಶ್‌ ದೇವಶೆಟ್ಟಿ

A Pen Portrait of Sai Prakashಐದಾರು ವರ್ಷಗಳ ಹಿಂದೆ ಸಾಯಿಪ್ರಕಾಶ್‌ ಚಿತ್ರ ನಿರ್ದೇಶಿಸುತ್ತಿದ್ದಾರೆಂದರೆ ಅದು ಖಂಡಿತಾ ರೀಮೇಕ್‌ ಎಂದು ಪುಟ್ಟ ಮಕ್ಕಳೂ ಹೇಳುವ ಕಾಲವಿತ್ತು . ಜತೆಗೆ ನಾಯಕಿ ಸ್ಥಾನದಲ್ಲಿ ಮಾಲಾಶ್ರೀ ಇದ್ದೇ ಇರ್ತಾರೆ ಅನ್ನೋದು ಖಚಿತವಾಗುತ್ತಿತ್ತು . ಕೇವಲ ಹದಿಮೂರು ದಿನಗಳಲ್ಲಿ ಚಿತ್ರ ಮುಗಿಸಿದ ಖ್ಯಾತಿಯೂ ಸಾಯಿಪ್ರಕಾಶ್‌ಗಿದೆ.

ಕಡಿಮೆ ಬಜೆಟ್‌ನಲ್ಲಿ ಹಾಕಿದ ದುಡ್ಡನ್ನು ವಾಪಸ್‌ ಪಡೆಯುವ ಚಿತ್ರ ತಯಾರಿಕೆಯಲ್ಲಿ ಸಾಯಿ ಮಹಿಮೆ ಅಪಾರ. ಹೀಗೆ ಕೆಲವೇ ವರ್ಷಗಳಲ್ಲಿ ಸುಮಾರು ನಲವತ್ತು ಚಿತ್ರಗಳನ್ನು ನಿರ್ದೇಶಿಸಿದ ಇವರು ಆಮೇಲಾಮೇಲೆ ಸುಸ್ತಾದರು. ಜನ ಕೂಡ ಅವರ ಚಿತ್ರಗಳನ್ನು ಭಯಭೀತಿಯಿಂದ ನೋಡತೊಡಗಿದರು.

ಇಂತಿಪ್ಪ ನಮ್ಮ ಸಾಯಿಯಣ್ಣ ಕೊನೆಗೂ ಐವತ್ತರ ಗಡಿ ದಾಟಿಬಿಟ್ಟರು. ಆಂಧ್ರದಿಂದ ಬಂದ ಈ ಕುಳ ಪಕ್ಕಾ ದೈವಭಕ್ತ. ಹಣೆ ತುಂಬಾ ಕುಂಕುಮ. ಕೊರಳ ತುಂಬಾ ಚಿತ್ರವಿಚಿತ್ರ ತಾಯಿತ ಕಟ್ಟಿಕೊಂಡು ಸದಾ ಸಾಯಿಬಾಬಾ ಜಪದಲ್ಲಿ ನಿರತ ವ್ಯಕ್ತಿ . ಹೀಗಾಗಿಯೇ ಸಾಯಿಬಾಬಾ ಹೆಸರಿನ ಚಿತ್ರವನ್ನು ನಿರ್ದೇಶಿಸಿಬಿಟ್ಟರು. ಜನರಲ್ಲಿ ಮೂಢನಂಬಿಕೆ ಹೆಚ್ಚಿಸಲು ‘ಗ್ರಾಮದೇವತೆ’, ‘ನಾಗದೇವತೆ’ಗಳಿಗೆ ಜೋತುಬಿದ್ದರು. ಅಲ್ಲಿ ಅಷ್ಟೇನೂ ಯಶಸ್ಸು ಕಾಣದ ಸಾಯಿ ಪ್ರಕಾಶ್‌ ಸದ್ಯಕ್ಕೆ ಸೆಂಟಿಮೆಂಟ್‌ ಚಿತ್ರಗಳತ್ತ ಹೊರಳಿದ್ದಾರೆ.

‘ತವರಿಗೆ ಬಾ ತಂಗಿ’ ಸಾಯಿ ನಿರ್ದೇಶನದ ಹೊಸ ಚಿತ್ರ. ಶಿವರಾಜ್‌ಕುಮಾರ್‌ ನಾಯಕ. ಅನು ಪ್ರಭಾಕರ್‌ ನಾಯಕಿ. ನವನಟಿ ರಾಧಿಕಾಗೆ ತಂಗಿಯ ಪಾತ್ರ. ಈ ಹಿಂದೆ ಶಿವಣ್ಣನೊಂದಿಗೆ ‘ಗಡಿಬಿಡಿ ಅಳಿಯ’, ‘ಗಡಿಬಿಡಿ ಕೃಷ್ಣ’ ಚಿತ್ರ ಮಾಡಿರುವ ಇವರದು ಮೂರನೆ ಜೋಡಿ ಚಿತ್ರ. ಆರು ವರ್ಷಗಳ ಹಿಂದೆ ‘ತವರನ್ನು’ ಇಟ್ಟುಕೊಂಡು ‘ತವರು’ ಹೆಸರು ಕೇಳಿದರೆ ಕನ್ನಡ ಪ್ರೇಕ್ಷಕ ಬೆಚ್ಚಿ ಬೀಳುವಂತೆ ಮಾಡಿದ್ದ ಸಾಯಿ ಈಗ ಅದೇ ಟ್ರೆಂಡನ್ನು ಮತ್ತೆ ಹುಟ್ಟುಹಾಕುವ ತಯಾರಿಯಲ್ಲಿದ್ದಾರೆ. ‘ತಂಗಿ’ ಚಿತ್ರ ಖಂಡಿತಾ ಹಿಟ್‌ ಆಗುತ್ತೆ . ಸದ್ಯಕ್ಕೆ ಇಂತಹ ಕತೆ ಬರುತ್ತಿಲ್ಲ . ಅಜಯ್‌ಕುಮಾರ್‌ ಕತೆ ಬರೆದದ್ದರಿಂದ ಇದೊಂದು ಕರುಳು ಕತ್ತರಿಸುವ ಚಿತ್ರವಾಗುವುದರಲ್ಲಿ ಅನುಮಾನವಿಲ್ಲ . ರಾಧಿಕಾಗೆ ಇದೊಂದು ದಾಖಲಾರ್ಹ ಚಿತ್ರವಾಗಲಿದೆ ಎನ್ನುತ್ತಾರೆ ಸಾಯಿ.

ನಿರ್ದೇಶನವನ್ನೇ ತಮ್ಮ ಪ್ರೊಫೆಷನ್‌ ಮಾಡಿಕೊಂಡಿರುವ ಸಾಯಿ ಆರಕ್ಕೇರದ ಮೂರಕ್ಕಿಳಿಯದ ನಿರ್ದೇಶಕ. ಬಡ ನಿರ್ಮಾಪಕರಿಗೆ ಹಿಂದೆ ಎಷ್ಟೋ ಸಲ ಹಣದ ಥೈಲಿಯನ್ನು ಗೆಬರಿ ಕೊಟ್ಟ ಕ್ರೆಡಿಟ್ಟೂ ಇವರಿಗಿದೆ.

ವರ್ಷಕ್ಕೊಮ್ಮೆ ತಪ್ಪದೆ ತಿರುಪತಿ ದರ್ಶನ ಮಾಡುವ ಈ ಆಧುನಿಕ ಮಾರ್ಕಂಡೇಯ ಸರಳ ಮನುಷ್ಯ. ಸಜ್ಜನಿಕೆಯ ವ್ಯಕ್ತಿ . ಯಾರಾದರೂ ಧ್ವನಿ ಎತ್ತರಿಸಿ ಮಾತಾಡಿದರೆ ನಾಲಿಗೆ ತಡವರಿಸಿಕೊಳ್ಳುವಷ್ಟು ಸಂಕೋಚಿ. ಶೂಟಿಂಗ್‌ ಸಮಯದಲ್ಲಿ ಖಾಕಿ ಬಟ್ಟೆ ತೊಟ್ಟು ಥೇಟ್‌ ಕಾರ್ಮಿಕರಂತೆ ದುಡಿಯುವ ಕೂಲಿ. ಚಿತ್ರರಂಗವನ್ನೇ ನಂಬಿ ಅದರಿಂದಲೇ ಬದುಕು ನಡೆಸುತ್ತಿರುವ ಸಾಯಿಪ್ರಕಾಶ್‌ಗೆ ಈ ಪ್ರೊಫೆಶನ್‌ ಕೆಲವೊಮ್ಮೆ ಕೈ ಕೊಟ್ಟಿದೆ. ಮತ್ತೆ ಕೆಲವು ಸಲ ಎತ್ತಿ ಹಿಡಿದಿದೆ. ಅವರು ಮಾತ್ರ ಹಿಗ್ಗದೆ ಕುಗ್ಗದೆ ಮುನ್ನಡೆದಿದ್ದಾರೆ.
(ವಿಜಯ ಕರ್ನಾಟಕ)

Post Your Views

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X