ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಲರಳಿ ಹೂವಾಗಿ : ಬಾಡಿಹೋಗಿದ್ದ ಬಳ್ಳಿ ರೂಪ ಹೂಬಿಟ್ಟದ್ದು...

By Staff
|
Google Oneindia Kannada News

ಫಕೀರ್‌ ಹಸನ್‌

ಡರ್ಬನ್‌ : 1999, ಏಪ್ರಿಲ್‌. ಆಕೆಗೆ 17 ವರ್ಷವಷ್ಟೇ. ಮಿದುಳು ಹಾಗೂ ನರಮಂಡಲಕ್ಕೆ ಅಂದೆಂಥದ್ದೋ ವೈರಸ್‌ ಹೊಕ್ಕಿ, ಆಕೆಯನ್ನು ಅಕ್ಷರಶಃ ಒಂದು ಮಾಂಸದ ಮುದ್ದೆಯಂತಾಗಿಸಿತು. 2001, ಜನವರಿ 1. ಸಾವಿರಾರು ಮಕ್ಕಳಂತೆ ಆಕೆಗೂ 12ನೇ ಇಯತ್ತೆಯ ಫಲಿತಾಂಶ ಸಿಕ್ಕಿದೆ. ಮರು ಹುಟ್ಟು ಪಡೆದು, ಪ್ರತಿಶತ 57 ಅಂಕ ಗಿಟ್ಟಿಸಿದ್ದಾಳೆ! ಆಕೆಯ ಹೆಸರು ರೂಪ ಮೆಕೆನ್ಜಿ ; ಭಾರತೀಯ ಮೂಲದ ದಕ್ಷಿಣ ಆಫ್ರಿಕ ಹುಡುಗಿ.

ವಿಶ್ವ ವಿದ್ಯಾಲಯದಲ್ಲಿ ಪ್ರವೇಶ ಗಿಟ್ಟಿಸಲು ರೂಪ ತೆಗೆದಿರುವ ಅಂಕಗಳು ಸಾಲದಿದ್ದರೂ, ಇದೊಂದು ವಿಶೇಷ ಪ್ರಕರಣವಾದ್ದರಿಂದ ಆಕೆಗೆ ವಿನಾಯಿತಿ ಸಿಕ್ಕಿದೆ. ಆಗ ತಾನೆ ಹುಟ್ಟಿದ ಮಗುವಿನಂಥ ಮನಸ್ಸಿನ ರೂಪ ಕೇವಲ ಒಂದೂ ಮುಕ್ಕಾಲು ವರ್ಷದಲ್ಲಿ ಎಬಿಸಿಡಿಯಿಂದ ಕಲಿತು 12ನೇ ಇಯತ್ತೆಯಲ್ಲಿ ಎರಡನೇ ದರ್ಜೆಯಲ್ಲಿ ಪಾಸಾಗಿರುವುದು, ಡಿಸ್ಟಿಂಕ್ಷನ್‌ ಪಡೆದ ಇತರೆ ಮಕ್ಕಳಲ್ಲೂ ಆಶ್ಚರ್ಯ ಹುಟ್ಟಿಸಿದೆ.

ಮಿದುಳು- ನರಮಂಡಲಕ್ಕೆ ವೈರಸ್‌ ತಗುಲಿದಾಗ, ರೂಪ ಒಂದು ಕಂಪ್ಯೂಟರ್‌ಗೆ ವೈರಸ್‌ ತಗುಲಿದರೆ ಏನಾಗುತ್ತದೋ ಅಂತೆಯೇ ಆದಳು. ಕತ್ತು ನಿಲ್ಲುತ್ತಿರಲಿಲ್ಲ. ಕಾಲುಗಳ ಕೀಲುಗಳು ಮಡಿಸಲಾರದಂತಾದವು. ಕೈಕಾಲುಗಳು ನಿತ್ರಾಣವಾದವು. ಧುತ್ತೆಂದು ಆದ ಈ ಬದಲಾವಣೆ ಆಕೆಯನ್ನು ಪೂರ್ಣ ಪ್ರಮಾಣದಲ್ಲಿ ನಿಶ್ಚೇಷ್ಟಿತಳನ್ನಾಗಿಸಿತು.

ರೂಪಾಳ ತಾಯಿ ಮಿರಿಯಾಮ್‌ ಅಧಿಕಾರಿಗೆ ನೇಟಲ್‌ ವೈದ್ಯಕೀಯ ವಿಶ್ವ ವಿದ್ಯಾಲಯದಲ್ಲಿ ಉಪ ಡೀನ್‌ ಕೆಲಸ ಸಿಕ್ಕಿ ಮೂರು ತಿಂಗಳಾಗಿತ್ತಷ್ಟೆ. ಪುಟ್ಟ ಮಗುವಿನಂತಾದ ರೂಪಾಳ ಆರೈಕೆಗೋಸ್ಕರ ತಿಂಗಳುಗಟ್ಟಲೆ ಆಕೆ ಕೆಲಸಕ್ಕೆ ಸಲಾಮು ಹೊಡೆದರು. ವೈದ್ಯರಾಗಿರುವ ತಂದೆ ಮಹೇಂದ್ರ ಮಗಳು ಬೇಗ ಗುಣಮುಖಳಾಗುವಂತೆ ತರಬೇತಿಗೆ ಟೊಂಕಕಟ್ಟಿ ನಿಂತರು. ವಾಣಿಜ್ಯ ವಿಷಯದಲ್ಲಿ ಪದವಿ ಓದುತ್ತಿರುವ ಅಣ್ಣ ರವಿ ಮುಖರ್ಜಿ ಕೆಲ ಕಾಲ ಓದನ್ನು ಬದಿಗೊತ್ತಿ ತಂಗಿಯನ್ನು ಮೇಲೆತ್ತಿದ ; ಕಮರಿ ಹೋಗುತ್ತಿದ್ದ ಆಕೆಯ ಜೀವನವನ್ನೂ.

ಈಗಲೂ ರೂಪ ಪೂರ್ತಿ ಗುಣಮುಖಳಾಗಿಲ್ಲ. ಚಿಕಿತ್ಸೆ ಮುಂದುವರೆದಿದೆ. ಸದಾ ಬ್ಯುಸಿಯಾಗಿರುವಂಥ ಮನೆ ಮಂದಿ ತಮ್ಮ ವೈಯಕ್ತಿಕ ಬದುಕನ್ನು ಬದಿಗೊತ್ತಿ ರೂಪಾಗೆ ಮರು ಹುಟ್ಟು ಕೊಟ್ಟಿದ್ದಾರೆ. ಮೊದಲು ವೃತ್ತಿಯಲ್ಲಿ ಅಪ್ಪ- ಅಮ್ಮನನ್ನೇ ಅನುಸರಿಸಬೇಕೆಂಬ ಬಯಕೆ ಹೊತ್ತಿದ್ದ ರೂಪ ಈಗ ತನ್ನ ಗುರಿ ಬದಲಿಸಿಕೊಂಡಿದ್ದಾಳೆ. ವ್ಯಾಪಾರ ವಿಷಯದಲ್ಲಿ ಹೆಚ್ಚು ಕಲಿಯುವಾಸೆ ಆಕೆಯದು.

ಯಾವುದೋ ಒಂದು ಬ್ಯುಸಿನೆಸ್‌ ಪುಸ್ತಕ ಕೈಲಿ ಹಿಡಿದು ಆಕೆ ಯೂನಿವರ್ಸಿಟಿಯತ್ತ ಪುಟ್ಟ ಹೆಜ್ಜೆ ಹಾಕೋದನ್ನ ನೋಡೋ ಅಪ್ಪ- ಅಮ್ಮ- ಅಣ್ಣ ಒಮ್ಮೆಲೇ ಕಣ್ಣರಳಿಸಿ ನಿಟ್ಟುಸಿರಿಡುತ್ತಾರೆ. ಕಣ್ಣು ತುಂಬುತ್ತದೆ.

(ಐಎಎನ್‌ಎಸ್‌)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X