ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ....

By Staff
|
Google Oneindia Kannada News

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿ ನಿಂಪುಗ

ಳ್ಗಾರವಾದ ಮಾನಿಸರೆ ಮಾನಿಸರಂತವರಾಗಿ ಪುಟ್ಟಲೇ

ನಾಗಿಯುಮೇನೊ ತೀರ್ದಪುದೇ ತೀರದೊಡಂ ಮರಿದುಂಬಿಯಾಗಿ ಮೇಣ್‌

ಕೋಗಿಲೆಯಾಗಿ ಪುಟ್ಟುವುದು ನಂದನದೊಳ್‌ ಬನವಾಸಿ ದೇಶದೊಳ್‌

ಎಂದು ತನ್ನ ಹುಟ್ಟೂರನ್ನು ವರ್ಣಿಸಿದ ಆದಿಕವಿ ಪಂಪ, ಅಂಕುಶದಿಂದ ತಿವಿದರೂ ನೆನೆವುದೆನ್ನ ಮನಂ ಬನವಾಸಿ ದೇಶಮಮ್‌ ಎಂದ ದೇಶಪ್ರೇಮಿ. ಕನ್ನಡ ಶ್ರೇಷ್ಠಾತಿಶ್ರೇಷ್ಠ ಕವಿಯಾದ ಪಂಪನ ಹೆಸರಿನಲ್ಲಿ ರಾಜ್ಯ ಸರಕಾರ ಪ್ರತಿವರ್ಷವೂ ಪ್ರಶಸ್ತಿ ನೀಡುತ್ತಾ ಬಂದಿದೆ. ಡಿಸೆಂಬರ್‌ 21ರಿಂದ ಬನವಾಸಿಯಲ್ಲಿ ನಡೆಯುತ್ತಿರುವ ಕದಂಬೋತ್ಸವದಲ್ಲಿ ಖ್ಯಾತ ಸಂಶೋಧಕ ಪ್ರೊ. ಎಲ್‌. ಬಸವರಾಜು ಅವರಿಗೆ ಈ ಪ್ರಶಸ್ತಿಯನ್ನು ಕೊಡಮಾಡಲಾಗಿದೆ.

ಬನವಾಸಿಯ ಬಗ್ಗೆ : ಬನವಾಸಿ ಒಂದು ಸ್ವತಂತ್ರ ಕನ್ನಡ ನಾಡು. ಪ್ರಪ್ರಥಮ ಕನ್ನಡ ಸಾಮ್ರಾಜ್ಯ. ಕದಂಬರು ಕಟ್ಟಿ ಬೆಳೆಸಿದ ನಾಡಿದು. ಕದಂಬ ಕುಲತಿಲಕನಾದ ಮಯೂರ ವರ್ಮ ಕಾಂಚಿಪುರಕ್ಕೆ ಹೋಗಿದ್ದಾಗ ಬ್ರಾಹ್ಮಣ್ಯಕ್ಕೆ ಆದ ಅವಮಾನವನ್ನು ಸಹಿಸಲಾರದೆ, ಜನಿವಾರ, ದರ್ಭೆ ಹಿಡಿಯುವ ಕೈಯಲ್ಲಿ ಖಡ್ಗ ಹಿಡಿದ ವೀರ ಪುರುಷ.

ಮಯೂರನ ಸೋಲಿಸಲು ಪಲ್ಲವರು ಪ್ರಯತ್ನಿಸಿ ಕೊನೆಗೆ ತಾವೇ ಸೋತು, ಪಶ್ಚಿಮ ಸಮುದ್ರದಿಂದ ಪೂರ್ವದ ಮಲಪ್ರಭೆಯವರೆಗಿನ ಪ್ರದೇಶಕ್ಕೆ ಮಯೂರನನ್ನೇ ಅಧಿಪತಿಯನ್ನಾಗಿ ಮಾಡಿದರು. ಈ ಮೂಲಕ ಅಚ್ಚ ಕನ್ನಡ ಸಂಸ್ಥಾನವನ್ನು ಕಟ್ಟಿದ ಮಯೂರ ವರ್ಮ ಬನವಾಸಿಯನ್ನು ರಾಜಧಾನಿಯನ್ನಾಗಿ ಮಾಡಿದ.

ಮಯೂರ ವರ್ಮನ ಶೌರ್ಯ ಸಾಹನಗಳ ಬಗ್ಗೆ ದೊರಕಿರುವ ಶಾಸನಗಳಲ್ಲಿ ಚಿತ್ರದುರ್ಗದ ಚಂದ್ರವಳ್ಳಿಯ ಶಾಸನವೂ ಒಂದು. ಕ್ರಿಸ್ತ ಶಕ 345ರಿಂದ 360ರವರೆಗೆ ನಾಡನ್ನಾಳಿದ ಮಯೂರನು ಉತ್ತರ ಭಾರತದವರೆಗೂ ದಂಡೆತ್ತಿ ಹೋಗಿ ಮುಖಾರಿ, ಸೇಂದ್ರಕ, ಪುನ್ನಾಟ, ಪಲ್ಲವರೇ ಮೊದಲಾದವನ್ನು ಗೆದ್ದಿದ್ದನೆಂಬ ಉಲ್ಲೇಖವಿದೆ.

ಕನ್ನಡವನ್ನು ಆಡಳಿತ ಭಾಷೆಯಾಗಿ ಜಾರಿಗೆ ತಂದ ಕೀರ್ತಿಯೂ ಕದಂಬರದೇ. ಮಯೂರನ ನಂತರ ಸಂಸ್ಥಾನವನ್ನಾಳಿದ ಕಾಕುಸ್ಥವರ್ಮ ಎನ್ನುವ ದೊರೆ ತನ್ನ ರಾಜ್ಯದಲ್ಲಿ ಕನ್ನಡವನ್ನೇ ಆಡಳಿತ ಭಾಷೆಯಾಗಿ ಜಾರಿಗೆ ತಂದಿದ್ದ. ಹಲ್ಮಿಡಿ ಶಾಸನ ಕನ್ನಡದ ಲಿಪಿಯಲ್ಲಿರುವ ಮೊದಲ ಶಾಸನ. ಹೀಗಾಗೇ ಕನ್ನಡ ನಾಡು, ನುಡಿ ಪರಂಪರೆಗೆ 1500 ವರ್ಷಗಳ ಇತಿಹಾಸ ಇದೆ ಎಂದು ಪಂಡಿತರು ಹೇಳುವುದು.

ಆದರೆ, ಇತ್ತೀಚೆಗೆ ಹರಪ್ಪಾ, ಮೊಹೆಂಜದಾರೋನಲ್ಲಿ ಸಿಕ್ಕಿರುವ ಶಾಸನಗಳಲ್ಲಿರುವ ಲಿಪಿಗಳು ಕನ್ನಡ ಲಿಪಿಯನ್ನು ಹೋಲುತ್ತಿದ್ದು, ಕನ್ನಡ 5000 ವರ್ಷಗಳಷ್ಟು ಹಿಂದಿಯೇ ಬಳಕೆಯಲ್ಲಿತ್ತು ಎಂಬುದನ್ನು ಸಾಬೀತು ಪಡಿಸಲಿದೆ ಎಂಬ ಆಶಾವಾದವೂ ಚಿಗುರೊಡೆದಿದೆ.

ಬನವಾಸಿಯಲ್ಲಿ ಸುಂದರವಾದ ಶಿಲ್ಪಕಲಾ ಕೆತ್ತನೆಯ ಮಧುಕೇಶ್ವರ ದೇವಾಲಯವಿದೆ. ಕದಂಬ ವಂಶದಲ್ಲಿ 38ವರ್ಷಗಳ ಕಾಲ ಸಾಮ್ರಾಜ್ಯವನ್ನಾಳಿದ ರವಿವರ್ಮನ ಕಾಲದಲ್ಲಿ ಕಾವೇರಿಯಿಂದ ನರ್ಮದಾ ನದಿಯ ತೀರದವರೆಗೂ ಕನ್ನಡ ನಾಡು ಹಬ್ಬಿತ್ತು ಎಂದಾಗ ಕವಿರಾಜ ಮಾರ್ಗದಲ್ಲಿ ನೃಪತುಂಗ ಕನ್ನಡ ನಾಡಿನ ಎಲ್ಲೆಯನ್ನು ಗುರುತಿಸಿದ ಈ ಪದ್ಯ ನೆನಪಿಗೆ ಬರುತ್ತದೆ:

ಕಾವೇರಿಯಿಂದಮಾ ಗೋ

ದಾವರಿವರಮಿರ್ದ ನಾಡಾದಾ ಕನ್ನಡದೊಳ್‌

ಭಾವಿಸಿದ ಜನಪದಂ ವಸು

ಧಾವಲಯ ವಿಲೀನ ವಿಶದ ವಿಷಯ ವಿಶೇಷಂ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X