ಮಷಿನ್‌ ಜಗತ್ತಿಗೆ ಒಗ್ಗಿಕೊಂಡೇನಯ್ಯ, ಮಡಿವಾಳ ಮಾಚಯ್ಯ

*ಡಿ.ರಾಮರಾಜ್‌, ಎಸ್‌.ಕೆ. ಶಾಮಸುಂದರ

Lakshmikanth, the untraditional washer becomes Bangalores trend setterಬೆಂಗಳೂರೇ ಹೀಗೆ. ದಿನಕ್ಕೊಂದು ಹೊಸತು. ಅದು ಕಾಣಿಸುವಷ್ಟರಲ್ಲಿ ಛಾಪು ಮೂಡಿಸಿಬಿಟ್ಟಿರುತ್ತದೆ. ಫಾಸ್ಟ್‌ಫುಡ್‌ಗಳೆದ್ದದ್ದಾಗಲೀ, ಪಿಡ್ಜಾ ಕಾರ್ನರ್‌ಗಳು ಹುಟ್ಟಿಕೊಂಡದ್ದಾಗಲೀ, ಗೋಬಿ ಮಂಚೂರಿ- ಸಾಫ್ಟಿ ಕೇಂದ್ರಗಳು ಹೆಜ್ಜೆಗೊಂದರಂತೆ ಕಣ್ಣು ತೆರೆದದ್ದಾಗಲೀ ಹೀಗೆಯೇ. ಎಲ್ಲದರ ಹಿಂದೆ ಪಾಶ್ಚಾತ್ಯ ರಾಷ್ಟ್ರಗಳ ಪ್ರಭಾವ. ಫಾಸ್ಟ್‌ ಜಗತ್ತಿನಲ್ಲಿ ಸಮಯದ ಅಭಾವ. ಇಹದ ಭವದ ನಡುವೆ ಹೊಸ ಅನುಭವ, ಅನುಭಾವ.

ಮೊನ್ನೆ ಹೀಗೇ ನಮ್ಮ ಕಂಪನಿಯ ಸಿಇಓ ಬಿ.ಜಿ.ಮಹೇಶ್‌ ಕಣ್ಣಿಗೆ ಹೊಸ ರೀತಿಯ ಲಾಂಡ್ರೆಟ್‌ ಒಂದು ಕಂಡಿತು. ‘ಇದು ಅಮೆರಿಕೆಯ ಕಾಯಿನ್‌ ಲಾಂಡ್ರಿ ರೀತಿ ಅಂತೆ. ಏನು ಅಂತ ಗೊತ್ತ’, ಕೇಳಿದರು. ಈ ಕುತೂಹಲವನ್ನು ಮನದಲ್ಲಿ ತುಂಬಿಕೊಂಡು ನಾವು ಮೆಟ್ಟಿದ್ದು -- ಇಂದಿರಾನಗರದ ಕ್ಲಬ್‌ನ ರಸ್ತೆಯಲ್ಲಿ ಥಟ್ಟನೆ ಸೆಳೆಯದ ಸಣ್ಣ ಕಾರ್‌ ಶೆಡ್ಡಿನಲ್ಲಿರುವ ಲಾಂಡ್ರೆಟ್‌.

ಅಲ್ಲಿ ಐಎಫ್‌ಬಿ ವಾಷ್‌ ಕೇರ್‌ ಸೆಂಟರ್‌ ಎಂಬೊಂದು ಫಲಕ ಕಣ್ಣಿಗೆ ರಾಚುತ್ತದಷ್ಟೆ. ಅದೂ ಇತರೆ ಲಾಂಡ್ರಿಗಳಂತೆ ಅಷ್ಟೆ ಅಂತ ಮುಖ ತಿರುಗಿಸಿಕೊಂಡರೆ, ನೀವು ಖಂಡಿತ ಮಿಸ್‌ ಮಾಡಿಕೊಳ್ಳುತ್ತೀರಿ. ಇದು ಅಪರೂಪ. ಟ್ರೆಂಡ್‌ ಸೆಟರ್‌ ಕೂಡ ಹೌದು.

ಯಾವುದೀ ಅನನ್ಯತೆ?
ಬೆಳಗ್ಗೆ ಆಫೀಸಿಗೆ ಹೋಗುವಾಗ ಬಟ್ಟೆ ಕೊಡಿ. ಸಂಜೆ ಮನೆಗೆ ತೆರುಳುವಾಗ ಒಗೆದು, ಇಸ್ತ್ರಿ ಮಾಡಿದ ಬಟ್ಟೆ ಪಡೆಯಿರಿ. ವೃಥಾ ಪದೇಪದೇ ಅಂಗಡಿಗೆ ಎಡತಾಗುವ ಕಿರಿಕಿರಿಯಿಲ್ಲ. ಜೊತೆಗೆ ಜೇಬಿಗೂ ಹಿತ. ಯಾಕೆಂದರೆ, ಇಲ್ಲಿ ಒಗೆದು- ಇಸ್ತ್ರಿ ಮಾಡಿಕೊಡಲು ಪ್ರತಿ ಬಟ್ಟೆಗಿಷ್ಟು ಅಂತ ಕೊಡಬೇಕಿಲ್ಲ. ಪ್ರತಿ ಕಿಲೋ ಬಟ್ಟೆಗೆ 25 ರುಪಾಯಿ. ಬೆಂಗಳೂರಿನಲ್ಲಿ ಹೆಸರು ಮಾಡಿರುವ ಲಾಂಡ್ರಿಗಳಲ್ಲಿ ಒಂದು ಶರ್ಟನ್ನು ಒಗೆದು, ಗರಿಗರಿ ಮಾಡಿಕೊಡಲು ಕನಿಷ್ಠ 8 ರುಪಾಯಿ ಪಡೆಯುತ್ತಾರೆ. ಇದಕ್ಕೆ ಹೋಲಿಸಿದರೆ ಚುರುಕು ಕೆಲಸದ ಈ ಅಂಗಡಿ ಅನನ್ಯ ಹೌದಲ್ಲವೇ?

ಇದು ಲಕ್ಷ್ಮೀಕಾಂತನ ಲಾಂಡ್ರೆಟ್‌
ಕೆಲವೇ ವರ್ಷಗಳ ಹಿಂದೆ ಬಿ.ಎ. ಡಿಗ್ರಿ ಮಾಡಿದ ಲಕ್ಷ್ಮೀಕಾಂತ ಇಂಥಾ ಅಂಗಡಿ ಇಟ್ಟದ್ದು ಆಕಸ್ಮಿಕ. ಈತ ಸಾಂಪ್ರದಾಯಿಕ ಧೋಬಿ ಕೂಡ ಅಲ್ಲ. ಹೊಸತನ್ನು ಮಾಡುವ ತುಡಿತ ಹಾಗೂ ವಾಷಿಂಗ್‌ ಮಷಿನ್‌ ಕಂಪನಿ ಐಎಫ್‌ಬಿಯ ಮಾರ್ಗದರ್ಶನ ಲಕ್ಷ್ಮೀಕಾಂತನಿಗೆ ದಾರಿದೀಪವಾಯಿತು. ಈಗ ಲಕ್ಷ್ಮಿಕಾಂತ ತಾನೂ ಬೆಳೆದಿರುವುದಲ್ಲದೆ, ಇತರೆ ನಾಲ್ವರಿಗೆ ಕೆಲಸ ಕೊಟ್ಟಿದ್ದಾರೆ. ಅಂದಹಾಗೆ, ಲಕ್ಷ್ಮೀಕಾಂತನ ವಯಸ್ಸು 24!

ಲಕ್ಷ್ಮೀಕಾಂತನನ್ನು ಮಾತಿಗೆಳೆದಾಗ....

ಐಎಫ್‌ಬಿ ಕಂಪನಿ ಫ್ರಂಟ್‌ಲೋಡ್‌ ವಾಷಿಂಗ್‌ ಮಷಿನ್‌ಗಳನ್ನು ಮಾರುಕಟ್ಟೆಗೆ ತಂದಾಗ, ಜನರಲ್ಲಿ ಒಂದು ತಪ್ಪು ಅಭಿಪ್ರಾಯವಿತ್ತು. ಅದೇನೆಂದರೆ, ವಾಷಿಂಗ್‌ಮಷಿನ್‌ಗೆ ಮುಂದೆ ಬಾಗಿಲಿದ್ದರೆ, ನೀರು ಹೊರಗೆ ಚೆಲ್ಲುತ್ತದೆ ಅನ್ನೋದು. ಈ ಕಾರಣಕ್ಕೇ ಲಾಂಡ್ರೆಟ್‌ಗಳ ಮೂಲಕ ಜನರನ್ನು ಸೆಳೆಯುವುದು ಕಂಪನಿಯ ತಂತ್ರ. ಇದಕ್ಕೆ ನಮ್ಮಂಥವರ ಬೆನ್ನು ತಟ್ಟಿತು. ಅದರ ಫಲಶೃತಿಯೇ ಈ ಅಂಗಡಿ.

ಮೊದಲು ನಾನು ಈ ಅಂಗಡಿಯ ಕಸ್ಟಮರ್‌ ಆಗಿದ್ದೆ. ಆಗಿನ ಓನರ್‌ ಇದನ್ನು ಮಾರುವ ವಿಚಾರ ಹೇಳಿದರು. ನಾನೇ ಇದನ್ನು ಕೊಂಡುಕೊಂಡೆ. ಐಎಫ್‌ಬಿ ಸಹಕಾರ ಮುಂದುವರೆಯಿತು. ಪ್ರತಿ ಕಿಲೋ ಬಟ್ಟೆಗೆ 25 ರುಪಾಯಿ ಅಂತ ಫಿಕ್ಸ್‌ ಮಾಡಿದ್ದು ನನ್ನ ಹೊಸ ಐಡಿಯಾ. ಅದು ವರ್ಕ್‌ಔಟ್‌ ಆಯಿತು. ಕಳೆದ 8 ತಿಂಗಳಿಂದ ಇದು ನನ್ನ ಅಂಗಡಿ.

ವಾಷಿಂಗ್‌ಮಷೀನ್‌ ಇರುವ ಲಾಂಡ್ರೆಟ್‌ನಲ್ಲಿ ಬಟ್ಟೆ ಒಗೆಸುವ ವಿಚಾರ ಇವತ್ತಿನ ಪರಿಸ್ಥಿತಿಯಲ್ಲಿ ಭಾರತಕ್ಕೆ ಒಗ್ಗುವುದಿಲ್ಲ. ಬೆಂಗಳೂರನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ನಮ್ಮಲ್ಲಿ ವೈಟ್‌ ಕಾಲರ್ಡ್‌ ಕೆಲಸಗಾರರು ಅಕ್ಷರಶಃ ಕಡಿಮೆ. ಕಚೇರಿಗಳಲ್ಲಿ ಕೂತು ಕೆಲಸ ಮಾಡುವವರ ಶರ್ಟಿನ ಕಾಲರ್ರು, ಕಂಕುಳಲ್ಲಿ ಕೊಳೆ ಮಡುಗಟ್ಟುತ್ತದೆ. ಬಟ್ಟೆ ಹಾಳು ಮಾಡಲು ಮಾಲಿನ್ಯವೇ ಸಾಕು. ಹೀಗಾಗಿ ವಾಷಿಂಗ್‌ಮಷೀನಿನ ಒಗೆತವನ್ನು ನೆಚ್ಚಿಕೊಳ್ಳುವ ಮಂದಿ ತೀರಾ ಕಡಿಮೆ.

ಮುಂದೆ ಏನು ಮಾಡಬೇಕು ಅಂತಿದೀರಿ? : ಕೋರಮಂಗಲ ಹಾಗೂ ಜಯನಗರದಲ್ಲಿ ಇಂಥದೇ ಇನ್ನೆರಡು ಅಂಗಡಿಗಳನ್ನು ತೆಗೆಯುವ ಪ್ಲಾನ್‌ ಇದೆ. ಮನೆಮನೆಗೆ ಹೋಗಿ ಬಟ್ಟೆ ತಂದು, ಒಗೆದು, ಇಸ್ತ್ರಿ ಮಾಡಿಕೊಡುವುದನ್ನೂ ಮಾಡುತ್ತಿದ್ದೇವೆ; ಪೀಡ್ಜಾ ಅಂಗಡಿಗಳ ತರಹ. ಇದಕ್ಕೆ ಪ್ರತಿ ಕಿಲೋ ಬಟ್ಟೆಗೆ 30 ರುಪಾಯಿ ಚಾರ್ಜ್‌ ಮಾಡ್ತೀವಿ. ಬಟ್ಟೆ ಕೊಟ್ಟ 5 ತಾಸುಗಳಲ್ಲಿ ಡೆಲಿವರಿ ಕೊಡುವ ಪ್ರಯತ್ನಗಳನ್ನೂ ಮಾಡುತ್ತಿದ್ದೇನೆ. ಇವೆಲ್ಲ ಸಕ್ಸಸ್‌ ಆದರೆ, ಮುಂದೆ ಇಂಥ ಅಂಗಡಿಗಳನ್ನು ಬೆಂಗಳೂರಿನ ಅನೇಕ ಜಾಗಗಳಲ್ಲಿ ಹಾಕುತ್ತೇನೆ.

ಇಂಥ ಅಂಗಡಿ ತೆಗೆಯೋಕೆ ಎಷ್ಟು ಹಣ ಬೇಕು ?- ಉತ್ತರ ಕೊಡಲು ಹಿಂದೇಟು ಹಾಕುವ ಲಕ್ಷ್ಮೀಕಾಂತ, ಮೆಲ್ಲನೆ ಹೇಳುತ್ತಾರೆ : ಮೂರರಿಂದ ನಾಲ್ಕು ಲಕ್ಷ ರುಪಾಯಿಯಂತೂ ಬೇಕು.

ಬೆಳಗ್ಗೆ 8ರಿಂದ ಸಂಜೆ 8ರವರೆಗೆ ವಾರದ ಏಳೂ ದಿನ ದುಡಿಯುವ ಲಕ್ಷ್ಮೀಕಾಂತ ಹೆಮ್ಮೆಯ ನಗೆ ನಗುತ್ತಾರೆ. ಹೊಸತನ್ನು ಮಾಡಬೇಕೆಂಬ ಅವರ ಉಮೇದಿಗೆ ಸಾಕಷ್ಟು ಯಶಸ್ಸು ಸಿಕ್ಕಿದೆ. ಇದೇ ಮುಂದುವರೆದು, ಅಮೆರಿಕೆಯಂಥಾ ಕಾಯಿನ್‌ ಲಾಂಡ್ರಿ (ದುಡ್ಡು ಹಾಕಿ, ವಾಷಿಂಗ್‌ಮಷೀನ್‌ಗಳಲ್ಲಿ ನಾವೇ ಬಟ್ಟೆ ಒಗೆದುಕೊಂಡು ಬರುವ ಅಂಗಡಿಗಳು) ಬೆಂಗಳೂರಿಗೆ ಅಡಿಯಿಟ್ಟರೂ ಅಚ್ಚರಿಯಿಲ್ಲ. ಗಂಡ- ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವಂಥಾ ಮಧ್ಯಮವರ್ಗದ ಮನೆಗಳಿಗೆ ಲಕ್ಷ್ಮೀಕಾಂತನ ಹೊಸ ರೀತಿಯ ಲಾಂಡ್ರೆಟ್‌ ಹಿತವೂ ಹೌದು, ಜೇಬಿಗೆ ಮಿತವೂ ಹೌದು. ಏನಂತೀರಿ?

Click here to go to top
ಮುಖಪುಟ / ಸಾಹಿತ್ಯ ಸೊಗಡು


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+